ADVERTISEMENT

ಚುರುಮುರಿ | ಚಿತ್ರಾರ್ಥಕೋಶ

ಸುಮಂಗಲಾ
Published 1 ಜೂನ್ 2020, 2:52 IST
Last Updated 1 ಜೂನ್ 2020, 2:52 IST
   

ಬೆಕ್ಕಣ್ಣ ಗಂಭೀರವಾಗಿ ಬರೆಯುತ್ತ ಕೂತಿತ್ತು. ಇಣುಕಿ ನೋಡಿದೆ. ಕೊರೊನಾ ಅ(ನ)ರ್ಥಕೋಶ ಎಂದು ತಲೆಬರಹ ಕೊಟ್ಟಿತ್ತು. ‘ಮಂದಿ ಸರಿಯಾಗಿ ಅರ್ಥ ಗೊತ್ತಿರಲಾರದ ಏನೇನೋ ವದರ್ತಾರ. ಅದಕ್ಕ ನಾನೇ ಅರ್ಥಕೋಶ ಮಾಡಾಕಹತ್ತೀನಿ, ಓದು’ ಎಂದಿತು.

ಕೊರೊನಾ: ಮುನ್ನೆಚ್ಚರಿಕೆ ಕ್ರಮಗಳು, ಸ್ಯಾನಿಟೈಸರ್, ಮಾಸ್ಕ್, ಚಪ್ಪಾಳೆ, ಗಂಟೆ, ಜಾಗಟೆ, ಮೋಂಬತ್ತಿ, ಆಕಾಶದಿಂದ ಪುಷ್ಪವೃಷ್ಟಿ ಔಷಧಗಳು, ಯಾವುದಕ್ಕೂ ‘ಕ್ಯಾರೇ’ ಎನ್ನದೆ ಚೀನಣ್ಣನಿಂದ ಶುರುಮಾಡಿ, ದೊಡ್ಡಣ್ಣ, ಯೂರೋಪಣ್ಣ, ಮೋದಣ್ಣ ಇನ್ನಿತರ ಎಲ್ಲ ‘ರಾಜಣ್ಣ’ರ ಯಾವ ಕಟ್ಟಾಜ್ಞೆಗೂ ಮಣಿಯದ, ಕಟ್ಟಾಳು ವೈರಸ್.

ಲಾಕ್‍ಡೌನ್: ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ ಮನೆ-ರಸ್ತೆ-ಅಂಗಡಿಗಳಲ್ಲಿ ಓಡಾಡುವ ಮನುಷ್ಯರು, ಎಕಾನಮಿ ಡೌನ್, ದೇವರು ಒಳಗೆ, ಭಕ್ತಾದಿಗಳು ಹೊರಗೆ, ಬಡಹೊಟ್ಟೆಗಳು ಬೀದಿಗೆ, ಬಡಬೆನ್ನುಗಳು ಲಾಠಿಗೆ...

ADVERTISEMENT

ಸಾಮಾಜಿಕ ಅಂತರ: ‘ನಾವು’ ಇನ್ನು ಮುಂದೆ ‘ಅವರಿಂದ’ ದೂರವಿರೋಣ, ‘ಅವರಿಂದ’ಲೇ ಹರಡುವುದು ಕೊರೊನಾ, ನಮ್ಮ ಪೂರ್ವಜರು ಹೇಳಿದ್ದೂ ಇದನ್ನೇ, ‘ಕೈ ಕುಲುಕುವ’ ವಿದೇಶಿ ನೀತಿ ಬೇಡ, ದೇಸೀ ‘ನಮಸ್ಕಾರ’ವೇ ಸಾಕೆಮಗೆ.

ವಂದೇ ಭಾರತ್: ಪಾಸ್‍ಪೋರ್ಟ್ ಚೀಟಿಗಳಿಗೆ ಪುಷ್ಪಕ ವಿಮಾನ, ಪಡಿತರ ಚೀಟಿಗಳಿಗೆ ಹೆದ್ದಾರಿಯೊಳು ಬಿರುಬಿಸಿಲಿನ ಕಾಲ್ನಡಿಗೆ, ಭಾರತಾಂಬೆಯ ಹೆಮ್ಮೆಯ ಅನಿವಾಸಿ ಮಕ್ಕಳು ಮರಳಿ ಮನೆಗೆ...

ಆತ್ಮನಿರ್ಭರ್ ಭಾರತ್: ಆರ್ಥಿಕ ಅರ್ಥದಲ್ಲಿ ಸ್ವಾವಲಂಬನೆ, ಮಾನವೀಯ ಸಂವೇದನೆ ಅರ್ಥದಲ್ಲಿ ಆತ್ಮನಿರ್ದಯ್ ಭಾರತ, ಸತ್ತಿದ್ದಾಳೆಂದು ತಿಳಿಯದೆ ಅಮ್ಮನನ್ನು ಎಬ್ಬಿಸಲೆತ್ನಿಸಿದ ಮಗುವನ್ನು ನೋಡಿಯೂ ಮನಕರಗದ, ಶ್ರಮಿಕ ರೈಲು ಊರು ಮುಟ್ಟುವ ಮುಂಚೆಯೇ ಉಸಿರಡಗಿದ ಬಡಕಲು ಅಸ್ಥಿಪಂಜರಗಳಿಗೆ ಮನ ಮಿಡಿಯದ ಅಸಂಖ್ಯಾತ ಭಕ್ತಗಣಗಳ ಆತ್ಮನಿರ್ದಯ್ ಭಾರತ.

‘ಅ(ನ)ರ್ಥಕೋಶಕ್ಕೆ ಸೇರಿಸೋದು ಇನ್ನೂ ಭಾಳ ಐತಿ’ ಮತ್ತೆ ಬರೆಯತೊಡಗಿತು. ಓದಿ ಬಸವಳಿದ ನಾನು ‘ಇದು ಖರೇ ಖರೇ ಚಿತ್ರಾರ್ಥಕೋಶ’ ಎಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.