ADVERTISEMENT

ಸಂಪಾದಕೀಯ: ಸೇವಾ ಸಿಬ್ಬಂದಿ ಜೊತೆ ಸಂಘರ್ಷ– ಪರಸ್ಪರ ಗೌರವಿಸುವುದು ಅಗತ್ಯ

ಸಿಬ್ಬಂದಿಯ ವರ್ತನೆ ಬಗ್ಗೆ ತಕರಾರು ಇದ್ದಲ್ಲಿ ಅದರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸುವ, ಮೇಲಧಿಕಾರಿಗಳಿಗೆ ದೂರು ಸಲ್ಲಿಸುವ ಅವಕಾಶ ಇದೆ.

ಸಂಪಾದಕೀಯ
Published 17 ಜೂನ್ 2025, 0:03 IST
Last Updated 17 ಜೂನ್ 2025, 0:03 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್‌ ಚಾಲಕನನ್ನು ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವ ಘಟನೆ ಸಾರ್ವಜನಿಕ ಜೀವನದಲ್ಲಿ ಸಂಯಮ ಮತ್ತು ಸಭ್ಯತೆ ಕ್ಷೀಣಿಸುತ್ತಿರುವುದರ ಸಂಕೇತವಾಗಿದೆ. ತಾನು ಕೇಳಿದ ಸ್ಥಳದಲ್ಲಿ ಚಾಲಕ ಬಸ್‌ ನಿಲ್ಲಿಸದಿರುವುದು ಹಲ್ಲೆ ನಡೆಸಿರುವ ಮಹಿಳೆಯ ಕೋಪಕ್ಕೆ ಕಾರಣವಾಗಿದೆ. ಕರ್ತವ್ಯ ನಿರ್ವಹಣೆಗೆ ಅಡ್ಡಿ, ಹಲ್ಲೆ, ಶಾಂತಿಭಂಗ ಹಾಗೂ ಸಾರ್ವಜನಿಕ ಸೇವೆಯಲ್ಲಿರುವ ನೌಕರನನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆಯು ಮೇಲ್ನೋಟಕ್ಕೆ ಬಿಎಂಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರೊಬ್ಬರ ನಡುವಿನ ಸಂಘರ್ಷದಂತೆ ಕಾಣಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾರಿಗೆ ನಿಗಮಗಳ ನೌಕರರ ಮೇಲೆ ನಡೆಯುತ್ತಿರುವ ಹಲ್ಲೆಯ ಪ್ರಕರಣಗಳು ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ, ಸಾರ್ವಜನಿಕ ಜೀವನ ಸಂಘರ್ಷಮಯ ಆಗುತ್ತಿರುವುದರ ಸಂಕೇತದಂತೆ ಈ ಘಟನೆಯನ್ನು ನೋಡಬಹುದಾಗಿದೆ.

ADVERTISEMENT

ಬಿಎಂಟಿಸಿ ಬಸ್‌ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದಿರುವ ಮಹಿಳಾ ಸಾಫ್ಟ್‌ವೇರ್‌ ಎಂಜಿನಿಯರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಾರಿಗೆ ನಿಗಮಗಳ ಚಾಲಕರು ಮತ್ತು ನಿರ್ವಾಹಕರಿಗೆ ರಕ್ಷಣೆ ನೀಡಲು ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿರುವುದು, ಪ್ರಕರಣದ ಸಂಕೀರ್ಣತೆಗೆ ನಿದರ್ಶನದಂತಿದೆ. ಬಸ್ ಚಾಲಕರು ಹಾಗೂ ನಿರ್ವಾಹಕರನ್ನು ಅವಮಾನಿಸುವ ಹಾಗೂ ಅವರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ; ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣವೂ ನಡೆದಿತ್ತು.

ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ದುರ್ವರ್ತನೆಯ ಪ್ರಕರಣಗಳು ಮರುಕಳಿಸದಂತೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಸಾರಿಗೆ ಸಚಿವರು ಪತ್ರದಲ್ಲಿ ತಿಳಿಸಿರುವುದನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಹಲ್ಲೆ ನಡೆಸಿರುವ ಟೆಕಿಯ ಮಾನಸಿಕ ಸ್ಥಿತಿ ಸರಿಯಾಗಿಲ್ಲವೆಂದು ಆಕೆಯ ಪತಿ ಹೇಳಿದ್ದು, ಪತ್ನಿಯ ಪರವಾಗಿ ಪೊಲೀಸರ ಬಳಿ ಕ್ಷಮೆ ಕೋರಿದ್ದಾರೆ. ಹಲ್ಲೆಕೋರ ಮಹಿಳೆಯ ಮಾನಸಿಕ ಸ್ಥಿತಿ ಯಾವ ಬಗೆಯದು ಎನ್ನುವುದನ್ನು ಹೊರತುಪಡಿಸಿದರೂ ಸಾರ್ವಜನಿಕ ಸೇವೆಯಲ್ಲಿ ಇರುವವರ ಮೇಲೆ ಹಲ್ಲೆ ನಡೆಸುವ ಮನಃಸ್ಥಿತಿಯನ್ನು ಆರೋಗ್ಯಕರವೆಂದು ಭಾವಿಸುವುದು ಸಾಧ್ಯವಿಲ್ಲ. ಅಂಥ ನಡವಳಿಕೆಯನ್ನು ಕಠಿಣ ಕಾನೂನು ಕ್ರಮದ ಮೂಲಕವೇ ಸರಿಪಡಿಸುವುದು ಅಗತ್ಯ.

