ADVERTISEMENT

ಚರ್ಚೆ: ಸಂವಿಧಾನದ ಆಶಯ ಅರಿಯೋಣ

ಸಾಮಾಜಿಕ ಸಮಾನತೆಯ ಸದುದ್ದೇಶಕ್ಕೆ ಕುಂದು ಉಂಟಾಗದಂತೆ ನೋಡಿಕೊಳ್ಳಬೇಕಾದದ್ದು ಸಂವೇದನಾಶೀಲ ಸಮಾಜದ ಜವಾಬ್ದಾರಿ

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 29 ಡಿಸೆಂಬರ್ 2022, 22:45 IST
Last Updated 29 ಡಿಸೆಂಬರ್ 2022, 22:45 IST
   

ಕಡುಕಷ್ಟದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ ಆ ತಾಯಿಗೆ ಇಬ್ಬರು ಮಕ್ಕಳು. ದೊಡ್ಡವನು ಆರೋಗ್ಯವಂತ, ದೃಢಕಾಯನಾಗಿದ್ದರೆ ಚಿಕ್ಕವನಿಗೆ ಹುಟ್ಟಿನಿಂದಲೇ ದೈಹಿಕ ದೌರ್ಬಲ್ಯಗಳು. ಸಾವಿನಂಚಿನಲ್ಲಿ ಹೊರಳಾಡುತ್ತಿರುವ ಕಿರಿಮಗನನ್ನು ಉಳಿಸಿಕೊಳ್ಳಲು ಅಮ್ಮನದ್ದು ನಿತ್ಯವೂ ಹರಸಾಹಸ. ಕಿರಿಯವ ದೈಹಿಕವಾಗಿ ಗಟ್ಟಿಗೊಳ್ಳುವವರೆಗೂ ಅವನಿಗೆ ಪೌಷ್ಟಿಕ ಆಹಾರ- ಆರೈಕೆಯ ತುರ್ತು ಅವಶ್ಯಕತೆ ಇತ್ತು. ಆದರೆ ಬಡ ತಾಯಿಜೀವಕ್ಕೆ ಆಯ್ಕೆಗಳಿಲ್ಲ. ತಿನ್ನಲು ಇದ್ದುದರಲ್ಲಿಯೇ ಹಿರಿಮಗನ ಪಾಲಿನ ರೊಟ್ಟಿಯನ್ನು ಸ್ವಲ್ಪ ಚಿವುಟಿ ಕಿರಿಮಗನಿಗೆ ಹೆಚ್ಚುವರಿ ಕೊಡುತ್ತಿದ್ದಳು. ಆತನನ್ನು ಬದುಕಿಸಿಕೊಳ್ಳುವುದಕ್ಕಾಗಿ!

ಹಾಗೆ ಒಂದು ದಿನ, ದೊಡ್ಡವನು ತನ್ನ ಪಾಲಿನ ರೊಟ್ಟಿಚೂರನ್ನು ತಮ್ಮನಿಗೆ ಕೊಡುತ್ತಿರುವ ಬಗ್ಗೆ ಅಮ್ಮನಲ್ಲಿ ತಕರಾರು ತೆಗೆದ. ನಿಜ, ಅಲ್ಲಿ ಅಮ್ಮ ಮಾಡುತ್ತಿರುವುದು ತಾರತಮ್ಯವೇ! ಆದರೆ ಅದರ ಹಿಂದೊಂದು ಘನವಾದ ಉದ್ದೇಶವಿತ್ತು. ಹೆತ್ತಕರುಳಿಗೆ ತನ್ನ ಕರುಳ ಕುಡಿಗಳಿಬ್ಬರೂ ಒಂದೇ, ಇಬ್ಬರ ಮೇಲೂ ಅದೇ ಪ್ರೀತಿ. ಇಬ್ಬರಲ್ಲಿ ಯಾರನ್ನೂ ಕಳೆದುಕೊಳ್ಳಲು ಬಯಸದ ಹೆತ್ತಮ್ಮನ ಜಾಗದಲ್ಲೀಗ ನಮ್ಮ ಸಂವಿಧಾನವಿದೆ. ಸದೃಢ ಮಗನಿಂದ ಚಿವುಟಿ ಕೊಡುವ ಸಣ್ಣ ರೊಟ್ಟಿಯ ತುಣುಕೇ ಮೀಸಲಾತಿ!

