ADVERTISEMENT

ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ಪ್ರತ್ಯೇಕ ವ್ಯಾಖ್ಯಾನ ಅಗತ್ಯ

ಕಾನೂನು ಬದಲಾವಣೆ ಮಾಡಬೇಕಿದೆಯೇ?

ಬಾನು ಮುಷ್ತಾಕ್
Published 20 ಡಿಸೆಂಬರ್ 2024, 19:30 IST
Last Updated 20 ಡಿಸೆಂಬರ್ 2024, 19:30 IST
   
ವರದಕ್ಷಿಣೆ ಕಿರುಕುಳದಂಥ ಪ್ರಕರಣಗಳ ವಿಚಾರಣೆ ವೇಳೆ ‘ನ್ಯಾಯಾಲಯಗಳು ಎಚ್ಚರಿಕೆಯನ್ನು ವಹಿಸಬೇಕು’ ಎಂಬ ಸಂದೇಶವನ್ನು ಸುಪ್ರಿಂ ಕೋರ್ಟ್ ನೀಡಿದೆ. ಆ ಎಚ್ಚರಿಕೆಯು ಸಕಾಲಿಕ ಹಾಗೂ ವಿವೇಕಯುತ ಎಂದು ಪರಿಗಣಿಸಬಹುದಾದರೂ, ನಿಜವಾಗಿಯೂ ವರದಕ್ಷಿಣೆ ಕಾರಣಕ್ಕಾಗಿ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇರುವ ಮಹಿಳೆಯರಿಗೆ ಮುಂದಿನ ದಾರಿ ಏನು ಎಂಬ ಆತಂಕ, ನೋವು ಮತ್ತು ಅಧೈರ್ಯ ಕಾಡುತ್ತವೆ‌.

ಬೆಂಗಳೂರಿನ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವು ದೇಶದ ಅಂತರಾತ್ಮವನ್ನೇ ಕಲಕಿದೆ. ಕೌಟುಂಬಿಕ ಕಲಹಕ್ಕೆ ಬಲಿಯಾದ ಅವರ ಸಾವಿಗೆ ನ್ಯಾಯ ಕೇಳುವ ಧ್ವನಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಅನುರಣಿಸುತ್ತಿದೆ. ಮರಣಪೂರ್ವದಲ್ಲಿ ಅವರು ಒಂದು ವಿಡಿಯೊ ಅನ್ನು ರೆಕಾರ್ಡ್ ಮಾಡಿದ್ದು, ಅವರ ಮರಣಪೂರ್ವ ಹೇಳಿಕೆಯನ್ನು ಕಾನೂನಿನ ಭಾಷೆಯಲ್ಲಿ ಡೆತ್ ನೋಟ್ ಎಂದು ಪರಿಗಣಿಸಬಹುದಾಗಿದೆ.  

ಭಾರತೀಯ ಕಾನೂನು ಇತಿಹಾಸದ ಹಿಂದಿನ ಪುಟಗಳನ್ನು ತಿರುವಿ ಹಾಕಿದರೆ ಮಹಿಳೆಯರ ಮೇಲಿನ ವೈವಾಹಿಕ ದೌರ್ಜನ್ಯದ ಕರಾಳ ಇತಿಹಾಸ ಕಂಡುಬರುತ್ತದೆ. ನವವಿವಾಹಿತೆಯ ಸಾವು, ಸೀಮೆಎಣ್ಣೆ ಸ್ಟವ್ ಸಿಡಿದು ಅಥವಾ ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳ ಸಾಲು ಸಾಲು ಸುದ್ದಿಗಳು 80ರ ದಶಕದ ಪತ್ರಿಕೆಗಳ ಒಳಪಟಗಳಲ್ಲಿ ಪ್ರಕಟವಾಗುತ್ತಿದ್ದವು. ಇದೊಂದು ಸಾಮಾಜಿಕ ಅನಿಷ್ಟ ಎಂದು ಪರಿಗಣಿಸಿದ ಸರ್ಕಾರವು ಭಾರತೀಯ ದಂಡ ಸಂಹಿತೆಯ ಕಲಂಗಳನ್ನು ತಿದ್ದುಪಡಿ ಮಾಡಿತು ಮತ್ತು 498 (ಎ) ಎಂಬ ಹೊಸ ಉಪಬಂಧವನ್ನು ಸೇರಿಸಿತು. 1983ರ ಈ ತಿದ್ದುಪಡಿಯ ಮೂಲಕ ವೈವಾಹಿಕ ಕ್ರೌರ್ಯವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಯಿತು.

