ADVERTISEMENT

ಪ್ರಜಾವಾಣಿ ಚರ್ಚೆ: ಲಿಂಗಾಯತರ ಸೆಳೆಯುವ ತಂತ್ರ

ವಿವಾದ ಸೃಷ್ಟಿಸಿರುವ ‘ವಚನ ದರ್ಶನ’ ಕೃತಿ ಕುರಿತ ಅಭಿಪ್ರಾಯ

ಎಸ್.ಎಂ.ಜಾಮದಾರ
Published 11 ಏಪ್ರಿಲ್ 2025, 23:30 IST
Last Updated 11 ಏಪ್ರಿಲ್ 2025, 23:30 IST
<div class="paragraphs"><p>ಎಸ್.ಎಂ.ಜಾಮದಾರ</p></div>

ಎಸ್.ಎಂ.ಜಾಮದಾರ

   
ಮೇಲ್ನೋಟಕ್ಕೆ ‘ವಚನ ದರ್ಶನ’ ಎಂಬ ಹೆಸರು ವಚನಗಳನ್ನು ಕುರಿತಾದ ಮತ್ತೊಂದು ಕೃತಿಯೆಂದು ಸಾಮಾನ್ಯ ಓದುಗನಿಗೆ ಅನಿಸುತ್ತದೆ. ಆದರೆ ಅದರ ಒಳಗಿನ ಹೂರಣವೆಲ್ಲ ಶರಣ ತತ್ವಗಳಿಗೆ ವಿರುದ್ಧವಾದದ್ದು.  ಲಿಂಗಾಯತರನ್ನು ಹೇಗಾದರೂ ಮಾಡಿ ‘ಹಿಂದೂ’ ಅಥವಾ ‘ವೈದಿಕ’ ಪರಿಧಿಯೊಳಗೆ ತರಬೇಕು ಎಂಬ ಉದ್ದೇಶ ಈ ಕೃತಿಯ ಹಿಂದಿದೆ

‘ವಚನ ದರ್ಶನ’ ಎಂಬ ಹೆಸರಿನ ಗ್ರಂಥವು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪರಿವಾರದಿಂದ ಕಳೆದ ವರ್ಷದ ಜುಲೈ ತಿಂಗಳಿಂದ ಡಿಸೆಂಬರ್‌ವರೆಗೆ ಕರ್ನಾಟಕದ ಒಂಬತ್ತು ಸ್ಥಳಗಳಲ್ಲಿ ಮತ್ತು ದೆಹಲಿಯಲ್ಲಿ ಅಪಾರ ಖರ್ಚಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಆ ಎಲ್ಲ ಸ್ಥಳಗಳಲ್ಲಿ ಸಂಘ ಪರಿವಾರದ ವಕ್ತಾರರು ಅತ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡಿದರು. ಈ ಪುಸ್ತಕವು ಸಂಘ ಪರಿವಾರದ ದುರುದ್ದೇಶ ಮತ್ತು ದುರುಳತನವನ್ನು ಬಿಂಬಿಸುತ್ತದೆ. ಈ ಕೃತಿಯ ಕುರಿತಾಗಿ ಕೆಲವು ಮುಖ್ಯ ಅಂಶಗಳನ್ನು ಗಮನಿಸಬೇಕಿದೆ.

ಮೊದಲನೆಯದು, ‘ವಚನ ದರ್ಶನ’ದ ಗೌರವ ಸಂಪಾದಕರಾಗಿರುವ ಸದಾಶಿವಾನಂದ ಸ್ವಾಮಿಗಳ ಯಾವುದೇ ಲೇಖನ, ಪ್ರಸ್ತಾವನೆ ಅಥವಾ ಮುನ್ನುಡಿ ಕೃತಿಯಲ್ಲಿ ಇಲ್ಲ. ಅವರ ಭಾವಚಿತ್ರ ಮಾತ್ರ ಇದೆ. ಕಾರಣ ಅವರೊಬ್ಬ ಲಿಂಗಾಯತ ಮುಖವಾಡದ ವೇದಾಂತಿ.

