ADVERTISEMENT

ಚುರುಮುರಿ | ಔಷಧರಹಿತ ಚಿಕಿತ್ಸೆ

ಮಣ್ಣೆ ರಾಜು
Published 17 ಫೆಬ್ರುವರಿ 2026, 22:30 IST
Last Updated 17 ಫೆಬ್ರುವರಿ 2026, 22:30 IST
.
.   

ಹೆಂಡ್ತಿ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಸರ್ಕಾರಿ ಆಸ್ಪತ್ರೆಗೆ ಬಂದ ಶಂಕ್ರಿ, ‘ಡಾಕ್ಟರ್ ಇದ್ದಾರಾ?’ ಎಂದು ಕೇಳಿದ.

‘ಡಾಕ್ಟರ್ ಇದ್ದಾರೆ, ಔಷಧ ಮಾತ್ರ ಇಲ್ಲ’ ಅಂದರು ನರ್ಸ್.

‘ಹೊರಗಿನ ಮೆಡಿಕಲ್ ಸ್ಟೋರ್‌ಗೆ ಔಷಧ ಚೀಟಿ ಬರೆದುಕೊಡಬಾರದು ಎಂದು ಇಲಾಖೆ ಹೇಳಿದೆಯಲ್ವೆ?’ ಎಂದ ಶಂಕ್ರಿ.

ADVERTISEMENT

‘ಹೌದು, ನಮ್ಮ ಡಾಕ್ಟರ್ ಔಷಧರಹಿತ ಚಿಕಿತ್ಸೆ ಕೊಡ್ತಾರೆ’.

ಪಕ್ಕದಲ್ಲಿದ್ದವನು ಎದ್ದು ಕುಂಟುತ್ತಾ ಡಾಕ್ಟರ್ ಕೊಠಡಿಗೆ ಹೋದ.

‘ಈಗ ಒಳಗೆ ಹೋದ ವ್ಯಕ್ತಿಯ ಕಾಲು ಉಳುಕಿದೆ, ಯಾವುದೇ ಔಷಧ ಕೊಡದೆ ಡಾಕ್ಟರ್ ಕಾಲು ನೀವಿ ಉಳುಕು ತೆಗೆದು ಕಳಿಸುತ್ತಾರೆ ನೋಡುತ್ತಿರಿ’ ಎಂದರು ನರ್ಸ್. ಹಾಗೇ ಆಯ್ತು. ಕುಂಟುತ್ತಾ ಹೋದವನು ಸಹಜವಾಗಿ ನಡೆದುಬಂದ!

‘ತಮ್ಮ ಕೈಗುಣದಿಂದ ಡಾಕ್ಟರ್ ಕಠಿಣ ಕಾಯಿಲೆಗಳನ್ನೂ ಗುಣಪಡಿಸಿಬಿಡುತ್ತಾರೆ... ಈಗ ನಿಮ್ಮ ಸರದಿ ಹೋಗಿ’ ಎಂದರು ನರ್ಸ್.

‘ನನ್ನ ಹೆಂಡ್ತಿಗೆ ವಿಪರೀತ ಹೊಟ್ಟೆಯುರಿ ಸಾರ್’ ಶಂಕ್ರಿ ಡಾಕ್ಟರ್‌ಗೆ ಹೇಳಿದ.

ಅಷ್ಟರಲ್ಲಿ ಹೆಂಗಸೊಬ್ಬಳು ಅಳುವ ಮಗುವನ್ನು ಎತ್ತಿಕೊಂಡು ಬಂದು, ‘ಡಾಕ್ಟ್ರೇ, ಮಗು ಗಂಟಲು ಕಿತ್ತುಬರುವಂತೆ ಅಳುತ್ತಿದೆ, ಅಳು ನಿಲ್ಲಿಸಿ’ ಎಂದಳು.

ಚೀಟಿ ಬರೆದುಕೊಟ್ಟ ಡಾಕ್ಟರ್, ‘ಈ ಕಷಾಯ ಮಾಡಿ ಮಗೂಗೆ ಕುಡಿಸಿ, ನಾನು ಮಗುವಾಗಿದ್ದಾಗ ನನ್ನ ಅಜ್ಜಿ ನನಗೆ ಇದನ್ನೇ ಕುಡಿಸುತ್ತಿದ್ದರು’ ಎಂದರು. ಹೆಂಗಸು ಹೋದರು.

‘ನಿಮ್ಮ ಮೆಡಿಕಲ್ ಕಾಲೇಜಿನಲ್ಲಿ ಕಷಾಯ ಕೋರ್ಸ್ ಇತ್ತಾ ಸಾರ್?’ ಸುಮಿ ಕೇಳಿದಳು.

‘ಇಲ್ಲ, ಅಜ್ಜಿಯಿಂದ ಕಲಿತೆ... ಸರಿ, ಯಾವಾಗಿನಿಂದ ನಿಮಗೆ ಹೊಟ್ಟೆಯುರಿ?’ ಕೇಳಿದರು.

‘ಪಕ್ಕದ ಮನೆಯವರು ಹೊಸ ಕಾರು ತಂದಾಗಿನಿಂದ ಡಾಕ್ಟರ್’ ಅಂದ ಶಂಕ್ರಿ.

ಡಾಕ್ಟರ್ ಪ್ರಿಸ್ಕ್ರಿಪ್ಷನ್ ಬರೆದುಕೊಟ್ಟು ಕಳಿಸಿದರು. ಅದರಲ್ಲಿ ‘ಹೊಸ ಕಾರು ಕೊಂಡುಕೊಳ್ಳಿ’ ಎಂದು ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.