ದೇಶದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ ಅವರತ್ತ ವಕೀಲರೊಬ್ಬರು ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲೇ ಶೂ ಎಸೆಯಲು ಯತ್ನಿಸಿದ ಪ್ರಸಂಗವು ಆಘಾತಕಾರಿ. ಅಷ್ಟೇ ಅಲ್ಲ, ವೃತ್ತಿ ನಡತೆ ಹಾಗೂ ವೈಯಕ್ತಿಕ ನಡತೆಯು ಅದೆಷ್ಟು ಕೆಳಮಟ್ಟಕ್ಕೆ ಕುಸಿದಿದೆ ಎಂಬುದನ್ನು ಇದು ಹೇಳುತ್ತಿದೆ. ದಾಳಿ ನಡೆಸಿದ ವ್ಯಕ್ತಿಯು ಅಪ್ರಬುದ್ಧ ಅಲ್ಲ, ಅತೃಪ್ತ ವ್ಯಕ್ತಿ ಅಲ್ಲ, ಮಾನಸಿಕ ಅಸ್ವಸ್ಥನಂತೆಯೂ ಕಾಣುತ್ತಿಲ್ಲ, ಜನರ ಗಮನ ಸೆಳೆಯುವ ಉದ್ದೇಶದಿಂದ ದಾಳಿ ನಡೆಸಿರುವಂತೆ ಅನ್ನಿಸುತ್ತಿಲ್ಲ. ಈ ವ್ಯಕ್ತಿ 71 ವರ್ಷ ವಯಸ್ಸಿನ ವಕೀಲ, ಭಾರತೀಯ ವಕೀಲರ ಪರಿಷತ್ತಿನ ಸದಸ್ಯರಾಗಿದ್ದವರು. ಸನಾತನ ಧರ್ಮಕ್ಕೆ ಅಗೌರವ ತೋರುವುದನ್ನು ಭಾರತ ಸಹಿಸುವುದಿಲ್ಲ ಎಂದು ಈತ ಕೂಗುತ್ತಿದ್ದುದು ಕೇಳಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಈತ ಸೈದ್ಧಾಂತಿಕವಾಗಿ ಪ್ರೇರಣೆ ಪಡೆದಿದ್ದ ವ್ಯಕ್ತಿಯಾಗಿದ್ದಿರಬೇಕು. ಮಧ್ಯಪ್ರದೇಶದ ಖುಜುರಾಹೊ ದೇವಸ್ಥಾನ ಸಂಕೀರ್ಣದಲ್ಲಿ ಮಹಾವಿಷ್ಣುವಿನ ಪ್ರತಿಮೆಯನ್ನು ಪುನಃ ಸ್ಥಾಪಿಸಲು ಆದೇಶ ನೀಡಬೇಕು ಎಂಬ ಕೋರಿಕೆ ಇದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಿಜೆಐ ಅವರು ಕೆಲವು ಮಾತುಗಳನ್ನು ಆಡಿದ್ದರು. ದಾಳಿ ನಡೆಸಿದ ವ್ಯಕ್ತಿಯು ‘ಅವಮಾನ’ದ ಬಗ್ಗೆ ಉಲ್ಲೇಖಿಸುವಾಗ, ಸಿಜೆಐ ಅವರ ಆ ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಿರಬಹುದು. ಆ ಅರ್ಜಿಯನ್ನು ತಿರಸ್ಕರಿಸಿದ್ದ ಸಿಜೆಐ, ‘ಏನಾದರೂ ಮಾಡುವಂತೆ ದೇವರನ್ನೇ ಕೇಳಿಕೊಳ್ಳಿ’ ಎಂದು ಹೇಳಿದ್ದರು.
ಸಿಜೆಐ ಅವರ ಆ ಮಾತನ್ನು ಸಮಾಜದ ಒಂದು ವರ್ಗವು ದೇವರಿಗೆ ಮಾಡಿದ ಅವಮಾನ ಎಂಬಂತೆ ಭಾವಿಸಿತ್ತು. ಹೀಗಾಗಿ, ಈ ವ್ಯಕ್ತಿಯು ಸಿಜೆಐ ಅವರನ್ನು ಸಾರ್ವಜನಿಕವಾಗಿ ಅವಮಾನಿಸಲು ಅಥವಾ ಅವರನ್ನು ಶಿಕ್ಷಿಸಲು ತೀರ್ಮಾನಿಸಿರಬೇಕು. ಸಿಜೆಐ ಅವರ ಮಾತುಗಳ ವಿಚಾರವಾಗಿ ಸಾರ್ವಜನಿಕವಾಗಿ ಕೆಲವು ಪ್ರತಿಭಟನೆಗಳೂ ನಡೆದಿದ್ದವು. ಆ ಪ್ರಕರಣಕ್ಕೆ, ಆ ಅರ್ಜಿಗೆ ಕಾನೂನಿನ ಯಾವುದೇ ಆಯಾಮ ಇಲ್ಲ, ಹಾಗಾಗಿ ಅಲ್ಲಿ ನ್ಯಾಯಾಲಯದ ಮಧ್ಯಪ್ರವೇಶದ ಅಗತ್ಯ ಇಲ್ಲ ಎನ್ನುವುದು ಸಿಜೆಐ ಅವರ ಆ ಮಾತುಗಳ ಅರ್ಥವಾಗಿತ್ತು. ಅವರ ಮಾತುಗಳಿಂದ ದೇವರಿಗೆ ಅವಮಾನ ಹೇಗಾಗುತ್ತದೆ ಅಥವಾ ಅಲ್ಲಿ ಸನಾತನ ಧರ್ಮದ ಪ್ರಸ್ತಾಪ ಎಲ್ಲಿ ಆಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಕಾನೂನಿನ ಅಡಿಯಲ್ಲಿ ಯಾವುದೇ ಪರಿಹಾರ ಇಲ್ಲದಿರುವಾಗ ದೇವರನ್ನೇ ಪ್ರಾರ್ಥಿಸಿಕೊಳ್ಳಿ ಎಂದು ಯಾವುದೇ ವ್ಯಕ್ತಿಗೆ ಗಂಭೀರವಾಗಿ ಅಥವಾ ಲಘು ಧಾಟಿಯಲ್ಲಿ ಸಲಹೆ ನೀಡುವುದು ತಪ್ಪೇನೂ ಅಲ್ಲ. ದೇಶದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಲ್ಲಿರುವ ವ್ಯಕ್ತಿಗೆ, ಈ ದೇಶದ ಪ್ರಜೆಯಾಗಿರುವವರಿಗೆ ಅಂತಹ ಹೇಳಿಕೆ ನೀಡುವ ಸ್ವಾತಂತ್ರ್ಯ ಇದೆ. ಆ ಮಾತಿಗೆ ಸಿಜೆಐ ಅವರ ಮೇಲೆ ದೋಷ ಹೊರಿಸಲು ಅವಕಾಶ ಇಲ್ಲ. ತಾವು ಎಲ್ಲ ಧರ್ಮಗಳನ್ನೂ ಗೌರವಿಸುವುದಾಗಿ ಸಿಜೆಐ ಸ್ಪಷ್ಟವಾಗಿ ಹೇಳಿದ್ದಾರೆ. ಸಿಜೆಐ ಅವರ ಮಾತುಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ, ಅವರ ಮಾತುಗಳಲ್ಲಿ ಇಲ್ಲದಿದ್ದ ಉದ್ದೇಶವು ಇದೆ ಎಂದು ಆರೋಪಿಸಿದ್ದು ವಿವಾದಕ್ಕೆ, ಅವರ ಮೇಲೆ ಶೂ ಎಸೆಯಲು ಯತ್ನಿಸುವಂತಹ ಕೊಳಕು ಕೃತ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಸಮಾಜದಲ್ಲಿ ವ್ಯಾಪಿಸುತ್ತಿರುವ ಅಸಹನೆಯ ದ್ಯೋತಕ ಇದು.
ನ್ಯಾಯಾಂಗದ ತೀರ್ಮಾನವೊಂದು ಹಿಂದೂ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಕೆಲವರಿಗೆ ಅನ್ನಿಸಿದರೆ, ಅಂತಹ ತೀರ್ಮಾನವು ಕೂಡ ಈ ಬಗೆಯ ಅಸಹನೆಯ ಪರಿಣಾಮವನ್ನು ಎದುರಿಸಬೇಕಾಗುತ್ತಿದೆ. ಈ ಅಸಹನೆಯು ಕಾನೂನಿನ ಪಾರಮ್ಯವನ್ನು ಪ್ರಶ್ನಿಸುತ್ತಿದೆ, ದೇಶದ ಅತ್ಯುನ್ನತ ವ್ಯವಸ್ಥೆಯೊಂದನ್ನು ಹಗುರವಾಗಿ ಕಾಣುತ್ತಿದೆ. ಈ ಅಸಹನೆಯು ನ್ಯಾಯಾಂಗದ ತೀರ್ಮಾನಗಳನ್ನು ತಿರಸ್ಕರಿಸುವ ರೂಪದಲ್ಲಿ, ಗುಂಪುಹಲ್ಲೆ ರೂಪದಲ್ಲಿ, ‘ಬುಲ್ಡೋಜರ್ ನ್ಯಾಯ’ದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಶೂ ಎಸೆದಿರುವುದು ದ್ವೇಷವನ್ನು ಹೊದ್ದುಕೊಂಡಿರುವ ಕೃತ್ಯ. ನ್ಯಾಯಮೂರ್ತಿಗಳನ್ನು ಇತರ ಬಗೆಗಳಲ್ಲೂ ಟೀಕಿಸಿದ, ಅವರ ಮೇಲೆ ದಾಳಿ ನಡೆಸಿದ ನಿದರ್ಶನಗಳು ಇವೆ. ಸನಾತನ ಧರ್ಮವನ್ನು ಟೀಕಿಸಬಾರದು ಎಂಬ ಭಾವನೆ ಹಲವರಲ್ಲಿದೆ. ಆದರೆ, ಸಂವಿಧಾನವನ್ನು ಅಡಿಪಾಯವನ್ನಾಗಿ ಇರಿಸಿಕೊಂಡು ದೇಶವನ್ನು ಕಟ್ಟಲಾಗಿದೆಯೇ ವಿನಾ ಸನಾತನ ಧರ್ಮವನ್ನು ಅಲ್ಲ ಎಂಬುದನ್ನು ಮರೆಯಬಾರದು. ದಾಳಿ ನಡೆದ ನಂತರವೂ ಶಾಂತಚಿತ್ತವನ್ನು ಕಾಪಾಡಿಕೊಂಡ ನ್ಯಾಯಮೂರ್ತಿ ಗವಾಯಿ ಅವರು ಮೆಚ್ಚುಗೆಗೆ ಅರ್ಹರು. ದಾಳಿಯನ್ನು ಖಂಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಕೃತ್ಯವನ್ನು ಇಡೀ ದೇಶ ಖಂಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.