ADVERTISEMENT

ರಾಜಕಾಲುವೆ ಒತ್ತುವರಿ ತೆರವು ಅಧಿಕಾರಿಗಳಿಗೂ ಶಿಕ್ಷೆ ಆಗಲಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
ರಾಜಕಾಲುವೆ ಒತ್ತುವರಿ ತೆರವು  ಅಧಿಕಾರಿಗಳಿಗೂ  ಶಿಕ್ಷೆ ಆಗಲಿ
ರಾಜಕಾಲುವೆ ಒತ್ತುವರಿ ತೆರವು ಅಧಿಕಾರಿಗಳಿಗೂ ಶಿಕ್ಷೆ ಆಗಲಿ   

ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಬುಲ್ಡೋಜರ್‌, ಎಸ್ಕವೇಟರ್‌ ಹಾಗೂ ಕಟ್ಟರ್‌ ಯಂತ್ರಗಳು ಗರ್ಜಿಸುತ್ತಿವೆ. ರಾಜಕಾಲುವೆಗಳ ಮೇಲೆ ತಲೆಯೆತ್ತಿದ್ದ ಮನೆಗಳು, ಬಹುಅಂತಸ್ತಿನ ಕಟ್ಟಡಗಳು ತರಗೆಲೆಗಳಂತೆ ಉರುಳುತ್ತಿವೆ.

ತಮ್ಮ ಕನಸಿನ ಮನೆಗಳು ಧರೆಗುರುಳುತ್ತಿದ್ದರೂ  ಅದೆಷ್ಟೋ ಮನೆಗಳ ಮಾಲೀಕರು ಅಸಹಾಯಕರಾಗಿದ್ದರು. ಕಷ್ಟಪಟ್ಟು ಹಣ ಸಂಗ್ರಹಿಸಿ ಕಟ್ಟಿದ ಮನೆ ಉರುಳಿಸದಂತೆ ಬೇಡಿದರೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ ವರ್ಗ  ಮೇಲಧಿಕಾರಿಗಳ ಆದೇಶ ಪಾಲಿಸುತ್ತಿತ್ತು. ಇದಕ್ಕೆಲ್ಲಾ ಮೂಲ ಕಾರಣ ರಾಜಕಾಲುವೆ ಒತ್ತುವರಿ.

ಹತ್ತು ದಿನಗಳ ಹಿಂದೆ ಬಿದ್ದ ಮಳೆಗೆ ಸಾರಕ್ಕಿ ಕೆರೆ ಮತ್ತು ಮಡಿವಾಳ ಕೆರೆ ತುಂಬಿ ಕೋಡಿ ಬಿದ್ದು ಹರಿಯಿತು. ರಾಜಕಾಲುವೆಗಳ ಒತ್ತುವರಿಯಿಂದ ಕೆರೆಗಳ ಮುಂದಿನ ಕೋಡಿಚಿಕ್ಕನಹಳ್ಳಿ ಮೂಲಕ ಬಿಟಿಎಂ ಬಡಾವಣೆ, ಕೆಎಎಸ್‌ ಅಧಿಕಾರಿಗಳ ಬಡಾವಣೆ, ಅಶ್ವತ್ಥನಾರಾಯಣ ಬಡಾವಣೆಗಳು ಜಲಾವೃತಗೊಂಡವು.

ಮುಂದೆ ಹೀಗಾಗದೆ, ಮಳೆ ನೀರು ಸರಾಗವಾಗಿ  ಹರಿದುಹೋಗುವಂತೆ ಮಾಡುವ ಸಲುವಾಗಿ ರಾಜಕಾಲುವೆ ಮೇಲಿದ್ದ ಒತ್ತುವರಿಯನ್ನು ಬಿಬಿಎಂಪಿ ನಿರ್ದಾಕ್ಷಿಣ್ಯವಾಗಿ ತೆರವು ಮಾಡುತ್ತಿದೆ. ಇದು ಅನಿವಾರ್ಯ ಹಾಗೂ ಶ್ಲಾಘನೀಯ ಕ್ರಮ. ಕೆರೆ, ರಾಜಕಾಲುವೆ, ಗೋಮಾಳ, ಖರಾಬು ಭೂಮಿ ಇವೆಲ್ಲವೂ ಸಾರ್ವಜನಿಕ ಆಸ್ತಿ. ಇವನ್ನು ಕಬಳಿಸುವುದು ಘೋರ ಅಪರಾಧವೇ ಸರಿ. ಬೆಂಗಳೂರಿನಲ್ಲಿ ಉಂಟಾದ ಕೃತಕ ನೆರೆಗೆ ರಾಜಕಾಲುವೆ ಒತ್ತುವರಿಯೇ ಕಾರಣ.

ಒತ್ತುವರಿಯ ಮೇಲೆ ಕಟ್ಟಿರುವ  ಕಟ್ಟಡಗಳ ತೆರವು ಕೆಲಸವನ್ನು ಪಾಲಿಕೆ ಆರಂಭಿಸಿದೆ. ವಿಚಿತ್ರವೆಂದರೆ ಇಂತಹ ಕಟ್ಟಡಗಳಿಗೆ ಪಾಲಿಕೆಯೇ ‘ಎ’ ಖಾತಾ, ಕಟ್ಟಡ ನಿರ್ಮಾಣ ಪೂರ್ಣ ಮಾಡಿದ ಪತ್ರ ಮತ್ತು ವಾಸ ಪ್ರಮಾಣ ಪತ್ರವನ್ನೂ ನೀಡಿದೆ. ಅಂದರೆ ಈ ಬೃಹತ್‌ ಅಕ್ರಮದಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದರ್ಥ.