ಆದರೆ, ಸದರಿ ಕಾನೂನಿನ ದುರುಪಯೋಗವಾಗುತ್ತಿದೆ ಎಂಬ ಕೂಗೆದ್ದಿತು. ದುರುದ್ದೇಶಪೂರ್ವಕವಾಗಿ ಪತ್ನಿಯು ಪತಿಯ ವಿರುದ್ಧ ಸುಳ್ಳು ಕೇಸ್ ಅನ್ನು ದಾಖಲಿಸಿದರೂ ಕೂಡ ಯಾವುದೇ ಸಾಕ್ಷ್ಯ ಅಥವಾ ತನಿಖೆ ಇಲ್ಲದೇ ತನ್ನ ಪತಿ ಮತ್ತು ಆತನ ಸಂಬಂಧಿಗಳನ್ನು ಬಂಧಿಸುವಂತೆ ಒತ್ತಾಯಿಸಲು ಮಹಿಳೆಗೆ ಕಾನೂನಿನಲ್ಲಿ ಅವಕಾಶವಿತ್ತು.  ಹೀಗಾಗಿ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಹಲವು ತೀರ್ಪುಗಳ ಮೂಲಕ ಪತಿ ಮತ್ತು ಆತನ ಕುಟುಂಬಕ್ಕೆ ರಕ್ಷಣೆಯನ್ನು ನೀಡಿದೆ.

ADVERTISEMENT

ಪ್ರೀತಿ ಗುಪ್ತ ವಿರುದ್ಧ ಜಾರ್ಖಂಡ್ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೆಳಕಂಡಂತೆ ಅಭಿಪ್ರಾಯ ಪಟ್ಟಿದೆ: ‘ಕ್ರಿಮಿನಲ್ ಪ್ರಕರಣಗಳು ಸಂಬಂಧಪಟ್ಟ ಎಲ್ಲರಿಗೂ ಅಪಾರವಾದ ನೋವು ನೀಡುತ್ತವೆ. ದುರದೃಷ್ಟವಶಾತ್ ಹೆಚ್ಚಿನ ಸಂಖ್ಯೆಯ ಈ ದೂರುಗಳು ನ್ಯಾಯಾಲಯಗಳಲ್ಲಿ ಬಾಕಿ ಇರುವುದೂ ಅಲ್ಲದೇ ಸಮಾಜದ ಶಾಂತಿ ಸಾಮರಸ್ಯ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತಿವೆ. ಶಾಸಕಾಂಗವು ಸಾರ್ವಜನಿಕ ಅಭಿಪ್ರಾಯ ಮತ್ತು ಪ್ರಾಯೋಗಿಕ ವಾಸ್ತವಗಳನ್ನು ಪರಿಗಣನೆಗೆ ತೆಗೆದುಕೊಂಡು ಕಾನೂನು ಸಂಬಂಧಿತ ನಿಬಂಧನೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು ಕಡ್ಡಾಯವಾಗಿದೆ’. 

