
ಬಿ.ವೈ. ವಿಜಯೇಂದ್ರ
‘ವಿಬಿ-ಜಿ ರಾಮ್ ಜಿ’ ಹೆಸರಿನ ‘ವಿಕಸಿತ ಭಾರತ– ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’, ಗ್ರಾಮೀಣ ಭಾಗದ ಜನರ ಬದುಕಿಗೆ ಭರವಸೆಯ ಬೆಳಕು ನೀಡಿ ಆದಾಯದ ಮೂಲ ಖಾತ್ರಿ ಪಡಿಸುವ ಯೋಜನೆಯಾಗಿದೆ. ಕೃಷಿಕರ ಪರಿಶ್ರಮಕ್ಕೆ ಶಕ್ತಿ ತುಂಬುವ, ಮೂಲಕ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳಿಸುವ ಮಹತ್ವದ ಭಾಗವಾಗಿದೆ. ಆದರೆ, ಹತಾಶೆಯ ಅಂಚಿನಲ್ಲಿರುವ ಕಾಂಗ್ರೆಸ್ಸಿಗರು ‘ಗಾಂಧಿ’ ಮಹಾತ್ಮನ ಹೆಸರಿನಲ್ಲಿ ರಾಜಕೀಯ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. ಗ್ರಾಮೀಣ ಶ್ರಮಿಕರ ಜೀವನಾಡಿಯಾಗಬಹುದಾದ ಈ ಯೋಜನೆಗೆ ಶ್ರೀರಾಮನ ಹೆಸರು ಸೇರಿಕೊಂಡಿರುವುದು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲೂ ಕಾಂಗ್ರೆಸ್‌ನ ನಡವಳಿಕೆಯು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಗಾಂಧಿ ಹೆಸರನ್ನು ಬಳಸಿಕೊಳ್ಳುವುದೊಂದೇ ತನಗುಳಿದಿರುವ ದಾರಿ ಎಂಬಂತೆ ಕಾಣುತ್ತಿದೆ.
ವಾಸ್ತವವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯು ರದ್ದಾಗಿಲ್ಲ, ಬದಲಾಗಿ ಅದನ್ನು ಇನ್ನಷ್ಟು ಸಶಕ್ತಗೊಳಿಸುವ ದಿಸೆಯಲ್ಲಿ ಉದ್ಯೋಗ ಭರವಸೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೆಲಸದ ದಿನವನ್ನು 100ರಿಂದ 125 ದಿನಗಳವರೆಗೆ ವಿಸ್ತರಿಸಲಾಗಿದೆ. ದಿನಗೂಲಿ ₹370 ನಿಗದಿ ಮಾಡಲಾಗಿದೆ. ಈ ಹಿಂದಿನ ಯೋಜನೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ದುಸ್ತರವಾಗುತ್ತಿತ್ತು. ಅಗತ್ಯವಿಲ್ಲದ ಕೆಲಸಗಳನ್ನು ಸೃಷ್ಟಿಸಿ, ಯೋಜನೆಯ ಉದ್ದೇಶವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು. ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ನಿರ್ದಿಷ್ಟ ಉದ್ದೇಶ ಹಾಗೂ ಗುರಿಯನ್ನು ಸಾಧಿಸಲು ಅಗತ್ಯ ನಿಯಮಗಳು ಮತ್ತು ಷರತ್ತುಗಳನ್ನು ಅಳವಡಿಸಲಾಗಿದೆ. ಆ ಮೂಲಕ ರಾಷ್ಟ್ರೀಯ ಗ್ರಾಮೀಣ ಮೂಲ ಸೌಕರ್ಯ ಯೋಜನೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡು ಗುರಿ ಸಾಧಿಸುವ ಗುರಿಹೊಂದಲಾಗಿದೆ.
