ಕೆ.ವೈ.ನಾರಾಯಣಸ್ವಾಮಿ/ಮೇಟಿ ಮಲ್ಲಿಕಾರ್ಜುನ
ಶಿಕ್ಷಣ ಎನ್ನುವುದು ಒಂದು ಆಯುಧ. ಅದು ಮನುಷ್ಯರನ್ನು ಬಡತನ, ಶೋಷಣೆ, ಗುಲಾಮಗಿರಿತನ ಹಾಗೂ ಮೂಢನಂಬಿಕೆ-ಕಂದಾಚಾರಗಳಿಂದ ಬಿಡುಗಡೆಗೊಳಿಸುವ ದಾರಿ ಎಂದು ಸಂವಿಧಾನ ಶಿಲ್ಪಿ
ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ದೇವರಾಜ ಅರಸು ಸರ್ಕಾರದ ಮುನ್ನೋಟದ ಫಲವಾಗಿ ಸಾವಿರಾರು ವಿದ್ಯಾರ್ಥಿ ನಿಲಯಗಳು ಆರಂಭಗೊಂಡಿದ್ದರಿಂದ ತಳಸಮುದಾಯಗಳ ಮಕ್ಕಳು ಬೆರಳೆಣಿಕೆಯಷ್ಟಾದರೂ ಉನ್ನತ ಶಿಕ್ಷಣದ ಪ್ರಯೋಜನವನ್ನು ಪಡೆಯಲು ಅವಕಾಶವಾಯಿತು. ರಾಜ್ಯ ಮತ್ತು ಕೇಂದ್ರದ ಸರ್ಕಾರಿ ಮತ್ತು ಅರೆಸರ್ಕಾರಿ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳು ಇಲ್ಲದೆ ಖಾಲಿ ಉಳಿದಿರುವ ಲಕ್ಷಾಂತರ ಬ್ಯಾಕ್‌ಲಾಗ್ ಹುದ್ದೆಗಳು, ಉನ್ನತ ಶಿಕ್ಷಣ ಸಂಸ್ಥೆಗಳ ಅಸಮರ್ಪಕ ಲಭ್ಯತೆ ಮತ್ತು ಹಂಚಿಕೆಯ ಕೊರತೆಯನ್ನು ಎತ್ತಿತೋರಿಸುತ್ತವೆ. ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ, ಇಂದು 18ರಿಂದ 24ರ ವಯೋಮಾನದ ಸುಮಾರು 1.5 ಕೋಟಿ ಯುವಜನರಿದ್ದು, ಉನ್ನತ ಶಿಕ್ಷಣದ ಎಲ್ಲಾ ವಲಯಗಳೂ ಸೇರಿ ಕೇವಲ 24 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಆದರೆ ಉನ್ನತ ಶಿಕ್ಷಣದಿಂದ ದೂರ ಉಳಿದ ಸುಮಾರು 1.20 ಕೋಟಿಗಿಂತಲೂ ಹೆಚ್ಚು ಯುವಜನರು ಯಾವ ಸಾಮಾಜಿಕ ಸಮುದಾಯಗಳಿಗೆ ಸೇರಿದವರು ಮತ್ತು ಇವರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಎಷ್ಟು ಎಂಬ ಸಂಗತಿಯನ್ನು ಗಮನಿಸಿದರೆ ಕರ್ನಾಟಕದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಮಾಣ ಕಡಿಮೆ ಇರುವುದು ಕೂಡ ಮುಖ್ಯವಾದ ಸಂಗತಿ ಎಂಬುದು ಮನವರಿಕೆಯಾದೀತು.
