ADVERTISEMENT

ಸಂಪಾದಕೀಯ | ಅಪಘಾತ ಮತ್ತು ಸಾವುಗಳ ಹೆಚ್ಚಳ; ಬಿಎಂಟಿಸಿಗೆ ಅವಲೋಕನದ ಕಾಲ

ಸಂಪಾದಕೀಯ
Published 27 ಆಗಸ್ಟ್ 2025, 0:13 IST
Last Updated 27 ಆಗಸ್ಟ್ 2025, 0:13 IST
ಸಂಪಾದಕೀಯ
ಸಂಪಾದಕೀಯ   

ಗುಣಮಟ್ಟ ಹಾಗೂ ಸೇವೆಯಲ್ಲಿನ ದಕ್ಷತೆಯ ಕಾರಣದಿಂದಾಗಿ ದೇಶದಲ್ಲೇ ಹೆಸರು ಮಾಡಿರುವ ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ’ಯ (ಬಿಎಂಟಿಸಿ) ಬಸ್‌ಗಳು, ಈಗ ಅಪಘಾತ ಮತ್ತು ಜೀವಹಾನಿ ಕಾರಣದಿಂದಾಗಿ ಸುದ್ದಿಯಲ್ಲಿವೆ. 2024ರಿಂದ ಇಲ್ಲಿಯವರೆಗೆ ಬಿಎಂಟಿಸಿ ಬಸ್‌ ಅಪಘಾತಗಳಲ್ಲಿ 80 ಜನ ಮೃತಪಟ್ಟಿದ್ದಾರೆ ಎನ್ನುವ ಬೆಂಗಳೂರು ಸಂಚಾರ ಪೊಲೀಸರ ಅಂಕಿಅಂಶಗಳು ಆತಂಕ ಹುಟ್ಟಿಸುವಂತಿವೆ. 2024ರಲ್ಲಿ ಬಿಎಂಟಿಸಿ ಬಸ್‌ಗಳು ಒಳಗೊಂಡ 190 ರಸ್ತೆ ಅಪಘಾತಗಳು ವರದಿಯಾಗಿದ್ದು, ಆ ಘಟನೆಗಳಲ್ಲಿ 42 ಜನ ಸಾವಿಗೀಡಾಗಿದ್ದರು. ಈ ವರ್ಷ ಇಲ್ಲಿಯವರೆಗೆ 121 ಅಪಘಾತ ಪ್ರಕರಣಗಳು ದಾಖಲಾಗಿದ್ದು, 38 ಜನರು ಮೃತಪಟ್ಟಿದ್ದಾರೆ. ಪ್ರಸ್ತುತ, ಆಗಸ್ಟ್‌ ತಿಂಗಳಿನಲ್ಲಿಯೇ ಇಬ್ಬರು ಮಕ್ಕಳು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. ಹನ್ನೊಂದು ವರ್ಷದ ಬಾಲಕನೊಬ್ಬ ಬಸ್‌ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಇತ್ತೀಚೆಗಷ್ಟೇ ನಡೆದಿದೆ. ರಸ್ತೆ ಬದಿಯಲ್ಲಿ ನಿಂತಿದ್ದವರ ಮೇಲೆ ಬಸ್ ಹರಿದಿದ್ದರಿಂದಾಗಿ ಮಗು ಸೇರಿದಂತೆ ಐವರು ಗಾಯಗೊಂಡು, ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಕಳೆದ ಜುಲೈನಲ್ಲಿ ನಡೆದಿತ್ತು. ಇಂಥ ಘಟನೆಗಳು ಸಾರ್ವಜನಿಕರಲ್ಲಿ ಭಯಹುಟ್ಟಿಸುವಂತಿವೆ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರ ಸುರಕ್ಷಿತ ಎನ್ನುವುದರ ಬಗ್ಗೆ ಅನುಮಾನ ಮೂಡಿಸುವಂತಿವೆ. ಅಪಘಾತಗಳಿಗೆ ಸಂಬಂಧಿಸಿದ ಘಟನೆಗಳು ಹಾಗೂ ಅಂಕಿಅಂಶಗಳು ಬಿಎಂಟಿಸಿ ಬಸ್‌ ಕಾರ್ಯಾಚರಣೆಯಲ್ಲಿ ಇರಬಹುದಾದ ಸಮಸ್ಯೆ ಮತ್ತು ಲೋಪಗಳ ಕುರಿತ ಅವಲೋಕನಕ್ಕೆ ಒತ್ತಾಯಿಸುವಂತಿವೆ. 

