ADVERTISEMENT

ಸಂಪಾದಕೀಯ | ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ: ಮತ್ತೆ ಬಯಲಾದ ಚೀನಾ ಹುನ್ನಾರ

ದಲೈ ಲಾಮಾ ಅವರೇ ತಮ್ಮ ಉತ್ತರಾಧಿಕಾರಿ ಆಯ್ಕೆಯ ನಿರ್ಧಾರ ಕೈಗೊಳ್ಳಬೇಕು, ಅದರಲ್ಲಿ ಯಾವುದೇ ಸರ್ಕಾರದ ಪಾತ್ರವಿರಬಾರದು ಎನ್ನುವ ಭಾರತದ ನಿಲುವು ತುಂಬಾ ಸ್ಪಷ್ಟವಾಗಿದೆ.

ಸಂಪಾದಕೀಯ
Published 5 ಜುಲೈ 2025, 0:50 IST
Last Updated 5 ಜುಲೈ 2025, 0:50 IST
<div class="paragraphs"><p>ದಲೈ ಲಾಮಾ</p></div>

ದಲೈ ಲಾಮಾ

   

ಟಿಬೆಟ್‌ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿಯ ಆಯ್ಕೆಗೆ ತನ್ನ ಸಮ್ಮತಿ ಅಗತ್ಯ ಎಂದು ಪ್ರತಿಪಾದಿಸುವ ಮೂಲಕ ಚೀನಾ ಧಾರ್ಷ್ಟ್ಯ ಪ್ರದರ್ಶಿಸಿದೆ. ಉತ್ತರಾಧಿಕಾರಿ ಆಯ್ಕೆಯ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಮೂಲಕ ಧರ್ಮದ ವ್ಯವಹಾರದಲ್ಲಿ ರಾಜಕೀಯ ಮಾಡುವ ಹುನ್ನಾರವನ್ನೂ ಅದು ನಡೆಸಿದೆ. ‘ಟಿಬೆಟ್‌ ವಿಷಯದಲ್ಲಿ ಭಾರತವು ಎಚ್ಚರಿಕೆಯಿಂದ ವರ್ತಿಸಬೇಕು’ ಎಂದು ಬೇರೆ ತನ್ನ ನೆರೆಯ ದೇಶಕ್ಕೆ ತಾಕೀತು ಮಾಡಿದೆ. ಟಿಬೆಟ್‌ನ ಬೌದ್ಧಮತದ ಮೇಲೆ ನಿಯಂತ್ರಣ ಸಾಧಿಸುವ ಆಕಾಂಕ್ಷೆಯಿಂದ, ಆ ಧರ್ಮದಲ್ಲಿ ಒಡಕು ಉಂಟುಮಾಡುವ ದುಸ್ಸಾಹಸಕ್ಕೂ ಚೀನಾ ಕೈಹಾಕಿದೆ. ದಲೈ ಲಾಮಾ ಅವರನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸಿರುವ ಚೀನಾ, ಟಿಬೆಟ್‌ನ ಬೌದ್ಧಮತದ ಮೇಲೆ ಹಿಡಿತ ಸಾಧಿಸುವಲ್ಲಿ ಅವರೇ ದೊಡ್ಡ ಅಡೆತಡೆ ಎಂದು ಬಲವಾಗಿ ನಂಬಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಜೂನ್‌ 30ರಂದು ನಡೆದ ತಮ್ಮ 90ನೇ ಹುಟ್ಟುಹಬ್ಬದ ಪೂರ್ವಭಾವಿ ಸಭೆಯಲ್ಲಿ ದಲೈ ಲಾಮಾ ಅವರು ಆಡಿದ ಮಾತು, ಚೀನಾದ ಷಿ ಜಿನ್‌ಪಿಂಗ್‌ ಆಡಳಿತಕ್ಕೆ ಕಸಿವಿಸಿ ಉಂಟುಮಾಡಿದೆ. ತಮ್ಮ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆಯು ‘ಗಾಡೆನ್ ಫೋಡ್ರಾಂಗ್ ಟ್ರಸ್ಟ್’ (ದಲೈ ಲಾಮಾ ಅವರು ಭಾರತದಲ್ಲಿ ಸ್ಥಾಪಿಸಿರುವ ಸ್ವಯಂಸೇವಾ ಸಂಸ್ಥೆ) ಮೂಲಕ ನಡೆಯಲಿದ್ದು, ಟಿಬೆಟ್‌ನ ಬೌದ್ಧಧರ್ಮದ ಸಂಪ್ರದಾಯಕ್ಕೆ ಅನುಗುಣವಾಗಿ ಆ ಪ್ರಕ್ರಿಯೆ ಇರಲಿದೆ ಎಂದು ಅವರು ಪ್ರಕಟಿಸಿದ್ದಾರೆ. ಬೌದ್ಧರ ಈ ಆಧ್ಯಾತ್ಮಿಕ ಗುರು ತಮ್ಮ ಉತ್ತರಾಧಿಕಾರಿಯನ್ನು ತಾವೇ ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ ಎನ್ನುವುದು ಭಾರತ ಸರ್ಕಾರದ ನಿಲುವಾಗಿದೆ. ಹೀಗಾಗಿ, ಭಾರತ ಕೂಡ ಷಿ ಜಿನ್‌ಪಿಂಗ್‌ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದೆ.

