‘ಆಟಂ ಬಾಂಬ್ ಹಾಕಿದ ರಾಹುಲ್‌ಜಿ ಹೈಡ್ರೋಜನ್ ಬಾಂಬ್ ಸಿಡಿಸ್ತೀನಿ ಅಂತಿದಾರೆ’ ಎಂದಳು ಮಡದಿ.
‘ಅದೇ ಚೋರಿ ಚೋರಿ ತಾನೆ?’
‘ಕರೆಕ್ಟ್. ಮತಗಳ್ಳತನ. ಎಲ್ಲೆಡೆ ಮತಗಳ್ಳರು ಇದ್ದಾರೆ, ಪಿಕ್‌ಪಾಕೆಟರ್‌ಗಳ ತರಹ. ವೋಟ್‌ಗಳೆಲ್ಲ ಚೋರಿ ಆಗ್ತಿದೆ ಎಂದು ಕಳವಳಪಡುತ್ತಿದ್ದಾರೆ.’
‘ಅನೇಕ ಕಡೆ ಪಿಕ್‌ಪಾಕೆಟರ್‌ಗಳ ಜತೆ ಪೊಲೀಸಿನವರು ಶಾಮೀಲಾಗಿರೋ ಹಾಗೆ ಇಲ್ಲಿ ಚುನಾವಣಾ ಆಯೋಗ ಅವರಿಗೆ ನೆರವು ನೀಡುತ್ತಿದೆ ಎಂಬುದು ರಾಗಾಜಿ ಅಳಲು. ಆದರೆ, ಬೇರೆ ಚೋರಿಗಳ ಬಗ್ಗೆ ಅವರೇಕೆ ಮಾತಾಡ್ತಿಲ್ಲ?’
‘ಚೋರೀನೋ ಚೋರರೊ? ಏನದು?’
‘ಬರೀ ವೋಟ್ ಮಾತ್ರ ಚೋರಿ ಆಗ್ತಿದೆಯೆ? ಗಾಳಿ, ನೀರು, ಭೂಮಿ, ರಸ್ತೆ, ಮರ...’
‘ತಾಳಿ ತಾಳಿ. ಇವೆಲ್ಲಾ ಚೋರಿ ಆಗ್ತಿದೆಯಾ?’
‘ಗಾಳಿ ಮತ್ತು ನೀರು ಮಲಿನಗೊಳ್ಳುತ್ತಿವೆ. ಅದಕ್ಕೆ ಕೈಗಾರಿಕೆಗಳು ಮತ್ತು ವಾಹನಗಳು ಕಾರಣವಾದ್ದರಿಂದ ಅವು ಶುದ್ಧ ಗಾಳಿ ಮತ್ತು ನೀರು ಚೋರಿ ಮಾಡ್ತಿವೆ...’
‘ಕ್ಯಾ ಐಡಿಯಾ!’
‘ಮತ್ತೆ ಭೂಮಿ. ರಿಯಲ್ ಎಸ್ಟೇಟಿಗರು ಸರ್ಕಾರಿ ಭೂಮೀನ ಚೋರಿ ಮಾಡಿಲ್ಲವೆ? ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಚೋರಿ ಆಗ್ತಿದೆ. ಒತ್ತರಿಸಿಕೊಂಡ ರಸ್ತೆ ಮತ್ತು ರಾಜಕಾಲುವೆಗಳ ಮೇಲೆ ಬಿಲ್ಡಿಂಗ್ ಕಟ್ಟಿಲ್ಲವೆ? ಅವರೂ ಚೋರರು ತಾನೆ? ಕೆರೆಗಳನ್ನೇ ಆಪೋಶನ ತೊಗೊಂಡು ಅಪಾರ್ಟ್‌ಮೆಂಟುಗಳನ್ನೇ ಕಟ್ಟಿದಾರೆ ಕೆರೆಗಳ್ಳರು’.
‘ಮುಂದುವರಿಸಿ...’
‘ಕಾವೇರಿ ಲೈನಿಗೆ ಅನಧಿಕೃತವಾಗಿ ಕನೆಕ್ಷನ್ ತೊಗೊಂಡು ನೀರು ಕದಿಯೋರು ನೀರ‍್ಗಳ್ಳರು. ಮರಗಳನ್ನು ಕಾಡಿನಿಂದ ಸಾಗಿಸೋರು ಮರಗಳ್ಳರು. ಕೆಟ್ಟದಾಗಿ ಸಂಗೀತ ಹಾಡಿ ನಮ್ಮ ನಿದ್ದೆ ಕೆಡಿಸೋರು ನಿದ್ರಾಗಳ್ಳರು... ಇವೆಲ್ಲಾ ಚೋರಿ ತಾನೆ?’
‘ಚೋರರ ಮತ್ತು ಚೋರಿಗಳ ಭಾರಿ ಲಿಸ್ಟೇ ಮಾಡಿದೀರ? ಇದೂ ಚೋರೀನಾ?’
‘ಹೌದು, ಎಲ್ಲೋ ಐಡಿಯಾ ಸಿಕ್ಕಿತು. ವಿಸ್ತರಿಸಿದೆ. ಭೂಗಳ್ಳರು ಆಸ್ತೀನ ದೊಡ್ಡದು ಮಾಡಿಕೊಂಡಂತೆ. ಹೇಗಿದೆ?’
‘ಚೋರೀನೊ? ಐಡಿಯಾನೊ?’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.