ADVERTISEMENT

ಸಂಪಾದಕೀಯ: ಚುನಾವಣಾ ಆಯೋಗಕ್ಕೆ ‘ಸಮನ್ಸ್’ ಒಪ್ಪಿತ ನಡವಳಿಕೆಗಳ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:31 IST
Last Updated 22 ಡಿಸೆಂಬರ್ 2021, 19:31 IST
   

ಪ್ರಧಾನ ಮಂತ್ರಿಯವರ ಕಚೇರಿಯ (ಪಿಎಂಒ) ಅಧಿಕಾರಿಗಳ ಜೊತೆಗಿನ ಸಭೆಗೆ ಕೇಂದ್ರ ಚುನಾವಣಾ ಆಯೋಗದ ಅತ್ಯುನ್ನತ ಅಧಿಕಾರಿಗಳು ಹಾಜರಾಗಬೇಕು ಎಂದು ಕೇಂದ್ರ ಸರ್ಕಾರದ ಸಚಿವಾಲಯವೊಂದು ಹಿಂದಿನ ತಿಂಗಳು ಹೇಳಿತು. ಈ ರೀತಿ ಹೇಳಿದ್ದು, ಸಾರ್ವಜನಿಕವಾಗಿ ಒಪ್ಪಿತವಾಗಿರುವ ನಡತೆಗಳ ಗಂಭೀರ ಉಲ್ಲಂಘನೆಗೆ ಸಮ. ಈ ಸಭೆಯನ್ನು ‘ಅನೌಪಚಾರಿಕ ಮಾತುಕತೆ’ ಎಂದು ಹೇಳಲಾಗಿದ್ದರೂ, ಚುನಾವಣಾ ಆಯೋಗದ ಅಧಿಕಾರಿಗಳು ಸಭೆಗೆ ಹಾಜರಾಗಿದ್ದು ಕೂಡ ತಪ್ಪು. ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿಯೊಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರು, ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮಾತುಕತೆಯಲ್ಲಿ ಉಪಸ್ಥಿತರಿರಬೇಕು ಎಂದು ‘ಬಯಸಿದ್ದಾರೆ’ ಎಂದು ಹೇಳಿದರು.

ಈ ಪತ್ರವು ಕೇಂದ್ರ ಸರ್ಕಾರದಿಂದ ಚುನಾವಣಾ ಆಯೋಗಕ್ಕೆ ರವಾನಿಸಿದ ಸಮನ್ಸ್ ರೀತಿಯಲ್ಲಿತ್ತು. ಪತ್ರದ ಧಾಟಿಯ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯ ಸಭೆಯಿಂದ ಅವರು ದೂರ ಉಳಿದರು. ಆದರೆ, ಮಿಶ್ರಾ ಜೊತೆಗೆ ಆನಂತರ ‘ಅನೌಪಚಾರಿಕ’ವಾಗಿ ವರ್ಚುವಲ್‌ ವೇದಿಕೆ ಮೂಲಕ ನಡೆದ ಮಾತುಕತೆಯಲ್ಲಿ ತಮ್ಮ ಇಬ್ಬರು ಸಹೋದ್ಯೋಗಿ ಚುನಾವಣಾ ಆಯುಕ್ತರ ಜೊತೆ ಭಾಗಿಯಾಗಲು ತೀರ್ಮಾನಿಸಿದರು. ಮಾತುಕತೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿ ಬರೆದ ಪತ್ರ ಹಾಗೂ ನಂತರ ಮಾತುಕತೆಯಲ್ಲಿ ಚುನಾವಣಾ ಆಯುಕ್ತರು ಪಾಲ್ಗೊಂಡಿದ್ದು ಅಹಿತಕರ ಪ್ರಶ್ನೆಗಳನ್ನು ಎತ್ತುತ್ತವೆ.

