ADVERTISEMENT

ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 16:00 IST
Last Updated 16 ಫೆಬ್ರುವರಿ 2011, 16:00 IST

ಗ್ರಾಮೀಣ ಪ್ರದೇಶದ ಬಡವರಿಗೆ ನಿತ್ಯದ ಬದುಕಿಗಾಗಿ ಆಸರೆಯಾಗಿರುವ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಜಾರಿಯಲ್ಲಿ ಹಲವಾರು ಅಕ್ರಮಗಳು ನಡೆಯುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಕೂಲಿಯನ್ನೇ ನಂಬಿರುವ ಜನರಿಗೆ ವರ್ಷಕ್ಕೆ ನೂರು ದಿನ ಕೂಲಿ ನೀಡುವ ಈ ಯೋಜನೆಯಲ್ಲಿ ಆಗಿರುವ ಅಕ್ರಮಗಳಲ್ಲಿ ಜಾಬ್ ಕಾರ್ಡ್ ದುರುಪಯೋಗವೂ ಒಂದು.
 
ಕರ್ನಾಟಕದಲ್ಲಿ ಇಂಥ ಹನ್ನೆರಡು ಲಕ್ಷ ನಕಲಿ ಜಾಬ್ ಕಾರ್ಡ್‌ಗಳನ್ನು ಪತ್ತೆ ಹಚ್ಚಿದ್ದು, ಈ ಪ್ರಕರಣದಲ್ಲಿ 337 ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರು ಹೊರಹಾಕಿರುವ ಅಂಶ ಆಘಾತಕಾರಿಯದು. ರಾಜ್ಯದಲ್ಲಿ ವಿತರಿಸಲಾಗಿರುವ 62 ಲಕ್ಷ ಜಾಬ್ ಕಾರ್ಡ್‌ಗಳಲ್ಲಿ 12 ಲಕ್ಷ ನಕಲಿ ಕಾರ್ಡ್‌ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ದುರುಪಯೋಗ  ಮಾಡಲಾಗಿದೆ. ಈ ಅವ್ಯವಹಾರದಲ್ಲಿ ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳೂ ಷಾಮೀಲಾಗಿರುವುದು ನಾಚಿಕೆಗೇಡಿನ ಸಂಗತಿ. ಜನಪ್ರತಿನಿಧಿಗಳ ಕುಮ್ಮಕ್ಕು ಇದ್ದರೆ ಅಧಿಕಾರಿಗಳು ಯಾವ ಅಕ್ರಮ ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಈ ಅಕ್ರಮದಲ್ಲಿ ಭಾಗಿಯಾಗಿರುವ ಜನಪ್ರತಿನಿಧಿಗಳು ಸೇರಿದಂತೆ ಈಗಾಗಲೇ 102 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಅಷ್ಟಕ್ಕೇ ಕೈಕಟ್ಟಿ ಕುಳಿತರೆ ಆಗದು. ಈ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕಾನೂನು ಕ್ರಮ ಮುಂದುವರಿಯುವಂತೆ ಸರ್ಕಾರ ಮುತುವರ್ಜಿ ವಹಿಸಬೇಕು.

ಕೇಂದ್ರ ಸರ್ಕಾರವು ತನ್ನ ಪ್ರಾಯೋಜಿತ ಗ್ರಾಮೀಣಾಭಿವೃದ್ಧಿ ಯೋಜನೆಗಳು ವಿಳಂಬ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಾಗದಿರಲೆಂದು ಹಣವನ್ನು ರಾಜ್ಯ ಸರ್ಕಾರಕ್ಕೆ ಬದಲಾಗಿ ನೇರವಾಗಿಯೇ ಜಿಲ್ಲಾ ಪಂಚಾಯಿತಿಗಳಿಗೆ ಕಳುಹಿಸುತ್ತಿದೆ. ಆದರೆ ಈ ಹಣವನ್ನು ಜಿಲ್ಲಾ ಮತ್ತು ಗ್ರಾಮೀಣ ಮಟ್ಟದಲ್ಲಿಯೇ ನುಂಗಿ ನೀರು ಕುಡಿಯುವ ಭ್ರಷ್ಟರು ಹುಟ್ಟಿಕೊಂಡಿದ್ದಾರೆ. ಆದ್ದರಿಂದಲೇ ಗ್ರಾಮೀಣಾಭಿವೃದ್ಧಿಯ ಬಹುತೇಕ ಯೋಜನೆಗಳೆಲ್ಲ ಕೇವಲ ಕಾಗದದಲ್ಲಿಯೇ ಉಳಿಯುವಂತಾಗಿವೆ. ಈ ಯೋಜನೆಯ ಅನುಷ್ಠಾನದ ಮೇಲೆ ಕಣ್ಣಿಡಲು ಈಗಾಗಲೇ ರಾಜ್ಯ ಸರ್ಕಾರ 15 ಜಿಲ್ಲೆಗಳಲ್ಲಿ ಓಂಬುಡ್ಸ್‌ಮನ್‌ಗಳನ್ನು ನೇಮಕ ಮಾಡಿರುವುದು ಶ್ಲಾಘನೀಯ. ಉಳಿದ ಜಿಲ್ಲೆಗಳಿಗೂ ಆದಷ್ಟು ಶೀಘ್ರವೇ ಓಂಬುಡ್ಸ್‌ಮನ್‌ಗಳ ನೇಮಕ ಆಗಬೇಕು. ಈ ನೇಮಕಗಳಲ್ಲಿಯೂ ಪ್ರಾಮಾಣಿಕರು, ನಿಷ್ಪಕ್ಷಪಾತಿಗಳು ಮತ್ತು ದಕ್ಷರು ಇರುವಂತೆ ನೋಡಿಕೊಳ್ಳಬೇಕು. ಭ್ರಷ್ಟ ವ್ಯವಹಾರದ ಮೇಲೆ ಕಣ್ಣಿಟ್ಟು ಅದನ್ನು ತಡೆಯುವ ಓಂಬುಡ್ಸ್‌ಮನ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.