ADVERTISEMENT

ಎನ್‌ಇಇಟಿ ವಿವಾದ

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 9:00 IST
Last Updated 6 ಜನವರಿ 2011, 9:00 IST

ವೈದ್ಯಕೀಯ ಶಿಕ್ಷಣದ ಸಮಗ್ರ ನಿರ್ವಹಣೆ ನೋಡಿಕೊಳ್ಳುವ ಭಾರತೀಯ ವೈದ್ಯಕೀಯ ಶಿಕ್ಷಣ ಮಂಡಳಿ (ಎಂಸಿಐ) ವೈದ್ಯಕೀಯ ಶಿಕ್ಷಣಕ್ಕೆ ದೇಶದಾದ್ಯಂತ ಅನ್ವಯವಾಗುವ ಏಕರೂಪದ ಒಂದೇ ಪ್ರವೇಶ ಪರೀಕ್ಷೆ ನಡೆಸುವ ನಿರ್ಧಾರ ಸ್ವಾಗತಾರ್ಹ. ಸುಪ್ರೀಂ ಕೋರ್ಟಿನ ಆದೇಶದನ್ವಯ ಎಂಬಿಬಿಎಸ್ ಮತ್ತು ಸ್ನಾತಕೋತ್ತರ  ವೈದ್ಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ಎನ್‌ಇಇಟಿ) ನಡೆಸುವ ಕ್ರಮ ಒಳ್ಳೆಯದೆ. ಆದರೆ ಈ ಕ್ರಮ ಏಕಪಕ್ಷೀಯ ನಿರ್ಧಾರ ಎನ್ನುವ ಕಾರಣಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕೆಲವು ರಾಜ್ಯ ಸರ್ಕಾರಗಳ ಟೀಕೆಗಳಿಂದ ವಿವಾದಕ್ಕೆ ಸಿಕ್ಕಿದೆ. ಈ ಟೀಕೆಗೆ ಅಖಿಲ ಭಾರತ ವೈದ್ಯಕೀಯ ಸಂಘವೂ (ಎಐಎಂಎ) ದನಿ ಸೇರಿಸಿರುವುದರಿಂದ ಎಂಸಿಐ ಈಗ ಪೀಕಲಾಟಕ್ಕೆ ಸಿಕ್ಕಿಕೊಂಡಿದೆ. ಈ ಹೊಸ ವ್ಯವಸ್ಥೆಯನ್ನು ಆರೋಗ್ಯ ಸಚಿವಾಲಯ ತಾತ್ವಿಕವಾಗಿ ವಿರೋಧ ಮಾಡುತ್ತಿಲ್ಲವಾದರೂ, ತಮ್ಮ ಸಚಿವಾಲಯದ ಒಪ್ಪಿಗೆ ಪಡೆದಿಲ್ಲ ಮತ್ತು ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಗಣನಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ವಾದವನ್ನು ಮುಂದೆ ಇಟ್ಟಿದೆ. ಈ ವಾದದಲ್ಲಿ ತಪ್ಪು ಹುಡುಕುವುದು ಕಷ್ಟ. ದೇಶದಲ್ಲಿ ಒಟ್ಟು 271 ವೈದ್ಯಕೀಯ ಕಾಲೇಜುಗಳಿವೆ. ಅವುಗಳಲ್ಲಿ 138 ಸರ್ಕಾರಿ ಮತ್ತು 133 ಖಾಸಗಿ ಒಡೆತನಕ್ಕೆ ಸೇರಿವೆ. ಅನೇಕ ವಿಷಯಗಳಲ್ಲಿ ಈ ಕಾಲೇಜುಗಳು ರಾಜ್ಯ ಸರ್ಕಾರಗಳ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿ ಅವುಗಳು ವ್ಯಕ್ತಪಡಿಸುವ ಅಭಿಪ್ರಾಯ ಮತ್ತು ಸಾಧಕ-ಬಾಧಕಗಳನ್ನು ಪರಿಶೀಲಿಸುವುದಕ್ಕೆ ಎಂಸಿಐ ಹಿಂದೇಟು ಹಾಕಬಾರದು.

