ADVERTISEMENT

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರಕಿಸಿಕೊಡಲು ಬೇಕು ಬದ್ಧತೆ

ಸಂಪಾದಕೀಯ | ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ರಾಜಕೀಯ ಪಕ್ಷಗಳು ಸಂಕಲ್ಪ ತೊಡಬೇಕು

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 2:02 IST
Last Updated 25 ಜೂನ್ 2020, 2:02 IST
ಸಂಪಾದಕೀಯ
ಸಂಪಾದಕೀಯ   

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎನ್ನುವ ಮಾತು ರಾಜಕಾರಣಿಗಳು, ಅಧಿಕಾರಸ್ಥರ ಭಾಷಣಗಳಲ್ಲಿ ಕೇಳಿಬರುತ್ತಲೇ ಇರುತ್ತದೆ. ಆದರೆ, ಪ್ರತೀ ಸಲ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷಗಳು ಮಹಿಳೆಯರನ್ನು ನಿರ್ಲಕ್ಷಿಸುವುದನ್ನು ಮುಂದುವರಿಸುತ್ತವೆ. ಕರ್ನಾಟಕದಿಂದ ರಾಜ್ಯಸಭೆಗೆ ಮತ್ತು ಇಲ್ಲಿನ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಇದೀಗ ಆಯ್ಕೆಯಾದ ಸನ್ನಿವೇಶದಲ್ಲೂ ಇದೇ ಧೋರಣೆ ಮರುಕಳಿಸಿದೆ. ಒಬ್ಬ ಮಹಿಳೆಗೂ ಅವಕಾಶ ದೊರೆತಿಲ್ಲ.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಎಲ್ಲವೂ ಈ ವಿಷಯದಲ್ಲಿ ಒಂದೇ. ರಾಜ್ಯಸಭೆಗೆ ಆಯ್ಕೆಯಾದ ನಾಲ್ವರು ಮತ್ತು ವಿಧಾನ ಪರಿಷತ್ತಿಗೆ ಆಯ್ಕೆಯಾದ ಏಳು ಮಂದಿಯಲ್ಲಿ ಎಲ್ಲರೂ ಪುರುಷರೇ. 75 ಸದಸ್ಯಬಲದ ರಾಜ್ಯ ವಿಧಾನ ಪರಿಷತ್ತಿನಲ್ಲಿದ್ದ ಮಹಿಳೆಯರಲ್ಲಿ ಒಬ್ಬರು ಈ ತಿಂಗಳ 23ರಂದು ನಿವೃತ್ತರಾಗಿದ್ದಾರೆ. ಮತ್ತೊಬ್ಬರು ತಿಂಗಳ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಆ ಬಳಿಕಉಳಿದುಕೊಳ್ಳುವುದು ಇಬ್ಬರು ಮಹಿಳೆಯರು ಮಾತ್ರ!

ಪರಿಷತ್ತಿನ ಐದು ನಾಮನಿರ್ದೇಶನ ಸ್ಥಾನಗಳು ಖಾಲಿಯಾಗಿದ್ದು, ಸರ್ಕಾರ ಮನಸ್ಸು ಮಾಡಿದರೆ ಈ ಎಲ್ಲ ಸ್ಥಾನಗಳಿಗೂ ಮಹಿಳೆಯರನ್ನು ನಾಮನಿರ್ದೇಶನಮಾಡಬಹುದು.ಆದರೆ, ಈಗಿನ ಪರಿಸ್ಥಿತಿ ನೋಡಿದರೆ, ಕನಸಿನಲ್ಲೂ ಅದು ಕಾರ್ಯರೂಪಕ್ಕೆ ಬರುವಂತೆ ಕಾಣುವುದಿಲ್ಲ. ಪಂಚಾಯತ್‌ರಾಜ್‌ ಕಾಯ್ದೆಯನ್ನು 1987ರಲ್ಲೇ ಜಾರಿಗೆ ತಂದು, ಪಂಚಾಯಿತಿಗಳಲ್ಲಿ ಶೇಕಡ 25ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕ. ರಾಜೀವ್‌ ಗಾಂಧಿ ನೇತೃತ್ವದ ಸರ್ಕಾರವು ಆಗಿನ್ನೂ ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದು ಮಹಿಳಾ ಮೀಸಲಾತಿಯನ್ನು ಕಡ್ಡಾಯಗೊಳಿಸಿರಲಿಲ್ಲ. ಈ ವಿಷಯದಲ್ಲಿ ಮತ್ತೂ ಒಂದು ಹೆಜ್ಜೆ ಮುಂದೆ ಹೋದ ಕರ್ನಾಟಕವು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿಯನ್ನು ಕಲ್ಪಿಸಿತು. ಈ ಪರಂಪರೆಯು ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ಸದಸ್ಯರನ್ನು ಆಯ್ಕೆ ಮಾಡುವ ವೇಳೆ ಹೇಳಹೆಸರಿಲ್ಲದಂತೆ ಕಣ್ಮರೆಯಾಗಿದೆ. ರಾಜ್ಯದ ವಿಧಾನಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. 224 ಚುನಾಯಿತ ಸದಸ್ಯರಲ್ಲಿ ಇರುವುದು ಎಂಟು ಮಹಿಳೆಯರು ಮಾತ್ರ.

