ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ‘ವಚನ ದರ್ಶನ’ ಕೃತಿ ಹೊರಬಂದಂತಿದೆ. ಇದಕ್ಕೆ ಅದರ ಮುಖಪುಟವೇ ಕನ್ನಡಿಯಾಗಿದೆ. ಶರಣ ಪರಂಪರೆಗೂ ಭಕ್ತಿ ಪರಂಪರೆಗೂ ಸಂಬಂಧವಿಲ್ಲದಿದ್ದರೂ ವಚನ ಸಾಹಿತ್ಯದ ಉದ್ದೇಶವನ್ನೇ ತಿರುಚುವ ಕಾರ್ಯ ನಡೆದಿದೆ. ಮುನ್ನುಡಿ, ಸಂಪಾದಕೀಯ ಓದಿದರೂ ಕೃತಿಯ ಸಂಚು ಸ್ಪಷ್ಟವಾಗುತ್ತದೆ.
ಬಸವಣ್ಣನವರು ಅನುಭಾವಿ, ಸಮಾಜ ಸುಧಾರಕ, ಆರ್ಥಿಕತಜ್ಞ, ಸಕಲ ಜೀವಾತ್ಮರ ಒಳಿತು ಬಯಸಿದ ಶರಣ. ‘ಗೃಹಸ್ಥ ಜಗದ್ಗುರು’. ಅವರಿಗೆ ಕೇವಲ ‘ಭಕ್ತಿಭಂಡಾರಿ’ ಎಂದು ಲೇಬಲ್ ಹಚ್ಚುವುದು ಸಲ್ಲದು. ಬಸವಣ್ಣನವರದು ಬಹುಮುಖ ವ್ಯಕ್ತಿತ್ವ. ಇದಕ್ಕೆ ವಚನಗಳೇ ಪುರಾವೆ. ಅವರು ವೇದೋಪನಿಷತ್ತುಗಳಿಂದ ಪ್ರಭಾವಿತರಾಗಿ ಅವುಗಳ ಸಾರವನ್ನೇ ವಚನಗಳ ರೂಪದಲ್ಲಿ ಹಿಡಿದಿಟ್ಟಿದ್ದಾರೆ ಎನ್ನುವವರೂ ಇದ್ದಾರೆ. ಅದಕ್ಕಾಗಿ ಲೇಖನಗಳನ್ನು ಬರೆಸಿ ಪ್ರಕಟಿಸುತ್ತಾರೆ. ಪ್ರಕಟಿತ ಪುಸ್ತಕದ ಪ್ರಚಾರಕ್ಕಾಗಿ ಲಕ್ಷಗಟ್ಟಲೆ ಹಣವನ್ನು ದುರ್ವಿನಿಯೋಗಿಸುತ್ತಾರೆ.
ನಾವೂ ಬಸವ ಪರಂಪರೆಯವರೆನ್ನುವ ಕೆಲವರು ವಚನಕಾರರ ತತ್ವಾದರ್ಶಗಳನ್ನು ತಮಗೆ ಬೇಕಾದಂತೆ ತಿರುಚಿ ವ್ಯಾಖ್ಯಾನಿಸುವರು. ಇಂಥವರು ಹಿಂದೆ ಇದ್ದರು, ಈಗಲೂ ಇದ್ದಾರೆ. ಅವರು ಓದುಗರನ್ನು ದಿಕ್ಕುತಪ್ಪಿಸುವಲ್ಲಿ ಪ್ರವೀಣರು. ವಚನಗಳನ್ನು ವೇದೋಪನಿಷತ್ತುಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಬೇಕಿಲ್ಲ. ಏಕೆಂದರೆ, ಬಹುತೇಕ ಶರಣರಿಗೆ ವೇದೋಪನಿಷತ್ತುಗಳ ಪರಿಚಯವೇ ಇರಲಿಲ್ಲ. ಕಾರಣ, ಅವರು ಅಕ್ಷರ ವಂಚಿತ ತಳಸಮುದಾಯದವರು. ಅನುಭವ ಮಂಟಪದ ಮೂಲಕ ತಮ್ಮ ಅನುಭವವನ್ನು ವಚನಗಳಲ್ಲಿ ಹಿಡಿದಿಟ್ಟವರು. ಕೆಲವರು ವಚನಗಳನ್ನು ಶೈವಾಗಮಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಬೇಕು ಎನ್ನುವರು. ಶರಣರು ಆಗಮಗಳನ್ನೇ ನಂಬಿಲ್ಲವಾದ್ದರಿಂದ ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ’ ಎಂದಿದ್ದಾರೆ ಬಸವಣ್ಣನವರು.
