ADVERTISEMENT

ಸಂಪಾದಕೀಯ | ನಿರ್ಮಲಾ ಸಲಹೆ ಔಚಿತ್ಯಪೂರ್ಣ ಮಾತಿಗೆ ಕಾನೂನಿನ ಬಲ ಬೇಕು

ಸ್ಥಳೀಯ ಭಾಷೆಯಲ್ಲಿ ಹಣಕಾಸು ಸೇವೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 20:01 IST
Last Updated 2 ಅಕ್ಟೋಬರ್ 2020, 20:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವ್ಯಕ್ತಿಗೆ ಅವನ ಭಾಷೆಯಲ್ಲಿ ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಗಳನ್ನು ನೀಡದಿದ್ದರೆ, ಅವನನ್ನು ಹಣಕಾಸು ವ್ಯವಸ್ಥೆಯಿಂದ ದೂರವಿರಿಸಿದಂತೆ ಆಗುತ್ತದೆ.

ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಗಳು ಯಾವುದೇ ವ್ಯಕ್ತಿಯ ಪಾಲಿಗೆ ಅತ್ಯಂತ ಅವಶ್ಯಕ. ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾದರೆ, ಇಡೀ ಅರ್ಥವ್ಯವಸ್ಥೆಯಲ್ಲಿ ತಳಮಳ ಸೃಷ್ಟಿಯಾಗುತ್ತದೆ. ಇಂತಹ ಮೂಲಭೂತ ಸೇವೆಯು ಎಲ್ಲರಿಗೂ ಸರಿಯಾಗಿ ದೊರೆತಾಗ ಮಾತ್ರ ಅರ್ಥವ್ಯವಸ್ಥೆ ನಿಜವಾಗಿಯೂ ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆ ಎಂಬ ಹೆಗ್ಗಳಿಕೆಯನ್ನು
ಹೊತ್ತುಕೊಳ್ಳಬಹುದು.

ಎಲ್ಲರಿಗೂ ಈ ಸೇವೆ ಲಭಿಸುವುದು ಅಂದರೆ, ಎಲ್ಲರಿಗೂ ಅವರ ಪ್ರದೇಶದ ಆಡಳಿತ ಭಾಷೆಯಲ್ಲಿ ಸೇವೆ ಲಭಿಸಬೇಕು ಎಂದೂ ಅರ್ಥ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಆಡಿರುವ ಕೆಲವು ಮಾತುಗಳು ಈ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ಸ್ಥಳೀಯ ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ, ಆ ಭಾಷೆಗಳಲ್ಲಿ ಮಾತನಾಡಬಲ್ಲ ಸಿಬ್ಬಂದಿಯ ತಂಡವನ್ನು ಸಿದ್ಧಪಡಿಸಬೇಕು ಎಂದು ಅವರು ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಯಾವುದೇ ಬ್ಯಾಂಕ್‌ನ ಸಿಬ್ಬಂದಿ ಸ್ಥಳೀಯ ಭಾಷೆಯನ್ನು ಕಲಿತುಕೊಳ್ಳದೆ ಇದ್ದರೆ, ಆ ಬ್ಯಾಂಕ್‌ ‘ನಾವು ಭಾರತದಾದ್ಯಂತ ಶಾಖೆಗಳನ್ನು ಹೊಂದಿದ್ದೇವೆ’ ಎಂದು ಹೇಳುವಲ್ಲಿ ಯಾವ ಅರ್ಥವೂ ಇಲ್ಲ ಎಂದೂ ಅವರು ಹೇಳಿದ್ದಾರೆ.

ADVERTISEMENT

ಹಣಕಾಸು ಸಚಿವೆ ಆಡಿರುವ ಈ ಮಾತುಗಳು ಅತ್ಯಂತ ಸ್ವಾಗತಾರ್ಹ. ದೆಹಲಿ, ಮುಂಬೈ ಅಥವಾ ಇನ್ಯಾವುದೇ ಮಹಾನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬ್ಯಾಂಕ್‌, ದೇಶದ ಯಾವುದೇ ಮೂಲೆಯಲ್ಲಿ ಶಾಖೆಯನ್ನು ಹೊಂದಿದ್ದರೂ, ಆ ‘ಮೂಲೆ’ಯ ಪ್ರದೇಶದ ಆಡಳಿತ ಭಾಷೆಯಲ್ಲಿ ಸಂವಹನ ನಡೆಸಲು ಅಲ್ಲಿನ ಸಿಬ್ಬಂದಿಗೆ ಬಾರದಿದ್ದರೆ ಏನು ಉಪಯೋಗ?

ಸ್ಥಿತಿ ಈ ರೀತಿ ಇದ್ದರೆ, ಆ ಬ್ಯಾಂಕ್‌ ದೇಶದ ‘ಮೂಲೆ’ಯಲ್ಲಿ ಶಾಖೆಯೊಂದನ್ನು ತೆರೆಯುವುದಕ್ಕೆ ಹೆಚ್ಚಿನ ಅರ್ಥ ಏನಿರುತ್ತದೆ?! ಬ್ಯಾಂಕ್‌ ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸದ ಕಾರಣಕ್ಕಾಗಿ ಕೆಲವೆಡೆ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ಸಣ್ಣ ಮಟ್ಟಿಗಿನ ಮಾತಿನ ಚಕಮಕಿ ನಡೆದಿರುವ ಪ್ರಕರಣಗಳೂ ವರದಿಯಾಗಿದ್ದಿದೆ. ಈ ರೀತಿ ಆಗಿದೆ ಎಂಬುದನ್ನು ನಿರ್ಮಲಾ ಅವರೂ ಉಲ್ಲೇಖಿಸಿದ್ದಾರೆ.

