ADVERTISEMENT

ಸಂಪಾದಕೀಯ | ಬಾಲಕಿಯರಿಗೆ ಲೈಂಗಿಕ ಶೋಷಣೆ: ಶಿಕ್ಷಣ ವ್ಯವಸ್ಥೆಯ ಹಿಮ್ಮುಖ ಚಲನೆ

ಸಂಪಾದಕೀಯ
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
   
ಶಿಕ್ಷಣ ಮತ್ತು ಸುರಕ್ಷತೆ ಖಾತರಿಗೊಳಿಸಬೇಕಾದ ವಸತಿಶಾಲೆಗಳು ಬಾಲಕಿಯರಿಗೆ ಅಸುರಕ್ಷಿತ ತಾಣಗಳಾಗಿ ಪರಿಣಮಿಸುತ್ತಿವೆ. ಇದು ಕಳವಳದ ಸಂಗತಿ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ.

ಹದಿನೆಂಟು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭ ಧರಿಸುತ್ತಿರುವ ಪ್ರಕರಣಗಳು ಕರ್ನಾಟಕದಲ್ಲಿ ನಿರಂತರವಾಗಿ ಹೆಚ್ಚುತ್ತಿರುವುದು ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದರ ಸಂಕೇತವಾಗಿದೆ. ಬಾಲಕಿಯರಿಗೆ ಸುರಕ್ಷತೆ ಹಾಗೂ ಶಿಕ್ಷಣವನ್ನು ಖಾತರಿಪಡಿಸಬೇಕಾದ ಸರ್ಕಾರಿ ಹಾಸ್ಟೆಲ್‌ಗಳಲ್ಲಿಯೇ ಗರ್ಭಧಾರಣೆಯ ಪ್ರಕರಣಗಳು ವರದಿಯಾಗುತ್ತಿವೆ. ಈ ಘಟನೆಗಳು, ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಸರ್ಕಾರಿ ಕಾರ್ಯಕ್ರಮಗಳನ್ನು ಅಣಕ ಮಾಡುವಂತಿವೆ ಹಾಗೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳಿಗೆ ನಿದರ್ಶನದಂತಿವೆ. ದೇವರಾಜ ಅರಸ್‌ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯದ ಶೌಚಾಲಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮನೀಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಗ್ರಾಮವೊಂದರಿಂದ ಇತ್ತೀಚೆಗೆ ವರದಿಯಾಗಿದೆ. ಇಂತಹುದೇ ಮತ್ತೊಂದು ಪ್ರಕರಣದಲ್ಲಿ, ಯಾದಗಿರಿ ಜಿಲ್ಲೆಯ ಶಹಾಪುರದ ವಸತಿ ಶಾಲೆಯೊಂದರ ಶೌಚಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಗಳು, ಸರ್ಕಾರಿ ವಸತಿಶಾಲೆಗಳು ಹೆಣ್ಣುಮಕ್ಕಳಿಗೆ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗೆ ಕಾರಣವಾಗಿವೆ; ಸಿಬ್ಬಂದಿಯ ಹೊಣೆಗೇಡಿತನ ಹಾಗೂ ವ್ಯವಸ್ಥೆಯ ಲೋಪದೋಷಗಳಿಗೆ ಕನ್ನಡಿ ಹಿಡಿಯುವಂತಿವೆ. ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಅಳವಡಿಕೆ, ಮಹಿಳಾ ಸಿಬ್ಬಂದಿ ಕಡ್ಡಾಯವಾಗಿ ಇರುವುದು, ಮಕ್ಕಳ ಸಹಾಯವಾಣಿ ಸಂಖ್ಯೆ 1098ನ್ನು ತಪ್ಪದೆ ಪ್ರದರ್ಶಿಸುವುದು ಸೇರಿದಂತೆ ವಿದ್ಯಾರ್ಥಿನಿಯರ ಸುರಕ್ಷತೆಗೆ ಸಂಬಂಧಿಸಿದಂತೆ ಅನೇಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಆದರೆ, ಈ ಎಲ್ಲ ಸುರಕ್ಷತಾ ಕ್ರಮಗಳ ನಡುವೆಯೂ ಬಾಲಕಿಯರು ಸುರಕ್ಷಿತವಾಗಿಲ್ಲ ಎನ್ನುವುದು ಆತಂಕ ಹುಟ್ಟಿಸುವ ಸಂಗತಿ.

