ADVERTISEMENT

ಸಂಪಾದಕೀಯ | ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ; ರಾಜಕೀಯ ಕಂದಕ ಹೆಚ್ಚಿಸಬೇಡಿ

ಸಂಪಾದಕೀಯ
Published 24 ಸೆಪ್ಟೆಂಬರ್ 2025, 0:30 IST
Last Updated 24 ಸೆಪ್ಟೆಂಬರ್ 2025, 0:30 IST
   
ಬೆಂಗಳೂರಿನ ರಸ್ತೆ ಗುಂಡಿಗಳು ರಾಜ್ಯ ರಾಜಕಾರಣದ ಸ್ಥಿತಿಗತಿಯ ಸಂಕೇತಗಳೂ ಹೌದು. ರಸ್ತೆ ಗುಂಡಿಗಳನ್ನು ಮುಚ್ಚುವ ವಿಷಯವೂ ರಾಜಕೀಯದ ಹಗ್ಗಜಗ್ಗಾಟ ಆಗಬಾರದು.

ಬೆಂಗಳೂರಿನ ರಸ್ತೆಗಳ ರಿಪೇರಿಗೆ ₹1,100 ಕೋಟಿ ಬಿಡುಗಡೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿರುವುದು, ರಸ್ತೆ ಗುಂಡಿಗಳಿಂದಾಗಿ ಹಾಗೂ ಸಂಚಾರ ದಟ್ಟಣೆಯಿಂದಾಗಿ ಹೈರಾಣಾಗಿರುವ ಬೆಂಗಳೂರಿನ ಜನರಲ್ಲಿ ಸಮಾಧಾನ ಮೂಡಿಸಬೇಕಿತ್ತು. ಆದರೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿದೆ ಎಂದು ಬಿಜೆಪಿ ಆರೋಪಿಸುವುದರೊಂದಿಗೆ ಶಿವಕುಮಾರ್ ಅವರ ಈ ಘೋಷಣೆಯು ಇನ್ನೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ತಲಾ ₹50 ಕೋಟಿ ಸಿಗಲಿದೆ, ಬಿಜೆಪಿಯ ಶಾಸಕರು ಇರುವ ಕ್ಷೇತ್ರಗಳಿಗೆ ತಲಾ ₹25 ಕೋಟಿ ಸಿಗಲಿದೆ ಎಂದು ವರದಿಯಾಗಿದೆ. ಇದು ಮಲತಾಯಿ ಧೋರಣೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಆ ಪಕ್ಷದ ಆಕ್ರೋಶದಲ್ಲಿ ಹುರುಳಿಲ್ಲದಿಲ್ಲ. ರಸ್ತೆಗಳು ಮತ್ತು ಅವುಗಳಲ್ಲಿನ ಗುಂಡಿಗಳು ರಾಜಕೀಯ ಪಕ್ಷಗಳ ನಡುವೆ ತಾರತಮ್ಯ ಎಸಗುವುದಿಲ್ಲ. ತಮ್ಮ ಕ್ಷೇತ್ರವನ್ನು ಯಾವ ಪಕ್ಷದ ಮುಖಂಡ ಪ್ರತಿನಿಧಿಸುತ್ತಿದ್ದರೂ, ರಸ್ತೆಗುಂಡಿಗಳು ಈಗ ಬೆಂಗಳೂರಿಗರೆಲ್ಲರ ಸಂಕಷ್ಟ. ವ್ಯಂಗ್ಯವೆಂದರೆ, ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದಾಗ ಕಾಂಗ್ರೆಸ್ ಪಕ್ಷವು ಅಂದು ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯ ಮೇಲೆ ಇದೇ ಬಗೆಯ ಆರೋಪವನ್ನು ಹೊರಿಸಿತ್ತು.