ನಮ್ಮ ಶಿಕ್ಷಣ, ಆಹಾರ, ಆರೋಗ್ಯದ ಗುಣಮಟ್ಟದ ಬಗ್ಗೆ ಚಿಂತಿಸಬೇಕಾದ ಹೊತ್ತಿದು. ಜಾತೀಯತೆ, ನಿರುದ್ಯೋಗ, ಪರಿಸರಮಾಲಿನ್ಯ, ಕೃಷಿ ಬಿಕ್ಕಟ್ಟುಗಳು ಹೆಮ್ಮರವಾಗಿ ಬೆಳೆಯುತ್ತಿವೆ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇಂತಹ ವಿಷಮ ಪರಿಸ್ಥಿತಿಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಶಿಕ್ಷಿತ ಸಮಾಜವಿಂದು, ಖಾಸಗೀಕರಣ ಇನ್ನಿಲ್ಲದ ವೇಗ ಪಡೆದುಕೊಂಡಿರುವ ಈ ಸಂದರ್ಭದಲ್ಲಿ ದೀರ್ಘಕಾಲಿಕ
ವಾಗಿ ಅಷ್ಟೇನೂ ಮಹತ್ವ ಹೊಂದಿರುವ ಸಾಧ್ಯತೆ ಇಲ್ಲದ ಮೀಸಲಾತಿಗಾಗಿ ಹೋರಾಡುತ್ತಿರುವ ಪರಿಯು ನಿಜಕ್ಕೂ ಆತಂಕ ಹುಟ್ಟಿಸುತ್ತದೆ. ಮೈಸೂರು ಅರಸರ ಕಾಳಜಿ, ಅಂಬೇಡ್ಕರ್‌ ಅವರ ಇಚ್ಛಾಶಕ್ತಿಯಲ್ಲಿ ಮೂಡಿದ್ದ ಭರವಸೆಗಳು ಬತ್ತದಂತೆ ಮೀಸಲಾತಿಯ ಫಲಾನುಭವಿಗಳು ಸ್ವಯಂಪ್ರೇರಿತರಾಗಿ ವಂಚಿತರಿಗೆ ಅವಕಾಶ ತೋರುವ ಔದಾರ್ಯ ಮೆರೆಯಬೇಕಾದ ಸಂದರ್ಭವಿದು. ವಾಸ್ತವದಲ್ಲಿ ಮೀಸಲಾತಿ ಅನ್ವಯವಾಗುತ್ತಿದ್ದ ಕೇವಲ ಶೇ 7ರಷ್ಟಿದ್ದ ಸರ್ಕಾರಿ ಉದ್ಯೋಗಗಳು ಪ್ರಸ್ತುತ ಖಾಸಗೀಕರಣದ ಭರಾಟೆಯಲ್ಲಿ ಗಣನೀಯವಾಗಿ ಕುಸಿಯುತ್ತಿರುವ ಹೊತ್ತಿದು.

ADVERTISEMENT

ಇರುವುದರಲ್ಲಿ ಬಲಿಷ್ಠವೆನಿಸಿರುವ ಸಮುದಾಯ ಗಳ ರಾಜಕೀಯ ಮುಖಂಡರು ಮಠಾಧೀಶರ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ವಿಷಾದಕರ. ತಮಗಿರುವ ಜಾತಿ ಬಲವನ್ನೇ ಮುಂದೆ ಮಾಡಿ, ನಿಮ್ನವರ್ಗಗಳಿಗೆ ಅವಶ್ಯವಾಗಿ ತಲುಪಬೇಕಾದ ಸವಲತ್ತುಗಳನ್ನು ಕಿತ್ತುಕೊಳ್ಳುವ ಸ್ವಾರ್ಥ ಮತ್ತು ಕಪಟತನದ ಹುನ್ನಾರಗಳನ್ನು ಮುನ್ನೆಲೆಗೆ ತಂದಿರುವುದು ಸಮರ್ಥನೀಯವಲ್ಲ. ಅಷ್ಟಕ್ಕೂ ಮೀಸಲಾತಿ ಎಂಬುದೊಂದು ‘ಬಡತನ ನಿರ್ಮೂಲನೆ’ ಕಾರ್ಯಕ್ರಮವಾಗಿರದೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಪ್ರಾತಿನಿಧಿತ್ವವನ್ನು ಖಾತರಿಪಡಿಸುವ ಯೋಜನೆ ಎಂಬುದನ್ನು ಮೊದಲು ಎಲ್ಲರೂ ಅರಿಯಬೇಕಿದೆ.

