ADVERTISEMENT

ಸಂಪಾದಕೀಯ | ಜಿಎಸ್‌ಟಿ ಪರಿಹಾರ ಮೊತ್ತ ‘ದೇವರ ಆಟ’ದ ನೆಪ ಬೇಡ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 19:48 IST
Last Updated 30 ಆಗಸ್ಟ್ 2020, 19:48 IST
   

ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಉದ್ದೇಶದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆಯನ್ನು ಜಾರಿಗೆ ತರಲು ಅನುವು ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರಗಳು ತಮ್ಮ ಭೌಗೋಳಿಕ ವ್ಯಾಪ್ತಿಯಲ್ಲಿ ಜಾರಿಯಲ್ಲಿ ಇದ್ದ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಹಾಗೂ ಇತರ ಕೆಲವು ಪರೋಕ್ಷ ತೆರಿಗೆಗಳನ್ನು ಬಿಟ್ಟುಕೊಟ್ಟಿವೆ. ಅಂದರೆ, ಅಷ್ಟರಮಟ್ಟಿಗೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ತಮ್ಮ ಸ್ವಾತಂತ್ರ್ಯವನ್ನು ರಾಜ್ಯಗಳು ಕೇಂದ್ರದ ಸುಪರ್ದಿಗೆ ವರ್ಗಾಯಿಸಿ ಕೊಟ್ಟಿವೆ.

ಜಿಎಸ್‌ಟಿ ವ್ಯವಸ್ಥೆಯ ಜಾರಿಯಿಂದ ರಾಜ್ಯಗಳ ವರಮಾನ ಸಂಗ್ರಹದಲ್ಲಿ ಆಗಬಹುದಾದ ನಷ್ಟವನ್ನು ತಾನು ಭರಿಸಿಕೊಡುವ ವಾಗ್ದಾನವನ್ನು ಇದಕ್ಕೆ ಪ್ರತಿಯಾಗಿ ಕೇಂದ್ರ ನೀಡಿದೆ. ಈ ರೀತಿ ನಷ್ಟ ತುಂಬಿಕೊಡುವ ವ್ಯವಸ್ಥೆಯು ಜಿಎಸ್‌ಟಿ ಜಾರಿಗೆ ಬಂದ ಐದು ವರ್ಷಗಳವರೆಗೆ (ಅಂದರೆ, 2022ರವರೆಗೆ) ಜಾರಿಯಲ್ಲಿರುತ್ತದೆ. ರಾಜ್ಯಗಳು ತಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಬಿಟ್ಟುಕೊಟ್ಟಿದ್ದಕ್ಕೆ ಕೇಂದ್ರ ನೀಡಿದ ಈ ಒಂದು ಮಹತ್ವದ ವಚನವೂ ಕಾರಣ.

ಆದರೆ, ಕೋವಿಡ್–19 ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟು ಈಗ ಈ ವಾಗ್ದಾನವನ್ನು ಪರೀಕ್ಷೆಗೆ ಒಡ್ಡಿದೆ. ಕೊರೊನಾ ವೈರಾಣು ಹರಡುವುದನ್ನು ತಡೆಯಬೇಕು ಎಂಬ ಉದ್ದೇಶದಿಂದ ರಾಷ್ಟ್ರವ್ಯಾಪಿಯಾಗಿ ಲಾಕ್‌ಡೌನ್‌ ಹೇರಿದ್ದರ ಪರಿಣಾಮವಾಗಿ ಜಿಎಸ್‌ಟಿ ಸಂಗ್ರಹ ಗಣನೀಯವಾಗಿ ಕುಸಿದಿದೆ. ಕೇಂದ್ರ ಸರ್ಕಾರದ ಅಂದಾಜಿನ ಪ್ರಕಾರ, ವರಮಾನದಲ್ಲಿ ಈ ವರ್ಷ ಆಗಬಹುದಾದ ನಷ್ಟದ ಮೊತ್ತ ₹2.35 ಲಕ್ಷ ಕೋಟಿ. ‘ಇದರಲ್ಲಿ ₹97 ಸಾವಿರ ಕೋಟಿ ಮಾತ್ರ ಜಿಎಸ್‌ಟಿ ವ್ಯವಸ್ಥೆಯ ಕಾರಣದಿಂದಾಗಿ ಆಗಬಹುದಾದ ನಷ್ಟ. ನಷ್ಟದಲ್ಲಿನ ಇನ್ನುಳಿದ ಮೊತ್ತಕ್ಕೆ ಕಾರಣ ಕೋವಿಡ್–19’ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಬಾರಿ ರಾಜ್ಯಗಳ ವರಮಾನದಲ್ಲಿ ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಡಬೇಕಾದ ಸಂದರ್ಭ ಎದುರಾಗಿದ್ದು, ತಾನೇ ವರಮಾನ ಖೋತಾ ಎದುರಿಸುತ್ತಿರುವ ಕೇಂದ್ರ ಸರ್ಕಾರವು ಹೊಣೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಇದೆ.