ADVERTISEMENT

ಎರಡನೆಯದು, ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಲಿಂಗಾಯತರು ಬಹುಸಂಖ್ಯಾತರಾಗಿರುವ ರಾಜ್ಯದ ಒಂಬತ್ತು ಪ್ರಮುಖ ಜಿಲ್ಲೆಗಳನ್ನೇ ಆಯ್ಕೆ ಮಾಡಿ, ಲಿಂಗಾಯತರ ಸಭಾಭವನಗಳಲ್ಲಿಯೇ ಕಾರ್ಯಕ್ರಮ ನಡೆಸಿ, ಲಿಂಗಾಯತ ಸ್ವಾಮಿಗಳನ್ನೇ ಗ್ರಂಥ ಬಿಡುಗಡೆಗೆ ಆಹ್ವಾನಿಸಲಾಗಿತ್ತು. ಅದರ ಹಿಂದಿನ ಉದ್ದೇಶ ಲಿಂಗಾಯತರನ್ನು ಹಿಂದುತ್ವ ಮತ್ತು ಬಿಜೆಪಿಯತ್ತ ಸೆಳೆಯುವುದು.

ಮೂರನೆಯದು, ಮೇಲ್ನೋಟಕ್ಕೆ ‘ವಚನ ದರ್ಶನ’ ಎಂಬ ಹೆಸರು 12ನೆಯ ಶತಮಾನದ ಶರಣರ ವಚನಗಳನ್ನು ಕುರಿತಾದ ಮತ್ತೊಂದು ಕೃತಿಯೆಂದು ಸಾಮಾನ್ಯ ಓದುಗನಿಗೆ ಅನಿಸುತ್ತದೆ. ಆದರೆ ಅದರ ಒಳಗಿನ ಹೂರಣವೆಲ್ಲ ಶರಣ ತತ್ವಗಳಿಗೆ ವಿರುದ್ಧವಾದದ್ದು. 

ನಾಲ್ಕನೆಯದು, ಅದರ ಮುಖಪುಟದ ಬಸವಣ್ಣನವರ ಚಿತ್ರ ವಿಚಿತ್ರವಾಗಿದೆ. ಈ ಚಿತ್ರದ ಹಿಂದೆ ಅಡಗಿರುವ ದುರುದ್ದೇಶವೆಂದರೆ, ಲಿಂಗಾಯತರು ಹಿಂದೂ ಶೈವರು ಎಂಬಂತೆಯೂ, ಲಿಂಗಾಯತರು ವೈದಿಕರ ಸಾಕಾರ ಶಿವನ ಆರಾಧಕರು ಎನ್ನುವಂತೆಯೂ ಚಿತ್ರಿಸಿ ಲಿಂಗಾಯತರನ್ನು ಹಿಂದುತ್ವದ ಪರಿಧಿಯಲ್ಲಿ ಬಿಂಬಿಸುವುದು.

ಐದನೆಯದು, ಬೆಂಗಳೂರಲ್ಲಿ ಈ ಗ್ರಂಥವನ್ನು ಲಿಂಗಾಯತ ಬೇಲಿಮಠದ ಶಿವರುದ್ರ ಸ್ವಾಮಿಗಳು ಲೋಕಾರ್ಪಣೆ ಮಾಡಬೇಕಿತ್ತು. ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದ ಸ್ವಾಮಿಗಳು, ಕಲಬುರಗಿಯಲ್ಲಿ ಶರಣಬಸವಪ್ಪನವರು, ವಿಜಯಪುರದಲ್ಲಿ ಜ್ಞಾನಯೋಗಾಶ್ರಮದ ಸ್ವಾಮಿಗಳು ಕೃತಿ ಬಿಡುಗಡೆ ಮಾಡಬೇಕಿತ್ತು. ಆದರೆ ಇವರೆಲ್ಲರೂ ಕಾರ್ಯಕ್ರಮದಿಂದ ದೂರ ಉಳಿದರು. ಆದಾಗ್ಯೂ, ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ನ ನಂಬರ್ –2 ನಾಯಕ ದತ್ತಾತ್ರೇಯ ಹೊಸಬಾಳೆಯವರು ಬಿಡುಗಡೆ ಮಾಡಿದರೆ, ಮುಕುಂದ ಅವರು ಪ್ರಚೋದನಕಾರಿ ಭಾಷಣ ಮಾಡಿದರು. ಬಿ.ಎಲ್.ಸಂತೋಷ್‌ ಅವರು ಕಲಬುರಗಿಯಲ್ಲಿ, ಶಂಕರಾನಂದರು ಬಿಜಾಪುರದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದರು. ಸಭಿಕರಿಲ್ಲದೆ ಬಹುತೇಕ ಕಾರ್ಯಕ್ರಮಗಳು ವಿಫಲವಾದವು. 