ಅದೊಂದು ವ್ಯಕ್ತಿತ್ವ ವಿಕಸನ ಶಿಬಿರ. ಎಂಟು– ಹತ್ತು ಸಾಲುಗಳಲ್ಲಿ ಶಿಬಿರಾರ್ಥಿಗಳು ಕುಳಿತಿದ್ದರು. ದಿನದ ಕೊನೆಗೆ ನಿರ್ವಾಹಕರು ಸರಳ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು. ದಿನಪತ್ರಿಕೆಯ ಹಾಳೆಯೊಂದನ್ನು ಎಲ್ಲರಿಗೂ ನೀಡಿ ಉಂಡೆ ಕಟ್ಟಲು ತಿಳಿಸಿದರು. ಮೂಲೆಯಲ್ಲಿದ್ದ ಕಸದ ಬುಟ್ಟಿಯನ್ನು ತಮ್ಮೆದುರು ತಂದಿಟ್ಟುಕೊಂಡು ಎಲ್ಲರೂ ತಾವು ಕೂತ ಜಾಗದಿಂದ ಕದಲದೇ ಕಾಗದದ ಉಂಡೆಗಳನ್ನು ಕಸದಬುಟ್ಟಿಗೆ ಗುರಿಯಿಟ್ಟು ಎಸೆಯಲು ಸೂಚಿಸಿದರು. ಮುಂದಿನ ಸಾಲಿನ ಎಲ್ಲರೂ ಬುಟ್ಟಿಯೊಳಗೆ ನಿಖರವಾಗಿ ಕಾಗದದ ಉಂಡೆಗಳನ್ನು ಎಸೆದಿದ್ದರು. ನಂತರದ ಎರಡು ಸಾಲಿನವರೂ ಹೆಚ್ಚೂಕಮ್ಮಿ ಎಸೆದಿದ್ದರು, ಒಬ್ಬಿಬ್ಬರ ವಿನಾ. ಹಿಂಬದಿ ಸಾಲಿನವರಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಎಸೆಯಲು ಸಫಲರಾದರೆ, ಕೊನೆಯ ಎರಡು ಸಾಲುಗಳಲ್ಲಿ ಕೂತವರ್‍ಯಾರಿಗೂ ಬುಟ್ಟಿಯೊಳಗೆ ಬೀಳು
ವಂತೆ ಕಾಗದದುಂಡೆಗಳನ್ನು ಎಸೆಯಲಾಗಿರಲಿಲ್ಲ!

ಇಂತಹ ವಿಭಿನ್ನ ಫಲಿತಾಂಶಕ್ಕೆ ಕಾರಣವಿಷ್ಟೇ. ಎದುರಿನ ಎರಡು–ಮೂರು ಸಾಲಿನವರ ಪಾಲಿಗೆ ಗುರಿಯಾಗಿರಿಸಿದ್ದ ಬುಟ್ಟಿ ಹತ್ತಿರವಿತ್ತು ಮತ್ತು ಸ್ಪಷ್ಟವಾಗಿ ತೋರುತ್ತಿತ್ತು. ಅವರ ಹಿಂದಿನ ಸಾಲಿನವರಿಗೆ ಬುಟ್ಟಿಯ ದೂರ ಹೆಚ್ಚಿಲ್ಲದಿದ್ದರೂ ಎದುರಿನವರ ತಲೆ ಅಡ್ಡವಾದ್ದ
ರಿಂದ ಎಸೆಯಲು ಸಣ್ಣ ಅಡಚಣೆಯಾಗಿತ್ತು. ಹಾಗಾಗಿ ಎಸೆದಿದ್ದರಲ್ಲಿ ಕೆಲವು ಗುರಿಮುಟ್ಟದೇ ಹೋಗಿದ್ದವು. ಆದರೆ, ಕೊನೆಯ ಸಾಲಿನವರಿಗೆ ಬುಟ್ಟಿಯು ಕಾಗದದುಂಡೆ ತಲುಪಲಾರದಷ್ಟು ದೂರವಿತ್ತು, ಮೇಲಾಗಿ ಅವರಿಗೆಲ್ಲ ಅವರ ಗುರಿಯೇ ಕಾಣುತ್ತಿರಲಿಲ್ಲ!
ಗುರಿಯೇ ತೋರದ ಮೇಲೆ ಗೆಲ್ಲುವ ಮಾತೆಲ್ಲಿ?!

ಹಾಗೆಯೇ ಭಿನ್ನಸ್ತರದ ಸಾಮಾಜಿಕ ಹಿನ್ನೆಲೆಯುಳ್ಳ ನಮ್ಮ ಬಹುತ್ವ ಭಾರತದಲ್ಲಿ ಎಲ್ಲರೂ ಗೆಲ್ಲಬೇಕೆಂಬುದು ಸಂವಿಧಾನವೆಂಬ ಅಂತರಾತ್ಮದ ಆಶಯ. ಮಾನವೀಯ ನೆಲೆಯಲ್ಲಿ ಸಾಮಾಜಿಕ ಸಮಾನತೆಯನ್ನು ಸಾಕಾರಗೊಳಿಸುವ ಕನಸು ಕಂಡು, ದೂರದೃಷ್ಟಿತ್ವದ
ಹಿರಿಯರನೇಕರು ಜಾರಿಗೊಳಿಸಿದ ಸಂವಿಧಾನ ಮತ್ತು ಸಂಘಟಿಸಿದ ಸಮಾಜ ಸುಧಾರಣಾ ಕ್ರಮಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಕೂಡಿಬೆಳೆಯುವ ಸಾಧ್ಯತೆಗಳು ತೆರೆದುಕೊಂಡಿವೆ. ಆ ಸದುದ್ದೇಶ ಮಣ್ಣುಪಾಲಾಗದಂತೆ ನೋಡಿಕೊಳ್ಳಬೇಕಾದದ್ದು ಸಂವೇದನಾಶೀಲ ಸಮಾಜದ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯವಾಗಿದೆ. ಸಾಮಾಜಿಕ ನ್ಯಾಯವು ಆದರ್ಶ ಸಮಾಜದ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಕಳಕಳಿಯಾಗಿ ಉಳಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.