ADVERTISEMENT

ಚುರುಮುರಿ: ಮಾನ‘ದಂಡ’ ಸಮಿತಿ

ಸುಧೀಂದ್ರ
Published 8 ಏಪ್ರಿಲ್ 2021, 19:30 IST
Last Updated 8 ಏಪ್ರಿಲ್ 2021, 19:30 IST
   

ಯೂನಿವರ್ಸಿಟಿಗಳು ಕೊಡೋ ನಾಡೋಜ ಹಾಗೂ ಗೌರವ ಡಾಕ್ಟರೇಟ್‍ಗಳ ಕುರಿತು ಪತ್ರಿಕೇಲಿ ಬಂದ ಸುದ್ದಿಗಳಿಂದ ಸರ್ಕಾರಕ್ಕೆ ಮುಜುಗರವಾಗಿತ್ತು. ಅರ್ಹರನ್ನು ಆಯ್ಕೆ ಮಾಡೋಕೆ ಬೇಕಾದ ಮಾನದಂಡಗಳನ್ನು ನಿರ್ಧರಿಸಲು ಕಮಿಟಿಯೊಂದನ್ನು ನೇಮಕ ಮಾಡಿತು.

ಸೆಕ್ರೆಟೇರಿಯಟ್ಟಲ್ಲಿ ಡಿಪಾರ್ಟ್‌ಮೆಂಟ್‌ ಪ್ರಮೋಷನ್‍ಗಳನ್ನು ನೋಡ್ಕೊಳ್ತಿದ್ದ ನನ್ನ ಫ್ರೆಂಡ್ ಪಾಪಣ್ಣ ಕಮಿಟಿಗೆ ಮೆಂಬರಾಗಿದ್ದ. ಅಭಿನಂದಿಸೋಕ್ಕೇಂತ ಮನೆಗೆ ಹೋದಾಗ ಅವನ ರೂಮು ಪಬ್ಲಿಕ್ ಲೈಬ್ರರಿಯಂತಾಗಿತ್ತು. ಎಲ್ಲಿ ನೋಡಿದರಲ್ಲಿ ಪತ್ರಿಕೆಗಳು, ಮ್ಯಾಗಝಿನ್‍ಗಳು, ಪುಸ್ತಕಗಳು. ‘ಯೂನಿವರ್ಸಿಟಿ ವೈಸ್‌ ಚಾನ್ಸಲರ್‌ಗಳಿಗೆ ಸಜೆಷನ್ ಕೊಡೋ ಕಮಿಟಿ ನಿಮ್ದು. ಸೂಟುಬೂಟು ಹಾಕ್ಕೊಂಡು ನೀಟಾಗಿ ರೆಡಿ ಯಾಗೋದ್ಬಿಟ್ಟು, ನೀಟ್ ಎಕ್ಸಾಮಿಗೆ ಪ್ರಿಪೇರಾಗ್ತಿರೋ ಸೆಕೆಂಡ್ ಪಿಯುಸಿ ಸ್ಟೂಡೆಂಟ್ ಥರಾ ಇದ್ದೀಯಲ್ಲೋ?’ ಎಂದು ರೇಗಿಸಿದೆ.

‘ಸುಮ್ನೇ ತಮಾಷೆ ಮಾಡೋದ್ಬಿಟ್ಟು ಏನಾದ್ರೂ ಸಲಹೆಗಳಿದ್ರೆ ಹೇಳು’ ಎಂದ. ಹಿಂದೆ ಟೆಕ್ನಿಕಲ್ ಎಜುಕೇಷನ್ ಬೋರ್ಡಿನಲ್ಲಿ ಅವನಿದ್ದಾಗಲೇ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳಿಗೆ ಸಿಇಟಿ ಎಕ್ಸಾಮ್ ಜಾರಿಗೆ ಬಂದಿದ್ದು ನೆನಪಾಯಿತು.

ADVERTISEMENT

‘ಸಿಇಟಿ ಟೈಪ್ ಒಂದು ಎಕ್ಸಾಮ್ ರೆಡಿ ಮಾಡ್ಸು. ಪಾಸಾದವ್ರನ್ನು ಕೌನ್ಸೆಲಿಂಗ್ ರೌಂಡಿಗೆ ಕರೆಸಿ, ಅವರವರ ಕ್ಯಾಟೆಗರಿಗೆ ತಕ್ಕಂತೆ ಮೆರಿಟ್ಮೇಲೆ ನಾಡೋಜ, ಗೌರವ ಡಾಕ್ಟರೇಟ್‍ ಗಳಿಗೆ ಸೆಲೆಕ್ಟ್ ಮಾಡಬಹುದು’ ಎಂಬ ಐಡಿಯಾ ಕೊಟ್ಟೆ.

‘ಕಾಂಪಿಟಿಷನ್‍ನಲ್ಲಿ ತುಂಬಾ ಜನಾ ಇರ್ತಾರೆ. ಒಂದೊಂದು ಯೂನಿವರ್ಸಿಟಿ ಮೂರಕ್ಕಿಂತ್ಲೂ ಜಾಸ್ತಿ ಜನಾನ ಶಾರ್ಟ್‌ಲಿಸ್ಟ್‌ ಮಾಡೋಕ್ಕಾಗಲ್ವಲ್ಲ’ ಅಂದ.

‘ಉಳಿದೋರನ್ನು ಮೆರಿಟ್‍ನಲ್ಲೇ ರಾಜ್ಯೋತ್ಸವ ಪ್ರಶಸ್ತಿಗೆ ಫಿಲ್ ಮಾಡ್ಕೊಬೋದು. ನೆಕ್ಸ್ಟ್ ಲೆವೆಲ್ಲಿನವರನ್ನು ಸರ್ಕಾರದ ಬೇರೆ ಪುರಸ್ಕಾರಗಳಿಗೆ ಕನ್ಸಿಡರ್ ಮಾಡ್ಬೋದು’ ಎಂದೆ. ಖುಷಿಯಾಗಿ ‘ತುಂಬಾ ಟಾಪ್ ಲೆವೆಲ್‍ನಲ್ಲಿ ಮೆರಿಟ್ಟಿರೋರನ್ನು ಪದ್ಮಶ್ರೀ ಪುರಸ್ಕಾರಕ್ಕೂ ರೆಕ್ಮಂಡ್ ಮಾಡ್ಬಹುದು ಅಲ್ವಾ? ಎಂದ.

‘ಅಲ್ಲಿಗೆ ಒನ್ ನೇಷನ್, ಒನ್ ಎಕ್ಸಾಮಿನೇಷನ್ ಕನಸು ಸಾರ್ಥಕವಾಯಿತು’ ಅಂದೆ. ಎಫ್.ಎಂ. ರೇಡಿಯೊದಲ್ಲಿ ‘ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ...’ ಹಾಡು ಬರ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.