ಈ ಯೋಜನೆಯ ಅನುಷ್ಠಾನದಿಂದ ಭ್ರಷ್ಟಾಚಾರ ಸಹಿತ ಹಾಗೂ ಮತ್ತೆ ಮತ್ತೆ ಕಪೋಲಕಲ್ಪಿತ ಕೆಲಸಗಳನ್ನು ದಾಖಲಿಸಿ ಯೋಜನೆಯ ಹಣಕ್ಕೆ ಕನ್ನ ಹಾಕುವುದು ತಪ್ಪಲಿದೆ. ಈ ಹಿಂದಿನ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲ್ಗೊಳ್ಳುವಿಕೆಯಲ್ಲಿ ಕೇಂದ್ರವೇ ವೆಚ್ಚವನ್ನು ಭರಿಸುತ್ತಿತ್ತು. ಆದರೆ ಈಗಿನ ಯೋಜನೆಯಲ್ಲಿ ರಾಜ್ಯ ಕೇಂದ್ರಗಳ ನಡುವೆ 60:40ರ ವೆಚ್ಚ ಹಂಚಿಕೆಯಾಗುತ್ತದೆ. ಇದರಿಂದ ರಾಜ್ಯ ಸರ್ಕಾರಗಳು ಅತ್ಯಂತ ಜವಾಬ್ದಾರಿಯುತವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ವಿಶೇಷ ಗಮನಹರಿಸಬೇಕಾಗುತ್ತದೆ.
ವಿಬಿ-ಜಿ ರಾಮ್ ಜಿ ಯೋಜನೆಯಿಂದ ಕೆಲಸದ ಹಕ್ಕು ಕಸಿಯಲಾಗುತ್ತಿದೆ ಎಂಬ ಆಧಾರ ರಹಿತ ಆರೋಪ ಕೇಳಿಬರುತ್ತಿದೆ. ಆದರೆ ಈ ಯೋಜನೆಯಲ್ಲಿ ಬೇಡಿಕೆಯನ್ನು ಆಧರಿಸಿದ ರಾಷ್ಟ್ರ ನಿರ್ಮಾಣದ ಅನುಮೋದಿತ ಕೆಲಸಗಳನ್ನು ಕೈಗೆತ್ತಿಕೊಳ್ಳುವುದರಿಂದ ರಸ್ತೆ, ಒಳಚರಂಡಿ ಹಾಗೂ ಇತರ ಮೂಲ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಕೈಗೆತ್ತಿಕೊಳ್ಳಲು ಅವಕಾಶವಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಲಭ್ಯತೆಗೆ ಈ ಯೋಜನೆಯಿಂದ ಕೊರತೆಯುಂಟಾಗುವುದಿಲ್ಲ. ಕನಿಷ್ಠ 60 ದಿನ ಕೆಲಸಗಾರರು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಗ್ರಾಮಮಟ್ಟದಲ್ಲೇ ವಿಕಸಿತ ಭಾರತದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.
ಈ ಮಸೂದೆಯು ನಿಯಮದ ಅನುಸಾರ ಕನಿಷ್ಠ ಕೂಲಿಯನ್ನು ನಿಗದಿಪಡಿಸಲಿದೆ. ಈ ಹಿಂದೆ ಮನರೇಗಾ ಯೋಜನೆಯಲ್ಲಿ ನಿಗದಿಪಡಿಸಲಾಗಿದ್ದ ಕೂಲಿಯು ಯಾವುದೇ ಕಾರಣಕ್ಕೂ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಗುತ್ತಿಗೆದಾರರು ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶವಿರುವುದಿಲ್ಲ. ಕಾರ್ಮಿಕರನ್ನು ಶೋಷಣೆ ಮಾಡದಂತೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ. ಬಯೊ ಮೆಟ್ರಿಕ್, ಜಿಯೊ ಟ್ಯಾಗಿಂಗ್, ಡಿಜಿಟಲ್ ಹಾಜರಾತಿ ಪಟ್ಟಿಗಳನ್ನು ಆಧರಿಸಿ ಕೂಲಂಕಷವಾಗಿ ಪರಿಶೀಲಿಸಿ ಬ್ಯಾಂಕಿನ ಖಾತೆಗೆ ಕೂಲಿಯ ಹಣ ಜಮಾ ಮಾಡುವುದರಿಂದ ಅನಗತ್ಯ ವಿಳಂಬ ಹಾಗೂ ಸುಳ್ಳು ಹಾಜರಾತಿ ಸೃಷ್ಟಿ ಸಂಪೂರ್ಣವಾಗಿ ನಿಲ್ಲಲಿದೆ. ನಕಲಿ ಹಾಜರಾತಿಗಳನ್ನು ಸೃಷ್ಟಿಸಿ ಮೂರ್ನಾಲ್ಕು ಕಡೆಗಳಲ್ಲಿ ಕೂಲಿ ಪಡೆಯುತ್ತಿದ್ದ ಕಳ್ಳಮಾರ್ಗವೂ ಬಂದ್ ಆಗಲಿದೆ.
