ADVERTISEMENT

ಬೋನಿಗೆ ಬಿದ್ದ ಮುಷರಫ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ಮಾಡಿದ್ದುಣ್ಣೊ ಮಹಾರಾಯ ಎನ್ನುವಂತಾಗಿದೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಸ್ಥಿತಿ. ಮತ್ತೆ ಆಡಳಿತ ಸೂತ್ರವನ್ನು ಹಿಡಿಯುವ ಯೋಜಿತ ಹಂಬಲದೊಂದಿಗೆ  ವನವಾಸ ಮುಗಿಸಿ ಕರಾಚಿಗೆ ಚುನಾವಣೆಯ ಸಮಯದಲ್ಲೇ ಬಂದಿದ್ದ ಮುಷರಫ್ ಅವರ ಕನಸು, ತವರಿಗೆ ಆಗಮಿಸಿದ ಹದಿನೈದೇ ದಿನದಲ್ಲಿ ಮಣ್ಣುಗೂಡಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ  ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ನಾಲ್ಕೂ ಕ್ಷೇತ್ರಗಳಲ್ಲಿ  ಅವರ ನಾಮಪತ್ರಗಳನ್ನು ತಿರಸ್ಕರಿಸಲಾಯಿತಲ್ಲದೆ, ಮುಷರಫ್ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನೇ ಅನರ್ಹಗೊಳಿಸಲಾಗಿದೆ. ಅವರ ಜಾಮೀನು ತಿರಸ್ಕರಿಸಿದ ಇಸ್ಲಾಮಾಬಾದ್‌ನ ಭಯೋತ್ಪಾದನಾ ನಿಗ್ರಹ  ನ್ಯಾಯಾಲಯ, ದೇಶ ದ್ರೋಹದ ಆರೋಪದ ಮೇಲೆ ಮಾಜಿ ಅಧ್ಯಕ್ಷರ ಬಂಧನದ ಆದೇಶ ಹೊರಡಿಸುವುದರೊಂದಿಗೆ ನ್ಯಾಯಾಂಗದ ಬಾಹುಗಳು ಎಷ್ಟು ಬಲಿಷ್ಠ ಎಂಬುದನ್ನು ತೋರಿಸಿಕೊಟ್ಟಿದೆ.

ಮುಷರಫ್ ದಿಕ್ಕುತೋಚದೆ ನ್ಯಾಯಾಲಯದಿಂದ ಪರಾರಿಯಾದ ಪ್ರಸಂಗವಂತೂ, ಜಗತ್ತಿನಲ್ಲಿ  ಸರ್ವಾಧಿಕಾರದಿಂದ ಮೆರೆಯುವವರಿಗೆ  ಕೊನೆಗಳಿಗೆಯಲ್ಲಿ ಆಗುವ ಗತಿ ಏನು ಎನ್ನುವುದನ್ನು ಹೇಳುವಂತಿದೆ. ಎಲ್ಲ ಸರ್ವಾಧಿಕಾರಿಗಳಿಗೂ ಇದೊಂದು ಎಚ್ಚರಿಕೆ. ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಅಧ್ಯಕ್ಷರನ್ನು ಈಗ ಅವರ ತೋಟದ ಮನೆಯಲ್ಲಿಯೇ ಗೃಹ ಬಂಧನದಲ್ಲಿಡಲಾಗಿದೆ.

ಮುಷರಫ್ ಅಧ್ಯಕ್ಷರಾಗಿದ್ದ 2007ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಲ್ಲದೆ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶ ಚೌಧರಿ ಸೇರಿದಂತೆ 60 ನ್ಯಾಯಾಧೀಶರನ್ನು ಪದಚ್ಯುತಗೊಳಿಸಿ, ಬಂಧಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಆಗಮಿಸಿದಾಗ ಮುಷರಫ್, ವಕೀಲರ ತೀವ್ರ ಆಕ್ರೋಶಕ್ಕೆ ಈಡಾದರು. ಸೇಡಿಗೆ ಸೇಡು ಎನ್ನುವಂತೆ ನಡೆದ ಈ ಘಟನಾವಳಿಯಲ್ಲಿ ಮುಷರಫ್ ಈಗ ಹಲ್ಲುಕಿತ್ತ ಹಾವಿನಂತಾಗಿದ್ದಾರೆ.

