ADVERTISEMENT

ಸಂಪಾದಕೀಯ | ಸೈಬರ್ ವಂಚನೆ: ಕೋರ್ಟ್‌ ಕಳವಳ; ನಿಯಂತ್ರಣಕ್ಕೆ ಒಂದು ನೂಕುಬಲ

ಪ್ರಜಾವಾಣಿ ವಿಶೇಷ
Published 7 ನವೆಂಬರ್ 2025, 0:49 IST
Last Updated 7 ನವೆಂಬರ್ 2025, 0:49 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ, ಅದರಲ್ಲೂ ಮುಖ್ಯವಾಗಿ ಡಿಜಿಟಲ್ ಬಂಧನದಂತಹ ಅಪರಾಧ ಕೃತ್ಯಗಳ ಬಗ್ಗೆ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಕಳವಳವು ಇಂತಹ ಕೃತ್ಯಗಳು ಅದೆಷ್ಟು ಗಂಭೀರ ಸ್ವರೂಪವನ್ನು ಪಡೆದುಕೊಂಡಿವೆ ಎಂಬುದನ್ನು ಹೇಳುತ್ತಿದೆ. ಇಂತಹ ಅಪರಾಧ ಕೃತ್ಯಗಳನ್ನು ತಡೆಯಲು ಕೋರ್ಟ್‌ ಕೆಲವು ನಿರ್ದೇಶನಗಳನ್ನು ನೀಡಿದೆ. ಸೈಬರ್‌ ಅಪರಾಧಿಗಳು ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳು ಇಲ್ಲವೇ ನ್ಯಾಯಾಲಯದ ಅಧಿಕಾರಿಗಳು ಎಂದು ಹೇಳಿಕೊಂಡು ಅಮಾಯಕರಿಂದ ₹3,000 ಕೋಟಿಗೂ ಹೆಚ್ಚಿನ ಮೊತ್ತವನ್ನು ಸುಲಿಗೆ ಮಾಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಸೈಬರ್ ಅಪರಾಧದ ಹಲವು ಪ್ರಕರಣಗಳು ವರದಿಯಾಗಿಲ್ಲದಿರುವ ಸಾಧ್ಯತೆ ಇದೆ, ಹೀಗಾಗಿ ವಂಚನೆಯ ವಾಸ್ತವ ಮೊತ್ತವು ಇನ್ನಷ್ಟು ಹೆಚ್ಚಿರಬಹುದು. ಮತ್ತೆ ಮತ್ತೆ ವರದಿಯಾಗುತ್ತಿರುವ ಸೈಬರ್ ಅಪರಾಧ ಕೃತ್ಯಗಳು ಸಂತ್ರಸ್ತರಿಗೆ ಹಣಕಾಸಿನ ನಷ್ಟವನ್ನು ಉಂಟುಮಾಡುವುದರ ಜೊತೆಗೆ ಅವರನ್ನು ಮಾನಸಿಕ ಯಾತನೆಗೂ ದೂಡುತ್ತವೆ. ದೇಶದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ನೀತಿ ಆಯೋಗವು ಕೆಲವು ಸಮಯದ ಹಿಂದೆ ಕಳವಳ ವ್ಯಕ್ತಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗೆಯ ವಂಚನೆಗಳ ಬಗ್ಗೆ ತಮ್ಮ ‘ಮನ್‌ ಕಿ ಬಾತ್’ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು. ಸೈಬರ್ ಅಪರಾಧಗಳ ಭಿನ್ನ ಸಾಧ್ಯತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಪೊಲೀಸರು ಹಾಗೂ ಸರ್ಕಾರದ ಇತರ ಸಂಸ್ಥೆಗಳ ಅಧಿಕಾರಿಗಳು ಮಾಡುತ್ತಲೇ ಇದ್ದಾರೆ. ಆದರೆ, ಜನಜಾಗೃತಿ ಉದ್ದೇಶದ ಅಭಿಯಾನಗಳು ಹೆಚ್ಚಿನ ಪ್ರಯೋಜನ ತಂದುಕೊಟ್ಟಂತೆ ಕಾಣುತ್ತಿಲ್ಲ. 2022ರಲ್ಲಿ ದೇಶದಲ್ಲಿ ಸೈಬರ್ ಭದ್ರತೆಗೆ ಸಂಬಂಧಿಸಿದ 10.29 ಲಕ್ಷ ಪ್ರಕರಣಗಳು ವರದಿಯಾಗಿದ್ದವು; ಇದು, 2024ರಲ್ಲಿ 22.68 ಲಕ್ಷಕ್ಕೆ ಏರಿಕೆ ಆಗಿದೆ.

