ADVERTISEMENT

ಸಂಪಾದಕೀಯ | ಒಣಪ್ರತಿಷ್ಠೆಯ ಮೇಲಾಟ ಬೇಡ; ಕಲಾಪ ಅರ್ಥಪೂರ್ಣವಾಗಿರಲಿ

ವಿಧಾನಮಂಡಲದ ಕಲಾಪಗಳು ಜನರ ಆಶೋತ್ತರಗಳಿಗೆ ಧ್ವನಿ ಆಗಬೇಕೇ ಹೊರತು, ಆಡಳಿತ ಮತ್ತು ವಿರೋಧ ಪಕ್ಷಗಳ ಒಣಪ್ರತಿಷ್ಠೆಯ ಪ್ರದರ್ಶನಕ್ಕೆ ವೇದಿಕೆ ಆಗಬಾರದು.

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 22:40 IST
Last Updated 7 ಡಿಸೆಂಬರ್ 2025, 22:40 IST
<div class="paragraphs"><p>ಚಳಿಗಾಲದ ಅಧಿವೇಶನ ಸಿದ್ಧತೆಗಾಗಿ, ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಕಾರ್ಮಿಕರು ಪುಷ್ಪವನ ಸಿದ್ಧಪಡಿಸುವಲ್ಲಿ ನಿರತರಾದರು &nbsp;</p></div>

ಚಳಿಗಾಲದ ಅಧಿವೇಶನ ಸಿದ್ಧತೆಗಾಗಿ, ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಕಾರ್ಮಿಕರು ಪುಷ್ಪವನ ಸಿದ್ಧಪಡಿಸುವಲ್ಲಿ ನಿರತರಾದರು  

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅರ್ಥಪೂರ್ಣ ಚರ್ಚೆಗಳಲ್ಲಿ ಪಾಲ್ಗೊಂಡು, ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿವೇಶನಗಳು ಜನಪ್ರತಿನಿಧಿಗಳ ಪಾಲಿಗೆ ಅತ್ಯುತ್ತಮ ವೇದಿಕೆಗಳಾಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವುಗಳು ಆಡಳಿತ ಹಾಗೂ ವಿರೋಧ ಪಕ್ಷಗಳ ಪ್ರತಿಷ್ಠೆಯ ಅಖಾಡಗಳಾಗಿ ಪರಿಣಮಿಸಿದ್ದು, ಬಹುಪಾಲು ಕಲಾಪಗಳು ವ್ಯರ್ಥವಾದ ಉದಾಹರಣೆಗಳೇ ಹೆಚ್ಚು. ಶಾಸನ ರೂಪಿಸುವಿಕೆ ಮತ್ತು ಸಂವಾದ ಪರಿಣಾಮಕಾರಿಯಾಗಿ ನಡೆಯದಿದ್ದರೆ ವಿಧಾನಮಂಡಲದ ಕಾರ್ಯ ನಿರ್ವಹಣೆಯ ಬಗ್ಗೆಯೇ ಜನ ಸಿನಿಕರಾಗುತ್ತಾರೆ. ಪ್ರಾಯಶಃ, ಅಂತಹ ಸ್ಥಿತಿಯೊಂದು ಈಗ ನಿರ್ಮಾಣವಾದಂತಿದೆ. ಕಲಾಪದ ಗುಣಮಟ್ಟದ ಕುಸಿತವು ನಿರಂತರ ವಿದ್ಯಮಾನವಾಗಿದ್ದು, ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗುತ್ತಿದೆ. ಕಾಟಾಚಾರಕ್ಕೆ ಎನ್ನುವಂತೆ ಅಧಿವೇಶನ ನಡೆಸಿ, ಹಣ ಮತ್ತು ಸಮಯ ಎರಡನ್ನೂ ವ್ಯರ್ಥಗೊಳಿಸುತ್ತಿರುವ ಪ್ರವೃತ್ತಿಯು ಪ್ರಜ್ಞಾವಂತ ನಾಗರಿಕರಲ್ಲಿ ಹೇವರಿಕೆಯನ್ನು ಉಂಟು ಮಾಡುತ್ತದೆ. ರಾಜ್ಯವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆಯುವುದು ಆಡಳಿತ ಹಾಗೂ ವಿರೋಧ ಪಕ್ಷಗಳಿಗೆ ಬೇಡವಾದಂತಿದೆ. ಬೆಳಗಾವಿ ಅಧಿವೇಶನದಲ್ಲಿ ಇಂತಹ ಪರಿಸ್ಥಿತಿಯನ್ನು ತಿರುವು–ಮುರುವು ಮಾಡುವ ಹೊಣೆ ಎರಡೂ ಪಾಳಯಗಳ ನೇತಾರರ ಮೇಲಿದೆ.