ಹೀಗಾಗಿಯೇ, ಉನ್ನತ ಶಿಕ್ಷಣದಲ್ಲಿ ಜಿಇಆರ್ (ಗ್ರಾಸ್ ಎನ್‌ರೋಲ್‌ಮೆಂಟ್ ರೇಶಿಯೊ) ಅನ್ನು ಹೆಚ್ಚು ಮಾಡುವ ಸಲುವಾಗಿಯೇ ಜಿಲ್ಲೆಗೊಂದು ವಿಶ್ವವಿದ್ಯಾಲಯ ತೆರೆಯುವ ಪ್ರಸ್ತಾಪವನ್ನು ಯುಜಿಸಿ ಮಂಡಿಸಿದೆ. ಇಂದು ಕರ್ನಾಟಕದ ಜಿಇಆರ್ ದಕ್ಷಿಣ ರಾಜ್ಯಗಳಲ್ಲಿಯೇ ಕಡಿಮೆ ಇದೆ (36.2%). ಪಕ್ಕದ ತಮಿಳುನಾಡಿನಲ್ಲಿ ಇದು ಶೇ 47 ಇದೆ. ಇಂತಹ ವಾಸ್ತವದ ಸ್ಥಿತಿಯನ್ನು ಮರೆಮಾಚಿ, ರಾಜ್ಯ ಸರ್ಕಾರದ ಸಂಪುಟ ಉಪಸಮಿತಿಯು ಹಿಂದಿನ ಬಿಜೆಪಿ ಸರ್ಕಾರ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಏಳು ವಿವಿಗಳನ್ನು ಆರಂಭಿಸಿತು ಎಂಬ ರಾಜಕೀಯ ಕಾರಣವನ್ನು ಮುಂದು ಮಾಡಿ ವಿವಿಗಳನ್ನು ಮುಚ್ಚುವ, ಇಲ್ಲವೇ ಹತ್ತಿರದ ಹಳೆಯ ವಿವಿಗಳಲ್ಲಿ ವಿಲೀನಗೊಳಿಸುವ ಅವೈಜ್ಞಾನಿಕ ಪ್ರಸ್ತಾವವನ್ನು ಮುಂದಿಟ್ಟಿರುವುದು ಹಿಂದುಳಿದ ಪ್ರದೇಶಗಳ ಬಡ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣದಿಂದ ವಂಚಿಸುವ ಕೆಲಸವೇ ಆಗಿದೆ.
ಯಾವ ಪೂರ್ವಸಿದ್ಧತೆ ಇಲ್ಲದೆ ವಿವಿಗಳನ್ನು ಆರಂಭಿಸಲಾಗಿದೆ ಎಂದು ಆಪಾದಿಸುವ ಕಾಂಗ್ರೆಸ್ ನೇತೃತ್ವದ ಸರ್ಕಾರ, ಯಾವುದೇ ಪೂರ್ವಸಿದ್ಧತೆ ಇಲ್ಲದೆ ಅವುಗಳನ್ನು ಮುಚ್ಚುವ ಪ್ರಸ್ತಾವ ಮಾಡಿರುವುದು ಕೂಡ ಅಂತಹುದೇ ಆತುರದ ನಿರ್ಧಾರವಾಗುವುದಿಲ್ಲವೆ? ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿವಿಗಳನ್ನು ಮುಚ್ಚುವ ಬಗ್ಗೆ ಮಾತನಾಡುವ ಶಿಕ್ಷಣ ಸಚಿವರಿಗೆ, ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಪ್ರಾರಂಭಿಸಿದ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕೇವಲ 10 ಜನ ಕಾಯಂ ಬೋಧಕರು ಹಾಗೂ ಕೋಲಾರದ ಉತ್ತರ ವಿಶ್ವವಿದ್ಯಾಲಯದಲ್ಲಿ ಒಬ್ಬರೇ ಕಾಯಂ ಬೋಧಕರು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿಲ್ಲವೆ? ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವೇ ವಿಶ್ವವಿದ್ಯಾಲಯವನ್ನು ಮುಚ್ಚುವ ಮಾನದಂಡವಾದರೆ ಮೊದಲು ನಗರ ಹಾಗೂ ಉತ್ತರ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಮೂಲಕ ವಿದ್ಯಾರ್ಥಿಗಳ ಹಿತಕಾಯವುದು ನ್ಯಾಯವಲ್ಲವೆ?
