ಆನ್‌ಲೈನ್ ಬೆಟ್ಟಿಂಗ್ ನಿಷೇಧಕ್ಕೆ ಕಾನೂನು ರೂಪಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಜನಸಾಮಾನ್ಯರನ್ನು ಆರ್ಥಿಕ ಅಪಾಯಗಳಿಂದ ಪಾರು ಮಾಡುವಂತಹದ್ದು. ಗೇಮಿಂಗ್ ಹಾಗೂ ಬೆಟ್ಟಿಂಗ್ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ನಡೆಯುವ ಜೂಜನ್ನು ನಿರ್ಬಂಧಿಸಬೇಕೆನ್ನುವ ಸಾರ್ವಜನಿಕರ ಒತ್ತಾಯಕ್ಕೆ ಸರ್ಕಾರ ವಿಳಂಬವಾಗಿಯಾದರೂ ಸ್ಪಂದಿಸಿದೆ. ವಿದ್ಯಾರ್ಥಿಗಳು ಹಾಗೂ ಯುವಜನರನ್ನೂ ಒಳಗೊಂಡಂತೆ ಬಹು ದೊಡ್ಡ ಜನಸಮೂಹ ಆನ್‌ಲೈನ್ ಬೆಟ್ಟಿಂಗ್ ವ್ಯಸನಕ್ಕೆ ಒಳಗಾಗಿದೆ. ಆನ್‌ಲೈನ್ ಗೇಮಿಂಗ್‌ನ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲೊಂದಾಗಿರುವ ಭಾರತದಲ್ಲಿ, ಸುಮಾರು 50 ಕೋಟಿಗೂ ಹೆಚ್ಚು ಜನ ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆನ್‌ಲೈನ್ ಜೂಜಿನಲ್ಲಿ ಹಣ ಕಳೆದುಕೊಂಡವರು ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟಿವೆ. ಯುವಕನೊಬ್ಬ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ₹18 ಲಕ್ಷ ಕಳೆದುಕೊಂಡು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಿಂದ ಕಳೆದ ವಾರವಷ್ಟೇ ವರದಿಯಾಗಿದೆ. ಆನ್‌ಲೈನ್ ಜೂಜಿಗೆ ಅವಕಾಶ ಕಲ್ಪಿಸುವ ಅಂತರ್ಜಾಲ ತಾಣಗಳು ಹಾಗೂ ಆ್ಯಪ್‌ಗಳನ್ನು ನಿರ್ಬಂಧಿಸಬೇಕು ಎನ್ನುವ ಚರ್ಚೆ ಇತ್ತೀಚೆಗೆ ಸಂಸತ್ತಿನಲ್ಲಿ ನಡೆದಿತ್ತು. ಆ ಚರ್ಚೆಯ ಸಂದರ್ಭದಲ್ಲಿ, ಆನ್‌ಲೈನ್ ಬೆಟ್ಟಿಂಗ್ ನಿರ್ಬಂಧ ರಾಜ್ಯಪಟ್ಟಿಯಲ್ಲಿ ಬರುವ ವಿಚಾರವಾಗಿದ್ದು, ರಾಜ್ಯಗಳ ಮಟ್ಟದಲ್ಲೇ ಕಾನೂನು ತರಬೇಕು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ಹೇಳಿದ್ದರು. ರಾಜ್ಯಗಳ ಹಂತದಲ್ಲೂ ಆನ್‌ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ನಿರ್ಬಂಧಿಸುವ ಪ್ರಯತ್ನಗಳು ನಡೆದಿವೆ. ತೆಲಂಗಾಣದಲ್ಲಿ ಆನ್‌ಲೈನ್ ಗೇಮಿಂಗ್ ನಿಷೇಧಿಸಲಾಗಿದೆ.
ತಮಿಳುನಾಡಿನಲ್ಲೂ ಆನ್‌ಲೈನ್ ಗೇಮಿಂಗ್ ನಿರ್ಬಂಧದ ಪ್ರಯತ್ನಗಳು ನಡೆದಿವೆ. ಪ್ರಸ್ತುತ, ಆನ್‌ಲೈನ್ ಬೆಟ್ಟಿಂಗ್‌ಗೆ ನಿಷೇಧ ಹೇರುವ ಉದ್ದೇಶದ ‘ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ– 2025’ರ ಕರಡು ಸಿದ್ಧಗೊಂಡಿದ್ದು, ಈ ಮಸೂದೆಯನ್ನು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ. ‘ಕರ್ನಾಟಕ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರ’ ರಚಿಸಲು ಮಸೂದೆ ಅವಕಾಶ ಕಲ್ಪಿಸಲಿದೆ ಹಾಗೂ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಮೂರು ವರ್ಷಗಳವರೆಗಿನ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೂ ದಂಡ ವಿಧಿಸುವ ಅವಕಾಶ ದೊರೆಯಲಿದೆ.