ಚುನಾವಣಾ ಆಯೋಗದ ಸ್ಥಿತಿ ಮತ್ತು ಅದು ಸರ್ಕಾರದ ಜೊತೆ ಹೊಂದಿರುವ ಸಂಬಂಧದ ಕುರಿತ‍ಪ್ರಶ್ನೆಗಳು ಇವು. ಇಡೀ ಪ್ರಸಂಗದ ಕುರಿತು ಕೇಂದ್ರ ಕಾನೂನು ಸಚಿವಾಲಯ ನಂತರದಲ್ಲಿ ನೀಡಿರುವ ವಿವರಣೆಯು ಪ್ರಶ್ನೆಗಳಿಗೆ ತೃಪ್ತಿಕರ ಉತ್ತರ ಕೊಡುವುದಿಲ್ಲ.

ADVERTISEMENT

ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆ. ಯಾವುದೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯುನ್ನತ ಮಟ್ಟದ ಸ್ವಾಯತ್ತ ಸ್ಥಾನ ಈ ಸಂಸ್ಥೆಗೆ ಇರಬೇಕು. ಇದು ಯಾವುದೇ ಸರ್ಕಾರಗಳ ಮರ್ಜಿಗೆ ಒಳಗಾಗದೆ, ಸ್ವತಂತ್ರವಾಗಿ ಕೆಲಸ ಮಾಡಬೇಕು. ರಾಜಕೀಯ ಪಕ್ಷಗಳು ಅಥವಾ ಇನ್ಯಾವುದೇ ಪರೋಕ್ಷ ಅಧಿಕಾರ ಕೇಂದ್ರಗಳ ಪ್ರಭಾವಕ್ಕೆ ಕೂಡ ಈ ಸಂಸ್ಥೆಯು ಒಳಗಾಗಬಾರದು.

ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವ ಅತ್ಯಂತ ಗುರುತರ ಹೊಣೆ ಈ ಸಂಸ್ಥೆಯ ಮೇಲೆ ಇರುತ್ತದೆಯಾದ ಕಾರಣ, ಸಂಸ್ಥೆ ಕೂಡ ಮುಕ್ತವಾಗಿ ಮತ್ತು ನಿರ್ಭೀತಿಯಿಂದ ಕೆಲಸ ನಿರ್ವಹಿಸಬೇಕು. ತಾನು ಮುಕ್ತವಾಗಿ, ಯಾವ ಪ್ರಭಾವಕ್ಕೂ ಒಳಗಾಗದೆ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಸಂಸ್ಥೆಯು ಸಾರ್ವಜನಿಕರಿಗೆ ಗೊತ್ತುಮಾಡಬೇಕು ಕೂಡ.

ಸರ್ಕಾರದ ಯಾವುದೇ ಅಧಿಕಾರಿಯು ಚುನಾವಣಾ ಆಯೋಗದ ಪ್ರಮುಖರನ್ನು ಸಭೆಗೆ ಬರುವಂತೆ ಸೂಚಿಸುವಂತೆ ಇಲ್ಲ. ಚುನಾವಣಾ ಆಯುಕ್ತರು ಯಾವುದೇ ವಿಷಯದ ಬಗ್ಗೆ ಸರ್ಕಾರಕ್ಕೆ ವಿವರ ನೀಡಲು ಹೋಗುವುದಿಲ್ಲ. ಸರ್ಕಾರದ ಜೊತೆ ಮಾತುಕತೆ ನಡೆಸುವ ಸಂದರ್ಭ ಇದ್ದಾಗ ಆಯೋಗದ ಕೆಳ ಹಂತದ ಅಧಿಕಾರಿಗಳು ಆ ಕೆಲಸ ನಿಭಾಯಿಸುತ್ತಾರೆ. ಹೀಗಿದ್ದರೂ, ಆಯೋಗಕ್ಕೆ ಕಳುಹಿಸಿದ್ದ ಪತ್ರವು ಕೋರಿಕೆಯ ಮಾದರಿಯಲ್ಲಿ ಇರಲಿಲ್ಲ; ಒಂದು ಸಮನ್ಸ್‌ನಂತೆ ಇತ್ತು.