ಆರನೆಯದು, ಈ ಗ್ರಂಥವನ್ನು ಪ್ರಕಟಿಸಿದವರು ಸಂಘ ಪರಿವಾರದ ಪ್ರಜ್ಞಾ ಪ್ರಕಾಶನ ಸಂಸ್ಥೆ ಮತ್ತು ಅಯೋಧ್ಯಾ ಪ್ರಕಾಶನ. ನೀರಿನಂತೆ ಹಣವನ್ನು ಖರ್ಚು ಮಾಡಿದವರು, ಈ ಎಲ್ಲ ಕಾರ್ಯಕ್ರಮಗಳ ಸಂಪೂರ್ಣ  ಜವಾಬ್ದಾರಿಯನ್ನು ನಿರ್ವಹಿಸಿದವರು, ಪುಸ್ತಕದಲ್ಲಿನ ಲೇಖನಗಳನ್ನು ಬರೆದವರೆಲ್ಲರೂ ಕಟ್ಟರ್‌ ಬಲಪಂಥೀಯರು ಎಂದು ಬೇರೆ ಹೇಳಬೇಕಿಲ್ಲ. ದೆಹಲಿಯ ಇದೇ ಕಾರ್ಯಕ್ರಮಕ್ಕೆ ಬಿಜೆಪಿಯಿಂದ ಆಯ್ಕೆಯಾಗಿ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ಲಿಂಗಾಯತರಾದ ಸೋಮಣ್ಣನವರನ್ನೇ ಆಯ್ಕೆ ಮಾಡಲಾಗಿತ್ತು. 

ಕೊನೆಯದಾಗಿ, ಈ ಎಲ್ಲ ತಂತ್ರಗಾರಿಕೆಯನ್ನು ಖುಲ್ಲಂಖುಲ್ಲಾ ಪ್ರದರ್ಶಿಸಿದ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ನಾಯಕರು, ಈ ಪುಸ್ತಕದ ಸಂಪಾದಕರು ಲಿಂಗಾಯತರಿಗೆ ಏನನ್ನು ಹೇಳಲು ಹೊರಟಿದ್ದಾರೆ ಎಂಬುದನ್ನು ಗಮನಿಸಲು ‘ವಚನ ದರ್ಶನ’ ಗ್ರಂಥದಲ್ಲಿನ ಕೆಲವು ಮಹತ್ವದ ಮತ್ತು ವಿಚಿತ್ರ ಸುಳ್ಳು ವಾದಗಳನ್ನು ಓದಲೇಬೇಕು.

ಈ ಗ್ರಂಥದಲ್ಲಿರುವ ಇಪ್ಪತ್ತು ಲೇಖನಗಳಲ್ಲಿ ಐದರ ಲೇಖಕರು ಲಿಂಗಾಯತರು. ಕೃತಿಯ ಮುನ್ನುಡಿಯಲ್ಲಿ ಪ್ರೊ.ಮಲ್ಲೇಪುರಂ ವೆಂಕಟೇಶ್ ಅವರು ಹೀಗೆ ಹೇಳಿದ್ದಾರೆ: ‘ವಚನ ದರ್ಶನ ಗ್ರಂಥದಲ್ಲಿ ಸಂಕಲಿಸಿರುವ ಲೇಖನಗಳು ಸಮಾಜವಾದಿ ಮತ್ತು ಮಾರ್ಕ್ಸ್‌ವಾದಿ ದೃಷ್ಟಿಕೋನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ಸಾಗಿವೆ. ನಾವು ಈಗ ಭಾರತೀಯ ಜ್ಞಾನ ಪರಂಪರೆಯ ಹಿನ್ನೆಲೆಯಲ್ಲೂ ಕನ್ನಡನಾಡಿನ ಅನುಭಾವಿಕ ಹಿನ್ನೆಲೆಯಲ್ಲೂ ವಚನಸಾಹಿತ್ಯವನ್ನು ಅನುಸಂಧಾನಿಸುವುದು ಅಗತ್ಯವಿದೆ’. ಆದರೆ, ಅವರು ‘ಭಾರತೀಯ ಜ್ಞಾನ ಪರಂಪರೆ’ ಎಂದರೇನು ಎಂಬುದನ್ನು ವಿಶದಪಡಿಸಿಲ್ಲ. ಸಾಮಾನ್ಯವಾಗಿ, ಭಾರತೀಯ ‘ಜ್ಞಾನ ಪರಂಪರೆ’ ಎಂದರೆ ಯಾವಾಗಲೂ ವೇದಗಳು, ಪುರಾಣಗಳು, ಹಿಂದೂ ಧರ್ಮಶಾಸ್ತ್ರಗಳು, ಆಗಮಗಳು, ರಾಮಾಯಣ, ಮಹಾಭಾರತಗಳು ಮತ್ತು ವೇದಾಂತಿಗಳ ಭಾಷೆಯಲ್ಲಿ ಇಲ್ಲವೆ ಅವರ ಶೈಲಿಯೆಲ್ಲಿಯೇ ಚರ್ಚೆ, ವಾದವಿವಾದಗಳು, ಅನುಸಂಧಾನಗಳು ಇರಬೇಕು.