ದೇಶದ ಕುಟುಂಬಗಳ ಪೈಕಿ ಶೇ 85ರಷ್ಟಕ್ಕಿಂತ ಹೆಚ್ಚಿನವು ಈಗ ಇಂಟರ್ನೆಟ್‌ ಜೊತೆ ಸಂಪರ್ಕ ಹೊಂದಿವೆ. ಅಂದರೆ, ಅಪರಾಧಿಗಳಿಗೆ ಕುಕೃತ್ಯ ಎಸಗಲು ವಿಶಾಲವಾದ ನೆಲೆಯೊಂದು ಸಿಕ್ಕಂತಾಗಿದೆ. ಇಂಟರ್ನೆಟ್‌ ಮೂಲಕ, ಬಹಳ ದೂರದಲ್ಲಿ ಇದ್ದುಕೊಂಡೇ ಅಪರಾಧ ಕೃತ್ಯ ಎಸಗಲು ಅವಕಾಶ ಇರುವ ಕಾರಣದಿಂದಾಗಿ ವಂಚಕರಿಗೆ ತಮ್ಮ ಗುರುತನ್ನು ಮರೆಮಾಚಲು ಸಾಧ್ಯವಾಗುತ್ತಿದೆ. ವಂಚನೆ ಪ್ರಕರಣಗಳಲ್ಲಿ ಆಗಿರುವ ಬಂಧನವನ್ನು ಒಂದು ಸೂಚಕವನ್ನಾಗಿ ಪರಿಗಣಿಸುವುದಾದರೆ, ಸೈಬರ್ ವಂಚಕರು ಬಂಧನಕ್ಕೊಳಗಾಗುವ ಸಾಧ್ಯತೆಯು ಸಾಂಪ್ರದಾಯಿಕ ವಂಚಕರ ಬಂಧನ ಸಾಧ್ಯತೆಗಿಂತ ಕಡಿಮೆ. ಸೈಬರ್ ವಂಚಕರು ಬಹಳಷ್ಟು ಸಂದರ್ಭಗಳಲ್ಲಿ ಸಂತ್ರಸ್ತರಲ್ಲಿನ ಅರಿವಿನ ಕೊರತೆಯನ್ನು, ಅವರಲ್ಲಿನ ಭಯವನ್ನು, ಅಭದ್ರತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ, ಹಿರಿಯ ನಾಗರಿಕರನ್ನು ಅವರು ಗುರಿ ಮಾಡಿಕೊಳ್ಳುತ್ತಿದ್ದಾರೆ. ಅಮಾಯಕರನ್ನು ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ದಿನಗಳ ಕಾಲ ಒಂದೇ ಕೊಠಡಿಯಲ್ಲಿ ಇರಿಸಿದ, ಅವರಿಗೆ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲು ಕೂಡ ಅವಕಾಶ ನೀಡದ ನಿದರ್ಶನಗಳು ವರದಿಯಾಗಿವೆ. ಬ್ಯಾಂಕರ್‌ಗಳು, ಭಿನ್ನ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವವರು, ಸೈಬರ್ ಅಪರಾಧ ತಡೆ ವಿಭಾಗದಲ್ಲಿ ಕೆಲಸ ಮಾಡುವ ಪೊಲೀಸರು ಕೂಡ ವಂಚಕರಿಂದ ತೊಂದರೆಗೆ ಒಳಗಾಗಿದ್ದಾರೆ.

