ADVERTISEMENT

ಸಿಬಿಐ ದಕ್ಷತೆಗೆ ಸವಾಲು

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 7:10 IST
Last Updated 3 ಜನವರಿ 2011, 7:10 IST

ದೇಶಾದ್ಯಂತ ಸಂಚಲನ ಉಂಟು ಮಾಡಿದ್ದ ಹದಿಹರಯದ ಬಾಲಕಿ ಆರುಷಿ ಹತ್ಯೆ ಪ್ರಕರಣ ಭೇದಿಸುವುದರಲ್ಲಿ ದೇಶದ ಅಗ್ರಮಾನ್ಯ ತನಿಖಾ ಸಂಸ್ಥೆಯಾದ ಸಿಬಿಐ ವಿಫಲವಾಗಿರುವುದನ್ನು ಒಪ್ಪಿಕೊಳ್ಳಲಾಗದು. ನೋಯ್ಡಾದ ಪ್ರತಿಷ್ಠಿತ ದಂತವೈದ್ಯ ದಂಪತಿ ರಾಜೇಶ್ ತಲ್ವಾರ್- ನೂಪುರ್ ತಲ್ವಾರ್ ಏಕಮಾತ್ರ ಪುತ್ರಿ 14 ವರ್ಷದ ಆರುಷಿ ತನ್ನ ಕೋಣೆಯಲ್ಲಿ 2008ರ ಮೇ 16 ರಂದು ಶವವಾಗಿ ಪತ್ತೆಯಾಗಿದ್ದು ಮತ್ತು ಮರುದಿನ ಮನೆಯ ಸೇವಕ ಹೇಮರಾಜನ ಶವ ಅಪಾರ್ಟ್‌ಮೆಂಟ್‌ನ ಮಹಡಿಯಲ್ಲಿ ಪತ್ತೆಯಾಗಿದ್ದ ಘಟನೆ ಮಾಧ್ಯಮಗಳ ಆದ್ಯತೆಯ ಸುದ್ದಿಯಾಗಿತ್ತು. ಎರಡೂ ಹತ್ಯೆಗಳ ಕುರಿತ ತನಿಖೆಗೆ ಉತ್ತರ ಪ್ರದೇಶ ಪೊಲೀಸರ ವಿಶೇಷ ತಂಡ ರಚಿಸಿದ್ದಾಗ ಆರುಷಿಯ ಹೆತ್ತವರು ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಘಟನೆ ನಡೆದ ಹದಿನೈದು ದಿನಗಳ ನಂತರ (ಜೂನ್ 1ರಂದು) ತನಿಖೆಯ ಹೊಣೆಯನ್ನು ವಹಿಸಿಕೊಂಡಿತ್ತು. ಆ ವೇಳೆಗೆ ಸಿಕ್ಕಿದ ಸುಳಿವುಗಳನ್ನು ಆಧರಿಸಿ ನಡೆಸಿದ ತನಿಖೆ, ಮಾಡಿದ ಬಂಧನ, ಅವರಿಂದ ಪಡೆದ ಹೇಳಿಕೆ, ಸಂಗ್ರಹಿಸಿದ ಮಾಹಿತಿಗಳನ್ನೆಲ್ಲ ಕಲೆಹಾಕಿರುವ ಸಿಬಿಐ, ಇದೀಗ ನಿಜವಾದ ಹಂತಕರನ್ನು ‘ಖಚಿತವಾಗಿ ಹೆಸರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದೆ. ತನಿಖೆಯನ್ನು ಕೈಬಿಡುವುದಾಗಿ ನ್ಯಾಯಾಲಯದ ಮುಂದೆ ವರದಿ ಸಲ್ಲಿಸಿದೆ. ‘ಆರುಷಿಯ ತಂದೆ ರಾಜೇಶ್ ತಲ್ವಾರ್ ಅವರೇ ಇದರಲ್ಲಿ ಏಕೈಕ ಆರೋಪಿ ಎನಿಸುತ್ತದೆ; ಆದರೆ ಹಾಗೆಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ’ ಎಂದು ಕೈ ಚೆಲ್ಲಿದೆ.

