ADVERTISEMENT

ಉಳಿಕೆಯ ಸೋರ್ಸ್‌

ಕೆ.ವಿ.ರಾಜಲಕ್ಷ್ಮಿ
Published 18 ಜೂನ್ 2019, 19:45 IST
Last Updated 18 ಜೂನ್ 2019, 19:45 IST
   

‘ಮನೆ ಇಷ್ಟು ಪ್ರಶಾಂತವಾಗಿದೆ, ಯಾರೂ ಇಲ್ವೇ?’ ಎನ್ನುತ್ತಲೇ ಒಳಗೆ ಕಾಲಿಟ್ಟ ಕಂಠಿ.

‘ಬಾ, ಎಲ್ಲರೂ ಇದ್ದಾರೆ ಅವರವರ ಲೋಕದಲ್ಲಿ. ಪುಟ್ಟಿಗೆ ಸೆಲೆಬ್ರೇಷನ್ ಮೂಡ್, ಕ್ರಿಕೆಟ್‌ನಲ್ಲಿ ರೋಹಿತನ ಅಭಿಮಾನಿ, ಟೆರೇಸ್‌ನಲ್ಲಿ ಗುಂಪು ಸೇರಿದೆ. ನನ್ನವಳು ಯಾರಿಗೋ ಮೊಬೈಲ್‌ನಲ್ಲಿ ಕೌನ್ಸೆಲಿಂಗ್‌ ಮಾಡ್ತಿದ್ದಾಳೆ ರೂಮಲ್ಲಿ ಬಾಗಿಲು ಹಾಕ್ಕೊಂಡು’.

‘ಇತ್ತ ಮಳೆ ಸುರಿದು ಭೂಮಿ ತಂಪಾಗೋಲ್ಲ, ಆ ಕಡೆ ಸುಡುಬಿಸಿಲು ಅಂತ ಸಂಡಿಗೆ ಹಾಕೋಕ್ಕಾಗಲ್ಲ. ಗಪ್ಪಂತ ಮೋಡ, ಹನಿ ಸುರಿಯೋಕ್ಕೆ ಮುಂಚೆ ಮಾಯ. ಬರೀ ಆಸೆ ಹುಟ್ಟಿಸೋದೇ ಆಯ್ತು, ಫ್ಯಾನ್ ಹಾಕು, ಶ್...’

ADVERTISEMENT

‘ಹಾಕಿದ್ದೀನಿ, ಕರೆಂಟ್ ಕೃಪೆ ಇಲ್ಲ...’

‘ಪವರ್ ಅನ್ನೋದು ಬಲು ಸೂಕ್ಷ್ಮ ನೋಡು. ಬಿಸಿಲಾದರೂ ಕಟ್, ಮಳೆಯಾದರೂ ಕಟ್’. ಕೈಗೆ ಸಿಕ್ಕಿದ ಪೇಪರ್‌ನಲ್ಲಿ ಗಾಳಿ ಬೀಸಿಕೊಳ್ಳುತ್ತಾ ತೀರ್ಪಿತ್ತ.

ಪವರ್ ಅಂದರೆ ರಾಜಕೀಯದ್ದಾ ಅಥವಾ ವಿದ್ಯುತ್‌ಗೆ ರೆಫರ್ ಮಾಡಿದ್ದಾ? ಒಮ್ಮೊಮ್ಮೆ ಕಂಠಿ ಅತಿ ಜಾಣನಾಗುತ್ತಾನೆ.

ಎರಡೇ ನಿಮಿಷಕ್ಕೆ ವಿಜಯಗರ್ವದಿಂದ ನನ್ನವಳು ಕಾಣಿಸಿಕೊಂಡಳು.

‘ಆ ಚೀಟಿ ಚಿತ್ರಾಂಗದೆ ಹತ್ತಿರ ಹೆಚ್ಚಿನ ಬಡ್ಡಿಗೆ ಆಸೆಪಟ್ಟು ದುಡ್ಡು ಕಳ್ಕೊಂಡಿದ್ದಾರೆ ನಮ್ಮ ಕೆಲವು ಸದಸ್ಯರು. ಅದಕ್ಕೇ ಬುದ್ಧಿ ಹೇಳಿದೆ. ಕೊಟ್ಟದ್ದಕ್ಕೆ ದಾಖಲೆ ಕೇಳಿದ್ರೆ, ನಂಬಿಕೆ ಇರಲಿ ಅಂದಳಂತೆ. ಎರಡು ತಿಂಗಳು ಬಡ್ಡಿ ಕೊಟ್ಟು ಮೂರನೇ ತಿಂಗಳಿಗೆ ಮೂರುನಾಮ ಹಾಕಿದ್ದಾಳೆ. ಈಗ ಮನೆ ನಡೆಯೋದು ಹೇಗೆ ಅಂತ ಗೋಳಾಟ’.

‘ನೀ ಏನೇ ಹೇಳು, ಅಡುಗೆಮನೆ ಸಾಸಿವೆ ಡಬ್ಬಕ್ಕಿರುವ ಭದ್ರತೆ ಇನ್ನೆಲ್ಲಿ ಇಟ್ಟರೂ ಇಲ್ಲ’ ನನ್ನ ಮಾತು ಮುಗಿಯುವ ಮೊದಲೇ ‘ಬಡ್ಡಿಗೆ ಹಾಕುವ ಉಳಿಕೆ ದುಡ್ಡಲ್ಲಿ ಚಿನ್ನಾಭರಣ ಖರೀದಿಸಿದ್ರೂ ಕಷ್ಟಕ್ಕೆ ಆಗ್ತಿತ್ತು’ ಕಂಠಿ ನಾಲಿಗೆ ಜಾರಿಸಿಯೇ ಬಿಟ್ಟ.

‘ಎಂಥ ಮಾತು ಹೇಳಿದ್ರಿ. ನೀವು ಮಾತಾಡ್ತಿರಿ, ಪುಟ್ಟಿ ತಂದಿರೋ ಪಕೋಡದ ಜೊತೆಗೆ ಕಾಫಿ ತರ್ತೀನಿ ಎರಡು ನಿಮಿಷದಲ್ಲಿ’ ಎಂದು ಮುಖವರಳಿಸಿ ಹೋದಳು.

ನನ್ನವಳ ಉಳಿಕೆಯ ಸೋರ್ಸ್ ಅಂದರೆ, ಡೈರೆಕ್ಟಾಗಿ ನನ್ನ ಕಿಸೆ ಎಂದು ತಿಳಿದಿದ್ದರೂ ಪಕೋಡಕ್ಕೆ ಚಾತಕಪಕ್ಷಿಯಂತೆ ಕಾಯುತ್ತಾ ಕುಳಿತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.