ADVERTISEMENT

ಚುರುಮುರಿ: ಮನಸ್ಸಿದ್ದರೆ ಮಾರ್ಗ

ಕೆ.ವಿ.ರಾಜಲಕ್ಷ್ಮಿ
Published 28 ಆಗಸ್ಟ್ 2020, 15:38 IST
Last Updated 28 ಆಗಸ್ಟ್ 2020, 15:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೊರೊನಾಗೆ ಕ್ಯಾರೇ ಅನ್ನದೆ ಮಕ್ಕಳು ಪರೀಕ್ಷೆ ಬರೆದು ಫಲಿತಾಂಶವೂ ಬಂತು. ಎಷ್ಟು ಸಂತೋಷವಾಯಿತು ಅದನ್ನು ನೋಡಿ. ಪಟ್ಟ ಶ್ರಮ ಸಾರ್ಥಕ, ಸರ್ಕಾರಿ ಶಾಲೆಯ ಮಕ್ಕಳೂ ಮಿನುಗಿದವು. ಶಾಲೆ ಏನ್ಮಾಡುತ್ತೆ, ನಾವೆಲ್ಲ ಅದರಲ್ಲೇ ಅಲ್ವೇ ಓದಿದ್ದು? ಈ ಬಾರಿನೂ ಹೆಣ್ಮಕ್ಕಳೇ ಸ್ಟ್ರಾಂಗ್... ಅಷ್ಟೇ ಅಲ್ಲ, ಕಲಿಯೋಕ್ಕೆ ವಯಸ್ಸಿನ ಮಿತಿಯಿಲ್ಲ, ಜಾರ್ಖಂಡ್ ಶಿಕ್ಷಣ ಮಂತ್ರಿ ನೋಡು, ಈಗ ಕಾಲೇಜಿಗೆ ಸೇರಿದ್ದಾರೆ. ಅದೂ ತಾವೇ ಉದ್ಘಾಟಿಸಿದ ಕಾಲೇಜು. ನಮ್ಮ ನಾಯಕರೇ ಮೇಲ್ಪಂಕ್ತಿಯಾದರೆ ಚಂದ, ಸಾಮಾನ್ಯರಿಗೆ ವಿಶ್ವಾಸ ಇರುತ್ತೆ’ ಅತ್ತೆ ಸುದ್ದಿ ಚಪ್ಪರಿಸಿದರು.

‘ನೀವು ಏನೇ ಹೇಳಿ, ಶಾಲೆಗಳು ಯಾವಾಗ ತೆಗೆಯುತ್ತವೋಅನ್ನಿಸಿಬಿಟ್ಟಿದೆ. ಮಕ್ಕಳನ್ನು ಸುಧಾರಿಸೋದು ಬಹಳ ಕಷ್ಟ, ಶಿಸ್ತೇ ಇಲ್ಲ. ಆನ್‌ಲೈನ್ ಕ್ಲಾಸ್‌ಗೂ ಬಂಕ್ ಮಾಡೋ ತರಲೆಗಳ ಬಗ್ಗೆ ಗೊತ್ತಾ?’ ವಾಟ್ಸ್‌ಆ್ಯಪ್‌ ಸಂದೇಶ ನೋಡುತ್ತನನ್ನವಳು ದನಿಯೇರಿಸಿದಳು.

‘ಅದ್ಹೇಗೆ?’ ಹುಬ್ಬೇರಿಸಿದೆ.

ADVERTISEMENT

‘ಹಿಂದೆಲ್ಲ ಶಾಲೆ ಕಾಂಪೌಂಡ್ ಜಿಗಿದು ಕ್ಲಾಸ್‌ನಿಂದ ಪರಾರಿಯಾಗ್ತಿದ್ರೆ, ಈಗ ಆನ್‌ಲೈನ್‌ನಲ್ಲಿ ಹಾಜರಾತಿ ಮುಗಿದ ತಕ್ಷಣ ಮೈಕ್ ಮ್ಯೂಟ್ ಮಾಡಿ, ಕ್ಯಾಮೆರಾ ಆಫ್ ಮಾಡಿ, ಚಳ್ಳೆಹಣ್ಣು ತಿನ್ನಿಸುತ್ತಿವೆಯಂತೆ, ಅಸಾಧ್ಯ ಹುಡುಗರು’.

‘ಅದಕ್ಕೇನಂತೆ? ಪಾಠದ ಕೊನೆಯಲ್ಲಿ ಹಾಜರಾತಿ ತಗೊಂಡ್ರೆ ಪ್ರಾಬ್ಲಮ್ ಸಾಲ್ವ್ ಆಗೋಲ್ವಾ?’ ಬಾಣ ಬಿಟ್ಟೆ.

‘ಹಾಗೂ ಟ್ರೈ ಮಾಡಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಕರೆಂಟ್ ಹೋಗಿದೆ ಅಂತಲೋ ನೆಟ್ ನೆಟ್ಟಗಿರಲಿಲ್ಲ ಅಂತಲೋ ನೆಪ ಮಾಡಿದ್ದಾರೆ’.

‘ಹ್ಞೂಂ, ನಾನು ನಾಲ್ಕು ದಿನದಿಂದ ನೋಡ್ತಿದ್ದೀನಿ, ಮಳೆ ಬರೋ ಸೂಚನೆ ಇರದಿದ್ರೂ ಕರೆಂಟ್ ಇಲ್ಲ, ಕರೆಂಟ್ ತೆಗೆಯೋಕ್ಕೆ ಕಾರಣವೇ ಬೇಡ ಅನ್ನೋ ಹಾಗಿದೆ’.

‘ಇಡ್ಲಿಗೆ ನೆನೆಸಿದ್ದೀನಿ, ಕರೆಂಟ್ ಹೋದರೂ ಪರವಾಗಿಲ್ಲ, ಮನಸ್ಸಿದ್ದರೆ ಮಾರ್ಗ,ಪರ್ಯಾಯವ್ಯವಸ್ಥೆಇದೆಯಲ್ಲ’ ನಗುತ್ತಾ ನನ್ನತ್ತ ನೋಡಿದಳು ನನ್ನವಳು. ನಾನೂ ನಕ್ಕೆ ವಿಧಿಯಿಲ್ಲದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.