ಭಯೋತ್ಪಾದನಾ ನಿಗ್ರಹ ಕೋರ್ಟ್‌ನಿಂದ ವಿಚಾರಣೆಗೆ ಒಳಪಡಬೇಕಾದ ಮುಷರಫ್ ಅವರ ಇಂದಿನ ಪರಿಸ್ಥಿತಿ ನೋಡಿದರೆ ಅವರ ರಾಜಕೀಯ ಜೀವನಕ್ಕೆ ಅಂತಿಮ ತೆರೆ ಬೀಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಮುಷರಫ್ ಆಡಳಿತಾವಧಿಯಲ್ಲಿ ಭಾರತದೊಂದಿಗಿನ ಅವರ ನಿಲುವು ಸೌಹಾರ್ದಯುತವಾಗಿತ್ತು ಎಂದು ಹೇಳಲಾಗದು. ಕಾರ್ಗಿಲ್ ದಾಳಿಯನ್ನು ಅವರು ಹೆಮ್ಮೆಯ ವಿಷಯವನ್ನಾಗಿಸಿಕೊಂಡಿದ್ದರು. ಭಾರತದೊಂದಿಗಿನ ಸಂಘರ್ಷವನ್ನೇ ಅವರು ತಮ್ಮ ಪಟ್ಟವನ್ನು ಗಟ್ಟಿಮಾಡಿಕೊಳ್ಳಲು ಸಾಧನವನ್ನಾಗಿಸಿಕೊಂಡರು. ಆದರೆ, ಈಗಲೂ ಮಿಲಿಟರಿಯಲ್ಲಿರುವ ಒಂದು ಗುಂಪು ಮುಷರಫ್ ಅವರನ್ನು ಬೆಂಬಲಿಸುತ್ತಿರುವುದು, ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ಅವರ ಬೆಂಬಲಿಗರು ಮುಂದಾಗಿರುವುದು ಪಾಕಿಸ್ತಾನದಲ್ಲಿ ಆಂತರಿಕ ಸಂಘರ್ಷದ ಭೀತಿಯನ್ನು ಹುಟ್ಟುಹಾಕಿದೆ.

ನೆರೆ ರಾಷ್ಟ್ರದಲ್ಲಿ ನಡೆಯುವ ಈ ವಿದ್ಯಮಾನವನ್ನು ಸಹಜವಾಗಿಯೇ ಭಾರತ ಆತಂಕದಿಂದ ಗಮನಿಸುತ್ತಿದೆ. ಮುಷರಫ್ ಆಡಳಿತದ ಸಮಯದಲ್ಲಿ ನಡೆದ ದಬ್ಬಾಳಿಕೆಯನ್ನು ನ್ಯಾಯಾಲಯವೂ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿರುವುದರಿಂದ ಪಾಕಿಸ್ತಾನದಲ್ಲಿ ಮೇ 11 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯ ಮೇಲೆ ಅದರ ಪರಿಣಾಮಗಳಾಗುವ ಎಲ್ಲ ಸಾಧ್ಯತೆಗಳಿವೆ.

ಪಾಕಿಸ್ತಾನದಲ್ಲಿ ತಮಗಿರುವ ಸೇನಾಬೆಂಬಲವನ್ನೇ ನಂಬಿ, ಪಾಕಿಸ್ತಾನಕ್ಕೆ ಮರಳಿಬಂದು ಬೋನಿಗೆ ಬಿದ್ದಿರುವ ಮುಷರಫ್, ಅಧಿಕಾರಾವಧಿಯಲ್ಲಿ ನಡೆಸಿದ ಎಲ್ಲ ದುಂಡಾವರ್ತನೆಗಳಿಗೂ ಉತ್ತರ ನೀಡಲೇ ಬೇಕಾಗಿದೆ. ಈ ಸರ್ವಾಧಿಕಾರಿಯ ವಿಷಯದಲ್ಲಿ ಕಾನೂನು ನಿರ್ಭೀತ ವಿಚಾರಣೆ ನಡೆಸುವ ಮೂಲಕ ತಕ್ಕ ಶಾಸ್ತಿಗೆ ಅಣಿಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.