ADVERTISEMENT

ಅಲ್ಪಸಂಖ್ಯಾತರಿಗೆ ಶಿಕ್ಷಣ–ಉದ್ಯೋಗ ಎನ್‌ಡಿಎ ನಡೆ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 19:45 IST
Last Updated 14 ಜೂನ್ 2019, 19:45 IST
   

ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಕೇಂದ್ರದಲ್ಲಿ ಎರಡನೆಯ ಬಾರಿಗೆ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಯೋಜನೆಗಳನ್ನು ಘೋಷಿಸಿದೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಎನ್‌ಡಿಎ ಸಂಸದರ ಸಭೆಯಲ್ಲಿ ಮೋದಿ ಅವರು, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಸಂದೇಶ ರವಾನಿಸಿದ್ದಾರೆ.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎನ್ನುವ ಮಾತುಗಳನ್ನು ಮೋದಿ ಅವರು ಮೊದಲ ಸಲ ಅಧಿಕಾರಕ್ಕೆ ಬಂದಾಗ ಹೇಳಿದ್ದರು. ‘ಸಬ್ ಕಾ ವಿಶ್ವಾಸ್’ ಎಂಬುದನ್ನು ಹೊಸದಾಗಿ ಜೋಡಿಸಿದ್ದಾರೆ. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಘೋಷಣೆ ಮಾಡಿರುವ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಒಟ್ಟು ಐದು ಕೋಟಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿವೆ ಎನ್ನಲಾದ ಯೋಜನೆಗಳು, ‘ಸಬ್ ಕಾ ವಿಶ್ವಾಸ್’ ಎನ್ನುವ ಮೋದಿಯವರ ಮಾತಿಗೆ ಪೂರಕವಾಗಿವೆ.

‘ಶಿಕ್ಷಣವನ್ನು ಮೊಟಕುಗೊಳಿಸಿದ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳಿಗೆ ಮತ್ತೆ ಶಿಕ್ಷಣ ಕೊಡಿಸಿ, ಅವರು ಉದ್ಯೋಗಕ್ಕೆ ಸೇರಲು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ನೆರವು ಪಡೆಯಲಾಗುವುದು. ಮದರಸಾಗಳ ಶಿಕ್ಷಕರಿಗೆ ಕಂಪ್ಯೂಟರ್‌ ವಿಜ್ಞಾನದಂತಹ ಆಧುನಿಕ ವಿಷಯಗಳಲ್ಲಿ ತರಬೇತಿ ನೀಡಲಾಗುವುದು’ ಎಂದು ನಖ್ವಿ ಹೇಳಿದ್ದಾರೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿದ್ಯಾರ್ಥಿ ವೇತನಗಳು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡಿವೆ.

ADVERTISEMENT

‘ಶಿಕ್ಷಣ ಹಾಗೂ ಉದ್ಯೋಗದ ಬಗ್ಗೆ ಮುಸ್ಲಿಮರಲ್ಲಿ, ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಭಿಯಾನವೊಂದನ್ನು ನಡೆಸಲಾಗುವುದು. ಅಲ್ಪಸಂಖ್ಯಾತರ ಪೈಕಿ ಆರ್ಥಿಕ ದುರ್ಬಲ ಗುಂಪುಗಳಿಗೆ ಸೇರಿದವರಿಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ, ರೈಲ್ವೆ ಪರೀಕ್ಷೆಗಳಿಗೆ, ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ತರಬೇತಿ ನೀಡಲಾಗುವುದು’ ಎಂದೂ ನಖ್ವಿ ಹೇಳಿದ್ದಾರೆ. ಅವರು ಘೋಷಿಸಿರುವ ಕಾರ್ಯಕ್ರಮಗಳೆಲ್ಲ ಶಿಕ್ಷಣದ ಜೊತೆ ನೇರವಾಗಿ ಬೆಸೆದು
ಕೊಂಡಿರುವ ಕಾರಣದಿಂದ ಸ್ವಾಗತಾರ್ಹವೇ ಆಗಿವೆ.