ADVERTISEMENT

ಈಚೆಗೆ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೇಂದ್ರವು ರಾಜ್ಯಗಳ ಎದುರು ಎರಡು ಆಯ್ಕೆಗಳನ್ನು ಇರಿಸಿದೆ. ಜಿಎಸ್‌ಟಿ ವ್ಯವಸ್ಥೆಯಿಂದ ಆಗಬಹುದಾದ ನಷ್ಟದ ಮೊತ್ತ ₹ 97 ಸಾವಿರ ಕೋಟಿಯನ್ನು ಭರ್ತಿ ಮಾಡಿಕೊಳ್ಳಲು ಸಾಲ ಪಡೆಯುವುದು ಒಂದು ಆಯ್ಕೆ. ಇನ್ನೊಂದು ಆಯ್ಕೆ, ಅಷ್ಟೂ ನಷ್ಟವನ್ನು (ಅಂದರೆ, ₹ 2.35 ಲಕ್ಷ ಕೋಟಿಯನ್ನು) ಸಾಲದ ರೂಪದಲ್ಲಿ ಪಡೆದುಕೊಳ್ಳುವುದು.

₹97 ಸಾವಿರ ಕೋಟಿಯನ್ನು ಸಾಲವಾಗಿ ತೆಗೆದುಕೊಳ್ಳುವ ಮೊದಲ ಆಯ್ಕೆಯನ್ನು ರಾಜ್ಯಗಳು ಒಪ್ಪಿಕೊಂಡರೆ, ಇನ್ನುಳಿದ ಮೊತ್ತವನ್ನು ಯಾರು ತಂದುಕೊಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಅದೇನೇ ಇದ್ದರೂ, ರಾಜ್ಯಗಳ ನಷ್ಟ ಭರ್ತಿ ಮಾಡಿಕೊಡುವ ಸ್ಥಾನದಲ್ಲಿ ಇರುವ, ಆ ಹೊಣೆಯನ್ನು ತಾನಾಗಿಯೇ ಹೊತ್ತುಕೊಂಡಿರುವ ಕೇಂದ್ರ ಸರ್ಕಾರವು ‘ನೀವು ಆ ಮೊತ್ತವನ್ನು ಸಾಲವಾಗಿ ತಂದುಕೊಳ್ಳಿ’ ಎಂದು ಹೇಳುತ್ತಿರುವುದು ಸಮರ್ಥನೀಯವಲ್ಲ. ರಾಜ್ಯ ಸರ್ಕಾರಗಳು ಸಾಲ ಎತ್ತುವ ಬದಲು, ಕೇಂದ್ರ ಸರ್ಕಾರವೇ ಸಾಲ ತಂದು ಆ ಹಣದಿಂದ ಜಿಎಸ್‌ಟಿ ಪರಿಹಾರ ಕೊಡಲಿ ಎಂದು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಒತ್ತಾಯ ಮಾಡಿವೆ.

ಹಣಕಾಸಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯುವ ಸಾಮರ್ಥ್ಯವು ರಾಜ್ಯ ಹಾಗೂ ಕೇಂದ್ರದ ನಡುವೆ ಇರುವುದು ಕೇಂದ್ರಕ್ಕೇ ವಿನಾ, ರಾಜ್ಯಕ್ಕೆ ಅಲ್ಲ ಎಂಬುದು ಖಚಿತ. ಹಾಗಾಗಿ, ಕರ್ನಾಟಕ ಮಾಡಿರುವ ಸಲಹೆಯು ಯುಕ್ತವಾಗಿಯೇ ಇದೆ. ಕೇಂದ್ರ ಇಂತಹ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ತಾನು ರಾಜ್ಯಗಳಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಮುಂದಾಗಬೇಕು.

ಲಾಕ್‌ಡೌನ್‌ನ ಕಾರಣದಿಂದಾಗಿ ರಾಜ್ಯ ಸರ್ಕಾರಗಳು ಕೂಡ ತೀವ್ರ ರೀತಿಯ ವರಮಾನ ಖೋತಾ ಎದುರಿಸುತ್ತಿವೆ. ಇದು ಅವುಗಳ ವೆಚ್ಚ ಸಾಮರ್ಥ್ಯವನ್ನು ತಗ್ಗಿಸಿದೆ. ಅಂದರೆ, ಅಷ್ಟರಮಟ್ಟಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ ಎಂದು ಅರ್ಥ. ಸರ್ಕಾರಿ ವೆಚ್ಚಗಳ ಮೂಲಕ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡಬೇಕಿರುವ ಈ ಹೊತ್ತಿನಲ್ಲಿ, ರಾಜ್ಯಗಳ ಕೈಕಟ್ಟಿ ಹಾಕುವುದರಿಂದ ಒಳಿತಾಗದು. ‘ದೇವರ ಆಟ’ದಿಂದಾಗಿ ಈ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಹೇಳಿಬಿಡಬಹುದು. ಆದರೆ, ಜಿಎಸ್‌ಟಿ ಪರಿಹಾರ ನೀಡಬೇಕಿರುವ ಕಾನೂನುಬದ್ಧತೆಯಿಂದ ತಪ್ಪಿಸಿಕೊಂಡರೆ, ಜನರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.