ADVERTISEMENT

ಸಕಾಲಿಕ ತೀರ್ಪು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಕೃಷ್ಣಾ ಕೊಳ್ಳದ ನದಿಗಳ ಹೆಚ್ಚುವರಿ ನೀರು ಹಂಚಿಕೆ ಕುರಿತಂತೆ ಕೃಷ್ಣಾ ನ್ಯಾಯಮಂಡಳಿಯ ತೀರ್ಪಿನ ಅಧಿಸೂಚನೆ ಹೊರಡಿಸದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತುಮಾಡಿದೆ. ತೀರ್ಪಿಗೆ ತಡೆಯಾಜ್ಞೆ ನೀಡಬೇಕೆಂಬ ಆಂಧ್ರ ಸರ್ಕಾರದ ಮನವಿಯನ್ನು ತಳ್ಳಿಹಾಕಿದೆ.

ತೀರ್ಪಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯಿಂದ ವಿವರಣೆ ಕೋರುವುದಕ್ಕೆ ತಡೆಯಾಜ್ಞೆ ನೀಡಬೇಕೆಂಬ ಬೇಡಿಕೆಗೆ ಮಾನ್ಯತೆ ನೀಡಿಲ್ಲ. ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಆಂಧ್ರಪ್ರದೇಶ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅರ್ಜಿಯ ಪ್ರಸ್ತುತತೆಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಪ್ರಶ್ನಿಸಿವೆ.

ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ನ್ಯಾಯಮಂಡಳಿಗೆ ಸಲ್ಲಿಸಿರುವ ಅರ್ಜಿ ಪರಿಶೀಲನೆಯಲ್ಲಿದೆ. ಈ ಹಂತದಲ್ಲಿ ಅಧಿಸೂಚನೆ ಹೊರಡಿಸುವುದು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ತೀರ್ಪು ಸಕಾಲಿಕ ಹಾಗೂ ಸ್ವಾಗತಾರ್ಹ.

ಒಮ್ಮೆ ಅಧಿಸೂಚನೆ ಪ್ರಕಟವಾದರೆ ನೀರು ಹಂಚಿಕೆ ನಿರ್ಧಾರದ ಪರಿಷ್ಕರಣೆಗೆ ಮುಂದಿನ ಮೂವತ್ತು ವರ್ಷಗಳವರೆಗೆ ಅವಕಾಶ ಇರುವುದಿಲ್ಲ. ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಇನ್ನೂ ಅವಕಾಶವಿದೆ ಎಂಬ ಭಾವನೆಗೆ ಸುಪ್ರೀಂಕೋರ್ಟಿನ ತೀರ್ಪು ಪೂರಕವಾಗಿದೆ.

ಕೃಷ್ಣಾ ಕೊಳ್ಳದ ನದಿಗಳಲ್ಲಿ ಲಭ್ಯವಾಗುವ ಹೆಚ್ಚುವರಿ ನೀರನ್ನು ಕರ್ನಾಟಕ ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ 50:25:25ರ ಅನುಪಾತದಲ್ಲಿ ಹಂಚಿಕೆ ಮಾಡಬೇಕು ಎಂದು ಬಚಾವತ್ ಆಯೋಗ ಸ್ಪಷ್ಟವಾಗಿ ಹೇಳಿತ್ತು.

ಆದರೆ ಈ ಹಂಚಿಕೆ ಸೂತ್ರವನ್ನು ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಮಂಡಳಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಬಚಾವತ್ ಆಯೋಗದ ಶಿಫಾರಸಿನಂತೆ ಹಂಚಿಕೆಯಾಗಿದ್ದರೆ, 448 ಟಿಎಂಸಿ ಅಡಿ ಹೆಚ್ಚುವರಿ ನೀರಿನಲ್ಲಿ ಕರ್ನಾಟಕಕ್ಕೆ 224 ಟಿಎಂಸಿ, ಆಂಧ್ರ ಮತ್ತು ಮಹಾರಾಷ್ಟ್ರಗಳಿಗೆ ತಲಾ 112 ಟಿಎಂಸಿ ನೀರು ಸಿಗಬೇಕಿತ್ತು.

ಆದರೆ ನ್ಯಾಯಮಂಡಳಿ ಕರ್ನಾಟಕಕ್ಕೆ 177, ಆಂಧ್ರಕ್ಕೆ 190 ಮತ್ತು ಮಹಾರಾಷ್ಟ್ರಕ್ಕೆ 81 ಟಿಎಂಸಿ ಅಡಿಗಳಂತೆ ಹಂಚಿಕೆ ಮಾಡಿದೆ. ನಿಜವಾಗಿಯೂ ಅನ್ಯಾಯ ಆಗಿರುವುದು ಕರ್ನಾಟಕಕ್ಕೆ. ಆಂಧ್ರಪ್ರದೇಶ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ನೀರು ಸಿಕ್ಕಿದ್ದರೂ ಅದು ತನಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹಾಕುತ್ತಿದೆ.

ಹೆಚ್ಚುವರಿ ನೀರಿನಲ್ಲಿ ರಾಜ್ಯಕ್ಕೆ ಶೇ.50ರಷ್ಟು ಪಾಲು ಸಿಗಬೇಕು. ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ ಮಾತ್ರಕ್ಕೆ ನ್ಯಾಯ ಸಿಗುವುದಿಲ್ಲ. ರಾಜ್ಯದ ನಿಲುವನ್ನು ನ್ಯಾಯಮಂಡಳಿಗೆ ಮನವರಿಕೆ ಮಾಡಿಕೊಟ್ಟು ನ್ಯಾಯಸಮ್ಮತ ಪಾಲು ಪಡೆಯಲು ಪ್ರಯತ್ನಿಸಬೇಕು.

ನ್ಯಾಯ ಮಂಡಳಿಯ ತೀರ್ಪಿನ ಚೌಕಟ್ಟಿನಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ ಎತ್ತರಕ್ಕೆ ಏರಿಸುವುದೂ ಸೇರಿದಂತೆ `ಎ~ಸ್ಕೀಂ ಯೋಜನೆಯ ಪರಿಷ್ಕೃತ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಸಿಂಗಟಾಲೂರು, ಭದ್ರಾ ಮೇಲ್ದಂಡೆ, ರಾಮೇಶ್ವರ, ಬೆಣ್ಣೆಹಳ್ಳ ಏತ ನೀರಾವರಿ, ಕೊಣ್ಣೂರು ಮತ್ತಿತರ 60ಕ್ಕೂ ಹೆಚ್ಚು ಸಣ್ಣಪುಟ್ಟ ನೀರಾವರಿ ಯೋಜನೆಗಳನ್ನು ಮಾಡಿ ಮುಗಿಸಲು ಈಗ ಯಾವುದೇ ಅಡಚಣೆಗಳಿಲ್ಲ.

ರಾಜ್ಯ ಸರ್ಕಾರ ಅನುತ್ಪಾದಕ ಚಟುವಟಿಕೆಗಳಿಗೆ ಹಣ ವೆಚ್ಚ ಮಾಡುವುದನ್ನು ನಿಲ್ಲಿಸಿ, ಇನ್ನಷ್ಟು ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡು ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ಮಾಡಿ ಮುಗಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.