ADVERTISEMENT

ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ವಿಚಾರಣಾ ಪ್ರಕ್ರಿಯೆ ಬದಲು ಆಗಬೇಕು

ಕಾನೂನು ಬದಲಾವಣೆ ಮಾಡಬೇಕಿದೆಯೇ?

ಮೈತ್ರೇಯಿ ಸಚ್ಚಿದಾನಂದ ಹೆಗಡೆ
Published 20 ಡಿಸೆಂಬರ್ 2024, 19:30 IST
Last Updated 20 ಡಿಸೆಂಬರ್ 2024, 19:30 IST
   
ಸಮಾಜವಾಗಿ, ಕಕ್ಷಿದಾರರಾಗಿ, ವಕೀಲರಾಗಿ ನಮ್ಮೆಲ್ಲರ ದೃಷ್ಟಿಕೋನಗಳು ಏನು ಎಂಬುದು ವರದಕ್ಷಿಣೆ, ಕೌಟುಂಬಿಕ ಹಿಂಸೆಯ ಪ್ರಕರಣಗಳ ದೆಸೆಯನ್ನು ನಿರ್ಧರಿಸುತ್ತವೆ. ಸಮಾಜದ ನಿಲುವುಗಳನ್ನು ಬದಲು ಮಾಡುವ, ಹೆಣ್ಣನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ನೋಡುವ ದಿಸೆಯಲ್ಲಿ ನಾವು ಹೆಜ್ಜೆ ಇಡಬೇಕು. ಜತೆಗೆ, ಕಕ್ಷಿದಾರರಿಗೆ ಕಾನೂನು ಅರಿವು ಮೂಡಿಸಬೇಕು.

ಅತುಲ್ ಸುಭಾಷ್ ಆತ್ಮಹತ್ಯೆಯಿಂದಾಗಿ ವರದಕ್ಷಿಣೆ, ಕೌಟುಂಬಿಕ ಹಿಂಸೆ ಮೊದಲಾದ ಅಪರಾಧಗಳನ್ನು ಮಟ್ಟ ಹಾಕಲು ಇರುವ ಕಾನೂನುಗಳ ಬಗ್ಗೆ ಮತ್ತೆ ಚರ್ಚೆಗಳು ಬಿರುಸು ಪಡೆದುಕೊಂಡಿವೆ. ಒಂದೆರಡು ತಿಂಗಳ ಹಿಂದೆ ಐದೋ ಆರೋ ಮದುವೆ ಆಗಿ ವಿಚ್ಛೇದನ ಪಡೆದ ಒಬ್ಬ ಮಹಿಳೆ ಏಳನೇ ಮದುವೆಯ ಗಂಡನ ಮೇಲೆ ಹಾಕಿದ ಕ್ರಿಮಿನಲ್ ಪ್ರಕರಣದ ವಿಚಾರಣೆ ಹೈಕೋರ್ಟ್ ಮುಂದೆ ಬಂದಾಗ, ನ್ಯಾಯಮೂರ್ತಿಯವರು ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲಲ್ಲಿ ಆಗಾಗ ನಾವು ವರದಕ್ಷಿಣೆ, ಕೌಟುಂಬಿಕ ಕಾನೂನುಗಳು ಹೇಗೆ ಗಂಡ, ಆತನ ವಯಸ್ಸಾದ ತಂದೆ-ತಾಯಂದಿರ ಮೇಲೆ ದೌರ್ಜನ್ಯ ಎಸಗುವ ಆಯುಧವಾಗಿ ಬದಲಾಗುತ್ತಿವೆ ಎಂಬ ಆರೋಪವನ್ನು ಕೇಳುತ್ತಲೇ ಇರುತ್ತೇವೆ. ಇನ್ನೂ ಬಾಳಬೇಕಿದ್ದ, ಮೂವತ್ತರ ಗಡಿ ದಾಟುತ್ತಲೇ ಬದುಕು ಸಾಕೆಂದು ಬರೆದಿಟ್ಟು ಹೋದ ಅತುಲ್ ಸಾವು ನಿಜಕ್ಕೂ ನಮ್ಮ ನ್ಯಾಯ ವ್ಯವಸ್ಥೆಗೆ ಕಪ್ಪುಚುಕ್ಕೆಯೇ ಸರಿ. ಆದರೆ, ಕಾನೂನುಗಳ ಬದಲಾವಣೆಯಿಂದ ಅದಕ್ಕೆ ಪರಿಹಾರ ಸಿಗುವುದೇ ಎನ್ನುವ ಬಗ್ಗೆ ನಾವು ಚಿಂತನೆ ನಡೆಸಬೇಕಿದೆ. 