ಇಹ-ಪರದ ಬದುಕಿಗೆ ಬೇಕಾದ ಜ್ಞಾನವೆಲ್ಲ ವೇದ, ಶಾಸ್ತ್ರ, ತರ್ಕ, ಪುರಾಣಾಗಮಗಳಲ್ಲಿದೆ ಎನ್ನುವವರು ಸನಾತನರು. ಇದನ್ನು ಶರಣರು ಒಪ್ಪುವುದಿಲ್ಲ. ‘ವೇದ ಶಾಸ್ತ್ರ ಆಗಮ ಪುರಾಣಂಗಳಲ್ಲಿ ಶೃತಿ ಸ್ಮೃತಿಗಳಲ್ಲಿ ನುಡಿವುದು ಪುಸಿ’ ಎನ್ನುವರು ಅಮುಗೆ ರಾಯಮ್ಮನವರು. ಸಿದ್ಧರಾಮೇಶ್ವರರು, ‘ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ’ ಎಂದಿದ್ದಾರೆ. ನಮ್ಮಲ್ಲಿ ‘ಪುರಾತರ’ ಮತ್ತು ‘ಸನಾತನ’ ಪರಂಪರೆಯವರಿದ್ದಾರೆ.
ವಚನಕಾರರು ‘ಪುರಾತರ’ ಸಂಸ್ಕೃತಿಯವರು. ಪುರಾತರ ಎಂದರೆ ಶರಣರ ಅಂತಃಸಾಕ್ಷಿಯ ವಚನಗಳು. ಅದರಿಂದಾಗಿ ಚನ್ನಬಸವಣ್ಣನವರು ‘ಶಬ್ದಸೋಪಾನವ ಕಟ್ಟಿ ನಡೆಯಿಸಿದರು ಪುರಾತರು’ ಎಂದರೆ ಬಸವಣ್ಣನವರು ‘ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ! ನಿಮ್ಮ ಪುರಾತರಾಣೆ!’ ಎಂದಿದ್ದಾರೆ. ವಚನಗಳನ್ನು ಪಶ್ಚಿಮ-ಪೂರ್ವ ಇಲ್ಲವೇ ಸನಾತನವಾಗಿ ನೋಡದೆ ಪುರಾತರ ದೃಷ್ಟಿಯಿಂದ ನೋಡಬೇಕು.
‘ವಚನ ದರ್ಶನ’ ಕೃತಿಯ ಗೌರವ ಸಂಪಾದಕರು ಸದಾಶಿವಾನಂದ ಮಹಾಸ್ವಾಮಿಗಳು. ‘ನಾಡಿನ ಹಲವಾರು ಹಳ್ಳಿಗಳಲ್ಲಿ ಶುದ್ಧ ಗಣಪತಿ ಸ್ಥಾಪಿಸುವುದರ ಮೂಲಕ ಸಾತ್ವಿಕ ಗಣೇಶೋತ್ಸವ ಆಚರಣೆಗೆ ಮಾರ್ಗದರ್ಶನ’ ಮಾಡಿದವರು ಎಂದು ಅವರ ಪರಿಚಯದಲ್ಲಿದೆ. ಗಣಪತಿಯ ಆರಾಧಕರು ವಚನಸಾಹಿತ್ಯಕ್ಕೆ ನ್ಯಾಯ ಒದಗಿಸಬಲ್ಲರೇ? ಶರಣರ ವಿಚಾರಗಳನ್ನು ಗೌರವಿಸಿದಂತೆ ನಟಿಸುವ ಅವರ ಸಂಚನ್ನು ಅರ್ಥೈಸಿಕೊಳ್ಳಬೇಕು. ‘ವಚನ ದರ್ಶನ’ದ ಸಂಪಾದಕೀಯ ಪ್ರಾರಂಭವಾಗುವುದೇ ‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ ಶ್ಲೋಕದಿಂದ. ವಚನ ದರ್ಶನವನ್ನು ಸಂಸ್ಕೃತ ಶ್ಲೋಕದಿಂದ ಪರಿಚಯಿಸುವ ಸಂಪಾದಕರ ಗುಪ್ತಪ್ರಣಾಳಿಕೆಯನ್ನು ಅರ್ಥಮಾಡಿಕೊಳ್ಳಬೇಕು. ‘ವಚನಸಾಹಿತ್ಯ ಭಕ್ತಿಪಂಥವನ್ನು ಜನಸಾಮಾನ್ಯರ ಹತ್ತಿರಕ್ಕೆ ತಂದಿದೆ’ ಎಂದಿದ್ದಾರೆ. ಅಂದರೆ ವಚನಕಾರರು ಕೇವಲ ಭಕ್ತಿಗೆ ಒತ್ತುಕೊಟ್ಟಿದ್ದರೆ? ವಚನಕಾರರ ಭಕ್ತಿಗೆ ತಳಹದಿ ಜ್ಞಾನ, ಕಾಯಕ, ದಾಸೋಹ, ಶಿವಯೋಗ, ಸಮಾನತೆ, ಜಾತ್ಯತೀತತೆ ಮುಂತಾದ ತತ್ವಗಳು.