ಅಪಘಾತಕ್ಕೆ ಸಾಮಾನ್ಯ ಕಾರಣ ಗಳಾದ ವೇಗದ ಚಾಲನೆ ಹಾಗೂ ಅಜಾಗರೂಕತೆಯನ್ನು ಬಿಎಂಟಿಸಿ ಬಸ್‌ಗಳಿಂದ ಉಂಟಾಗುವ ಅಪಘಾತ ಗಳಲ್ಲೂ ಕಾಣಬಹುದು. ಕೆಲವು ಚಾಲಕರು ಮೊಬೈಲ್‌ ಫೋನ್‌ನಲ್ಲಿ ಮಾತನಾಡಿ ಕೊಂಡು ಚಾಲನೆ ಮಾಡುವುದರ ಬಗ್ಗೆ ದೂರುಗಳಿವೆ. ಇವೆಲ್ಲದರ ಜೊತೆಗೆ ಬಿಎಂಟಿಸಿ ಚಾಲಕರ ಮೇಲೆ ಅತೀವ ಒತ್ತಡ ಇದೆ ಎನ್ನಲಾಗುತ್ತಿದೆ. ನಿಗದಿತ ಸಮಯದೊಳಗೆ ಟ್ರಿಪ್‌ ಪೂರೈಸಬೇಕೆನ್ನುವ ಕೆಲಸದ ಒತ್ತಡ ಹಾಗೂ ಡಿಪೊಗೆ ತಡವಾಗಿ ಹೋದರೆ ವೇತನ ಕಡಿತವಾಗುತ್ತದೆ ಎನ್ನುವ ಆತಂಕ ಚಾಲಕರು ಅತಿವೇಗದ ಚಾಲನೆ ಮಾಡಲು ಕಾರಣವಾಗುತ್ತದೆ. ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಸುರಕ್ಷಿತವಾಗಿ ಚಾಲನೆ ಮಾಡುವುದು ಯಾವುದೇ ಚಾಲಕನಿಗೂ ಸವಾಲಿನ ವಿಷಯ. ಅದರಲ್ಲೂ, ಬಸ್‌ಗಳಂಥ ದೊಡ್ಡ ವಾಹನಗಳ ಚಾಲನೆ ಹೆಚ್ಚಿನ ಕೌಶಲ ಹಾಗೂ ಸಾವಧಾನವನ್ನು ಅಪೇಕ್ಷಿಸುತ್ತದೆ. ಅಗತ್ಯಬಿದ್ದಲ್ಲಿ ಚಾಲಕನ ಕೆಲಸವನ್ನೂ ನಿರ್ವಾಹಕ ಮಾಡುವ ಸವ್ಯಸಾಚಿ ಕೌಶಲದಿಂದ ಸಂಸ್ಥೆಗೆ ಅನುಕೂಲ ಇದೆಯಾದರೂ, ಸಾರ್ವಜನಿಕ ಹಿತದ ದೃಷ್ಟಿಯಿಂದ ಅದು ಅಪಾಯಕಾರಿ.

ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಬಿಎಂಟಿಸಿ ಹಲವು ಕ್ರಮಗಳನ್ನು ಕೈಗೊಂಡಿದೆ. ಚಾಲಕರ ಜೊತೆಗೆ ಸಾರ್ವಜನಿಕರಲ್ಲೂ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಟ್ರಿಪ್‌ಗಳ ಸಮಯ ಪರಿಷ್ಕರಣೆಯ ಮೂಲಕ ಚಾಲಕರ ಮೇಲಿನ ಒತ್ತಡ ಕಡಿಮೆ ಮಾಡುವ ಪ್ರಯತ್ನಗಳೂ ನಡೆದಿವೆ. ಅಪಘಾತರಹಿತ ಚಾಲನೆ ಮಾಡಿದವರಿಗೆ ಚಿನ್ನ, ಬೆಳ್ಳಿ ಪದಕ ನೀಡಿ ಗೌರವಿಸುವುದರೊಂದಿಗೆ, ಅಪಘಾತ ಎಸಗುವ ಚಾಲಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ‘ಎಲ್ಲ ಅಪಘಾತಗಳು ಬಿಎಂಟಿಸಿ ಚಾಲಕರ ತಪ್ಪಿನಿಂದಲೇ ನಡೆಯುತ್ತಿವೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಶೇ 60ರಷ್ಟು ಅಪಘಾತಕ್ಕೆ ಚಾಲಕರು ಕಾರಣರಾಗಿರುವುದಿಲ್ಲ. ನಮ್ಮ ಚಾಲಕರು ಉತ್ತಮ ತರಬೇತಿ ಪಡೆದವರು ಮತ್ತು ವೃತ್ತಿಪರರು’ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಸಚಿವರ ಮಾತಿನ ತರ್ಕವನ್ನೇ ಅನುಸರಿಸಿದರೂ, ಶೇ 40ರಷ್ಟು ಅಪಘಾತಗಳಿಗೆ ಚಾಲಕರು ಕಾರಣ ಎನ್ನುವುದು ಬಿಎಂಟಿಸಿಗೆ ಗೌರವ ತರುವಂತಹ ಸಂಗತಿಯಲ್ಲ. ಅಪಘಾತ ಆಗದೆ ಇರುವುದರಲ್ಲಿ ಚಾಲಕನ ಜವಾಬ್ದಾರಿಯಷ್ಟೇ ಇರದೆ, ಸಾರಿಗೆ ಸಂಸ್ಥೆಯ ಹೊಣೆಗಾರಿಕೆಯೂ ಇರುತ್ತದೆ. ಚಾಲಕನ ಕೌಶಲಗಳನ್ನು ಹೆಚ್ಚಿಸುವುದರ ಜೊತೆಗೆ, ಆದಷ್ಟೂ ಒತ್ತಡರಹಿತವಾಗಿ ಕೆಲಸ ಮಾಡುವ ಪರಿಸರವನ್ನು ಸೃಷ್ಟಿಸುವುದು ಸಂಸ್ಥೆಯ ಹೊಣೆಗಾರಿಕೆಯೇ ಆಗಿದೆ. ಒತ್ತಡ ನಿರ್ವಹಣೆಗೆ ಸಂಬಂಧಿಸಿದಂತೆ ಚಾಲಕರಿಗೆ ಮಾನಸಿಕ ತಜ್ಞರ ಸಲಹೆ ದೊರಕಿಸಿಕೊಡುವ ನಿಟ್ಟಿನಲ್ಲಿ ಬಿಎಂಟಿಸಿ ಪ್ರಯತ್ನಿಸಬಹುದು. ಕೊರೊನಾ ನಂತರವಂತೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೊದಲಿನಷ್ಟು ಪರಿಣಾಮಕಾರಿ ಆಗಿ ಉಳಿದಿಲ್ಲ. ನಗರದ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಬಿಎಂಟಿಸಿ ಕಾರ್ಯ ವ್ಯಾಪ್ತಿ ಹಿಗ್ಗುತ್ತಿಲ್ಲ. ನೌಕರರೊಂದಿಗೆ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ಬಹುದೊಡ್ಡ ಸವಾಲನ್ನು ಬಿಎಂಟಿಸಿ ಎದುರಿಸುತ್ತಿದೆ. ಅಪಘಾತಗಳ ಸಂಖ್ಯೆಯನ್ನು ನಿಯಂತ್ರಿಸದೆ ಹೋದರೆ, ಸಂಸ್ಥೆಯ ವರ್ಚಸ್ಸು ಮತ್ತಷ್ಟು ಮಸುಕಾಗಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.