ADVERTISEMENT

ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿರುವ ಕಾರಣ ಸಹಜವಾಗಿಯೇ ಉತ್ತರ ಕರ್ನಾಟಕದ ಸಮಸ್ಯೆಗಳು ಚರ್ಚೆಗೆ ಒಳಗಾಗುತ್ತವೆ ಎನ್ನುವುದು ಆ ಭಾಗದ ಜನರ ನಿರೀಕ್ಷೆ. ಬೆಳಗಾವಿಯಲ್ಲಿ ಈ ಹಿಂದಿನ ಅಧಿವೇಶನದಲ್ಲಿ ನೀಡಲಾಗಿದ್ದ ಭರವಸೆಗಳು ಏನಾದವು
ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆ ದೊಡ್ಡದಾಗಿರುವಾಗಲೇ ಮೆಕ್ಕೆಜೋಳ ಬೆಳೆದ ರೈತರೂ ಸಂಕಷ್ಟ ಅನುಭವಿಸುತ್ತಿ ದ್ದಾರೆ. ಭತ್ತ, ರಾಗಿ ಬೆಳೆದವರೂ ಅಗತ್ಯ ಪ್ರಮಾಣದಷ್ಟು ಖರೀದಿ ಕೇಂದ್ರಗಳು ಇಲ್ಲದಿರುವ ಕಾರಣ ತೊಂದರೆ ಎದುರಿಸುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ತೆವಳುತ್ತಿದೆ ಎಂಬ ಆಕ್ರೋಶ ಈ ಭಾಗದ ಜನರಲ್ಲಿ ಲಾಗಾಯ್ತಿನಿಂದಲೂ ಮಡುಗಟ್ಟಿದೆ. ಕಳಸಾ–ಬಂಡೂರಿ ನಾಲೆ ತಿರುವು ಯೋಜನೆಯ ಭವಿಷ್ಯದ ಕುರಿತೂ ಅವರಲ್ಲಿ ಪ್ರಶ್ನೆಗಳಿವೆ. ತಮ್ಮ ಸಮಸ್ಯೆಗಳು ಹಾಗೂ ಪ್ರಶ್ನೆಗಳ ಕುರಿತು ವಿಸ್ತೃತ ಚರ್ಚೆ ನಡೆಯಬೇಕು ಎನ್ನುವ ಅಪೇಕ್ಷೆ ಅವರದ್ದಾಗಿದೆ. ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರವು ಎರಡು ಮಹತ್ವದ ಮಸೂದೆಗಳನ್ನು– ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ–2025’, ‘ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ–2025’– ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಎರಡೂ ಮಸೂದೆಗಳು ವ್ಯಾಪಕವಾಗಿ ಚರ್ಚೆಗೆ ಒಳಗಾಗಬೇಕಾದಂಥವು. 

ಧರಣಿ ಹಾಗೂ ಕೋಲಾಹಲದ ನಡುವೆ ಕಲಾಪವನ್ನು ನಡೆಸಲು ಸಾಧ್ಯವಿಲ್ಲ. ವಿರೋಧ ಪಕ್ಷಗಳು ಒಣಪ್ರತಿಷ್ಠೆಗಾಗಿ ಕಲಾಪ ಬಹಿಷ್ಕರಿಸುವುದಾಗಲಿ, ಧರಣಿ ನಡೆಸುವುದನ್ನೇ ಕಾಯಕ ಮಾಡಿಕೊಳ್ಳುವುದಾಗಲಿ ಮಾಡದೆ ಚರ್ಚೆಗಳಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳಬೇಕು. ಸರ್ಕಾರವನ್ನು ಉತ್ತರದಾಯಿ ಮಾಡುವ ಹಕ್ಕು ಮತ್ತು ಹೊಣೆಗಾರಿಕೆ ವಿರೋಧ ಪಕ್ಷಗಳಿಗೆ ಇದೆ. ವಿರೋಧ ಪಕ್ಷಗಳು ಎತ್ತಿದ ವಿಚಾರಗಳ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ. ಅದು, ಅಧಿಕಾರದ ಠೀವಿಯಿಂದ ಪ್ರತಿಕ್ರಿಯಿಸದೇ ಎದುರಿನ ಸಾಲುಗಳಲ್ಲಿ ಕುಳಿತ ಸದಸ್ಯರ ಸಲಹೆಗಳಿಗೆ ಕಿವಿಗೊಡಬೇಕು. ಎಲ್ಲರೂ ಒಗ್ಗೂಡಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಯತ್ನ ಮಾಡಬೇಕು. ವಾಸ್ತವವಾಗಿ, ನಾಯಕತ್ವದ ಮೇಲಾಟದಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮರೆತಿರುವ ಸರ್ಕಾರಕ್ಕೆ, ಆ ಮೈಮರೆವನ್ನು ನೆನಪಿಸುವ ಕೆಲಸ ವಿರೋಧ ಪಕ್ಷಗಳಿಂದ ಆಗಬೇಕು. ಆದರೆ, ದುರದೃಷ್ಟವಶಾತ್‌ ವಿರೋಧ ಪಕ್ಷಗಳಲ್ಲೂ ನಾಯಕತ್ವಕ್ಕಾಗಿಯೇ ಮುಸುಕಿನ ಗುದ್ದಾಟ ನಡೆದಿದೆ. ನಾಡಿನ ಹಿತಚಿಂತನೆ ಯಾರಿಗೂ ಬೇಡವಾಗಿದೆ. ಜನರ ಕುರಿತು ತಾವು ಸುರಿಸುವುದು ಮೊಸಳೆ ಕಣ್ಣೀರಲ್ಲ, ಆಡುವ ಮಾತು ಕಣ್ಣೊರೆಸುವ ತಂತ್ರವಲ್ಲ ಎಂಬುದು ನಿಜವಾದರೆ, ಆಡಳಿತ ಮತ್ತು ವಿರೋಧ ಪಕ್ಷಗಳು ರಾಜಕೀಯ ಹಿತಾಸಕ್ತಿ ಪಕ್ಕಕ್ಕೆ ಇಟ್ಟು ಕಲಾಪದಲ್ಲಿ ಸಕಾರಾತ್ಮಕವಾಗಿ ಪಾಲ್ಗೊಳ್ಳುವುದು ಅತ್ಯಗತ್ಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.