‘ವಚನಗಳನ್ನು ಅರ್ಥೈಸಿಕೊಳ್ಳುವಾಗ ಬ್ರಿಟಿಷರು ಹಾಕಿದ್ದ ಮಾನದಂಡಗಳನ್ನು ಬಳಸಿಕೊಳ್ಳಲಾಗುತ್ತಿದೆ...’ ಎಂದೆಲ್ಲ ಹರಟಿದ್ದಾರೆ. ವಚನಗಳನ್ನು ಅರ್ಥೈಸಿಕೊಳ್ಳಲು ಯಾರೂ ಬ್ರಿಟಿಷರ ಮಾನದಂಡಗಳನ್ನು ಬಳಸಿಕೊಂಡಿಲ್ಲ. ಸಂಪಾದಕರು ಮತ್ತು ಲೇಖಕರು ವಚನಗಳ ತಿರುಳನ್ನು ತಮಗೆ ಬೇಕಾದಂತೆ ತಿರುಚಿದ್ದಾರಷ್ಟೆ. ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ‘ವಚನ ದರ್ಶನ’ ಕೃತಿ ಹೊರಬಂದಂತಿದೆ. ಇದಕ್ಕೆ ಮುಖಪುಟವೇ ಕನ್ನಡಿಯಾಗಿದೆ. ಅಲ್ಲಿರುವ ಚಿತ್ರ ಬಸವಣ್ಣ ಅಥವಾ ಮತ್ತಾವುದೇ ಶರಣರದಲ್ಲ. ಕೊರಳಲ್ಲಿ ರುದ್ರಾಕ್ಷಿಯ ಬದಲು ತುಳಸಿಮಾಲೆ ಇದೆ. ಇಷ್ಟಲಿಂಗ ಬೆಂಕಿಯಲ್ಲಿ ಅರಳಿದಂತಿದೆ. ತಲೆಕೂದಲುಗಳನ್ನು ಸಿಂಬೆ ಕಟ್ಟಿದ್ದಾರೆ. ಪಕ್ಕದಲ್ಲಿ ಬಿಲ್ಲು-ಬಾಣವಿದೆ. ಕೃತಿಯ ಹಿಂದಿರುವ ಹುನ್ನಾರಕ್ಕೆ ಇವೇ ಸಾಕ್ಷಿಯಾಗಿವೆ. ಶರಣರ ಶಿವ ಪೌರಾಣಿಕ ವ್ಯಕ್ತಿಯಲ್ಲ; ಆತ ಅಗಮ್ಯ, ಅಗೋಚರ, ಅಪ್ರತಿಮ. ಶಿವನಿಗೆ ಕರಚರಣಾದಿಗಳಿಲ್ಲ. ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎನ್ನುವ ಸಂಚಿನಿಂದ ಲಿಂಗಾಯತ ಸ್ವಾಮೀಜಿಗಳನ್ನೇ ಗೌರವ ಸಂಪಾದಕರನ್ನಾಗಿಸಿದ್ದಾರೆ.