ಸುಮಾರು ಒಂದು ಸಾವಿರ ವಚನಗಳ ಮೂಲಕ ಲಿಂಗಾಯತ ಶರಣರು ವೇದ, ಶಾಸ್ತ್ರ, ಪುರಾಣ, ಉಪನಿಷತ್ತುಗಳನ್ನು ನಿರಾಕರಿಸಿದರು ಮತ್ತು ಅವುಗಳಿಗೆ ಪರ್ಯಾಯವಾದ ಸಿದ್ಧಾಂತ ಮತ್ತು ಆಚರಣೆಗಳನ್ನು ರೂಪಿಸಿದರು. ಇಷ್ಟಾಗಿಯೂ ಶರಣ ಧರ್ಮವನ್ನೂ ವೈದಿಕ ಹಿನ್ನೆಲೆಯಲ್ಲೇ ವಿಮರ್ಶಿಸಬೇಕೆಂಬ ಕಟ್ಟಳೆಗೆ ಆಧಾರವೇನೆಂಬುದನ್ನು ಅವರು ಯಾರೂ ಹೇಳಿಲ್ಲ. 

ಮಲ್ಲೇಪುರಂ ಮತ್ತು ರಾಜಾರಾಮ ಹೆಗಡೆಯವರ ವಾದವೆಂದರೆ, ಸಮಾಜವಾದ, ಮಾರ್ಕ್ಸ್‌ವಾದವು ಪರಕೀಯವಾದುದು, ವಿದೇಶದಿಂದ ಬಂದದ್ದು. ಆದ್ದರಿಂದ ಅದು ಭಾರತಕ್ಕೆ ಅನ್ವಯಿಸುವುದಿಲ್ಲ. ಭಾರತದ ನೆಲದಲ್ಲಿಯೇ ಹುಟ್ಟಿದ ವೈದಿಕವಲ್ಲದ ಯಾವುದೇ ಐತಿಹಾಸಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ವಿಚಾರಗಳು ‘ಭಾರತೀಯ ಪರಂಪರೆ’ಗೆ ವಿರುದ್ಧವಾದದ್ದು ಎನ್ನುವುದು, ಅಂತಹ ವಿಚಾರ ಮತ್ತು ಸಿದ್ಧಾಂತಗಳನ್ನು ಹತ್ತಿಕ್ಕಬೇಕು ಎನ್ನವುದು ಈ ಪುಸ್ತಕ ಬರೆದವರ, ಪ್ರಕಟಿಸಿದವರ ಮತ್ತು ಬೆಂಬಲಿಸುವವರ ವಾದ. ಮಾರ್ಕ್ಸ್‌ವಾದವು ಯುರೋಪಿನಲ್ಲಿ ಹುಟ್ಟುವ 800 ವರ್ಷ ಮೊದಲೇ ಶರಣರು ನಡೆಸಿದ ಕ್ರಾಂತಿಯ ಮೂಲತತ್ವಗಳಲ್ಲಿ ಸಮತಾವಾದದ ಬೀಜಗಳನ್ನು ಕಾಣಬಹುದು. ಸಮಸ್ತ ಮಾನವ ಸಮಾನತೆ, ಸ್ತ್ರೀ ಸಮಾನತೆ, ವಿಶ್ವ ಬಂಧುತ್ವ, ವ್ಯಕ್ತಿ ಸ್ವಾತಂತ್ರ್ಯ, ದೈಹಿಕ ದುಡಿಮೆಯ ಮಹತ್ವ (ಕಾಯಕ) ಮತ್ತು ಸಂಪತ್ತಿನ ಸಾಮಾಜೀಕರಣ (ದಾಸೋಹ) ತತ್ವಗಳು ಮಾರ್ಕ್ಸ್‌ವಾದದ ಮೂಲ ಅಂಶಗಳು. ಈ ರೀತಿಯ ಸಮತಾವಾದ ಭಾರತದಲ್ಲಿಯೇ, ಕನ್ನಡ ನೆಲದಲ್ಲಿಯೇ ಹುಟ್ಟಿ ಬೆಳೆಯಿತು. ಆಗಿನ ಸಂಪ್ರದಾಯವಾದಿಗಳ ಕುತಂತ್ರಗಳೇ ಅದು ಕರ್ನಾಟಕವನ್ನು ಬಿಟ್ಟು ಭಾರತದ ಉಳಿದ ಕಡೆಗಳಲ್ಲಿ ಹರಡದಂತೆ ಮತ್ತು ವಿದೇಶಗಳಿಗೆ ತಲುಪದಂತೆ ಮಾಡಿದವು; ಇಂದಿಗೂ ಅದನ್ನೇ ಮಾಡಲಾಗುತ್ತಿದೆ. 