ಆನ್‌ಲೈನ್ ಬೆಟ್ಟಿಂಗ್ ನಿಷೇಧಕ್ಕೆ ಸರ್ಕಾರ ನಿರ್ಧರಿಸಿದ್ದರೂ, ಕೌಶಲ ಆಧಾರಿತ ಆಟಗಳಿಗೆ ಪರವಾನಗಿ ನೀಡಲು ಮುಂದಾಗಿದೆ. ಅದೃಷ್ಟವನ್ನು ಆಧರಿಸಿದ ಆಟಗಳು ಹಾಗೂ ಕೌಶಲಾಧಾರಿತ ಆಟಗಳ ನಡುವಿನ ಗೆರೆ ತೀರಾ ತೆಳುವಾದುದು. ಪೋಕರ್ ಹಾಗೂ ರಮ್ಮಿ ಆಟಗಳನ್ನೂ ಕೌಶಲ ಆಧಾರಿತ ಆಟಗಳು ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಗುರ್ತಿಸಿತ್ತು. ಹಾಗಾಗಿ, ಕೌಶಲಾಧಾರಿತ ಆಟದ ಹೆಸರಿನಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆ ನುಸುಳದಂತೆ ಸರ್ಕಾರ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಎಲ್ಲರ ಕೈಗೆ ಮೊಬೈಲ್ ದೊರೆತು, ಸಾಲ ಪಡೆಯಲು ಅವಕಾಶಗಳನ್ನೂ ಆನ್‌ಲೈನ್‌ನಲ್ಲೇ ಕಲ್ಪಿಸಿ, ಆ ಹಣವನ್ನು ಕಳೆದುಕೊಳ್ಳಲು ಜೂಜಿನ ಅಡ್ಡೆಗಳನ್ನೂ ಅಂಗೈಯಲ್ಲಿರಿಸಿರುವ ವಿಷವರ್ತುಲದ ಕಾಲವಿದು. ಸುಲಭವಾಗಿ ಹಣ ಗಳಿಸುವ ತರಾತುರಿಯಲ್ಲಿ ವಿವೇಚನೆಯನ್ನು ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಆನ್‌ಲೈನ್ ಗೇಮಿಂಗ್‌ನಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ಗಣನೀಯ ಆದಾಯವಿದೆ. ಆಟ ಮತ್ತು ಮನರಂಜನೆಯ ಹೆಸರಿನ ಈ ದಂಧೆಯ ಪ್ರಚಾರದಲ್ಲಿ ಕ್ರೀಡಾಪಟುಗಳು, ಸಿನಿಮಾ ನಟ, ನಟಿಯರು ತೊಡಗಿಕೊಂಡಿದ್ದಾರೆ. ಮನೆಯಲ್ಲಿಯೇ ಕುಳಿತು ಸುಲಭವಾಗಿ ಹಾಗೂ ಶೀಘ್ರವಾಗಿ ಹಣ ಮಾಡಬಹುದೆನ್ನುವ ಆಮಿಷ ಯುವಜನರನ್ನು ಸೆಳೆಯುತ್ತದೆ. ಒಮ್ಮೆ ಜೂಜಿನ ರುಚಿ ಹತ್ತಿದವರು, ನಿಧಾನವಾಗಿ ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಕಾನೂನು ನಿರ್ಬಂಧಕ್ಕೊಳಗಾದ ವೆಬ್‌ಸೈಟ್ ಹಾಗೂ ಆ‍್ಯಪ್‌ಗಳು ಮುಖ ಹಾಗೂ ಹೆಸರು ಬದಲಿಸಿಕೊಂಡು ಆನ್‌ಲೈನ್ ಜಗತ್ತಿನಲ್ಲಿ ಚಾಲ್ತಿಯಲ್ಲಿರುತ್ತವೆ. ಹಾಗಾಗಿ, ಕಾನೂನು ನಿರ್ಬಂಧದ ಜೊತೆಗೆ, ಆನ್‌ಲೈನ್ ಬೆಟ್ಟಿಂಗ್ ಕೇಡುಗಳ ಕುರಿತು ಜನ ಜಾಗೃತಿ ಮೂಡಿಸುವ ಪ್ರಯತ್ನಗಳೂ ವ್ಯಾಪಕವಾಗಿ ನಡೆಯಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.