ವರದಕ್ಷಿಣಿ ಕಾನೂನುಗಳ ದುರುಪಯೋಗ ನಿರಂತರವಾಗಿ ಹೆಚ್ಚುತ್ತಿದೆ ಎಂಬ ಕಳವಳಕ್ಕೆ ಆಧಾರ ಇದೆಯೇ ಎನ್ನುವ ಮೂಲಭೂತ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ವರದಕ್ಷಿಣೆ, ಕೌಟುಂಬಿಕ ಹಿಂಸೆಗಳ ಆರೋಪಗಳ ಮೇಲೆ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆ ಆಗುವುದು ಕಡಿಮೆ, ಸುಳ್ಳು ಕೇಸುಗಳು ಹೆಚ್ಚಾಗುತ್ತಿವೆ ಎಂಬುದೇ ಇದಕ್ಕೆ ಸಾಕ್ಷ್ಯ ಎಂಬುದು ಹಲವರ ಅಂಬೋಣ. ಅವೇಕ್ಷಾ ಎಂಬ ಬೆಂಗಳೂರಿನ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, 2017ರಿಂದ 2022ರವರೆಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ವಿವಾಹಿತರು. ಆದರೆ, ಗಂಡಸರ ಆತ್ಮಹತ್ಯೆಗಳಲ್ಲಿ ವೈವಾಹಿಕ ಬದುಕಿಗೆ ಸಂಬಂಧಿಸಿ ಸಾವಿಗೆ ಶರಣಾದವರ ಪ್ರಮಾಣ ಶೇ 3ರಷ್ಟು ಮಾತ್ರ. ಸಾಮಾಜಿಕ ಮಾಧ್ಯಮಗಳಲ್ಲಿ, ಸಮೂಹ ಮಾಧ್ಯಮಗಳಲ್ಲಿ ಕೇಳುವ ಕೂಗುಗಳು ಸಂಖ್ಯೆಗಳಲ್ಲಿ ಕಾಣುವುದಿಲ್ಲ ಎಂಬುದು ಆ ವರದಿಯ ಸಾರಾಂಶ.

ಅತುಲ್ ಸುಭಾಷ್ ಪ್ರಕರಣದ ಸಂದರ್ಭದಲ್ಲೇ ಬಂದ ನ್ಯಾ. ವಿಕ್ರಂನಾಥ್ ಹಾಗೂ ನ್ಯಾ.ಪಿ.ಬಿ.ವರಾಳೆ ಅವರು ಕೊಟ್ಟ ತೀರ್ಪಿನ ಕಡೆ ನಾವು ಗಮನ ಹರಿಸಿಯೇ ಇಲ್ಲ. ಕಿರುಕುಳ ಕೊಟ್ಟಿದ್ದಾರೆ ಎಂಬುದು ಮಾತ್ರ ಆತ್ಮಹತ್ಯೆಗೆ ಪ್ರೇರೇಪಿಸಿದಂತೆ ಆಗುವುದಿಲ್ಲ ಎಂದು ಸೊಸೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಇಂತಹ ಪ್ರಕರಣಗಳು ಇಂದಿಗೂ ಸಾವಿರಗಳ ಸಂಖ್ಯೆಯಲ್ಲಿ ವರದಕ್ಷಿಣೆ, ಕೌಟುಂಬಿಕ ಹಿಂಸೆಗಳಿಂದಾಗಿ ಬಲಿಯಾಗುತ್ತಿರುವ ಮಹಿಳೆಯರ ಕಥೆಗಳನ್ನು ಹೇಳುತ್ತವೆ. ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೂ ಶಿಕ್ಷೆ ಆಗಬಾರದು ಎಂಬ ತತ್ವದ ಮೇಲೆ ನಿಂತಿರುವ ನಮ್ಮ ನ್ಯಾಯವ್ಯವಸ್ಥೆಯಲ್ಲಿ ಎಂತಹ ಅಪರಾಧಕ್ಕೂ ಶಿಕ್ಷೆ ಆಗುವುದು ಕಡಿಮೆಯೇ. ಸಾಕ್ಷಿಗಳಿದ್ದರೂ ಒಂದು ಸಣ್ಣ ಕೊರತೆಯಿಂದ ಆಪಾದಿತರು ನಿರಪರಾಧಿಗಳು ಎಂದು ವ್ಯವಸ್ಥೆ ತೀರ್ಮಾನ ಕೊಡುತ್ತದೆ. ಹಾಗಿದ್ದಾಗ, ಕೇವಲ ಸಾಬೀತಾಗದ ಕೇಸುಗಳ ಆಧಾರದಲ್ಲಿ ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯದ ಸುಳ್ಳು ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪ್ರತಿಪಾದಿಸುವುದು ಸರಿಯಲ್ಲ.

ADVERTISEMENT

ಮೈತ್ರೇಯಿ ಸಚ್ಚಿದಾನಂದ ಹೆಗಡೆ, ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ವಕೀಲೆ

ಹಾಗೆಂದ ಮಾತ್ರಕ್ಕೆ ವರದಕ್ಷಿಣೆ, ಕೌಟುಂಬಿಕ ಹಿಂಸೆಗಳ ಆರೋಪಗಳೆಲ್ಲ ಶೇ 100ರಷ್ಟು ಸರಿ ಇರುತ್ತವೆ ಎಂದು, ಈ ಕಾನೂನುಗಳ ದುರುಪಯೋಗ ಆಗುತ್ತಲೇ ಇಲ್ಲ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತಾಗುತ್ತದೆ. ವ್ಯವಸ್ಥೆಯಲ್ಲಿರುವ ಲೋಪದೋಷಗಳ ಲಾಭ ಪಡೆದುಕೊಂಡು, ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳುವ ನಿದರ್ಶನಗಳು ಎಲ್ಲ ಕಾಲದಲ್ಲೂ, ಎಲ್ಲ ಕ್ಷೇತ್ರಗಳಲ್ಲೂ ಆಗುತ್ತಲೇ ಇರುತ್ತವೆ. ಭ್ರಷ್ಟಾಚಾರದ ಪ್ರಕರಣಗಳೇ ಆಗಲಿ, ದೇಶದ್ರೋಹದ ವಿರುದ್ಧದ ಪ್ರಕರಣಗಳೇ ಆಗಲಿ, ಅಷ್ಟೇಕೆ ಸಾಧಾರಣವಾದ ಔದ್ಯೋಗಿಕ ಕಾನೂನುಗಳಲ್ಲಿ ಹಣ, ಬುದ್ಧಿ, ಶಕ್ತಿ ಇರುವವರು ಕಾನೂನುಗಳನ್ನು ಉಪಯೋಗಿಸಿ ದುರ್ಬಲವಾಗಿರುವ ವ್ಯಕ್ತಿಗಳಿಗೆ ಕಿರುಕುಳ ನೀಡುತ್ತಾರೆ. ಇದರಲ್ಲಿ ಮಹಿಳಾಕೇಂದ್ರಿತ ಕಾನೂನುಗಳೂ ಸೇರಿವೆ. ಆದರೆ, ಮಾಧ್ಯಮಗಳ ಉತ್ಪ್ರೇಕ್ಷಿತ ವರದಿಗಳು ಅಥವಾ ಜನಸಾಮಾನ್ಯರ ಅರಿವಿನ ಕೊರತೆ ಮತ್ತು ಸಹಜವಾಗಿಯೇ ಪುರುಷ ಪ್ರಧಾನ ಸಮಾಜದ ನಿಲುವುಗಳಿಂದ ಈ ಘಟನೆಗಳು ಎಲ್ಲಿಲ್ಲದ ಪ್ರಾಮುಖ್ಯವನ್ನು ಪಡೆಯುತ್ತಿವೆ.