2016ರಲ್ಲಿ ಇದೇ ಕಾಂಗ್ರೆಸ್ ನೇತೃತ್ವದ ಸರ್ಕಾರ ಶಿಕ್ಷಣದ ವಿಕೇಂದ್ರೀಕರಣದ ಮೂಲಕ ಪ್ರಾದೇಶಿಕ ನ್ಯಾಯವನ್ನು ಮುಂದು ಮಾಡಿ ಪ್ರಾರಂಭಿಸಿದ ಕೋಲಾರ ಉತ್ತರ ವಿವಿಗೆ ಅಗತ್ಯವಿರುವ ಕನಿಷ್ಠ ಸಂಖ್ಯೆಯ ಬೋಧಕರನ್ನು ನೇಮಿಸಲು ಮುಂದಾಗದ ಸರ್ಕಾರ ಹೊಸ ವಿವಿಗಳನ್ನು ಬಲಗೊಳಿಸಲು ಉನ್ನತ ಶಿಕ್ಷಣ ಪರಿಷತ್ತು ವಿನಂತಿಸಿದ್ದ ₹370 ಕೋಟಿ ಹಣ ಮಂಜೂರು ಮಾಡಲು ಕೈಚೆಲ್ಲಿರುವುದು ವಿಷಾದದ ಸಂಗತಿ. ಅಲ್ಲದೆ, ನೂರು ವರ್ಷ ಕಂಡಿರುವ ಮೈಸೂರು ವಿವಿಯೂ ಸೇರಿದಂತೆ ಹಳೆಯ, ಹೊಸ ವಿಶ್ವವಿದ್ಯಾಲಯಗಳಲ್ಲಿ ಮಂಜೂರಾದ ಹುದ್ದೆಗಳ (4,158) ಪೈಕಿ ಶೇ 59ರಷ್ಟು ಹುದ್ದೆಗಳು (2,266) ಹತ್ತಾರು ವರ್ಷಗಳಿಂದ ಖಾಲಿ ಇರುವುದು ಸಚಿವ ಸಂಪುಟದ ಸದಸ್ಯರ ಕಣ್ಣಿಗೆ ಕಾಣದಿರುವುದು ಪವಾಡವೇ ಸರಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿವೃತ್ತ ಅಧ್ಯಾಪಕರಿಗೆ ನೀಡಲು ಪಿಂಚಣಿ ಹಣವಿಲ್ಲವೆಂಬುದು ವರದಿಯಾಗಿದೆ. ಆಂತರಿಕ ಸಂಪನ್ಮೂಲವಿದ್ದೂ ನಿವೃತ್ತಿವೇತನ ನೀಡಲಾಗದ ವಿವಿಯನ್ನು ಮುಚ್ಚುವ ನಿರ್ಧಾರವನ್ನು ಮುಂದೊಂದು ದಿನ ಸರ್ಕಾರ ತೆಗೆದುಕೊಂಡರೆ ಅಚ್ಚರಿಪಡಬೇಕಾಗಿಲ್ಲ.