ಬಿ.ಎಸ್.ಜೋಶಿ ವಿರುದ್ಧ ಹರಿಯಾಣ ರಾಜ್ಯ ಪ್ರಕರಣದಲ್ಲಿ ಕೋರ್ಟ್, ‘498 (ಎ) ಉಪಬಂಧವು ಮಹಿಳೆಯರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ನ್ಯಾಯಾಲಯವು ತನ್ನ ಅಂತರ್ಗತ ಅಧಿಕಾರವನ್ನು ಚಲಾಯಿಸುವ ಮೂಲಕ ಕ್ರಿಮಿನಲ್ ಪ್ರಕ್ರಿಯೆಗಳು ಅಥವಾ ಎಫ್‌ಐಆರ್ ಅಥವಾ ದೂರನ್ನು ರದ್ದುಗೊಳಿಸಬಹುದು’ ಎಂದು ಅಭಿಪ್ರಾಯಪಟ್ಟಿತ್ತು. ಅಂದರೆ ಪೋಲೀಸ್ ಠಾಣೆಗಳಲ್ಲಿ ಪತ್ನಿಯ ದೂರಿನ ಮೇರೆಗೆ ಪತಿ ಹಾಗೂ ಆತನ ಇಡೀ ಕುಟುಂಬದವರ ವಿರುದ್ಧ ದಾಖಲಾಗುವ ದೂರು ಮತ್ತು ಎಫ್‌ಐಆರ್ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುತ್ತದೆ. ಇಂಥ ಬೆಳವಣಿಗೆಗಳಿಂದ ಮಹಿಳೆಯರ ಪರವಾಗಿ, ಅವರ ರಕ್ಷಣೆಯ ಸಲುವಾಗಿ ಮೂಡಿಬಂದ ಕಾನೂನುಗಳು ದುರ್ಬಲಗೊಳ್ಳುತ್ತಿವೆ. ಈ ಪರಿಸ್ಥಿತಿಗೆ ಕೆಲವು ಮಹಿಳೆಯರು ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಿರುವುದು ಮತ್ತು ಸುಲಿಗೆ ಸ್ವರೂಪದ ಪರಿಹಾರವನ್ನು ಪತಿಯಿಂದ ಒತ್ತಾಯಿಸುತ್ತಿರುವುದು ಕಾರಣ. ಇಂದಿಗೂ ಕೂಡ ವಾಸ್ತವವಾಗಿ ನೂರಾರು ಮಂದಿ ನೊಂದ ಮಹಿಳೆಯರು ನ್ಯಾಯ ಪಡೆಯಲು ಹೋರಾಟ ಮಾಡುತ್ತಿದ್ದಾರೆ. ಅಂತಹುದುರಲ್ಲಿ ಅತುಲ್ ಸುಭಾಷ್‌ ಅವರ ಪ್ರಕರಣ ಮಹಿಳೆಯರ ಹಿತಾಸಕ್ತಿಗೆ ತೀವ್ರ ಹಿನ್ನೆಡೆ ಉಂಟುಮಾಡುವಂಥದ್ದಾಗಿದೆ.

ಅತುಲ್ ಪ್ರಕರಣದಲ್ಲಿ ನಡೆದಿರುವಂತಹ ಬೆಳವಣಿಗೆಗಳು ನಮ್ಮ ದೇಶದ ವಿವಿಧ ಭಾಗದ ಲಕ್ಷಾಂತರ ಯುವಕರ ಬಾಳಿನಲ್ಲಿ ಇಂದಿಗೂ ನಡೆಯುತ್ತಿವೆ. ಸುಪ್ರಿಂ ಕೋರ್ಟ್‌ನ ಅಭಿಪ್ರಾಯದಂತೆ ಕಾನೂನು ಮತ್ತು ಕಾನೂನು ವ್ಯವಸ್ಥೆಯ ಸರಿ-ತಪ್ಪುಗಳು ಮತ್ತು ಲೋಪದೋಷಗಳನ್ನು ಸರಿಪಡಿಸುವ ಕೆಲಸವನ್ನು ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ಒಟ್ಟಾಗಿ ಸೇರಿ ಮಾಡಬೇಕಾಗಿದೆ. ಆ ಮೂಲಕ ನೊಂದ ಹೆಣ್ಣುಮಗಳಿಗೂ ಮತ್ತು ಅಮಾಯಕ ಯುವಕರಿಗೂ ಹಾಗೂ ಕುಟುಂಬಸ್ಥರಿಗೂ ಕಾನೂನು ಮತ್ತು ನ್ಯಾಯಿಕ ವ್ಯವಸ್ಥೆಯ ಮೇಲೆ ಮತ್ತೆ ನಂಬಿಕೆ ಹಾಗೂ ಭರವಸೆ ಮೂಡುವಂತೆ ಆಗಬೇಕಿದೆ.