ಸಂಪಾದಕ ಮಂಡಳಿಯಲ್ಲಿರುವ ಕೆಲವರಿಗೆ ವಚನ ಸಾಹಿತ್ಯದ ಅಧ್ಯಯನದ ಕೊರತೆ ಇರುವುದು ಅವರ ಪರಿಚಯ ಹಾಗೂ ಅಪ್ರಬುದ್ಧ ಬರವಣಿಗೆಯಿಂದ ವೇದ್ಯವಾಗುತ್ತದೆ. ‘ಶಿವಶರಣರು ಋಷಿಗಳಂತೆ ತಪಸ್ವಿಗಳು ಮತ್ತು ಅನುಭಾವಿಗಳು’ ಎಂದಿದ್ದಾರೆ. ಶರಣರು ಋಷಿಗಳಂತೆ ಹಿಮಾಲಯ ಇನ್ನೆಲ್ಲೋ ತಪಸ್ಸು ಮಾಡಿದವರಲ್ಲ; ‘ಕಾಯಕವೇ ಕೈಲಾಸ’ ಎಂದು ನಂಬಿದವರು. ಇದನ್ನು ಸಂಪಾದಕ ಮಂಡಳಿ ಅರ್ಥೈಸಿಕೊಂಡಿದ್ದರೆ ‘ವಚನ ದರ್ಶನ’ ಹೊರಬರುತ್ತಿರಲಿಲ್ಲ. ಮುನ್ನುಡಿ, ಸಂಪಾದಕೀಯವನ್ನಷ್ಟೇ ಓದಿದರೂ ಕೃತಿಯ ಸಂಚು ಸ್ಪಷ್ಟವಾಗುವುದು. ಶರಣರ ವಿಚಾರಗಳಿಗೆ ಮಸಿಬಳಿಯಲು ಮುಂದಾಗಿದ್ದ ಜಳಕಿ ಡಂಕಿನ್, ಬಾಲಗಂಗಾಧರರ ಸಂತತಿ ಇನ್ನೂ ಜೀವಂತವಿದೆ ಎನ್ನುವುದು ಕೃತಿಯ ಆರಂಭದ ಲೇಖನಗಳಿಂದಲೇ ಅರ್ಥವಾಗುತ್ತದೆ.
ಬಸವಕಲ್ಯಾಣದ ಕ್ರಾಂತಿಯ ಉದ್ದೇಶ ಸಮಸಮಾಜವನ್ನು ನೆಲೆಗೊಳಿಸುವುದಾಗಿತ್ತು. ಅದಕ್ಕಾಗಿ ಬಸವಣ್ಣನವರು ‘ಮಹಾಮನೆ’, ‘ಅನುಭವ ಮಂಟಪ’ದಂತಹ ಸಂಸ್ಥೆಗಳನ್ನು ತೆರೆದರು. ಅಧ್ಯಯನದ ಕೊರತೆ ಅಥವಾ ವಚನ ಚಳವಳಿಯ ಬಗ್ಗೆ ಭಯಗೊಂಡ ಮತ್ಸರಿಗರು, ‘ಅಂಥ ಸಂಸ್ಥೆಗಳೇ ಇರಲಿಲ್ಲ, ವಚನಗಳು ಬರೆದದ್ದಲ್ಲ-ಸೃಷ್ಟಿಸಿದ್ದು, ಬಸವಾದಿ ಶರಣರು ಅಸಮಾನತೆಯ ವಿರುದ್ಧ ಚಳವಳಿಯನ್ನೇ ನಡೆಸಿಲ್ಲ, ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿಯೇ ಅಲ್ಲ, ಭಾರತದಲ್ಲಿ ಕ್ರಾಂತಿ, ಚಳವಳಿ ಮುಂತಾದ ಪದಗಳಿಗೆ ಜಾಗವೇ ಇಲ್ಲ’ ಎಂದೆಲ್ಲ ಅರಚಿದ್ದಾರೆ. ಅವರ ವಾದ, ಅತಿ ಬುದ್ಧಿವಂತಿಕೆ ಅವರಿಗೇ ಮುಳುವಾಗುವುದರಲ್ಲಿ ಅನುಮಾನವಿಲ್ಲ.
ವಚನಗಳಲ್ಲಿ ಜಾತ್ಯತೀತತೆ, ಲಿಂಗಸಮಾನತೆ, ಕಾಯಕ, ಸ್ಥಾವರ ನಿರಾಕರಣೆ ಇತ್ಯಾದಿ ವಿಚಾರಗಳಿವೆ. ಎಲ್ಲರ ಹುಟ್ಟಿನ ಗುಟ್ಟು ಒಂದೇ ಆಗಿರುವಾಗ ಶ್ರೇಷ್ಠ, ಕನಿಷ್ಠ ಕುಲಜರಾಗಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದ್ದಾರೆ. ಹುಟ್ಟಿನಿಂದಲೇ ಜಾತಿಯನ್ನು ಗುರುತಿಸುವ ಸನಾತನಿಗಳು ಶರಣರಲ್ಲ. ಸತ್ತದನಗಳ ಚರ್ಮದಿಂದ ಮೆಟ್ಟು, ಬಾರುಕೋಲು ಇತ್ಯಾದಿ ಮಾಡುವವರು ಮಾದಿಗರಲ್ಲ; ಕೊಲ್ಲುವ, ಹಿಂಸಿಸುವ ವ್ಯಕ್ತಿ ಮಾದಿಗ. ಭ್ರಷ್ಟಾಚಾರಿಗಳು, ಲಂಚಕೋರರು, ದುರಾಸೆಯ ದಳ್ಳುರಿಯಲ್ಲಿ ಬೇಯುವವರು, ನಡೆ-ನುಡಿ ಒಂದಾಗಿಲ್ಲದವರು ಹೊಲೆಯರು. ವಚನಗಳಲ್ಲಿ ಅನುಭವ, ಅನುಭಾವ ಮತ್ತು ಆತ್ಮವಿಮರ್ಶೆಯೊಂದಿಗೆ ಲೋಕವಿಮರ್ಶೆಯೂ ಇದೆ.