ADVERTISEMENT

ಲೋಕಸಭೆಯಲ್ಲೂ ಮಹಿಳೆಯರ ಪ್ರಾತಿನಿಧ್ಯ ಅಷ್ಟಕ್ಕಷ್ಟೆ. ಮೊದಲ ಸಾರ್ವತ್ರಿಕ ಚುನಾವಣೆ ವೇಳೆ ಶೇ 5ರಷ್ಟಿದ್ದ ಮಹಿಳೆಯರ ಪ್ರಾತಿನಿಧ್ಯ ಈಗ ಶೇ 14ಕ್ಕೆ ಏರಿದೆ ಎನ್ನುವುದು ಬಿಟ್ಟರೆ ಹೇಳಿಕೊಳ್ಳುವಂತಹ ಬದಲಾವಣೆ ಏನೂ ಆಗಿಲ್ಲ. 2011ರ ಜನಗಣತಿಯ ಪ್ರಕಾರ, ದೇಶದಲ್ಲಿ ಮಹಿಳೆಯರ ಪ್ರಮಾಣ ಶೇ 48.5ರಷ್ಟಿದೆ. ಜನಸಂಖ್ಯೆಯ ಆಧಾರದಲ್ಲಿ ಅಲ್ಲದಿದ್ದರೂ ಎಲ್ಲ ಪಕ್ಷಗಳೂ ತಾತ್ವಿಕವಾಗಿ ಒಪ್ಪಿಕೊಂಡಿರುವ ಶೇ 33ರಷ್ಟು ಪ್ರಾತಿನಿಧ್ಯವಾದರೂ ಸಿಗಬೇಡವೇ?

1996ರಲ್ಲಿ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಪ್ರಸ್ತಾವ ಮೊದಲ ಬಾರಿಗೆ ಚರ್ಚೆಗೆ ಬಂತು. 2010ರಲ್ಲಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಈ ಸಂಬಂಧದ ಮಸೂದೆಗೆ ರಾಜ್ಯಸಭೆಯಲ್ಲಿ ಅಂಕಿತ ದೊರೆಯಿತು. ಆದರೆ, ಈ ಮಸೂದೆಗೆ ಲೋಕಸಭೆಯ ಅನುಮೋದನೆ ದೊರಕಿಸಿಕೊಡಲು ಸಾಧ್ಯವಾಗಿಲ್ಲ. ಮಹಿಳೆಯರಿಗೆ ಸೂಕ್ತ ರಾಜಕೀಯ ಸ್ಥಾನಮಾನ ದೊರಕಿಸಲು ರಾಜಕೀಯ ಪಕ್ಷಗಳಲ್ಲಿ ಸಹಮತ ಮತ್ತು ಇಚ್ಛಾಶಕ್ತಿ ಇಲ್ಲದಿರುವುದೇ ಇದಕ್ಕೆ ಕಾರಣ.

ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವವು ಎರಡೂವರೆ ದಶಕಗಳ ಬಳಿಕವೂ ಚರ್ಚೆಯ ಹಂತದಲ್ಲೇ ಉಳಿದುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ರಾಜಕೀಯದಲ್ಲಿ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯು ನ್ಯಾಯಬದ್ಧ ಪ್ರಜಾಪ್ರಭುತ್ವ ಮತ್ತು ಲಿಂಗಸಮಾನತೆಗೆ ಮೂಲಭೂತ ಅಗತ್ಯ ಎಂದು ವಿಶ್ವಸಂಸ್ಥೆ ಹೇಳಿದೆ. ಆದರೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಪುರುಷರ ಯಜಮಾನಿಕೆಯೇ ನಡೆಯುತ್ತಿದ್ದು, ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗುವುದು ಕನಸಾಗಿಯೇ ಉಳಿದಿದೆ. ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ತಿನ ಉಭಯ ಸದನಗಳ ಅನುಮೋದನೆ ದೊರಕಿಸಿಕೊಡಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗಲಾದರೂ ಬದ್ಧತೆ ತೋರುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.