ಈ ಹಿಂದಿನ ಯೋಜನೆಯಲ್ಲಿ ನಕಲಿ ಕೆಲಸಗಳ ಸೃಷ್ಟಿ ವ್ಯಾಪಕವಾಗಿತ್ತು. ಭ್ರಷ್ಟಾಚಾರವಂತೂ ವಿಪರೀತಕ್ಕೆ ಹೋಗಿತ್ತು. ಕೆಲಸಗಳ ಮೌಲ್ಯವರ್ಧನೆ ಸೂಕ್ತ ರೀತಿಯಲ್ಲಿ ಆಗುತ್ತಿರಲಿಲ್ಲ. ಇದಕ್ಕೆಲ್ಲ ಇನ್ನು ಮುಂದೆ ಕಡಿವಾಣ ಬೀಳಲಿದೆ. ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಇನ್ನು ಮುಂದೆ ಯಾವುದೇ ಸೋರಿಕೆಯಾಗದಂತೆ ಆರ್ಥಿಕ ಸುರಕ್ಷತೆ ಒದಗಿಸಲಾಗಿದೆ. ಒಟ್ಟಾರೆಯಾಗಿ ಮಹಾತ್ಮ ಗಾಂಧಿಯವರು ಕಂಡ ಕನಸಿನ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ಗ್ರಾಮ ಸಾಮ್ರಾಜ್ಯ ಹಾಗೂ ಸಮೃದ್ಧ ಭಾರತವನ್ನು ಕಟ್ಟುವ ಮೂಲಕ ವಿಕಸಿತ ಭಾರತದ ಸಂಕಲ್ಪವನ್ನು ಈಡೇರಿಸುವುದು ಕೇಂದ್ರ ಸರ್ಕಾರದ ಮಹಾಸಂಕಲ್ಪವಾಗಿದೆ.
ಸ್ವಾತಂತ್ರ್ಯಾನಂತರ ಕಾಂಗ್ರೆಸ್ ವಿಸರ್ಜಿಸಿ ಎಂದ ಮಹಾತ್ಮ ಗಾಂಧಿಯವರನ್ನು ‘ಅಪ್ರಸ್ತುತ’ ಎಂಬಂತೆ ನಡೆದುಕೊಂಡಿರುವ ಇತಿಹಾಸ ಬೆನ್ನುಗಂಟಿಸಿಕೊಂಡಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಆ ಪಕ್ಷವು ‘ಗಾಂಧಿ’ ವಿಚಾರಗಳು ಹಾಗೂ ಅವರ ಕಾರ್ಯಕ್ರಮಗಳನ್ನು ಮೂಲೆಗೊತ್ತರಿಸುತ್ತಾ ಮುನ್ನಡೆದಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ, ನಿದರ್ಶನಗಳಿವೆ. ನೆಹರೂ ಅವರು ಪ್ರಧಾನಿಯಾದ ಸುದೀರ್ಘ ಅವಧಿ ಹಾಗೂ ಅನಂತರ ದಿನಮಾನಗಳೆಲ್ಲಾ ನೆಹರೂ ಕುಟುಂಬದ ಓಲೈಕೆ ಹಾಗೂ ಸ್ಮರಣೆಗೆ ಮೀಸಲಿಟ್ಟು ಮಹಾತ್ಮರನ್ನು ನೇಪತ್ಯಕ್ಕೆ ಸರಿಸಿ, ‘ಗಾಂಧಿ’ ಹೆಸರನ್ನು ರಾಜಕೀಯ ಸ್ವಾರ್ಥಕ್ಕಾಗಿ ತಮ್ಮ ಹೆಸರಿನೊಂದಿಗೆ ಬಳಸಿಕೊಂಡಿದೆ. ಗಾಂಧಿಯವರ ಹೆಸರನ್ನು ಇಂದಿಗೂ ಅಂಟಿಸಿಕೊಂಡಿರುವ ನೆಹರೂ ‘ವಂಶಸ್ಥರು’ ಸ್ವಾತಂತ್ರ್ಯ ಚಳವಳಿಯ ಪ್ರತಿಫಲದ ಬಹುದೊಡ್ಡ ಫಲಾನುಭವಿ ಕುಟುಂಬ.