ನಕ್ಷೆ ಮಂಜೂರು ಮಾಡುವ ಬಿಬಿಎಂಪಿಯ ನಗರ ಯೋಜನೆ ವಿಭಾಗದಲ್ಲೇ ಲೋಪವಿದೆ. ಇಲ್ಲಿ ಅಧಿಕ ಸಂಖ್ಯೆಯಲ್ಲಿ ಎರವಲು ಸೇವೆ ಮೇಲೆ ಬಂದ ನೌಕರರಿದ್ದಾರೆ. ಇವರಿಗೆ ಸೇವಾ ಬದ್ಧತೆಯೇ ಇಲ್ಲದಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೇವಲ ಒತ್ತುವರಿದಾರರನ್ನಷ್ಟೇ ಶಿಕ್ಷಿಸಿದರೆ ಸಾಲದು. ಅಕ್ರಮದಲ್ಲಿ ಪಾಲುದಾರರಾದ ಅಧಿಕಾರಿಗಳನ್ನು ಸಹ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.

ತೆರವು ಕಾರ್ಯದಲ್ಲಿ ಕೊಂಚ ಅನುಕಂಪ ತೋರಬಹುದಾದರೂ ನಿವೇಶನ ಖರೀದಿ ಸಂದರ್ಭದಲ್ಲಿ ಗೋಮಾಳವೇ, ರಾಜಕಾಲುವೆಯೇ ಎಂಬುದನ್ನು ಖರೀದಿ ಮಾಡುವವರೇ ಖಚಿತಪಡಿಸಿಕೊಳ್ಳಬೇಕು. ಇದು ಖರೀದಿದಾರರ ಜವಾಬ್ದಾರಿ ಸಹ. ಇವರು ಕೊಂಚ ಎಡವಿ, ಪರೋಕ್ಷವಾಗಿ ರಾಜಕಾಲುವೆ ಒತ್ತುವರಿಗೆ ಸಹಕಾರ ನೀಡಿದ್ದರಿಂದಲೇ ದಕ್ಷಿಣ ಬೆಂಗಳೂರಿನಲ್ಲಿ ಸುಮಾರು 600 ಮನೆಗಳು ಜಲಾವೃತವಾಗಿ ಕೋಟ್ಯಂತರ ರೂಪಾಯಿ ನಷ್ಟವಾಯಿತು.

ಒತ್ತುವರಿ ಅಕ್ರಮದಲ್ಲಿ ನಿವೇಶನ ಅಭಿವೃದ್ಧಿ ಮಾಡಿದವರು, ಅಧಿಕಾರಿಗಳ ಜೊತೆ ಖರೀದಿದಾರರು ಸಹ ಪಾಲುದಾರರು ಎನ್ನಬಹುದು. ಖರೀದಿ ಮಾಡಿ ಕಟ್ಟಡ ಕಟ್ಟಿದವರಿಗೆ ಶಿಕ್ಷೆ ಆಗುತ್ತಿದೆ. ಕಟ್ಟಡ ನಕ್ಷೆ ಮಂಜೂರು ಮಾಡಿದವರು, ಖಾತಾ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.

ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ಪಟ್ಟಿ ತಯಾರಿಸಿ ವಜಾ ಮಾಡಲು ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಲಾಗಿದೆ. ಇದು ಸಾಧ್ಯವಾದರೆ ಆಡಳಿತದಲ್ಲಿ ಬಿಗಿ ಮೂಡಲು ಸಾಧ್ಯವಾಗುತ್ತದೆ. ಭೂ ಅಭಿವೃದ್ಧಿ ಮಾಡುವವರು ಹಾಗೂ ಅಧಿಕಾರಿಗಳ ಅಕ್ರಮ ನಂಟು ಹಿಂದಿನಿಂದಲೂ ಇದೆ. ಆದರೆ ಶಿಕ್ಷೆ ಮಾತ್ರ ಎಂದೂ ಆಗಿಲ್ಲ.

ಒತ್ತುವರಿ ಜಮೀನಿನಲ್ಲಿ ಕಟ್ಟಿದ ಕಟ್ಟಡ ಒಡೆದರೆ ಸಾಲದು, ಅಕ್ರಮವಾಗಿ ಭೂ ಅಭಿವೃದ್ಧಿ ಮಾಡಿದವರನ್ನು ಗುರುತಿಸಿ ಅವರಿಂದ ಹಣ ವಸೂಲಿ ಮಾಡಿ, ನಿವೇಶನ ಖರೀದಿ ಮಾಡಿದವರಿಗೆ ಹಂಚುವ ದೃಢ ನಿರ್ಧಾರವನ್ನು ಮಾಡಬೇಕು.

ಆಗ ಮಾತ್ರವೇ ಅಸಹಾಯಕರ ಕಣ್ಣೀರನ್ನು ಒರೆಸಿದಂತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಖರೀದಿದಾರರು ಮೋಸ ಹೋಗದಂತೆ ಸರ್ಕಾರಿ ಜಮೀನು, ರಾಜಕಾಲುವೆ, ಗೋಮಾಳದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಬೇಕು. ಇಲ್ಲವಾದರೆ ಭೂಅಕ್ರಮವನ್ನು ಶಾಶ್ವತವಾಗಿ ಕೊನೆಗೊಳಿಸಲು  ಸಾಧ್ಯವಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.