ADVERTISEMENT

ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಸುಪ್ರೀಂ ಕೋರ್ಟ್‌, ಇಂತಹ ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ಕಾನೂನು ಜಾರಿ ಸಂಸ್ಥೆಗಳ ಕೈ ಬಲಪಡಿಸುವ ಉದ್ದೇಶದಿಂದ ಕಠಿಣ ಆದೇಶಗಳನ್ನು ನೀಡುವುದಾಗಿ ಹೇಳಿದೆ. ನ್ಯಾಯಾಲಯದ ನಕಲಿ ಆದೇಶವೊಂದನ್ನು ಇರಿಸಿಕೊಂಡು ತಮ್ಮನ್ನು ಡಿಜಿಟಲ್‌ ಬಂಧನಕ್ಕೆ ಒಳಪಡಿಸಲಾಗಿತ್ತು, ₹1 ಕೋಟಿಗೂ ಹೆಚ್ಚು ಮೊತ್ತವನ್ನು ವಂಚಿಸಲಾಯಿತು ಎಂದು ಹರಿಯಾಣದ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಗೆ (ಸಿಜೆಐ) ಬರೆದ ಪತ್ರವನ್ನೇ ಆಧರಿಸಿ ಕೋರ್ಟ್‌ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಈ ವಿಚಾರದ ಬಗ್ಗೆ ಪರಿಶೀಲಿಸುವಂತೆ ಕೋರ್ಟ್‌ ಸಿಬಿಐಗೆ ಸೂಚಿಸಿತ್ತು. ಇಂತಹ ಪ್ರಕರಣಗಳ ತನಿಖೆಯಲ್ಲಿ ಎದುರಾಗುವ ಸಮಸ್ಯೆಗಳನ್ನು, ಸವಾಲುಗಳನ್ನು ಸಿಬಿಐ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ. ಸೈಬರ್ ಅಪರಾಧ ಕೃತ್ಯ ಎಸಗುವ ಹಲವರು ಮ್ಯಾನ್ಮಾರ್, ಲಾವೋಸ್, ಕಾಂಬೋಡಿಯಾದಲ್ಲಿ ಇದ್ದಾರೆ. ಅವರು ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ, ತಮ್ಮ ಕೆಲಸಕ್ಕೆ ಎ.ಐ. ನೆರವು ಪಡೆಯುತ್ತಿದ್ದಾರೆ, ತನಿಖಾ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ಪ್ರಕರಣದಲ್ಲಿ ತನಗೆ ನೆರವಾಗಲು ಸುಪ್ರೀಂ ಕೋರ್ಟ್‌, ಅಮಕಸ್ ಕ್ಯೂರಿ (ನ್ಯಾಯಾಲಯದ ಸಹಾಯಕ) ಒಬ್ಬರನ್ನು ನೇಮಕ ಮಾಡಿದೆ. ತನಿಖಾ ಸಂಸ್ಥೆಗಳ ಪಾಲಿಗೆ ಇಂತಹ ಪ್ರಕರಣಗಳ ತನಿಖೆಯು ಬಹಳ ದೀರ್ಘ ಅವಧಿಯ ಕೆಲಸವಾಗಬಹುದು, ಅಪೇಕ್ಷಿತ ಫಲಿತಾಂಶ ಸಿಗದೆ ಇರಬಹುದು. ಆದರೆ ಈಗ ಇಂತಹ ಪ್ರಕರಣಗಳ ಬಗ್ಗೆ ಕೋರ್ಟ್‌ ಕೂಡ ವಿಶೇಷ ಗಮನ ಹರಿಸಿರುವ ಕಾರಣದಿಂದಾಗಿ, ತನಿಖಾ ಸಂಸ್ಥೆಗಳು ಇನ್ನಷ್ಟು ಚುರುಕಿನಿಂದ ಕೆಲಸ ನಿರ್ವಹಿಸಬೇಕಾದ ಸಂದರ್ಭ ಸೃಷ್ಟಿಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.