ಗಾಂಧಿ ತತ್ವ-ಸಿದ್ಧಾಂತಗಳನ್ನು ಅಪಮಾನಿಸುವಂತೆ ಅಧಿಕಾರ ರಾಜಕಾರಣದಲ್ಲಿ ಹಾಗೂ ಪಕ್ಷ ಸಂಘಟನೆಯಲ್ಲಿ ನಡೆದುಕೊಳ್ಳುವ ಈಗಿನ ಕಾಂಗ್ರೆಸ್ ‘ಗಾಂಧಿ ಸಿದ್ಧಾಂತದ ಅಸಲೀ ವಿರೋಧಿ’ ಎಂಬುದು ಸ್ವಾತಂತ್ರ್ಯ ಚಳವಳಿಯ ಕೊಂಡಿಯಾಗಿರುವ ಹಳೆಯ ತಲೆಮಾರಿನ ಹಿರಿಯ ಕಾಂಗ್ರೆಸ್ಸಿಗರ ವ್ಯಥೆ ತುಂಬಿದ ಅಭಿಪ್ರಾಯ.
ದಶಕಗಳ ಕಾಲ ತಾನು ಅಧಿಕಾರ ನಡೆಸಿದ ಕೇಂದ್ರ ಹಾಗೂ ರಾಜ್ಯಗಳ ಯೋಜನೆ-ಕಾರ್ಯಕ್ರಮಗಳಿಗೆ ಬಹುತೇಕವಾಗಿ ನೆಹರೂ ಮನೆತನದ ಹೆಸರನ್ನು ಬಿಟ್ಟು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಬೇರೆ ಹೆಸರುಗಳನ್ನೂ ನೆನಪಿಸಿಕೊಳ್ಳುವ ಗೋಜಿಗೆ ಹೋಗದೇ ಭಟ್ಟಂಗಿ ಸಂಸ್ಕೃತಿ ಮೆರೆಯಲಾಗಿದೆ. ಗಾಂಧಿ, ಅಂಬೇಡ್ಕರ್ ಅವರನ್ನು ನಿರಂತರವಾಗಿ ಬದಿಗೆ ಸರಿಸಿದ ಉದಾಹರಣೆಗಳೇ ನಮಗೆ ಹೇರಳವಾಗಿ ಸಿಗುತ್ತವೆ. ಇಂಥಾ ಕಾಂಗ್ರೆಸ್ಸಿಗರು ಇಂದು ಮನರೇಗಾ ಯೋಜನೆ ಬದಲಿಸಿ ಗಾಂಧಿಯವರ ಹೆಸರಿಗೆ ಅಪಚಾರವೆಸಗಲಾಗಿದೆ ಎಂದು ಗುಲ್ಲೆಬ್ಬಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ವಿಪರ್ಯಾಸ.
ಯಾವ ಉದಾತ್ತ ಉದ್ದೇಶಕ್ಕಾಗಿ ಸ್ವಾಂತಂತ್ರ್ಯ ಚಳವಳಿ ಜನ್ಮ ತಾಳಿತೋ, ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಗಾಂಧೀಜಿಯವರು ಚಳವಳಿಯ ನೇತೃತ್ವ ವಹಿಸಿದರೋ ಅದನ್ನು ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದರೆ ಅದು ಕೇಂದ್ರದ ಎನ್.ಡಿ.ಎ. ಸರ್ಕಾರ ಎಂಬುದಕ್ಕೆ ಹಲವು ನಿದರ್ಶನಗಳಿವೆ.