ಅವರು ಆಡಿದ ಮಾತುಗಳೆಲ್ಲ ಅತ್ಯಂತ ಔಚಿತ್ಯಪೂರ್ಣ. ಸಮಸ್ಯೆಯ ಆಳವನ್ನು ಅರಿತು ಆಡಿದ ಮಾತುಗಳಂತೆ ಇವೆ. ಆದರೆ, ಅವು ಮಾತುಗಳಷ್ಟೆ. ಅವು, ಆದೇಶವೂ ಅಲ್ಲ, ಕಾನೂನು ಕೂಡ ಅಲ್ಲ. ಹಾಗಾಗಿ, ಕೇಂದ್ರ ಸಚಿವೆ ಹೇಳಿದ್ದಾರೆ ಎಂದಮಾತ್ರಕ್ಕೆ ಬ್ಯಾಂಕುಗಳು ತಮ್ಮ ಶಾಖೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಸಂವಹನ ನಡೆಸಬಲ್ಲವರನ್ನೇ ನೇಮಿಸುತ್ತವೆ ಎನ್ನಲಾಗದು. ಬ್ಯಾಂಕುಗಳಲ್ಲಿ ಬೇರೆ ಬೇರೆ ಪ್ರಾದೇಶಿಕ ಭಾಷೆಗಳ ಜನರಿಗಿಂತ ಹಿಂದಿ ಮತ್ತು ಇಂಗ್ಲಿಷ್ ಮೇಲೆ ಪ್ರಭುತ್ವ ಹೊಂದಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಈಚಿನ ವರ್ಷಗಳಲ್ಲಿ ನೇಮಕ ಆಗಿರಲು ಬಹುದೊಡ್ಡ ಕಾರಣ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆದಿರುವುದು. ಇದು ಬದಲಾಗಬೇಕು. ಈ ಪರೀಕ್ಷೆಯು ಪ್ರಾದೇಶಿಕ ಭಾಷೆಗಳಲ್ಲೇ ನಡೆಯುವಂತೆ ಆದರೆ, ಆ ಭಾಷೆಗಳಲ್ಲಿ ಓದಿದವರು, ಆ ಭಾಷೆಗಳಲ್ಲಿ ಚೆನ್ನಾಗಿ ಸಂವಹನ ನಡೆಸಬಲ್ಲವರು ಬ್ಯಾಂಕುಗಳ ವಿವಿಧ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಆಗುತ್ತಾರೆ. ಹಿಂದಿ ಹಾಗೂ ಇಂಗ್ಲಿಷ್ ಬಲ್ಲವರು ಎಷ್ಟು ಸುಲಭವಾಗಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರವೇಶಿಸಲು ಸಾಧ್ಯವಿದೆಯೋ, ಅಷ್ಟೇ ಸುಲಭವಾಗಿ ಹಿಂದಿ–ಇಂಗ್ಲಿಷ್ ಭಾಷಿಕರಲ್ಲದವರೂ ಪ್ರವೇಶಿಸಲು ಸಾಧ್ಯವಾಗಬೇಕು. ಹಾಗಾದಾಗ ಮಾತ್ರ, ‘ಬ್ಯಾಂಕುಗಳು ಸ್ಥಳೀಯರಿಗೆ ಅವರ ಭಾಷೆಯಲ್ಲೇ ಸೇವೆಗಳನ್ನು ಒದಗಿಸಬೇಕು’ ಎಂಬ ಮಾತು ಕ್ರಿಯಾರೂಪಕ್ಕೆ ಬಂದಂತೆ ಆಗುತ್ತದೆ.

ಅದಾಗದಿದ್ದರೆ, ಅಂತಹ ಮಾತುಗಳು ಬರೀ ಲೊಳಲೊಟ್ಟೆಯಂತೆ ಕಾಣಿಸುತ್ತವೆ. ನಿರ್ಮಲಾ ಅವರು ತಮ್ಮ ಮಾತುಗಳಿಗೆ ಬಲ ತುಂಬುವ ಕೆಲಸ ಮಾಡಬೇಕು. ಆಡಿರುವ ಮಾತುಗಳಿಗೆ ಕಾನೂನಿನ ರೂಪ ಕೊಡಬೇಕು. ವ್ಯಕ್ತಿಗೆ ಅವನ ಭಾಷೆಯಲ್ಲಿ ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಗಳನ್ನು ನೀಡದಿದ್ದರೆ, ಅವನನ್ನು ಹಣಕಾಸು ವ್ಯವಸ್ಥೆಯಿಂದ ದೂರವಿರಿಸಿದಂತೆ ಆಗುತ್ತದೆ. ‘ನಿನ್ನ ಭಾಷೆಯಲ್ಲಿ ಸೇವೆ ಇಲ್ಲ’ ಎನ್ನುವುದು ಅಮಾನವೀಯ ನಡೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.