ಸಾರ್ವಜನಿಕರ ಹಲ್ಲೆಕೋರ ಮನಃಸ್ಥಿತಿಗೆ ಕೆಲವೊಮ್ಮೆ ಚಾಲಕ– ನಿರ್ವಾಹಕರ ವರ್ತನೆಯೂ ಕಾರಣವಾಗಿರುತ್ತದೆ. ಸಾರಿಗೆ ನಿಗಮಗಳ ಬಸ್‌ಗಳನ್ನು ನಿಗದಿತ ನಿಲ್ದಾಣಗಳಲ್ಲಿ ನಿಲ್ಲಿಸದೆ ದೂರದಲ್ಲೆಲ್ಲೋ ನಿಲ್ಲಿಸುವ ದೂರುಗಳು ಸಾಮಾನ್ಯವಾಗಿವೆ. ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರೊಂದಿಗೆ ಒರಟಾಗಿ ನಡೆದುಕೊಳ್ಳುವ ನಿರ್ವಾಹಕ, ಚಾಲಕರೂ ಇದ್ದಾರೆ. ಸರ್ಕಾರದ ಸೌಲಭ್ಯಗಳಡಿ ಪ್ರಯಾಣಿಸುವ ಪ್ರಯಾಣಿಕರನ್ನು ಲಘುವಾಗಿ ಕಾಣುವುದು, ಇಲ್ಲವೇ ಲೇವಡಿ ಮಾಡುವವರೂ ಇದ್ದಾರೆ. ಸಾರ್ವಜನಿಕಸ್ನೇಹಿ ನಡವಳಿಕೆಯನ್ನು ರೂಪಿಸಿಕೊಳ್ಳುವ ಅಗತ್ಯವನ್ನು ತನ್ನ ಸಿಬ್ಬಂದಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಸಾರಿಗೆ ಇಲಾಖೆ ಮಾಡಬೇಕಾಗಿದೆ.

ಪ್ರಯಾಣಿಕರೊಂದಿಗೆ ಗೌರವ ಹಾಗೂ ಸಂಯಮದಿಂದ ವರ್ತಿಸುವುದನ್ನು ಸಾರ್ವಜನಿಕ ಸಾರಿಗೆ ಬಸ್‌ಗಳ ಚಾಲಕರು, ನಿರ್ವಾಹಕರು ರೂಢಿಸಿಕೊಳ್ಳಬೇಕು. ಸಾರಿಗೆ ನಿಗಮಗಳ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವ ವಿನಯವನ್ನು ಸಾರ್ವಜನಿಕರೂ ಅನುಸರಿಸಬೇಕು. ಚಾಲಕರು ಹಾಗೂ ನಿರ್ವಾಹಕರು ಅತೀವ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿರುತ್ತಾರೆ. ಸಾರ್ವಜನಿಕರ ದೈನಿಕವನ್ನು ಸಹನೀಯಗೊಳಿಸುವ ದಿಸೆಯಲ್ಲಿ ದುಡಿಯುವವರನ್ನು ಸೇವಕರಂತೆ ಕಾಣುವ, ಕೀಳಾಗಿ ನಡೆಸಿಕೊಳ್ಳುವ ಮನೋಭಾವ ಸರಿಯಾದುದಲ್ಲ. ಸಾರಿಗೆ ನಿಗಮಗಳ ಸಿಬ್ಬಂದಿಯು ಒರಟಾಗಿ ಅಥವಾ ನಿಯಮಬಾಹಿರವಾಗಿ ನಡೆದುಕೊಂಡ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸುವ, ಮೇಲಧಿಕಾರಿಗಳಿಗೆ ದೂರು ಸಲ್ಲಿಸುವ ಅವಕಾಶ ಇದ್ದೇ ಇದೆ. ಇದರ ಹೊರತಾಗಿ, ಕಾನೂನನ್ನು ಕೈಗೆತ್ತಿಕೊಂಡು ದಂಡಿಸುವ ಅಧಿಕಾರ ಸಾರ್ವಜನಿಕರಿಗಿಲ್ಲ. ಮಾತು, ಅಧಿಕಾರ ಹಾಗೂ ದೈಹಿಕ ಬಲದಿಂದ ಯಾರನ್ನು ಬೇಕಾದರೂ ಮಣಿಸಬಹುದು ಎನ್ನುವ ಅಹಂಕಾರ ಪ್ರದರ್ಶನ ಇತ್ತೀಚಿನ ದಿನಗಳಲ್ಲಿ ಸಹಜ ಎನ್ನುವಷ್ಟು ವ್ಯಾಪಕವಾಗುತ್ತಿದೆ. ಈ ಮನೋಧರ್ಮ ಬದಲಾಗಬೇಕು. ಗೌರವ ಕೊಟ್ಟು ಪಡೆದುಕೊಳ್ಳುವ ಮನಃಸ್ಥಿತಿ ಸಾರ್ವಜನಿಕರೊಂದಿಗೆ, ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವವರಿಗೂ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.