ಬಾನು ಮುಷ್ತಾಕ್, ಸಾಹಿತಿ, ವಕೀಲೆ

ಭಾರತೀಯ ದಂಡ ಸಂಹಿತೆಯ ಉಪಬಂಧಗಳ ಬದಲಿಗೆ ಈಗ ಚಾಲ್ತಿಯಲ್ಲಿರುವ ಬಿಎನ್ಎಸ್‌ನ ಕಲಂ 80 ವರದಕ್ಷಿಣೆ ಸಾವಿನ ಬಗ್ಗೆ ಮತ್ತು ಕಲಂ 85 ಮಹಿಳೆಯ ಮೇಲೆ ಆಕೆಯ ಪತಿ ಅಥವಾ ಆತನ ಸಂಬಂಧಿಕರಿಂದ ಎಸಗಲಾಗುವ ಕ್ರೌರ್ಯದ ವಿರುದ್ಧ ರಕ್ಷಣೆ ನೀಡುವ ವ್ಯವಸ್ಥೆಯಾಗಿದೆ. ಹೀಗೆ ದಾಖಲಾಗುವ ಪ್ರಕರಣವು ಸತ್ಯವಾಗಿರಬಹುದು ಅಥವಾ ಸುಳ್ಳು ಕೂಡ ಆಗಿರಬಹುದು. ಆದರೆ ಈ ಎರಡು ಸಂದರ್ಭಗಳಲ್ಲಿಯೂ ಕಾನೂನಿನ ಪ್ರಕ್ರಿಯೆ ಒಂದೇ ಆಗಿರುತ್ತದೆ.

ಇಂದು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ಪ್ರಕರಣಗಳು ದಾಖಲಾಗುತ್ತಿವೆ. ದೂರುದಾರ ಮಹಿಳೆಯರು ತಮ್ಮ ಮನಸೋ ಇಚ್ಛೆ ಪತಿಯ ಸಂಬಂಧಿಗಳನ್ನು ಆರೋಪಿಗಳನ್ನಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುತ್ತಿದ್ದಾರೆ. ಈ ಬಗ್ಗೆ ತೆಲಂಗಾಣ ಹೈಕೋರ್ಟ್‌ನ ದಾರ ಲಕ್ಷ್ಮಿನಾರಾಯಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಕೌಟುಂಬಿಕ ಕ್ರೌರ್ಯದಿಂದ ಮಹಿಳೆಯರನ್ನು ರಕ್ಷಿಸುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಹೇಳಿದೆ. ಜತೆಗೆ ‘ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಿರ್ಧರಿಸುವಾಗ ಮುಗ್ಧ ಜನರಿಗೆ (ಆರೋಪಿಗಳಿಗೆ) ಅನಗತ್ಯ ಕಿರುಕುಳವನ್ನು ತಡೆಯಲು ನ್ಯಾಯಾಲಯಗಳು ಎಚ್ಚರಿಕೆಯನ್ನು ವಹಿಸಬೇಕು’ ಎಂಬ ಅಂಶವನ್ನು ದಾಖಲಿಸಿದೆ. ನ್ಯಾ. ಬಿ.ವಿ.ನಾಗರತ್ನ ಮತ್ತು ನ್ಯಾ. ಕೋಟೇಶ್ವರ ಸಿಂಗ್ ಅವರು ತಮ್ಮ ಸದರಿ ತೀರ್ಪಿನಲ್ಲಿ ‘ವೈವಾಹಿಕ ವಿರಸದ ಸಂದರ್ಭದಲ್ಲಿ ಮಹಿಳೆಯ ಅಸ್ಪಷ್ಟ ಮತ್ತು ಸಾಮಾನ್ಯೀಕರಿಸಿದ ಆರೋಪಗಳನ್ನು ನ್ಯಾಯಾಲಯಗಳು ಎಚ್ಚರಿಕೆಯಿಂದ ಪರಿಶೀಲಿಸದೇ ಇದ್ದಲ್ಲಿ ಕಾನೂನು ಪ್ರಕ್ರಿಯೆಗಳ ದುರುಪಯೋಗಕ್ಕೆ ಕಾರಣವಾಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಾಸ್ತವವಾಗಿ, ಇಡೀ ಸಮಾಜದ ಆತಂಕ ಇರಬೇಕಾದದ್ದು ಈ ಬೆಳವಣಿಗೆಯಲ್ಲಿ. ವೈವಾಹಿಕ ಸಂರಕ್ಷಣೆಯ ಕಾನೂನುಗಳು ಇಂದಿಗೂ ಕೂಡ ಲಕ್ಷಾಂತರ ಮಹಿಳೆಯರಿಗೆ ಅಗತ್ಯವಾಗಿವೆ. ಎಲ್ಲಿಯವರೆಗೆ ನಮ್ಮ ಸಮಾಜದಲ್ಲಿ ವರದಕ್ಷಿಣೆ ಎಂಬ ಪೆಡಂಭೂತಕ್ಕೆ ಮಾನ್ಯತೆ ಇದೆಯೋ ಅಲ್ಲಿಯವರೆಗೆ ಮಹಿಳೆಯರಿಗೆ ಅದರಿಂದ ರಕ್ಷಣೆ ಕೂಡ ಅಗತ್ಯವಾಗಿದೆ. ಆದರೆ, ಕೆಲ ಮಹಿಳೆಯರು ಈ ಕಾನೂನುಗಳನ್ನು ದುರುಪಯೋಗಪಡಿಸುತ್ತಿರುವುದು ಕೂಡ ನಿರಾಕರಿಸಲಾಗದಂತಹ ಸತ್ಯವಾಗಿದೆ. ಹಾಗೆ ದುರುಪಯೋಗಪಡಿಸಿಕೊಳ್ಳುತ್ತಿರುವ ಮಹಿಳೆಯರ ಬೆನ್ನಿಗೆ ಆಕೆಯ ತಾಯಿ, ತಂದೆ, ಸಹೋದರ ನಿಂತು, ಪತಿಯನ್ನು ನೆಲ ಕಚ್ಚಿಸಲು ಪ್ರಯತ್ನಿಸಿರುವ ನಿದರ್ಶನಗಳಿವೆ. 