ಈ ಪತ್ರವು ಚುನಾವಣಾ ಆಯೋಗವನ್ನು ಅಧೀನ ಸಂಸ್ಥೆ ಎಂಬಂತೆ ಕಂಡಿತ್ತು. ಅಂದರೆ, ಸಂಸ್ಥೆಯ ಸ್ವಾತಂತ್ರ್ಯ ಹಾಗೂ ಅದರ ಅಧಿಕಾರಕ್ಕೆ ಬೆಲೆ ಕೊಟ್ಟಿರಲಿಲ್ಲ. ಪ್ರಜಾತಂತ್ರ ವ್ಯವಸ್ಥೆಯು ಚಲನಶೀಲವಾಗಿ ಇರಲು ಅತ್ಯಗತ್ಯವಾಗಿರುವ ಸಂಸ್ಥೆಗಳನ್ನು ದುರ್ಬಲಗೊಳಿಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಈ ಪತ್ರವನ್ನು ಕಾಣಬೇಕು. ಚುನಾವಣಾ ಆಯೋಗಕ್ಕೆ ನಿಗದಿ ಮಾಡಲಾಗಿರುವ ಮಹತ್ವದ ಜವಾಬ್ದಾರಿಯ ಕಾರಣದಿಂದಾಗಿ ಆ ಸಂಸ್ಥೆಗೆ ವಿಶೇಷವಾದ ಘನತೆ ಇದೆ.

ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಿಭಾಯಿಸಬೇಕಿರುವ ಕರ್ತವ್ಯ ಬಹಳ ವಿಶೇಷವಾದುದು. ಸಂಸ್ಥೆಯ ಘನತೆಯನ್ನು ಕಾಯಬೇಕಿರುವುದು ಬಹುಮುಖ್ಯ. ಹಾಗೆಯೇ, ಸಂಸ್ಥೆಗೆ ಕೊಡಬೇಕಿರುವ ಗೌರವಕ್ಕೆ ಚ್ಯುತಿ ಬಾರದಂತೆಯೂ ನೋಡಿಕೊಳ್ಳಬೇಕು. ಈಚಿನ ವರ್ಷಗಳಲ್ಲಿ ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿ ಅಥವಾ ತಿಳಿಯದೇ ಮಾಡಿದ ಕೆಲವು ಕೃತ್ಯಗಳಿಗಾಗಿ ತೀಕ್ಷ್ಣ ಟೀಕೆಗಳಿಗೆ ಗುರಿಯಾಗಿದೆ. ಆಯೋಗದ ಕೆಲವು ನಡೆಗಳು ಆಡಳಿತದಲ್ಲಿ ಇರುವ ಪಕ್ಷಕ್ಕೆ ಸಹಾಯವಾಗುವಂತೆ ಇದ್ದವು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದು, ದಿನಾಂಕಗಳ ಘೋಷಣೆ, ಮಾದರಿ ನೀತಿ ಸಂಹಿತೆಯ ವಿಚಾರವಾಗಿ ಕೈಗೊಂಡ ಕೆಲವು ತೀರ್ಮಾನಗಳು ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದೂ ಇದೆ. ಚುನಾವಣಾ ಆಯುಕ್ತರು ಸಭೆಯೊಂದರಲ್ಲಿ ಪಾಲ್ಗೊಳ್ಳಬೇಕು ಎಂದು ಸರ್ಕಾರ ಬಯಸಿದ್ದೇ ತಪ್ಪು. ಆಯೋಗವು ಮಾತುಕತೆಗೆ ಹೋಗಿದ್ದೂ ತಪ್ಪು. ಅದರಲ್ಲೂ ಮುಖ್ಯವಾಗಿ, ದೇಶದ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಹೀಗೆ ಮಾಡಿದ್ದು ದೊಡ್ಡ ತಪ್ಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.