‘ವಚನ ದರ್ಶನ’ದಂತಹ ಕೃತಿಗಳು 12ನೆಯ ಶತಮಾನದಿಂದ ಇಂದಿನವರೆಗೂ ಬರುತ್ತಲೇ ಇವೆ. ಮುಂದೆಯೂ ಬರಬಹುದು. ಶರಣರ ವಚನಗಳಂತಹ ಅಪ್ಪಟ ಚಿನ್ನವೇ ಕಣ್ಮುಂದೆ ಇರುವಾಗ ದಿಕ್ಕು ತಪ್ಪಿಸುವಂತಹ ಕೃತಿಗಳಿಗೆ ಮರುಳಾಗಬೇಕಿಲ್ಲ. ರಾಜಾರಾಮ ಹೆಗಡೆಯವರ ಲೇಖನ ವಚನ ದರ್ಶನಕ್ಕೆ ವಿರುದ್ಧವಾದ ವಿಚಾರಗಳನ್ನೇ ಪ್ರತಿಪಾದಿಸುತ್ತದೆ. ಅವರ ಉದ್ದೇಶ ಸನಾತನ ಧರ್ಮವನ್ನು ಪ್ರತಿಪಾದಿಸುತ್ತ ವಚನಕಾರರನ್ನು ಅಲ್ಲಿಗೆ ಸೇರಿಸಿ ತಾವೂ ಅದೇ ಪರಂಪರೆಯವರೆಂದು ಬಿಂಬಿಸುವುದು. ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲವೇ? ಕೃತಿಯ ಪ್ರಚಾರಕ್ಕಾಗಿ ಕಾಣದ ಕೈಗಳು ಕೋಟಿಗಟ್ಟಲೆ ಹಣವನ್ನು ದುರ್ವಿನಿಯೋಗ ಮಾಡಿವೆ. ಅವರ ಉದ್ದೇಶ ಏನೆಂದು ಗೊತ್ತಾಯ್ತಲ್ಲ! ಅವರು ಮತ್ತೊಂದು ಸಾಹಸಕ್ಕೆ ಕೈಹಾಕಿದ್ದರು: ಅದೇ ಇಷ್ಟಲಿಂಗದೀಕ್ಷೆ. ಶರಣ ತತ್ವಗಳ ಮಾರ್ಗದರ್ಶನ ನೀಡದೇ ಸನಾತನ ಪರಂಪರೆಯನ್ನೇ ಲಿಂಗಧಾರಿಗಳ ಮಿದುಳಿಗೆ ತುಂಬುವ ಹುನ್ನಾರವಿದ್ದರೆ ಅವರನ್ನು ದುಷ್ಟರು, ಶನಿಸಂತಾನ, ಧರ್ಮದ್ರೋಹಿಗಳು, ಬಂಡವಾಳಶಾಹಿಗಳೆನ್ನದೆ ಬೇರೇನು ಹೇಳಲು ಸಾಧ್ಯ?
‘ವಚನ ದರ್ಶನ’ ಕೃತಿಯ ಹಿಂದಿರುವವರಿಗೆ ಈಗಲೂ ತೆರೆದ ಮನಸ್ಸು, ವಿವೇಕ ಇದ್ದರೆ ವಚನಸಾಹಿತ್ಯವನ್ನು ಓದಬೇಕು. ಕೊನೆಯಪಕ್ಷ ಎಸ್.ಜಿ.ಸಿದ್ಧರಾಮಯ್ಯನವರ ‘ಕ್ರಾಂತಿಯ ಹೆಜ್ಜೆಗಳು’, ನಾವೇ ಸಂಪಾದಿಸಿರುವ ‘ವಚನ ಸಂವಿಧಾನ’, ‘ವಚನ ದರ್ಶನ’ ಮಿಥ್ಯ-ಸತ್ಯ ಕೃತಿಗಳನ್ನಾದರೂ ಓದುವ ಧಾರಾಳತನ ತೋರಿದರೆ ತಮ್ಮ ತಪ್ಪಿನ ಅರಿವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.