ADVERTISEMENT

ಚುರುಮುರಿ| ಯುಗಾದಿ ವರ್ಷಭವಿಷ್ಯ!

ಲಿಂಗರಾಜು ಡಿ.ಎಸ್
Published 28 ಮಾರ್ಚ್ 2022, 19:30 IST
Last Updated 28 ಮಾರ್ಚ್ 2022, 19:30 IST
Churumuri 29-03-2022.jpg
Churumuri 29-03-2022.jpg   

ಶುಭಕೃತನಾಮ ಸಂವತ್ಸರದ ಯುದ್ಧದಲ್ಲಿ ಮಹಾಸ್ತ್ರಗಳ ಭಯ. ಜಗತ್ತಿನ ಆರ್ಥಿಕ ಸ್ಥಿತಿ ಏರುಪೇರು. ತೈಲೇಂದ್ರರು ಶ್ರೀಮಂತರಾಗುವರು. ಶನಿಯ ವಕ್ರೀಕಾಲದಿಂದ ನೆರೆ ಹೊರೆಯಾಗುವ ಸಾಧ್ಯತೆ!

ದೇಶದ ರಾಜನಾದ ನಮೋ ಕಾಲಪುರುಷನು ಯಶಸ್ವಿ ಮತಯಾತ್ರೆಗಳಿಂದ ನಗುಮೊಗನಾಗಿರುತ್ತಾನೆ. ಆದರೆ ಆಗಾಗ ಆತನ ಕನಸಿನಲ್ಲಿ ಪೊರಕೆ ಕಾಣಿಸಿಕೊಳ್ಳುವುದು ಶುಭಕರವಲ್ಲ! ದೇಶದಲ್ಲಿ ವಾರ್‍ಮೋಡ ಭೀತಿಯಿಂದ ಪೆಟ್ರೋಲ್- ಡೀಸೆಲ್, ಅಡುಗೆ ಎಣ್ಣೆ, ಗ್ಯಾಸ್ ಬೆಲೆ ಗಗನಕ್ಕೆ. ಇದರಿಂದ ದೇಶದ ರಾಜನ ವಿರುದ್ಧ ಜನತೆ ಸಿಟ್ಟಿಗೇಳುವುದು. ಪರಿಹಾರಕ್ಕಾಗಿ ಜನಾರಾಧನೆ ಮಾಡುವುದು ಶ್ರೇಯಸ್ಕರ. ಜನರ ನಡುವೆ ಧರ್ಮದ ಕಿಚ್ಚು ಹಚ್ಚುವ ದುಷ್ಟ ಗ್ರಹಗಳ ಕಾಟ ಹೆಚ್ಚುವುದು. ದಾನಿ-ಬಾನಿಗಳು ಜಗತ್ತಿನ ಶ್ರೀಮಂತರಾಗುವ ಸುಯೋಗವಿದೆ.

ರಾಜ್ಯ ರಾಜಕೀಯದಲ್ಲಿ ಅಧಿಕಾರಾಸಕ್ತರಿಂದ ರಾಜಕೀಯ ತಿಕ್ಕಾಟ, ಸ್ವಪಕ್ಷ ದೇವತೆಗಳು ಕಂಟಕರಾಗಲಿದ್ದಾರೆ. ಜಾತಿ ಪ್ರೀತಿ, ಚುನಾವಣಾ ತಾಲೀಮು, ಪಾದಯಾತ್ರೆಗಳಿಂದ ಪಕ್ಷಗಳಿಗೆ ಅಧಿಕಾರ ಕೈವಶವಾಗದು. ಕೋವಿಡ್ ನಾಲ್ಕನೇ ಅಲೆಯ ಸುದ್ದಿಯಿಂದ ನಕಲಿ ಬಿಲ್ಲುಗಾರರಿಗೆ ಶುಕ್ರದೆಸೆ ನಿರೀಕ್ಷೆ. ಔಷಧ ಕ್ಷೇತ್ರ ಏಳಿಗೆ ಕಾಣಲಿದೆ.

ADVERTISEMENT

ಪಾಲಿಕೆಗಳ ಜಡತ್ವದಿಂದ ರಸ್ತೆಗುಂಡಿಗಳು ಹೆಚ್ಚಿ ಗುಪ್ತವಾದ ಗೌರವಕ್ಕೆ ಪರೀಕ್ಷಾ ಕಾಲ. ಜನರಿಗೆ ಸತತ ಮರಣಯೋಗ, ಆಕ್ರೋಶದ ಕಿಡಿ! ಕಾರ್ಯಾಂಗ ಪರ್ಸಂಟೇಜ್ ಹಿಡಿತದಲ್ಲಿ ರುವುದರಿಂದ ಭ್ರಷ್ಟಾಚಾರದ ಹೆಚ್ಚಳ. ವರ್ಗಾವಣೆಯು ದಂಧೆಯಾಗಿ ಪರಿವರ್ತನೆಯಾಗುವುದು. ಉಪದ್ರವಕಾರಿ ಅಧಿಕಾರಿಗಳು ಮತ್ತು ದಲ್ಲಾಳಿಗಳು ಎಸಿಬಿ, ಲೋಕಾಯುಕ್ತ ದೇವತೆಗಳ ಕೋಪಕ್ಕೆ ಪಾತ್ರರಾಗಲಿದ್ದಾರೆ.

ಜನಸಾಮಾನ್ಯರ ಗೋಚಾರದಲ್ಲಿ ಬೇವಿನ ಕಹಿಯೇ ಪ್ರಧಾನವಾಗಿರಲಿದೆ. ಬೆಲೆ ಏರಿಕೆಯಿಂದ ನಿರಂತರ ಬೇಗುದಿ. ಶ್ರೀಸಾಮಾನ್ಯನ ಆದಾಯ 5, ವೆಚ್ಚ 9. ಡಿಜಿಟಲ್ ಕಳ್ಳರ ಹಾವಳಿಯಿಂದ ಧನನಾಶ! ಚಿನ್ನ-ಬೆಳ್ಳಿಗಳು ಕನಸಿನಲ್ಲೂ ಕಾಣವು. ಬಸ್ಸು- ಲಾರಿಗಳು ಶನಿ ಪ್ರಭಾವದ ಕಾರಣವಾಗಿ ಜನರ ಮೇಲೆ ನುಗ್ಗುವುವು! ನಿರ್ಮಾಣ ಕಾಮಗಾರಿ ಮಧ್ಯಮ ವರ್ಗಕ್ಕೆ ದುಬಾರಿಯಾಗಲಿದೆ. ಆರ್‌ಸಿಬಿ ತಾರಾಬಲ ಹೆಚ್ಚಲು ದೈವ ಪ್ರಾರ್ಥನೆ ಸೂಕ್ತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.