ಸಿಬಿಐ ತನಿಖೆ ಕೈಗೆತ್ತಿಕೊಳ್ಳುವ ವೇಳೆಗೆ ಹತ್ಯೆ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಕಲೆಹಾಕುವುದರಲ್ಲಿ ಉತ್ತರ ಪ್ರದೇಶ ಪೊಲೀಸರು ವಿಫಲವಾಗಿದ್ದುದು ಈ ಪ್ರಕರಣದಲ್ಲಿ ಕಂಡು ಬಂದ ಪ್ರಮುಖ ಲೋಪ. ಈ ಲೋಪಕ್ಕೆ ಯಾರನ್ನೂ ಹೊಣೆ ಮಾಡಿಲ್ಲದಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ. ಇದುವರೆಗೆ ನಡೆಸಿದ ತನಿಖೆಯಲ್ಲಿ ಕಂಡು ಬಂದ ‘ಸಾಂದರ್ಭಿಕ ಸಾಕ್ಷ್ಯ’ಗಳ ಆಧಾರದಲ್ಲಿ ಆರೋಪಿಯತ್ತ ಸಂಶಯದ ದೃಷ್ಟಿ ಹರಿಸಬಹುದೇ ಹೊರತು ನಿರ್ದಿಷ್ಟವಾಗಿ ಹೆಸರಿಸಲಾಗುತ್ತಿಲ್ಲ ಎಂದು ತನಿಖೆಯ ಪ್ರಕ್ರಿಯೆಯನ್ನೇ ಮುಕ್ತಾಯಗೊಳಿಸುವುದು ಸಿಬಿಐ ವ್ಯಾಪ್ತಿಯನ್ನು ಮೀರಿದ ನಿಲುವು. ಸಾಕ್ಷ್ಯಗಳು ನಿಖರವಾಗಿವೆಯೋ, ಸಾಂದರ್ಭಿಕವಾಗಿವೆಯೋ ಎಂಬುದನ್ನು ತೀರ್ಮಾನಿಸುವ ಜವಾಬ್ದಾರಿ ನ್ಯಾಯಾಲಯದ್ದೇ ವಿನಾ ತನಿಖಾ ತಂಡದ್ದಲ್ಲ. ಪ್ರಕರಣದ ಮರುತನಿಖೆ ನಡೆಸುವಂತೆ ಕೇಂದ್ರದ ಕಾನೂನು ಸಚಿವರು ಸಿಬಿಐ ನಿರ್ದೇಶಕರಿಗೆ ಸೂಚಿಸಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದ್ದು ಅದರ ದೌರ್ಬಲ್ಯಕ್ಕೆ ಕನ್ನಡಿ ಹಿಡಿದಂತಾಗಿದೆ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐನಿಂದ ಇಂಥ ದುರ್ಬಲ ವಿಚಾರಣೆಯನ್ನು ಜನತೆ ನಿರೀಕ್ಷಿಸುವುದಿಲ್ಲ. ಈ ಪ್ರಕರಣದಲ್ಲಿ ಆರಂಭದಲ್ಲಿ ಶಂಕಿಸಲಾಗಿದ್ದ ಕೆಲಸದ ಆಳುಗಳು ಹಂತಕರಲ್ಲವೆಂದು ಖಚಿತವಾಗಿ ಹೇಳಿರುವ ಸಿಬಿಐ, ಮುಖ್ಯ ಆರೋಪಿಗೆ ಸಂಶಯದ ಲಾಭವನ್ನು ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಇಂಥ ಕ್ರಮದಿಂದ ತನಿಖಾ ಸಂಸ್ಥೆಗಳ ಬಗ್ಗೆ ಜನತೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬರುತ್ತದೆ. ಸಿಬಿಐ ಈ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ನಿಜವಾದ ಹಂತಕರನ್ನು ಕಾನೂನುಕ್ರಮಕ್ಕೆ ಒಳಪಡಿಸದೆ ಪಲಾಯನ ಮಾಡುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT