‘ಅಕ್ಕಿ ಹಾರುತಿದೆ ನೋಡಿದಿರಾ?’ ಎಂದ ತೆಪರೇಸಿ.
‘ಲೇಯ್, ಅದು ಅಕ್ಕಿ ಅಲ್ಲ, ಹಕ್ಕಿ...’ ತಿದ್ದಿದ ಪರ್ಮೇಶಿ.
‘ಇಲ್ಲ, ಈಗ ಅಕ್ಕೀನೆ ಹಾರ್ತಿರೋದು. ನಮ್ ಸಿದ್ರಾಮಣ್ಣನ ಅನ್ನಭಾಗ್ಯ ಅಕ್ಕಿ, ಕನ್ನ ಭಾಗ್ಯ ಆಗಿ ವಿದೇಶಕ್ಕೆಲ್ಲ ಹೋಗ್ತಾ ಐತಂತೆ, ಪೇಪರ್ ನೋಡ್ಲಿಲ್ವಾ?’ ತೆಪರೇಸಿ ಸಮರ್ಥಿಸಿಕೊಂಡ.
‘ಓ, ಅದಾ... ಅಲ್ಲ, ನಮ್ ಬಿಪಿಎಲ್ ಅಕ್ಕೀನ ನಾವೇ ತಿನ್ನಲ್ಲ, ವಿದೇಶದೋರು ಹೆಂಗ್ ತಿಂತಾರೆ ಅಂತ...’
‘ಪಾಲಿಶ್ ಮಾಡ್ತಾರೆ ಕಣಲೆ, ಬಿಪಿಎಲ್ ಅಕ್ಕೀನ ಮಿಲ್ಲಲ್ಲಿ ಸಣ್ಣಕೆ ನೈಸ್ ಮಾಡಿ ಅದ್ಕೆ ಭರ್ಜರಿ ಬ್ರ್ಯಾಂಡ್ ನೇಮ್ ಇಟ್ಟು ವಿದೇಶಕ್ಕೆ ಕಳಿಸ್ತಾರೆ...’ ಗುಡ್ಡೆ ನಕ್ಕ.
‘ಅಂದ್ರೇ ಪಾಲೀಶು, ನೈಸು ಮಾಡಿ ಫಾರಿನ್‌ನೋರಿಗೂ ಟೋಪಿ ಹಾಕಬೋದು ಅನ್ನು...’
‘ಹಾಕಬೋದು... ಚುನಾವಣೇಲಿ ರಾಜಕಾರಣಿಗಳು ನೈಸ್ ಮಾಡಿ ನಮ್ಮತ್ರ ವೋಟ್ ಹಾಕಿಸ್ಕಳಲ್ವಾ? ಹಂಗೆ...’ ದುಬ್ಬೀರ ಅನುಭವದ ಮಾತಾಡಿದ.
‘ಗೊತ್ತಾತು ಬಿಡಪ, ಅದಿರ್ಲಿ, ಮಂಜಮ್ಮ ಏನೈತೆ ತಿಂಡಿ?’ ಗುಡ್ಡೆ ಕೇಳಿದ.
‘ಬಿಸಿ ಬಿಸಿ ಚಿತ್ರಾನ್ನ, ಉಪ್ಪಿಟ್ಟು...’
‘ನೆಂಚಿಕಳಾಕೆ?’
‘ಮದ್ದೂರು, ಮಣಿಪುರ... ಸಾಲದಿದ್ರೆ ನೇಪಾಳ’ ಮಂಜಮ್ಮ ಮಸಿ ಬಟ್ಟೆ ಕೊಡವಿ ನಕ್ಕಳು.
‘ನೀನೂ ಮಾತು ಕಲ್ತೆ ಬಿಡು...’ ತೆಪರೇಸಿ ತಲೆಯಾಡಿಸಿದ.
‘ಲೇಯ್, ಮಾತು ಹಂಗಿರ್ಲಿ, ನಮ್ ಮಂಜಮ್ಮನ ಚಿತ್ರಾನ್ನ ಎಷ್ಟು ಟೇಸ್ಟಿರುತ್ತೆ ಗೊತ್ತಾ? ಅವಳ ಕೈ ರುಚಿ ನಿಜಕ್ಕೂ ಗ್ರೇಟ್...’ ಗುಡ್ಡೆ ಬಾಯ್ತುಂಬ ಹೊಗಳಿದ.
‘ಹೌದೇನೋ ಗುಡ್ಡೆ? ನಿನ್ ಲೆಕ್ಕದಲ್ಲಿ ಎಲ್ರಿಗೂ ಕೊಡ್ಲಾ?’ ಮಂಜಮ್ಮನ ಮುಖದಲ್ಲಿ ಖುಷಿ.
‘ಕೊಡು ಕೊಡು, ಬುಕ್ಕಿಗೆ ಲೆಕ್ಕ ಬರ್ಕಾ...’ ಎಂದ ಗುಡ್ಡೆ.
ಎರಡೇ ನಿಮಿಷದಲ್ಲಿ ಎಲ್ಲರ ಕೈಗೂ ಬಿಸಿ ಬಿಸಿ ಚಿತ್ರಾನ್ನ ಬಂತು. ತೆಪರೇಸಿ ಒಳಗೇ ನಗುತ್ತ ‘ಚಿತ್ರಾನ್ನ ಹಾರುತಿದೆ ನೋಡಿದಿರಾ?’ ಎಂದ. ಗುಡ್ಡೆ ‘ಸುಮ್ಮನಿರು’ ಎಂಬಂತೆ ಕಣ್ಣು ಮಿಟುಕಿಸಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.