ಜ್ಞಾನ ಆಧಾರಿತ ಸಮಾಜದಲ್ಲಿ ಶಿಕ್ಷಣ ಹಾಗೂ ಸಮುದಾಯದ ಅಭಿವೃದ್ಧಿಯ ನಡುವೆ ನೇರ ನಂಟು ಇದೆ ಎನ್ನುವುದು ಸಾಬೀತಾದ ಸತ್ಯ. ಮುಸ್ಲಿಮರು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ರಚಿಸಲಾಗಿದ್ದ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ನೇತೃತ್ವದ ಸಮಿತಿ ಸ್ಪಷ್ಟವಾಗಿ ಗುರುತಿಸಿದೆ. ಆ ವರದಿಯ ಹಲವು ಶಿಫಾರಸುಗಳನ್ನು ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಮೋದಿ ನೇತೃತ್ವದ ಸರ್ಕಾರ ಈಗ ಘೋಷಿಸಿರುವ ವಿದ್ಯಾರ್ಥಿ ವೇತನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವುದು... ಇವನ್ನೆಲ್ಲ ಸಾಚಾರ್ ಸಮಿತಿಯ ಕೆಲವು ಶಿಫಾರಸುಗಳ ಅನುಷ್ಠಾನದ ಭಾಗವಾಗಿಯೂ ಗ್ರಹಿಸಬಹುದು.

ಈ ನೆಲೆಯಲ್ಲಿ ಕೂಡ ಹೊಸ ಯೋಜನೆಗಳು ಯುಕ್ತವೂ, ಸಮಯೋಚಿತವೂ ಆಗಿವೆ. ಆದರೆ, ಭಾರತದ ರಾಜಕೀಯ ಸಂದರ್ಭದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಬಿಜೆಪಿ ನಡುವಣ ಸಂಬಂಧವು ಚರ್ಚೆಗೆ ಬಂದಾಗಲೆಲ್ಲ, ‘ಬಹುಸಂಖ್ಯಾತವಾದದ ರಾಷ್ಟ್ರೀಯತೆ, ಬಹುಸಂಖ್ಯಾತವಾದದ ರಾಜಕೀಯ’ ಕುರಿತು ಉಲ್ಲೇಖ ಬರುತ್ತದೆ. ಅದಕ್ಕೆ ಒಂದು ಕಾರಣ, ಬಿಜೆಪಿ ಹಾಗೂ ಅದರ ಹಲವು ಮುಖಂಡರ ಇದುವರೆಗಿನ ನಡೆ–ನುಡಿ ನಡುವಣ ವ್ಯತ್ಯಾಸ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಕಾರಣದಿಂದಾಗಿಯೇ, ಮೋದಿ ನೇತೃತ್ವದ ಸರ್ಕಾರ ಈಗ ಘೋಷಿಸಿರುವ ಯೋಜನೆಗಳ ಕುರಿತು ‘ಬಿಜೆಪಿಯು ಅಲ್ಪಸಂಖ್ಯಾತರ ವಿಶ್ವಾಸ ಗಳಿಸುವ ಯತ್ನದ ಒಂದು ಭಾಗ’ ಎಂಬ ವಿಶ್ಲೇಷಣೆಗಳು ಬಂದಿವೆ.

ಧಾರ್ಮಿಕ ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವ ಹೊತ್ತಿನಲ್ಲೇ, ಧಾರ್ಮಿಕ ಅಲ್ಪಸಂಖ್ಯಾತರು ಶಾಸನಸಭೆಗಳಲ್ಲಿ ಹೊಂದಿರುವ ಪ್ರಾತಿನಿಧ್ಯದ ಬಗ್ಗೆಯೂ ದೇಶ ಗಂಭೀರ ಚಿಂತನೆ ನಡೆಸಬೇಕಿದೆ. ಏಕೆಂದರೆ, ಈ ಬಾರಿಯ ಲೋಕಸಭೆಯಲ್ಲಿ ಮುಸ್ಲಿಂ ಪ್ರತಿನಿಧಿಗಳ ಸಂಖ್ಯೆ ಬರೀ 27 ಮತ್ತು ಲೋಕಸಭೆಯ ಒಟ್ಟು ಸದಸ್ಯ ಬಲದ ಶೇ 5ರಷ್ಟು. ಹಾಗೆ ನೋಡಿದರೆ ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೂ ಸಂಸತ್ತಿನಲ್ಲಿ ಪ್ರಾತಿನಿಧ್ಯ ಬಹಳ ಕಡಿಮೆಯೇ ಇದೆ.ದೇಶದ ಸಾಮೂಹಿಕ ಪ್ರಜ್ಞೆಯ ಸಂಕೇತದಂತೆ ಇರುವ ಸಂಸತ್ತಿನಲ್ಲಿ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಆಗಮಾತ್ರ ‘ಸಬ್ ಕಾ ವಿಶ್ವಾಸ್’ ಎನ್ನುವ ಮಾತು ಹೆಚ್ಚು ಅರ್ಥಪೂರ್ಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.