ಹಾಗೆಂದ ಮಾತ್ರಕ್ಕೆ ಸಮಾಜ ಅಥವಾ ಕಾನೂನು ಈ ಸಮಸ್ಯೆಗೆ ಕುರುಡಾಗಬೇಕೆಂದಲ್ಲ. ಮೂಲಭೂತವಾದ ಕಾನೂನುಗಳಲ್ಲಿ ಬದಲಾವಣೆ ತರುವುದರಿಂದ ಸಮಾಜಕ್ಕೆ ಉಪಯೋಗಕ್ಕಿಂತ ನಷ್ಟವೇ ಹೆಚ್ಚು. ಹಾಗಾಗಿ ಇಂಥ ಪ್ರಕರಣಗಳ ವಿಚಾರಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರುವ ತಿದ್ದುಪಡಿಗಳನ್ನು ಮಾಡಬೇಕು. ಇಂತಹ ವೈವಾಹಿಕ ವಿವಾದಗಳ ಬಗೆಗಿನ ‍ಪ್ರಕರಣಗಳನ್ನು ಪರಿಶೀಲಿಸಿದಾಗ, ವಿಚಾರಣಾ ಅವಧಿ ಈ ಕೇಸುಗಳಲ್ಲಿ ದೊಡ್ಡ ಖಳನಾಯಕ ಎಂಬುದು ಗೊತ್ತಾಗುತ್ತದೆ. ಎಷ್ಟೋ ಬಾರಿ ಪ್ರಕರಣದ ತೀರ್ಪು ಬರಲು ದಶಕಗಳೇ ಬೇಕಾಗುತ್ತದೆ. ದೆಹಲಿ ಹೈಕೋರ್ಟ್‌ನ ಮತ್ತು ಕರ್ನಾಟಕ ಹೈಕೋರ್ಟ್‌ನ ನಿರ್ದೇಶನಗಳನ್ನು ಹೊರತುಪಡಿಸಿದರೆ ಕೌಟುಂಬಿಕ ವಿವಾದಗಳನ್ನು ಬಗೆಹರಿಸಲು ನಿಗದಿತ ಅವಧಿ ಎಂಬುದೇ ಇಲ್ಲ. ಗ್ರಾಹಕರಿಗೆ ಸಂಬಂಧಿಸಿದ ಪ್ರಕರಣಗಳು, ರೇರಾ ಪ್ರಕರಣಗಳನ್ನು ಬಗೆಹರಿಸಲು ನ್ಯಾಯಾಲಯಗಳು ಹೆಚ್ಚು ಸಮಯ ತೆಗೆದುಕೊಳ್ಳುವಂತಿಲ್ಲ ಎಂಬ ನಿಯಮ ಇದೆ. ಅಂತಹ ಬದಲಾವಣೆಯನ್ನು ವೈವಾಹಿಕ, ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ಕಾನೂನುಗಳಲ್ಲಿಯೂ ತರಬೇಕಿದೆ.