ಕಾಂಗ್ರೆಸ್ ಅಪಪ್ರಚಾರ: 2014ರಲ್ಲಿ ಮೋದಿಯವರು ಪ್ರಧಾನಿಯಾದ ಮೊದಲ ವರ್ಷದಲ್ಲೇ ಗಾಂಧೀಜಿಯವರ ಕನಸಿನ ಕಾರ್ಯಕ್ರಮ ಸ್ವಚ್ಛ ಭಾರತ ಅಭಿಯಾನವನ್ನು ಮಹಾತ್ಮ ಗಾಂಧಿಯವರ ಹೆಸರಿನಲ್ಲಿಯೇ ದೇಶದ ಮೂಲೆ ಮೂಲೆಗೂ ತಲುಪುವಂತೆ ಯಶಸ್ವಿಗೊಳಿಸಿ, ಕೋಟ್ಯಂತರ ಭಾರತೀಯರನ್ನು ಜಾಗೃತಿಗೊಳಿಸಿ, ಬಾಪೂಜಿಯವರ ಸ್ಮರಣೆಯನ್ನು ಸಾರ್ಥಕಗೊಳಿಸಿದ್ದನ್ನು ಕಾಂಗ್ರೆಸ್ಸಿಗರು ಮೆಚ್ಚುವುದು ಹಾಗಿರಲಿ, ಅದರ ಕುರಿತು ಅಪ್ಪಿತಪ್ಪಿಯೂ ಉಲ್ಲೇಖಿಸುವುದಿಲ್ಲ.
ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರ ಮನರೇಗಾ ಯೋಜನೆಗೆ ಮೀಸಲಿರಿಸಿದ್ದ 2013-14 ಅನುದಾನ ₹33,000 ಕೋಟಿ ಮಾತ್ರ. ‘ವಿಬಿ-ಜಿ ರಾಮ್ ಜಿ’ ಯೋಜನೆಗೆ ₹2.86 ಲಕ್ಷ ಕೋಟಿ ಮೀಸಲಿರಿಸಿರುವುದು ಮೋದಿ ಸರ್ಕಾರದ ಕೃಷಿ ಕಾರ್ಮಿಕರ ಹಾಗೂ ಗ್ರಾಮೀಣ ಭಾಗದ ಬಡವರ ಬಗೆಗಿನ ಬದ್ಧತೆ ಹಾಗೂ ಕಾಳಜಿಯನ್ನು ಸಾಕ್ಷೀಕರಿಸುತ್ತದೆ. 2014ರಲ್ಲಿ 1.66 ಕೋಟಿ ಕೆಲಸದ ದಿನಗಳಿದ್ದುದು ಇದೀಗ 3.10 ಕೋಟಿಗೆ ಏರಿಕೆಯಾಗಿದೆ. ಈವರೆಗೂ ಯೋಜನೆಗೆ ₹8.53 ಲಕ್ಷ ಕೋಟಿ ಹಣ ಬಿಡುಗಡೆಯಾಗಿದೆ. 2014ರಲ್ಲಿ 1.53 ಲಕ್ಷ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿತ್ತು. ಮೋದಿಯವರ ಅವಧಿಯಲ್ಲಿ ಇದು 8.62 ಕೋಟಿ ಮೀರಿದೆ. ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲೂ ಗಣನೀಯ ಪ್ರಮಾಣದ ಏರಿಕೆ ಕಂಡಿದೆ. ಇಂಥಾ ಮಹತ್ವದ ಅಂಶಗಳನ್ನು ಮರೆಮಾಚಲು ಕಾಂಗ್ರೆಸ್ಸಿಗರು ಗಾಂಧಿಯವರ ಹೆಸರು ಬಳಸಿಕೊಂಡು ಗಾಂಧಿ ಚಿಂತನೆ ಹಾಗೂ ಕಾರ್ಯಕ್ರಮಗಳ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಗಾಂಧಿ ಮಾರ್ಗದ ವಿರೋಧಿ ನಡೆಯಲ್ಲದೇ ಬೇರೇನೂ ಅಲ್ಲ.
ಹಿಂದಿನ ಮನರೇಗಾ ಯೋಜನೆಯನ್ನು ಕೈಬಿಡುವ ಮೂಲಕ ಗಾಂಧಿಯವರ ಹೆಸರನ್ನು ಕೈಬಿಡಲಾಗಿದೆ ಎಂಬುದು ಕಾಂಗ್ರೆಸ್ ಆರೋಪ. ಆದರೆ ವಿಬಿ-ಜಿ ರಾಮ್ ಜಿ ಯೋಜನೆಯ ಮೂಲಕ ಗಾಂಧಿಯವರ ಕನಸನ್ನು ಸಾಕಾರಗೊಳಿಸಲು ಗಾಂಧಿಯವರು ಆರಾಧಿಸುತ್ತಿದ್ದ ರಾಮನ ಹೆಸರನ್ನು ಬಳಸಿಕೊಳ್ಳಲಾಗಿದೆ. ಶ್ರೀರಾಮ ಆದರ್ಶದ ಸಂಕೇತ, ಗಾಂಧಿಯವರು ಕೊನೆಯುಸಿರು ಇರುವವರೆಗೂ ‘ಹೇ ರಾಮ್’ ಎಂದು ಸಂಭೋಧಿಸುತ್ತಲೇ ಇದ್ದರು. ರಾಮರಾಜ್ಯದ ಕಲ್ಪನೆ ಸ್ವತಂತ್ರ ಭಾರತದಲ್ಲಿ ಪಡಿಮೂಡಬೇಕು ಎಂಬುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಈ ಕಾರಣಕ್ಕಾಗಿಯೇ ಗಾಂಧಿ ಕನಸಿನ ಈ ಯೋಜನೆಗೆ ಶ್ರೀರಾಮನ ಹೆಸರು ಸೇರ್ಪಡೆಯಾಗಿದೆ. ಮಹಾತ್ಮ ಗಾಂಧಿಯವರ ಚಿಂತನೆಯಲ್ಲಿ ಶ್ರೀರಾಮನಿದ್ದಾನೆ. ಗಾಂಧಿಜೀಯವರ ಪರಿಕಲ್ಪನೆಯ ರಾಮರಾಜ್ಯದ ಪುನರುತ್ಥಾನದ ಮಹತ್ವಾಕಾಂಕ್ಷೆ ಇದೆ. ಭವಿಷ್ಯದ ದಿನಗಳಲ್ಲಿ ವಿಶ್ವಮಾನ್ಯರಾಗಿರುವ ಮಹಾತ್ಮ ಗಾಂಧಿ ಅವರ ಹೆಸರನ್ನು ಸಾರ್ಥಕಗೊಳಿಸುವ, ಅವರ ಚಿಂತನೆಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಗಾಂಧಿಯವರ ‘ಆತ್ಮ’ ಸದಾ ಸಂತೃಪ್ತಗೊಳ್ಳುವಂತೆ ಯೋಜನೆ ಅಳವಡಿಸಲಾಗುವುದು. ನಕಲಿ ಕಾಂಗ್ರೆಸ್ಸಿಗರಿಂದ ಗಾಂಧಿಜೀಯವರ ಹೆಸರನ್ನು ಪಠಿಸುವ ಅಥವಾ ಉಳಿಸುವ ಪಾಠ ಕಲಿಯುವ ಅನಿವಾರ್ಯ ನೈಜ ಅಭಿವೃದ್ಧಿಯ ಚಿಂತನೆ ಬಯಸುವವರಿಗೆ ಎಂದಿಗೂ ಬಾರದು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಿನ ದಿನಗಳಲ್ಲಿಯೂ ಗಾಂಧಿಯವರು ಆರಂಭಿಸಿದ ಸ್ವದೇಶಿ ಚಳವಳಿ ಹಾಗೂ ಸ್ವಾವಲಂಬನೆಯ ಸಂದರ್ಭಗಳನ್ನು ದೃಷ್ಟಿಯಲ್ಲಿರಿಸಿಕೊಂಡು ‘ವಿಕಸಿತ ಭಾರತ’ ನಿರ್ಮಾಣವನ್ನು ಸಾಕಾರಗೊಳಿಸಲಿದೆ. ಆ ಮೂಲಕ ಲಕ್ಷಾಂತರ ಜನರು ತ್ಯಾಗ-ಬಲಿದಾನ ಮಾಡಿ ಗಳಿಸಿದ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಲಿದೆ. ಗಾಂಧಿ ಪ್ರಣೀತ ರಾಮರಾಜ್ಯ ಬಿಜೆಪಿ ಗುರಿ. ಅಷ್ಟಕ್ಕೂ, ರಾಮನ ಹೆಸರೆಂದರೆ ಕಾಂಗ್ರೆಸ್‌ಗೆ ಯಾಕೆ ಉರಿ?
ಲೇಖಕ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