ಅನುದಾನದ ಹಂಚಿಕೆಯಲ್ಲಿ ಈ ಬಗೆಯ ವ್ಯತ್ಯಾಸಗಳು ಇರುವುದು ಕಳವಳಕಾರಿ ಬೆಳವಣಿಗೆಯೊಂದನ್ನು ಹೇಳುತ್ತಿವೆ: ಅದು ಚುನಾವಣೆಗಳಲ್ಲಿ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಅಭಿವೃದ್ಧಿ ಕೆಲಸಗಳನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುವುದು. ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ (ಜಿಬಿಎ) ಚುನಾವಣೆ ನಡೆಯಬೇಕಿದೆ. ಈ ಸಂದರ್ಭದಲ್ಲಿ ನಗರದ ಮೂಲಸೌಕರ್ಯ ಅಗತ್ಯಗಳಿಗೆ ಸ್ಪಂದಿಸುವುದಕ್ಕಿಂತ ಹೆಚ್ಚಾಗಿ ಬಿಜೆಪಿಯನ್ನು ದುರ್ಬಲಗೊಳಿಸುವ ಉದ್ದೇಶವನ್ನು ಕಾಂಗ್ರೆಸ್ ಪಕ್ಷವು ಹೊಂದಿರುವಂತೆ ಕಾಣುತ್ತಿದೆ. ಹೀಗೆ ಮಾಡಿದಾಗ ಆಡಳಿತದ ಮೂಲ ಪರಿಕಲ್ಪನೆಗೇ ಪೆಟ್ಟು ಕೊಟ್ಟಂತಾಗುತ್ತದೆ. ಕರ್ನಾಟಕದ ಆರ್ಥಿಕ ಚಟುವಟಿಕೆಗಳ ಹೃದಯದಂತೆ ಇರುವ ಬೆಂಗಳೂರು, ರಾಜ್ಯದ ತೆರಿಗೆ ವರಮಾನಕ್ಕೆ, ಇಲ್ಲಿನ ಉದ್ಯೋಗ ಮಾರುಕಟ್ಟೆಗೆ ಅತಿಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.

ಈ ನಗರಕ್ಕೆ ಬೇಕಿರುವುದು ಸಮಾನ ಅಭಿವೃದ್ಧಿ. ರಾಜಕೀಯ ಅಗತ್ಯಗಳಿಗೆ ತಕ್ಕಂತೆ ನಡೆಯುವ ಅಸಮಾನ ಅಭಿವೃದ್ಧಿ ಕಾರ್ಯಗಳು ಇಲ್ಲಿಗೆ ಬೇಕಿಲ್ಲ. 2023ರಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಾಗ ಅಂದು ಆಡಳಿತದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯು ಬೆಂಗಳೂರಿನ ರಸ್ತೆಗಳಿಗಾಗಿ ₹6,000 ಕೋಟಿ ಅನುದಾನ ನೀಡಿತ್ತು. ಆ ಹಣದಲ್ಲಿ ಹೆಚ್ಚಿನ ಪಾಲು ಗುಂಡಿಗಳನ್ನು ಮುಚ್ಚಲು ವಿನಿಯೋಗ ಆಯಿತು. ಹೀಗಿದ್ದರೂ ಈಗ ಬೆಂಗಳೂರಿನ ಎಲ್ಲೆಡೆ ರಸ್ತೆಯಲ್ಲಿ ಗುಂಡಿಗಳಿವೆ. ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತ ಆಗಿಸಲಾಗುತ್ತದೆ ಎಂಬ ಆಶ್ವಾಸನೆಗಳನ್ನು ಇಲ್ಲಿನ ಜನ ಕೇಳುತ್ತಲೇ ಇದ್ದಾರೆ. ಆದರೆ ಆಶ್ವಾಸನೆ ಈಡೇರಿಸುವ ಸಾಮರ್ಥ್ಯವು ರಾಜಕೀಯ ಪಕ್ಷಗಳಿಗೆ ಇದೆ ಎಂಬ ನಂಬಿಕೆಯು ಅವರಲ್ಲಿ ಈಗ ಉಳಿದಿಲ್ಲ.