ವೀಣಾ ಬನ್ನಂಜೆಯವರು, ನಾ.ಮೊಗಸಾಲೆಯವರು, ಮಲ್ಲೇಪುರಂ ವೆಂಕಟೇಶ್‌ ಅವರ ಪ್ರಕಾರ, ಶರಣರ ವಚನಗಳು ವೈದಿಕರ ಉಪನಿಷತ್ತುಗಳ ಮತ್ತು ವೇದಗಳ ಕನ್ನಡದ ಭಾಷಾಂತರಗಳಾಗಿವೆ. ಆದರೆ, ವಚನಗಳು ವೇದಗಳ ಇಲ್ಲವೆ ಉಪನಿಷತ್ತುಗಳ ಯಾವ ಶ್ಲೋಕಗಳ ಭಾಷಾಂತರಗಳಾಗಿವೆ ಎಂಬುದನ್ನು ಇದರಲ್ಲಿ ಯಾರೂ ಹೇಳುವುದಿಲ್ಲ. ಇದೇ ತಂಡದ ಇನ್ನೊಂದು ವಿಕೃತ ವಾದವೆಂದರೆ, ಅನುಭವ ಮಂಟಪವೆಂಬ ಸಂಸ್ಥೆ ಅಥವಾ ಗೋಷ್ಠಿಗಳು 12ನೆಯ ಶತಮಾನದಲ್ಲಿ ಇರಲೇ ಇಲ್ಲ; ಅದು 16ನೆಯ ಶತಮಾನದ ಸಂಪಾದನಾಕಾರರು ಹುಟ್ಟು ಹಾಕಿದ ಕಪೋಲಕಲ್ಪಿತ ಸಂಗತಿ ಎನ್ನುವುದು. ಆ ವಾದವನ್ನು ಆಧಾರಸಹಿತವಾಗಿ 1940ರ ದಶಕದಲ್ಲೇ ತಿರಸ್ಕರಿಸಲಾಗಿದೆ. 

ಶರಣರು ವೈದಿಕ ಧರ್ಮವನ್ನು ಎಂದಿಗೂ ಒಪ್ಪಲಿಲ್ಲ. ಆದ್ದರಿಂದ ಶರಣ ಧರ್ಮವನ್ನು ಸ್ವಲ್ಪವಾದರೂ ನಂಬುತ್ತಿರುವ ಲಿಂಗಾಯತರನ್ನು ಹೇಗಾದರೂ ಮಾಡಿ ‘ಹಿಂದೂ’ ಅಥವಾ ‘ವೈದಿಕ’ ಪರಿಧಿಯಲ್ಲಿ ತರಬೇಕು ಎಂಬ ಉದ್ದೇಶವು ಸಂಘ ಪರಿವಾರದ ಈ ಎಲ್ಲ ಕಸರತ್ತಿಗೆ ಕಾರಣವಾಗಿದೆ. ಅವರಿಗೆ ಕೆಲವು ರಾಜಕೀಯ ತರಹದ ಲಿಂಗಾಯತ ಮಠಾಧೀಶರು ಮತ್ತು ಪಂಚಾಚಾರ್ಯರೆಂಬ ಮೂಲತಃ ವೈದಿಕರಾಗಿದ್ದ ವೀರಶೈವ ಪಂಥದವರು ಸಾಥ್‌ ನೀಡುತ್ತಿದ್ದಾರೆ. ಇಲ್ಲಿ ಲೇಖನಗಳನ್ನು ಬರೆದ ಲಿಂಗಾಯತರು ಮತ್ತು ಗೌರವ ಸಂಪಾದಕರಾದ ಸ್ವಾಮಿಗಳು ಅದೇ ಗುಂಪಿಗೆ ಸೇರಿದವರು ಎಂಬುದನ್ನು ನೆನಪಿಡಬೇಕು.

ಲೇಖಕ: ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.