ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಇರುವ ಬಿ–ಖಾತಾ ಆಸ್ತಿಗಳನ್ನು ಕಾನೂನಿನ ಚೌಕಟ್ಟಿನ ಅಡಿ ತರುವ ರಾಜ್ಯ ಸರ್ಕಾರದ ನಡೆಯು ಪ್ರಗತಿಪರವಾದುದು ಎಂದು ಬಿಂಬಿಸಲಾಗುತ್ತಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಇರುವ, ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿರದ ಆಸ್ತಿಗಳ ವಿಚಾರದಲ್ಲಿ ಸ್ಪಷ್ಟತೆಯನ್ನು ತರಲು ಹಾಗೂ ಅವುಗಳ ಮೇಲೆ ಆಡಳಿತಾತ್ಮಕ ನಿಯಂತ್ರಣ ಸಾಧಿಸಲು ಇದು ಅಗತ್ಯವಾಗಿದ್ದ ಕ್ರಮ ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲಿ ಕಟುಸತ್ಯವೊಂದನ್ನು ಹೇಳಬೇಕಾಗಿದೆ: ಬೇರೆ ಬೇರೆ ಪಕ್ಷಗಳ ನೇತೃತ್ವದ ಸರ್ಕಾರಗಳು ತಮ್ಮ ನಿಷ್ಕ್ರಿಯತೆಯ ಮೂಲಕ ಹಾಗೂ ಕಾನೂನು ಉಲ್ಲಂಘನೆಯಲ್ಲಿ ಕೈಜೋಡಿಸುವ ಮೂಲಕ ಈ ಗೋಜಲನ್ನು ಸೃಷ್ಟಿಸಿವೆ. ಕಂದಾಯ ಜಮೀನಿನಲ್ಲಿ ಕಟ್ಟಡಗಳು ನಿರ್ಮಾಣ ಆಗುತ್ತಿರುವುದರ ಬಗ್ಗೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದರು. ಇಂತಹ ನಿರ್ಮಾಣಗಳಿಗೆ ಹಲವು ಸಂದರ್ಭಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಒಪ್ಪಿಗೆ ಇತ್ತು ಹಾಗೂ ರಾಜಕೀಯ ನಾಯಕರ ಆಶೀರ್ವಾದ ಕೂಡ ಇತ್ತು. ಅಗತ್ಯ ಅನುಮೋದನೆಗಳನ್ನು ಪಡೆದುಕೊಳ್ಳದ ಆಸ್ತಿಗಳನ್ನು ಕೂಡ ನೋಂದಣಿ ಮಾಡಿಸಿಕೊಳ್ಳಲಾಯಿತು, ಅವುಗಳಿಂದ ಮುದ್ರಾಂಕ ಶುಲ್ಕವನ್ನು ಸಂಗ್ರಹಿಸಲಾಯಿತು. ಹೀಗೆ ಮಾಡಿದ್ದರಿಂದಾಗಿ ಲಕ್ಷಾಂತರ ಮಂದಿಗೆ ತಾವು ಮಾಡಿರುವ ಆಸ್ತಿ ಖರೀದಿಗಳು ಸಕ್ರಮ ಎಂಬ ಭಾವನೆ ಮೂಡುವಂತೆ ಆಯಿತು. ಈಗ ಗೋಜಲುಗಳನ್ನೆಲ್ಲ ಸರಿಪಡಿಸುವುದಾಗಿ ಸರ್ಕಾರ ಹೇಳಿದೆ. ಈ ಪರಿಷ್ಕರಣೆಯನ್ನು ಬೆಂಗಳೂರಿಗೆ ಸೀಮಿತವಾಗಿ ಮಾಡಲು ಮುಂದಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಿಸಲು ಅನುವು ಮಾಡಿಕೊಟ್ಟಿರುವ ಬಡಾವಣೆಗಳಲ್ಲಿ ಇರುವ ಲಕ್ಷಾಂತರ ಸಂಖ್ಯೆಯ ಆಸ್ತಿಗಳ ಕತೆ ಏನು? ಇಲ್ಲೆಲ್ಲ ಆಸ್ತಿ ಖರೀದಿಸಿದವರ ವಿಚಾರವಾಗಿ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದೇ?