ADVERTISEMENT

‘ಪ್ರತಿ ಕ್ಷೇತ್ರಕ್ಕೂ ಅನುಕೂಲ ಆಗುತ್ತದೆ’ ಎಂದು ಶಿವಕುಮಾರ್ ಭರವಸೆ ಇತ್ತಿದ್ದಾರೆ. ಆದರೆ ಅನುದಾನ ಹಂಚಿಕೆಯು ಸಮಾನವಾಗಿ ಇಲ್ಲದಿದ್ದರೆ ಈ ಭರವಸೆ ಟೊಳ್ಳಾಗಿ ಕಾಣುತ್ತದೆ. ಅನುದಾನ ಹಂಚಿಕೆಯಲ್ಲಿನ ಅಸಮಾನತೆಯು ಅಭಿವೃದ್ಧಿ ಕಾರ್ಯಗಳೂ ಅಸಮಾನ ಆಗುವಂತೆ ಮಾಡುತ್ತವೆ. ನಗರದ ಕೆಲವು ಪ್ರದೇಶಗಳಲ್ಲಿ ಕಾಮಗಾರಿಗಳು ಚೆನ್ನಾಗಿ ಆಗುತ್ತವೆ, ಇನ್ನು ಕೆಲವು ಪ್ರದೇಶಗಳಲ್ಲಿ ಕಾಮಗಾರಿಗಳು ನಿರ್ಲಕ್ಷ್ಯಕ್ಕೆ ಗುರಿಯಾಗುತ್ತವೆ. ಜಾಗತಿಕ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ನಗರವೊಂದರ ಆಡಳಿತ ನಡೆಸುವ ಬಗೆ ಇದಲ್ಲ. ಹೂಡಿಕೆ ಮತ್ತು ಹೊಸ ಆವಿಷ್ಕಾರಗಳ ಕೇಂದ್ರ ಬೆಂಗಳೂರು. ಆದರೆ ಈ ನಗರದ ಮಹತ್ವಾಕಾಂಕ್ಷೆಗಳನ್ನು ಮೂಲಸೌಕರ್ಯದ ಕೊರತೆ ಹಾಗೂ ಕ್ಷುಲ್ಲಕ ರಾಜಕೀಯವು ತಿಂದುಹಾಕುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ರಾಜಕೀಯ ಗಡಿಗಳನ್ನು ಮೀರಿ, ಮುತ್ಸದ್ಧಿಗಳಂತೆ ಕೆಲಸ ಮಾಡಲು ಇದು ಸುಸಮಯ. ನ್ಯಾಯಸಮ್ಮತವಾದ ಹಾಗೂ ಸಮಾನತೆಯ ಸಮಾಜವನ್ನು ನಿರ್ಮಿಸುವ ಬಗ್ಗೆ ಅವರು ಆಗಾಗ ಮಾತನಾಡುತ್ತಾರೆ, ಈ ಮಾತುಗಳು ರಸ್ತೆಯಂತಹ ತೀರಾ ಅಗತ್ಯ ಮೂಲಸೌಕರ್ಯ ನಿರ್ಮಾಣದ ಮೂಲಕ ಕೃತಿರೂಪಕ್ಕೆ ಬರಬೇಕು. ಸಂಚಾರ ದಟ್ಟಣೆ, ರಸ್ತೆಯ ಸ್ಥಿತಿ, ಜನಸಂಖ್ಯೆಯಂತಹ ಸಂಗತಿಗಳನ್ನು ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಬೇಕು; ಅನುದಾನ ಹಂಚಿಕೆಗೆ ಪಕ್ಷವು ಆಧಾರವಾಗಬಾರದು. ರಸ್ತೆ ಗುಂಡಿಗಳನ್ನು ಮುಚ್ಚಲಿ ಎಂದು ಜನ ಬಯಸುತ್ತಾರೆಯೇ ವಿನಾ ರಾಜಕೀಯ ಕಂದಕಗಳು ಹೆಚ್ಚಾಗಲಿ ಎಂದು ಅಪೇಕ್ಷಿಸುವುದಿಲ್ಲ. ಬೆಂಗಳೂರು ಬಹಳ ತುರ್ತಾಗಿ ರಿಪೇರಿ ಆಗಬೇಕು, ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತಾರತಮ್ಯ ಬೇಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.