ಸುಪ್ರಿಂ ಕೋರ್ಟ್ ವರದಕ್ಷಿಣೆ ಕಿರುಕುಳದಂಥ ಪ್ರಕರಣಗಳ ವಿಚಾರಣೆ ವೇಳೆ ‘ನ್ಯಾಯಾಲಯಗಳು ಎಚ್ಚರಿಕೆಯನ್ನು ವಹಿಸಬೇಕು’ ಎಂಬ ಸಂದೇಶವನ್ನು ನೀಡಿದೆ. ಆ ಎಚ್ಚರಿಕೆಯು ಸಕಾಲಿಕ ಹಾಗೂ ವಿವೇಕಯುತ ಎಂದು ಪರಿಗಣಿಸಬಹುದಾದರೂ, ನಿಜವಾಗಿಯೂ ವರದಕ್ಷಿಣೆ ಕಾರಣಕ್ಕಾಗಿ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇರುವ ಮಹಿಳೆಯರಿಗೆ ಮುಂದಿನ ದಾರಿ ಏನು ಎಂಬ ಆತಂಕ, ನೋವು ಮತ್ತು ಅಧೈರ್ಯ ಕಾಡುತ್ತವೆ‌. ಮಹಿಳೆಯರ ಎದುರಿಗೆ ಮತ್ತೆ ಮುಚ್ಚಿದ ಬಾಗಿಲುಗಳು ಢಾಳಾಗಿ ಕಾಣುತ್ತಿವೆಯೇ? ಅರ್ಥಾತ್ ಸುಳ್ಳು ದೂರುಗಳು ವರ್ಸಸ್ ಭಯಾನಕ ಸತ್ಯಗಳ ನಡುವಿನ ತೆಳುವಾದ ಗೆರೆಯನ್ನು ಗುರುತಿಸುವ, ವಿಸ್ತರಿಸುವ, ವಿಶದೀಕರಿಸುವ ಕಾರ್ಯವನ್ನು ಯಾರು ನಿರ್ವಹಿಸಬೇಕು? ತಮ್ಮ ಅಳಲಿಗೆ ಪ್ರತಿಸ್ಪಂದನ ನೀಡುವ ವಿವೇಚನೆ ಮತ್ತು ವಿವೇಕವನ್ನು ಹಾಗೂ ವ್ಯವಸ್ಥೆಯನ್ನು ನೊಂದ ಮಹಿಳೆಯರು ಯಾರಿಂದ ನಿರೀಕ್ಷಿಸಬೇಕು? ಸಮಾಜ, ಸರ್ಕಾರ, ಪೊಲೀಸ್ ಇಲಾಖೆ, ನ್ಯಾಯಾಲಯಗಳು, ಕಾನೂನು ವ್ಯವಸ್ಥೆ- ಯಾರಿಂದ? ಮಹಿಳೆಯರ ಶತಶತಮಾನಗಳ ಕಣ್ಣೀರು, ಮಹಿಳಾ ಸಂಘಟನೆಗಳ ಅವಿರತ ಹೋರಾಟಗಳು, ಕಾನೂನು ತಿದ್ದುಪಡಿಗಳು, ಪ್ರಜಾಪ್ರಭುತ್ವ ವ್ಯವಸ್ಥೆಯ ಮತ್ತು ಸಂವಿಧಾನದ ಪರವಾದ ಶ್ರೀರಕ್ಷೆಗಳು- ಇವೆಲ್ಲವೂ ಕೂಡ ಅತುಲ್ ಸುಭಾಷ್‌‌ ಆತ್ಮಹತ್ಯೆಯ ಎದುರಿಗೆ ತರೆಗೆಲೆಗಳಂತೆ ಹಾರಿಹೋಗುವ ಸಂದರ್ಭವು ಗಾಬರಿಗೊಳಿಸುವಂತಿದೆ. ಇದು ಅತ್ಯಂತ ಆತಂಕಕಾರಿಯಾಗಿದ್ದು, ಮಹಿಳೆಯರ ಹಿತಾಸಕ್ತಿಗೆ ವಿರುದ್ಧವಾಗಿದೆ.