ಮಾರುಕಟ್ಟೆ ನಿರ್ದೇಶಿತ ಸರ್ಕಾರಗಳಿಗೆ ವಿಶ್ವವಿದ್ಯಾಲಯಗಳೂ ಉತ್ಪಾದನಾ ಸಂಸ್ಥೆಗಳಂತೆ ಕಾಣುತ್ತಿರುವುದು ದುರಂತದ ಸಂಗತಿ. ಪ್ರಪಂಚದ ಮುಂದುವರಿದ ದೇಶಗಳು ಶಿಕ್ಷಣಕ್ಕೆ ಆದ್ಯತೆಯನ್ನು ಕೊಟ್ಟು ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳಿಗೆ ನೀಡಿದ ಆರ್ಥಿಕ ಉತ್ತೇಜನದಿಂದಾಗಿ ಆ ದೇಶಗಳ ವಿಶ್ವವಿದ್ಯಾಲಯಗಳು ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು. ಅಮೆರಿಕ, ಬ್ರಿಟನ್‌ನಂತಹ ದೇಶಗಳ ಕೈಗಾರಿಕೆಗಳು ವಿಶ್ವವಿದ್ಯಾಲಯಗಳಿಂದ ನಿರಂತರವಾಗಿ ಜ್ಞಾನವನ್ನು ಪಡೆಯುತ್ತಿರುವ ಕಾರಣ ಆ ದೇಶಗಳ ಪ್ರಗತಿಗೆ ಶಿಕ್ಷಣವೇ ತಳಹದಿಯಾಗಿದೆ. ಸರ್ವೋದಯ ಮತ್ತು ಸಾಮಾಜಿಕ ನ್ಯಾಯವನ್ನು ತಮ್ಮ ಚುನಾವಣಾ ಭಾಷಣಗಳಿಗೆ ಸೀಮಿತ ಮಾಡಿರುವ ನಮ್ಮ ಸರ್ಕಾರಗಳು ಉನ್ನತ ಶಿಕ್ಷಣಕ್ಕೆ ನೀಡಿರುವ ಮಹತ್ವವನ್ನು ತಿಳಿಯಲು ವಾರ್ಷಿಕ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟ ಹಣವನ್ನು ಗಮನಿಸಿದರೆ ಮನವರಿಕೆಯಾಗುತ್ತದೆ.
2019-20ರಲ್ಲಿ ರಾಜ್ಯ ಬಜೆಟ್‌ನ ಗಾತ್ರ ₹2,26,625 ಕೋಟಿ. ಇದರಲ್ಲಿ ಉನ್ನತ ಶಿಕ್ಷಣಕ್ಕೆ ₹5,487 ಕೋಟಿಗಳನ್ನು ನೀಡಲಾಗಿತ್ತು. 2024-25ರಲ್ಲಿ ರಾಜ್ಯದ ಬಜೆಟ್‌ನ ಗಾತ್ರ ₹3,71,383 ಕೋಟಿಗಳಾಗಿದ್ದು ಉನ್ನತ ಶಿಕ್ಷಣಕ್ಕೆ ಕೇವಲ ₹5,771 ಕೋಟಿ ಕಾಯ್ದಿರಿಸಲಾಗಿತ್ತು. ರಾಜ್ಯದ ಬಜೆಟ್ ಮೊತ್ತ ₹1,44,758 ಕೋಟಿಯಷ್ಟು ಹೆಚ್ಚಾದರೂ ಉನ್ನತ ಶಿಕ್ಷಣಕ್ಕೆ ಸಿಕ್ಕ ಹೆಚ್ಚು ಹಣ ಕೇವಲ ₹284 ಕೋಟಿ. ಈ ಅಂಕಿ ಅಂಶಗಳೇ ಸರ್ಕಾರದ ಮಲತಾಯಿ ಧೋರಣೆಯನ್ನು ಎತ್ತಿತೋರಿಸುತ್ತಿವೆ. ಸರ್ಕಾರ ತನ್ನ ಲೋಪಗಳನ್ನು ಮರೆಮಾಚಲು, ಆಂತರಿಕ ಸಂಪನ್ಮೂಲಗಳ ಕೊರತೆ ನೆಪವೊಡ್ಡಿ ಈಚೆಗೆ ಪ್ರಾರಂಭವಾಗಿದ್ದ ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಮೂಲಕ ಬಹುದೊಡ್ಡ ಸಂಖ್ಯೆಯ ಯುವಜನರನ್ನು ಉನ್ನತ ಶಿಕ್ಷಣದಿಂದ ಹೊರಗಿಡುತ್ತಿದೆ. ಅಲ್ಲದೇ, ಈ ಪ್ರಕ್ರಿಯೆ ಉನ್ನತ ಶಿಕ್ಷಣದ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸುತ್ತಿದೆ.
ಲೇಖಕರು: ಕೆ.ವೈ.ನಾರಾಯಣಸ್ವಾಮಿ ಅವರು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ಪ್ರಾಧ್ಯಾಪಕ
ಮೇಟಿ ಮಲ್ಲಿಕಾರ್ಜುನ ಅವರು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.