ಸರ್ಕಾರವು ಈಗ ಪ್ರಸ್ತಾಪಿಸಿರುವ ಕಾನೂನಿನ ಚೌಕಟ್ಟು, ಬೆಂಗಳೂರಿನ ಬಿ–ಖಾತಾ ಆಸ್ತಿಗಳಿಗೆ ಕಾನೂನಿನ ಅಡಿ ಮಾನ್ಯತೆ ನೀಡುವಂತೆ ಇದೆ. ಇಂತಹ ಆಸ್ತಿಗಳ ಮಾಲೀಕರು ಕಟ್ಟಡ ಯೋಜನೆಗೆ ಅನುಮೋದನೆ ಪಡೆಯಬಹುದು, ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯಬಹುದು, ನಿರ್ದಿಷ್ಟ ಷರತ್ತುಗಳನ್ನು ಪೂರೈಸಿದರೆ ತಮ್ಮ ಆಸ್ತಿಗಳನ್ನು ಎ–ಖಾತಾ ಆಗಿ ಪರಿವರ್ತನೆ ಮಾಡಿಕೊಳ್ಳಬಹುದು. ಇದರಿಂದಾಗಿ ಆಸ್ತಿಗಳ ಮಾಲೀಕರಿಗೆ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ, ಆಸ್ತಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡಲು ಆಗುತ್ತದೆ. ಇಂತಹ ಅವಕಾಶಗಳು ಅವರಿಗೆ ಇದುವರೆಗೆ ಇರಲಿಲ್ಲ. ಹೀಗಿದ್ದರೂ ಸರ್ಕಾರದ ಈ ನೀತಿಯು ತೀರಾ ನ್ಯಾಯಸಮ್ಮತವಾಗಿದೆ ಎಂದು ಹೇಳಲಾಗುವುದಿಲ್ಲ. ‘ಜಿಬಿಎ’ ವ್ಯಾಪ್ತಿಯ ಆಚೆಗಿನ ಆಸ್ತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವ ಮೂಲಕ ರಾಜ್ಯ ಸರ್ಕಾರವು ಬೇರೆಡೆಗಳಲ್ಲಿ ಆಸ್ತಿಗಳ ಮೇಲೆ ಸದಾಶಯದೊಂದಿಗೆ ಹೂಡಿಕೆ ಮಾಡಿದ ಮಧ್ಯಮ ವರ್ಗದವರನ್ನು ಶಿಕ್ಷಿಸುವ ಕೆಲಸ ಮಾಡುತ್ತಿದೆ. ಬೇರೆಡೆ ಆಸ್ತಿ ಖರೀದಿಸಿದವರು ಕೂಡ ದಾಖಲೆಗಳಲ್ಲಿ ಇರುವ ಸರ್ಕಾರದ ಮುದ್ರೆಯನ್ನು ಪರಿಗಣಿಸಿ, ಅದನ್ನು ನಂಬಿಯೇ ವಹಿವಾಟು ನಡೆಸಿದ್ದರು ಎಂಬುದನ್ನು ಮರೆಯಬಾರದು. ಅಲ್ಲದೆ, ಜೀವನಪರ್ಯಂತ ದುಡಿದು ಉಳಿಸಿದ ಹಣವನ್ನು ಬಳಸಿ ಆಸ್ತಿ ಖರೀದಿಸಿದವರಿಗೆ ಶಿಕ್ಷೆ ನೀಡಿ, ಕಾನೂನು ಉಲ್ಲಂಘನೆಯನ್ನು ಉತ್ತೇಜಿಸಿದ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ ಎಂದು ಹೇಳುವುದು ನ್ಯಾಯದ ಅಣಕವಲ್ಲವೇ?
ಸರ್ಕಾರವು ತನ್ನ ಮಾತುಗಳಲ್ಲಿ ‘ಸಕ್ರಮ’ ಎಂಬ ಪದವನ್ನು ಬಳಕೆ ಮಾಡದೆ ಎಚ್ಚರಿಕೆಯ ನಡೆಯೊಂದನ್ನು ಇರಿಸಿರುವಂತಿದೆ. ಆದರೆ, ಪರಿಣಾಮದಲ್ಲಿ ಸರ್ಕಾರ ಮಾಡುತ್ತಿರುವುದು ಆಯ್ದ ಕೆಲವನ್ನು ‘ಸಕ್ರಮ’ಗೊಳಿಸುವ ಕೆಲಸವನ್ನೇ. ನಿರ್ಮಾಣ ಚಟುವಟಿಕೆಗಳಲ್ಲಿ ಶಿಸ್ತನ್ನು ತರುವುದು, ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಸರ್ಕಾರದ ಇರಾದೆ ಆಗಿದ್ದರೆ, ರಾಜ್ಯದ ಎಲ್ಲೆಡೆ ಕಂದಾಯ ಜಮೀನಿನಲ್ಲಿ ಇರುವ ಬಡಾವಣೆಗಳಿಗೂ ಇದನ್ನು ವಿಸ್ತರಿಸಬೇಕು. ಅಕ್ರಮ ನಡೆಯುವಲ್ಲಿ ಸರ್ಕಾರದ ಅಧಿಕಾರಿಗಳ ಪಾತ್ರ ಎಲ್ಲೆಲ್ಲಿ ಇತ್ತೋ, ಅಲ್ಲೆಲ್ಲ ಈ ಸೌಲಭ್ಯ ಅನ್ವಯವಾಗಬೇಕು. ಆಸ್ತಿಯನ್ನು ಖರೀದಿಸಿ, ಕಾನೂನಿಗೆ ಅನುಗುಣವಾಗಿ ಅದನ್ನು ನೋಂದಣಿ ಮಾಡಿಸಿದವರು ಸಂಕಷ್ಟಕ್ಕೆ ಸಿಲುಕಬಾರದು. ಏಕೆಂದರೆ, ತಾನೇ ರೂಪಿಸಿದ ಕಾನೂನನ್ನು ಪಾಲಿಸದ ವ್ಯವಸ್ಥೆಯೊಂದರಿಂದ ತಪ್ಪುದಾರಿಗೆ ಎಳೆಯಲಾದ ನಾಗರಿಕರು ಅವರು. ಸರ್ಕಾರವು ಇಡೀ ಪ್ರಕ್ರಿಯೆಯನ್ನು ಔದಾರ್ಯದ ಕ್ರಮ ಎಂಬ ರೀತಿಯಲ್ಲಿ ಭಾವಿಸಬಾರದು. ಅದರ ಬದಲಿಗೆ, ವ್ಯವಸ್ಥೆಯಲ್ಲಿನ ವೈಫಲ್ಯವನ್ನು ಸರಿಪಡಿಸುವ ಹಾಗೂ ಸಾರ್ವಜನಿಕರಲ್ಲಿ ಮತ್ತೆ ವಿಶ್ವಾಸ ಮೂಡಿಸುವ ಕ್ರಮವನ್ನಾಗಿ ಇದನ್ನು ಕಾಣಬೇಕು. ಹೊಸ ಘೋಷಣೆಯು ಕಾನೂನಿಗೆ ಅನುಗುಣವಾಗಿ, ಪಾರದರ್ಶಕವಾಗಿ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳುವ ಹೊಣೆಯು ಈಗ ಸರ್ಕಾರದ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.