ವರದಕ್ಷಿಣೆ ಮತ್ತು ಸಂಬಂಧಿತ ಕಾನೂನು ಹಾಗೂ ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆ ಇಲ್ಲದಿರುವುದಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ವಿಭಿನ್ನವಾಗಿ ಮತ್ತು ಪ್ರತ್ಯೇಕವಾಗಿ ಗುರುತಿಸಬೇಕಿದೆ. ಕಾನೂನು ಇವುಗಳನ್ನು ಪ್ರತ್ಯೇಕವಾಗಿ ವ್ಯಾಖ್ಯಾನ ಮಾಡಬೇಕಾಗಿದೆ. ಮದುವೆಯ ಸಂದರ್ಭದಲ್ಲಿ ವಿವಾಹಪೂರ್ವ ಕರಾರು ಪತ್ರಗಳನ್ನು ಉಭಯತ್ರರು ಕೂಡ ಬರೆಸಿ ದಾಖಲಿಸಬೇಕಾಗಿದೆ. ಆ ಕರಾರು ಪತ್ರದಲ್ಲಿ ವರದಕ್ಷಿಣೆ ಕೊಡುಕೊಳ್ಳುವಿಕೆಯ ಬಗ್ಗೆ ಕೂಡ ದಾಖಲಿಸಬೇಕಾಗಿದೆ. ಮತ್ತು ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆ ಇಲ್ಲದೇ ನ್ಯಾಯಾಲಯಗಳ ಮೆಟ್ಟಿಲು ಹತ್ತಿದ ವ್ಯಾಜ್ಯಗಳ ಸಂದರ್ಭದಲ್ಲಿ ಪತಿಯ ಮಾತನ್ನೂ ಆಲಿಸಬೇಕಾದ ಅವಕಾಶವನ್ನು ಕೂಡ ಕಾನೂನಾತ್ಮಕವಾಗಿ ಒದಗಿಸಬೇಕಿದೆ.

ಲೇಖಕಿ: ಸಾಹಿತಿ, ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.