ಜಮ್ಮು- ಕಾಶ್ಮೀರದ ರಾಜಧಾನಿ ಶ್ರೀನಗರದ ಹೊರವಲಯದಲ್ಲಿ ಸೋಮವಾರ ಸೇನಾ ವಾಹನಗಳ ಮೇಲೆ ಏಕಾಏಕಿ ದಾಳಿ ನಡೆಸಿ 8 ಸೈನಿಕರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕಾಶ್ಮೀರ ಭೇಟಿಯ ಮುನ್ನಾ ದಿನವನ್ನೇ ಉಗ್ರರು ಈ ಕೃತ್ಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ದುರುದ್ದೇಶವೇ ತುಂಬಿಕೊಂಡಿದೆ.
ಎರಡು ದಿನಗಳ ಹಿಂದೆಯೂ ಭಯೋತ್ಪಾದಕರು ಶ್ರೀನಗರದ ಹೃದಯ ಭಾಗದಲ್ಲಿಯೇ ಇಬ್ಬರು ಪೊಲೀಸರನ್ನು ಕೊಂದು ಪರಾರಿಯಾಗಿದ್ದರು. ಸದ್ಯದಲ್ಲಿಯೇ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಅಲ್ಲಿಯೂ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸುವ ಸಂಚು ರೂಪುಗೊಂಡಿದೆ ಎಂಬುದನ್ನು ಬೇಹುಗಾರಿಕೆ ದಳಗಳು ಸರ್ಕಾರದ ಗಮನಕ್ಕೆ ತಂದಿವೆ. ಕಾಶ್ಮೀರ ಅಭಿವೃದ್ಧಿ ಹೊಂದುವುದು ಹಾಗೂ ಅಲ್ಲಿ ಸಹಜ ಸ್ಥಿತಿ ನೆಲೆಗೊಳ್ಳುವುದು ಉಗ್ರರಿಗೆ ಇಷ್ಟವಿಲ್ಲ ಎನ್ನುವುದನ್ನು ಈ ಘಟನೆಗಳು ಮತ್ತೆ ರುಜುವಾತು ಮಾಡಿವೆ.
ಶ್ರೀನಗರ ದಾಳಿಯ ಹೊಣೆಯನ್ನು ಹಿಜಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ದಾಳಿ ನಡೆಸುವ ಎಚ್ಚರಿಕೆ ನೀಡಿದೆ. ಸೋಮವಾರದ ಘಟನೆಯಿಂದ ವಿಚಲಿತರಾಗದ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ತಮ್ಮ ಪ್ರವಾಸವನ್ನು ನಿಗದಿಯಂತೆ ನಡೆಸುವ ಮೂಲಕ ಭಯೋತ್ಪಾದಕರಿಗೆ ಸರಿಯಾದ ಉತ್ತರ ನೀಡಿದ್ದಾರೆ.
ಪ್ರಧಾನಿಯೊಬ್ಬರು ಕಾಶ್ಮೀರಕ್ಕೆ ಭೇಟಿ ನೀಡುವ ಮುನ್ನ ಭಯೋತ್ಪಾದಕರು ದಾಳಿ ಮಾಡುವುದು ಹಿಂದೆಯೂ ನಡೆದಿದೆ. 1998ರಲ್ಲಿ ಆಗಿನ ಪ್ರಧಾನಿ ಗುಜ್ರಾಲ್ ಭೇಟಿಗೆ ಮುನ್ನ 23 ಕಾಶ್ಮೀರಿ ಪಂಡಿತರನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗಿತ್ತು.
2002 ಮತ್ತು 2003ರಲ್ಲಿ ವಾಜಪೇಯಿ ಅವರ ಭೇಟಿ ಕಾಲಕ್ಕೂ ಇಬ್ಬರು ಮುಖಂಡರ ಹತ್ಯೆ ನಡೆದಿತ್ತು. 2005 ಮತ್ತು 2009ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಗೂ ಮುನ್ನ ಉಗ್ರರು ವಿವಿಧೆಡೆ ಹಿಂಸಾಕೃತ್ಯ ನಡೆಸಿದ್ದರು. ಈ ಉಗ್ರರಿಗೆ ಗಡಿಯಾಚೆಯಿಂದ ಎಲ್ಲ ರೀತಿಯ ಸಹಾಯ, ಸಹಕಾರ ಸಿಗುತ್ತಿದೆ. ಇತ್ತೀಚೆಗೆ ಪಾಕಿಸ್ತಾನದ ಪ್ರಾಂತೀಯ ಸರ್ಕಾರವೊಂದು ಭಯೋತ್ಪಾದನಾ ತಂಡದ ಮುಖವಾಣಿಯಂತಿರುವ ಗುಂಪೊಂದಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟ ಸಂಗತಿ ಬೆಳಕಿಗೆ ಬಂದಿದೆ.
ನವಾಜ್ ಷರೀಫ್ ಅವರು ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪಾಕಿಸ್ತಾನದ ಪ್ರಧಾನಿಯಾಗಿದ್ದಾರೆ. ಕಾಶ್ಮೀರದೊಳಗಿನ ಕೆಲ ಸಂಘಟನೆಗಳು ಪ್ರಧಾನಿ ಭೇಟಿ ವಿರೋಧಿಸಿ ಬಂದ್ ನಡೆಸುವ ಮೂಲಕ ಉಗ್ರರಿಗೆ ಪರೋಕ್ಷ ಬಲ ತುಂಬುತ್ತಿವೆ. ಭದ್ರತಾ ಪಡೆಗಳಿಗೆ ಅಧಿಕಾರ ನೀಡುವ ಸೇನಾ ವಿಶೇಷಾಧಿಕಾರ ಕಾಯ್ದೆ ರದ್ದು ಮಾಡುವಂತೆ ಕೂಗು ಹೆಚ್ಚುತ್ತಿದೆ. ಈಗ ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ‌್ರಿ ಅವರಂತೂ ಪಾಕ್ ಬಗ್ಗೆ ಮೃದು ಧೋರಣೆ ಹೊಂದಿದವರು ಎಂಬುದೂ ಗಮನಿಸಬೇಕಾದ ಸಂಗತಿ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪಾಕ್ ಮೂಲದ ಉಗ್ರಗಾಮಿಗಳು ಮತ್ತೆ ಚಿಗಿತುಕೊಳ್ಳುತ್ತಿರುವುದು ಕಾಕತಾಳೀಯವಂತೂ ಇರಲಾರದು. ಹೀಗಾಗಿ ಸರ್ಕಾರ ಸೂಕ್ಷ್ಮವಾಗಿ, ಆದರೆ ನಿಷ್ಠುರವಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ಭಯೋತ್ಪಾದನೆಯನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.