ADVERTISEMENT

ಸಂಪಾದಕೀಯ: ಮುಡಾ ಪ್ರಕರಣದಲ್ಲಿ ‘ಬಿ’ ವರದಿ; ಸಿದ್ದರಾಮಯ್ಯ ಸದ್ಯಕ್ಕೆ ನಿರಾಳ

ಸಂಪಾದಕೀಯ
Published 24 ಫೆಬ್ರುವರಿ 2025, 0:17 IST
Last Updated 24 ಫೆಬ್ರುವರಿ 2025, 0:17 IST
.
.   

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೋಷಮುಕ್ತಗೊಳಿಸಿದ್ದಾರೆ. ಇದು ಬಹಳ ಮಹತ್ವದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಬಲ ತುಂಬುವ ರೀತಿಯಲ್ಲಿ ಒದಗಿಬಂದಿದೆ. ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ‍ಪಾರ್ವತಿ ಮತ್ತು ಪಾರ್ವತಿ ಅವರ ಸಹೋದರ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಭ್ರಷ್ಟಾಚಾರ ಎಸಗಿದ್ದಾರೆ, ಅಕ್ರಮ ನಡೆಸಿದ್ದಾರೆ ಎಂಬ ಆರೋಪಗಳನ್ನು ಲೋಕಾಯುಕ್ತ ಪೊಲೀಸ್ ವರದಿಯು ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದಾಗಿ ತಳ್ಳಿಹಾಕಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬುದರ ಕುರಿತಾದ ಊಹಾಪೋಹಗಳು, ಡಿ.ಕೆ. ಶಿವಕುಮಾರ್ ಜೊತೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಮಾತುಕತೆ ಕುರಿತ ಚರ್ಚೆಗಳು ಬಿರುಸು ಪಡೆದುಕೊಂಡಿರುವ ಸಂದರ್ಭದಲ್ಲಿಯೇ ಲೋಕಾಯುಕ್ತ ಪೊಲೀಸರು ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವರದಿ ಸಲ್ಲಿಕೆಯಾಗಿರುವ ಸಂದರ್ಭವು ಸಿದ್ದರಾಮಯ್ಯ ಅವರ ಪಾಲಿಗೆ ಬಹಳ ಅನುಕೂಲಕರವಾಗಿರುವಂತೆ ಕಾಣುತ್ತಿದೆ. 2023ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆಯಾದಾಗಿ ನಿಂದಲೂ ಮೊದಲ ಎರಡೂವರೆ ವರ್ಷಗಳ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ, ನಂತರದ ಎರಡೂವರೆ ವರ್ಷಗಳ ಅವಧಿಗೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಮತ್ತೆ ಮತ್ತೆ ಕೇಳಿಸಿವೆ. ಇದು, ರಾಜ್ಯ ರಾಜಕಾರಣದಲ್ಲಿ ಒಂದಿಷ್ಟು ಮುಸುಕಿನ ಗುದ್ದಾಟಗಳಿಗೂ ತೆರೆಮರೆಯ ಕಸರತ್ತುಗಳಿಗೂ ಕಾರಣವಾಗಿದೆ.

ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಶಾಸಕರು ತಮ್ಮ ರಾಜಕೀಯ ಲೆಕ್ಕಾಚಾರಗಳಿಗೆ ಅನುಗುಣವಾಗಿ ಬೇರೆ ಬೇರೆ ಗುಂಪುಗಳ ಜೊತೆ ಗುರುತಿಸಿಕೊಳ್ಳುವ ಯತ್ನ ನಡೆಸಿದ್ದಿದೆ. ಲೋಕಾಯುಕ್ತ ಪೊಲೀಸರ ವರದಿಯು ಸಿದ್ದರಾಮಯ್ಯ ಅವರಿಗೆ ಪೂರಕವಾಗಿ ಇಲ್ಲದೇ ಇದ್ದಿದ್ದರೆ, ಆಡಳಿತಾರೂಢ ಪಕ್ಷದಲ್ಲಿನ ಬೆಳವಣಿಗೆಗಳ ಮೇಲೆ ಅದು ಪರಿಣಾಮ ಬೀರುವ ಸಾಧ್ಯತೆ ಇತ್ತು ಎಂಬುದು ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿ ಇರಿಸಿಕೊಂಡು ಸಂದರ್ಭವನ್ನು ಗ್ರಹಿಸಿದರೆ ಅರ್ಥವಾಗುತ್ತದೆ.