ಕಳೆದ ಮೂರು ವರ್ಷಗಳಲ್ಲಿ 14ರಿಂದ 18 ವರ್ಷ ವಯಸ್ಸಿನ ಮೂರು ಲಕ್ಷಕ್ಕೂ ಹೆಚ್ಚು ಬಾಲಕಿಯರ ಗರ್ಭಧಾರಣೆಯ ಪ್ರಕರಣಗಳು ರಾಜ್ಯದಲ್ಲಿ ಅಧಿಕೃತವಾಗಿ ಬೆಳಕಿಗೆ ಬಂದಿವೆ. ಈ ಘಟನೆಗಳು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಕೊರತೆ ಇರುವುದನ್ನು ಸೂಚಿಸುವಂತಿವೆ. ದೈಹಿಕ ಬದಲಾವಣೆಯ ಬಗ್ಗೆ ತಿಳಿವಳಿಕೆಯ ಕೊರತೆ ಹಾಗೂ ಓದುವ ವಯಸ್ಸಿನಲ್ಲಿ ಅಪಾಯಕರ ಸಂಬಂಧಗಳಿಗೆ ತೆರೆದುಕೊಳ್ಳುವುದರಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಇಲ್ಲದಿರುವುದು ಲೈಂಗಿಕ ಶೋಷಣೆಗೆ ಮುಖ್ಯ ಕಾರಣಗಳಾಗಿವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವುದಕ್ಕಾಗಿ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಒಳಗೊಂಡ ಕಾವಲು ಸಮಿತಿಗಳನ್ನು ಗ್ರಾಮ ಪಂಚಾಯಿತಿ ಹಂತದಲ್ಲಿ ರಚಿಸಲಾಗಿದೆ. ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದು ಈ ಕಾವಲು ಸಮಿತಿಗಳ ವೈಫಲ್ಯವನ್ನು ಸೂಚಿಸುವಂತಿದೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕು. ಕೆಲವೆಡೆ, ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನಗಳೂ ನಡೆದಿವೆ.

ಅಪ್ರಾಪ್ತ ವಯಸ್ಸಿನ ಬಾಲಕಿಯರ ಗರ್ಭಧಾರಣೆಯ ಪ್ರಕರಣಗಳು ಸಮಾಜದಲ್ಲಿನ ನೈತಿಕತೆ ಕ್ಷೀಣಿಸುತ್ತಿರುವುದರ ಸಂಕೇತವೂ ಹೌದು. ಮಕ್ಕಳ ಬಾಲ್ಯವನ್ನು ನಾಶಗೊಳಿಸುವ ಇಂಥ ಘಟನೆಗಳು, ಸಂತ್ರಸ್ತರನ್ನು ಬದುಕಿನುದ್ದಕ್ಕೂ ಮಾಯದ ಗಾಯದಂತೆ ಕಾಡುತ್ತವೆ. ಮಕ್ಕಳ ಕುಟುಂಬವನ್ನು ಸಂಕಟಕ್ಕೆ ದೂಡುತ್ತವೆ. ಗ್ರಾಮೀಣ ಹೆಣ್ಣುಮಕ್ಕಳು ಇತ್ತೀಚಿನ ವರ್ಷಗಳಲ್ಲಷ್ಟೇ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಸರ್ಕಾರದ ಹಲವು ಯೋಜನೆಗಳಿಂದಾಗಿ ಅವರು ಶಿಕ್ಷಣದ ಬೆಳಕಿಗೆ ಬರುವುದು ಸಾಧ್ಯವಾಗಿದೆ. ಆದರೆ, ಪ್ರಸ್ತುತ ನಡೆಯುತ್ತಿರುವ ಘಟನೆಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಿಮ್ಮುಖ ಚಲನೆಗೆ ಕಾರಣ ಆಗುವಂತಿವೆ. ಬಾಲಕಿಯರ ಸುರಕ್ಷತೆಯನ್ನು ಖಾತರಿಗೊಳಿಸದೆ ಹೋದರೆ ಇಡೀ ಶಿಕ್ಷಣವ್ಯವಸ್ಥೆಗೆ ಪೆಟ್ಟು ಬೀಳುತ್ತದೆ; ಅದರ ಪರಿಣಾಮ ಸಮಾಜದ ಮೇಲೂ ಆಗುತ್ತದೆ. ಬಾಲಕಿಯರ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಮುಖ್ಯವಾಗಿ, ದೌರ್ಜನ್ಯಕ್ಕೆ ಕಾರಣವಾಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಲೈಂಗಿಕ ಶಿಕ್ಷಣ ಹಾಗೂ ನೈತಿಕ ಶಿಕ್ಷಣಕ್ಕೆ ಮಕ್ಕಳು ತೆರೆದುಕೊಳ್ಳಲು ವ್ಯಾಪಕ ಅವಕಾಶಗಳನ್ನು ಕಲ್ಪಿಸಬೇಕಾಗಿದೆ. ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಿಂದ ವರದಿಯಾಗಿರುವ ಪ್ರಕರಣಗಳು, ವಸತಿಶಾಲೆಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸಮಗ್ರ ಬದಲಾವಣೆಗಳಿಗೆ ಕಾರಣವಾಗಬೇಕು. ಬಾಲಕಿಯರ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಬಗೆಯ ರಾಜಿಯನ್ನು ನಾಗರಿಕ ಸಮಾಜ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಮಕ್ಕಳ ಹಕ್ಕುಗಳ ಉಲ್ಲಂಘನೆ ಏರುಗತಿಯಲ್ಲಿರುವುದು ವಿಶ್ವದ ಎದುರು ರಾಜ್ಯದ ಘನತೆಯನ್ನು ಕುಗ್ಗಿಸುವಂತಹದ್ದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.