ತಮಿಳುನಾಡು ಸರ್ಕಾರ ವೃತ್ತಿ ಶಿಕ್ಷಣಕ್ಕೆ ಮೊದಲಿನಿಂದಲೂ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಪದ್ಧತಿಯನ್ನು ವಿರೋಧಿಸಿಕೊಂಡೇ ಬಂದಿದೆ. ಸಿಇಟಿ ವ್ಯವಸ್ಥೆಯಿಂದ ಗ್ರಾಮೀಣ ಬಡಮಕ್ಕಳಿಗೆ ಅನ್ಯಾಯವಾಗಲಿದೆ ಎಂಬುದು ಈ ರಾಜ್ಯದ ವಾದ. ಇದು ಸಂಪೂರ್ಣ ಒಪ್ಪುವಂತಿಲ್ಲವಾದರೂ, ಅದು ನಡೆಸುವ ರಾಜಕೀಯ ಒತ್ತಡ ತಂತ್ರಗಾರಿಕೆಗೆ ಕೇಂದ್ರ ಸರ್ಕಾರವೂ ಮಣಿಯುತ್ತಿರುವುದು ವಿಪರ್ಯಾಸ. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಇರುವ ಸಿಇಟಿ ವ್ಯವಸ್ಥೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಹಿತವನ್ನು ಕಾಯ್ದುಕೊಂಡೇ ಬರಲಾಗಿದೆ. ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಅಂಕಗಳಲ್ಲಿ ರಿಯಾಯಿತಿ ನೀಡಲಾಗಿದೆ.

ಇದೇ ಸೌಲಭ್ಯವನ್ನು ಎಂಸಿಐ ನಡೆಸುವ ಎನ್‌ಇಇಟಿಯಲ್ಲೂ ನೀಡಬೇಕೆನ್ನುವುದು ಕರ್ನಾಟಕದ ವಾದ. ಇಂತಹ ಹಲವಾರು ಅಂಶಗಳನ್ನು ಎಂಸಿಐ ಗಮನಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಹೈದರಾಬಾದ್‌ನಲ್ಲಿ ನಡೆಯಲಿರುವ ರಾಜ್ಯ ಸರ್ಕಾರಗಳ ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಸಭೆಯಲ್ಲಿ ಚರ್ಚಿಸಿ ರಾಜ್ಯಗಳ ಅಭಿಪ್ರಾಯವನ್ನು ಪಡೆಯಬೇಕೆನ್ನುವ ಕೇಂದ್ರ ಸರ್ಕಾರದ ಸಲಹೆ ತಳ್ಳಿಹಾಕುವಂತಹದ್ದಲ್ಲ. ಈ ವಿಚಾರದಲ್ಲಿ ಎಂಸಿಐ ಕೂಡ ತನ್ನ ನಿಲುವಿಗೇ ಅಂಟಿಕೊಂಡು ಕೂರಬಾರದು.
 
ಇಲ್ಲಿ ವಿದ್ಯಾರ್ಥಿಗಳು ಕಟ್ಟಿಕೊಂಡಿರುವ ವೈದ್ಯಕೀಯ ಶಿಕ್ಷಣದ ಭವಿಷ್ಯದ ಕನಸುಗಳ ಜೊತೆಗೆ ಪ್ರತಿಯೊಂದು ರಾಜ್ಯಗಳು ಎದುರಿಸುತ್ತಿರುವ  ಸಮಸ್ಯೆಗಳೂ ಇವೆ. ಇವುಗಳನ್ನೆಲ್ಲ ಪರಿಗಣಿಸಿದರೆ ಉದ್ದೇಶಿತ ಏಕರೂಪದ ಎನ್‌ಇಇಟಿಯನ್ನು ಮತ್ತಷ್ಟು ಉತ್ತಮಪಡಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.