ADVERTISEMENT

ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರ ವರದಿಯು ನೀಡಿರುವುದು ತಾತ್ಕಾಲಿಕವಾದ ಸಮಾಧಾನವನ್ನು ಮಾತ್ರ. ಏಕೆಂದರೆ, ಸಿದ್ದರಾಮಯ್ಯ ಅವರಿಗೆ ಎದುರಾಗಿರುವ ಸಮಸ್ಯೆಗಳು ಈ ವರದಿಯ ಕಾರಣದಿಂದಾಗಿ ಕೊನೆಗೊಳ್ಳುವ ಸಾಧ್ಯತೆ ಕಡಿಮೆ. ಮುಂದಿನ ದಿನಗಳಲ್ಲಿ ಅವರು ಮುಡಾ ವಿಚಾರವಾಗಿಯೇ ಹಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಪ್ರಕರಣದಲ್ಲಿ ಹಣದ ಅಕ್ರಮ ವರ್ಗಾವಣೆ ಆಗಿದೆಯೇ ಎಂಬ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ. ಅಂದರೆ ಸಿದ್ದರಾಮಯ್ಯ ಅವರ ಮೇಲೆ ಕಾನೂನಿನ ತೂಗುಗತ್ತಿ ಇನ್ನೂ ಇದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯು ‘ನಿರೀಕ್ಷಿತ’ ಹಾಗೂ ‘ಪಕ್ಷಪಾತಿ’ ಎಂದು ಬಿಜೆಪಿ ಹೇಳಿದೆ. ಸಿದ್ದರಾಮಯ್ಯ ವಿರುದ್ಧದ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ಅದು ಸ್ಪಷ್ಟಪಡಿಸಿದೆ. ವಿಚಾರಣಾ ನ್ಯಾಯಾಲಯವು ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯನ್ನು ತಿರಸ್ಕರಿಸಿ, ಹೊಸದಾಗಿ ತನಿಖೆ ನಡೆಸುವಂತೆ ಸೂಚಿಸಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯಲು ಆಗದು. ವರದಿಗೆ ಆಕ್ಷೇಪ ಸಲ್ಲಿಸುವುದಾಗಿ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಆ ಮೂಲಕ ಅವರು ಕಾನೂನು ಸಮರ ಕೊನೆಗೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದಂತಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ಅರ್ಜಿಯೊಂದನ್ನು ಹೈಕೋರ್ಟ್‌ ಈಚೆಗೆ ವಜಾಗೊಳಿಸಿದ್ದು ಇಲ್ಲಿ ಉಲ್ಲೇಖನೀಯ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಹಲವು ವರ್ಷಗಳಿಂದಲೂ ವಿವಾದಗಳಿಗೆ ಆಹಾರವಾಗಿದೆ. ಅಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಕಾಣದ ಕೈಗಳ ಪ್ರಭಾವ ಇದೆ ಎಂಬ ಆರೋಪಗಳು ಇವೆ. ಭ್ರಷ್ಟಾಚಾರದ ವಿಸ್ತೃತ ಆಯಾಮದ ಕುರಿತಾಗಿ ತನಿಖೆ ಮುಂದುವರಿಯಲಿದೆ ಎಂದು ಲೋಕಾಯುಕ್ತ ಪೊಲೀಸರ ವರದಿಯು ಸ್ಪಷ್ಟಪಡಿಸಿದೆ. ತಪ್ಪು ಮಾಡಿದವರು ಯಾವುದೇ ಪಕ್ಷದಲ್ಲಿ ಇರಲಿ, ಅವರನ್ನು ಗುರುತಿಸಿ, ಉತ್ತರದಾಯಿ ಆಗಿಸಿದಾಗ ಮಾತ್ರವೇ ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕರ ವಿಶ್ವಾಸವನ್ನು ಗಳಿಸಬಹುದು. ಅಲ್ಲದೆ, ಮುಂದೆ ಇಂತಹ ಅಕ್ರಮಗಳು ನಡೆಯಬಾರದು ಎಂದಾದರೆ, ಈಗ ಆಗಿರುವ ತಪ್ಪುಗಳಿಗೆ ಯಾರು ಕಾರಣ ಎಂಬುದು ಗೊತ್ತಾಗಬೇಕು. ಸಿದ್ದರಾಮಯ್ಯ ಅವರು ಈಗ ‘ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು’ ಎಂದು ಸಮಾಧಾನಪಟ್ಟುಕೊಳ್ಳಬಹುದು. ಆದರೆ, ಈ ಸಮಾಧಾನವು ತಾತ್ಕಾಲಿಕವೋ ಶಾಶ್ವತವೋ ಎನ್ನುವುದನ್ನು ಈಗಲೇ ಹೇಳಲಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.