ವೈವಾಹಿಕ ಪ್ರಕರಣಗಳಲ್ಲಿ ಉನ್ನತ ನ್ಯಾಯಾಲಯಗಳು ಈ ಹಿಂದೆ ಕೊಟ್ಟ ತೀರ್ಪುಗಳಿಗೆ ಹೆಚ್ಚಿನ ಮಹತ್ವ ಇಲ್ಲ. ಯಾಕೆಂದರೆ, ಕೋರ್ಟ್‌ನ ಮುಂದೆ ಬರುವ ಒಂದೊಂದು ಪ್ರಕರಣಕ್ಕೂ ಒಂದೊಂದು ಹಿನ್ನೆಲೆ ಇರುತ್ತದೆ. ಹಾಗಾಗಿ ಇಂಥ ಪ್ರಕರಣಗಳಲ್ಲಿ ನ್ಯಾಯಾಧೀಶರ ದೃಷ್ಟಿಕೋನವೇ ಹೆಚ್ಚಿನ ಮಹತ್ವ ಪಡೆಯುತ್ತದೆ. ಕೌತುಕವೆಂದರೆ, ಪುರುಷಪ್ರಧಾನ ಸಮಾಜದ ಹಲವು ಗ್ರಹಿಕೆಗಳು ಕೌಟುಂಬಿಕ ಪ್ರಕರಣಗಳಲ್ಲಿ ಪತಿಯ ವಿರುದ್ಧದ ತೀರ್ಪುಗಳಿಗೆ ದಾರಿ ಮಾಡುತ್ತವೆ. ಉದಾಹರಣೆಗೆ ಜೀವನಾಂಶ. ಹೆಂಡತಿಗೆ ಕೆಲಸ ಮಾಡುವ ವಿದ್ಯಾಭ್ಯಾಸವಿದ್ದರೂ ಅವಳನ್ನು ನೋಡಿಕೊಳ್ಳುವುದು ಗಂಡನ ಕರ್ತವ್ಯ ಎಂಬ ಅಭಿಪ್ರಾಯವನ್ನು ನ್ಯಾಯಾಧೀಶರು ಹೊಂದಿದ್ದರೆ, ಅವರ ಮುಂದೆ ಬರುವ ಎಲ್ಲ ಪ್ರಕರಣಗಳಲ್ಲಿಯೂ ಅಂತಹ ನಿಲುವನ್ನೇ ಅವರು ತಾಳುತ್ತಾರೆ. ಹೆಣ್ಣೂ ಸ್ವತಂತ್ರವಾಗಿ ಜೀವನ ನಡೆಸಬಲ್ಲಳು ಎಂದು ಆಲೋಚಿಸುವ ನ್ಯಾಯಾಧೀಶರು, ವಿಚ್ಛೇದಿತ ಮಹಿಳೆ ಕೆಲಸ ಮಾಡುತ್ತಿದ್ದರೂ ಆಕೆಯ ಜೀವನಾಂಶವನ್ನು ಗಂಡ ಭರಿಸಬೇಕು ಎಂಬ ನಿಲುವು ತಾಳುವುದಿಲ್ಲ.

ಸಮಾಜವಾಗಿ, ಕಕ್ಷಿದಾರರಾಗಿ, ವಕೀಲರಾಗಿ ನಮ್ಮೆಲ್ಲರ ದೃಷ್ಟಿಕೋನಗಳು ಏನು ಎಂಬುದು ವರದಕ್ಷಿಣೆ, ಕೌಟುಂಬಿಕ ಹಿಂಸೆಯ ಪ್ರಕರಣಗಳ ದೆಸೆಯನ್ನು ನಿರ್ಧರಿಸುತ್ತವೆ. ಸಮಾಜದ ನಿಲುವುಗಳನ್ನು ಬದಲು ಮಾಡುವ, ಹೆಣ್ಣನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ನೋಡುವ ದಿಸೆಯಲ್ಲಿ ನಾವು ಹೆಜ್ಜೆ ಇಡಬೇಕು. ಅದರ ಜೊತೆಯಲ್ಲಿಯೇ ಕಕ್ಷಿದಾರರ ಅರಿವಿನ ಕೊರತೆಯೂ ಕಾನೂನು ದುರುಪಯೋಗಕ್ಕೆ ಅನುವು ಮಾಡಿಕೊಡುತ್ತದೆ ಎಂಬುದನ್ನು ಮನಗಂಡು, ಅದರ ವಿರುದ್ಧ ಕಾನೂನಿನಲ್ಲಿಯೇ ಇರುವ ದಾರಿಗಳ ಬಗ್ಗೆ ಕಕ್ಷಿದಾರರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಅತುಲ್ ಸುಭಾಷ್ ಅವರ ಸಾವು ಅಂತಹ ಮೂಲಭೂತವಾದ ಬದಲಾವಣೆಗೆ ದಾರಿಯಾಗಲಿ.

ಲೇಖಕಿ: ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.