ಟಿಬೆಟ್‌ನ ಸ್ವಾತಂತ್ರ್ಯಕ್ಕಾಗಿ ಚೀನಾದ ಕಮ್ಯುನಿಸ್ಟ್ ನಾಯಕ ಮಾವೋ ವಿರುದ್ಧ ವಿಫಲ ಹೋರಾಟ ನಡೆಸಿ, 1959ರಲ್ಲಿ ತಮ್ಮ ಅನುಯಾಯಿಗಳೊಂದಿಗೆ ಭಾರತಕ್ಕೆ ಪಲಾಯನ ಮಾಡಿದವರು ದಲೈ ಲಾಮಾ. ಟೆಬೆಟ್‌ನಿಂದ ಬಂದ ಅವರ ಲಕ್ಷಾಂತರ ಅನುಯಾಯಿಗಳಿಗೂ ಭಾರತವು ನೆಲೆ ಒದಗಿಸಿದೆ. ಟಿಬೆಟ್‌ನಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಹೆಬ್ಬಯಕೆಯನ್ನು ದಲೈ ಲಾಮಾ ಹೊಂದಿದ್ದಾರೆ. ತನಗೆ ಹೀಗೆ ಸಡ್ಡು ಹೊಡೆದಿರುವುದಕ್ಕಾಗಿಯೇ ಚೀನಾ ಕೂಡ ಈ ಆಧ್ಯಾತ್ಮಿಕ ಗುರುವಿನ ವಿರುದ್ಧ ಗುಡುಗುತ್ತಲೇ ಇದೆ. ಟಿಬೆಟ್‌ನ ಬೌದ್ಧಮತದಲ್ಲಿ ಎರಡನೇ ಅತ್ಯುನ್ನತ ಸ್ಥಾನವಾದ ಪಂಚೆನ್‌ ಲಾಮಾ ಹುದ್ದೆಗೆ ದಲೈ ಲಾಮಾ ಅವರು 1995ರಲ್ಲಿ ನೇಮಿಸಿದ್ದ ಆರು ವರ್ಷದ ಬಾಲ ಭಿಕ್ಕು ಇದ್ದಕ್ಕಿದ್ದಂತೆ ಅದೃಶ್ಯನಾಗಿದ್ದ. ಮತ್ತೆ ಎಂದಿಗೂ ಆತ ಪತ್ತೆ ಆಗಲಿಲ್ಲ. ಬೇರೊಬ್ಬ ವ್ಯಕ್ತಿಯನ್ನು ಚೀನಾ ಸರ್ಕಾರವೇ ಪಂಚೆನ್‌ ಲಾಮಾ ಆಗಿ ನೇಮಕ ಮಾಡಿದೆ. ಆದರೆ, ಬೌದ್ಧಮತದ ಬಹುಪಾಲು ಮಂದಿ ಆ ವ್ಯಕ್ತಿಯನ್ನು ಪಂಚೆನ್‌ ಲಾಮಾ ಎಂದು ಸ್ವೀಕರಿಸಲು ಸಿದ್ಧರಿಲ್ಲ. ದಲೈ ಲಾಮಾ ಅವರ ಉತ್ತರಾಧಿಕಾರಿಯ ನೇಮಕದ ವಿಷಯದಲ್ಲಿ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ನಿರ್ಧಾರಕ್ಕೆ ಬದ್ಧರಿರುವುದಾಗಿ ಪಂಚೆನ್‌ ಲಾಮಾ ಘೋಷಿಸಿದ್ದಾರೆ. ತೊಂಬತ್ತು ವರ್ಷ ಪೂರೈಸಿರುವ ದಲೈ ಲಾಮಾ ಅವರು ನಿಧನ ಹೊಂದಿದ ಮೇಲೆ, ಆ ಅವಕಾಶವನ್ನು ಬಳಸಿಕೊಂಡು, ಧರ್ಮವನ್ನೇ ಇಬ್ಭಾಗ ಮಾಡಲು ಚೀನಾ ಹವಣಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದನ್ನೆಲ್ಲ ಗಮನಿಸಿಯೇ ದಲೈ ಲಾಮಾ ಅವರು, ‘ಇಬ್ಬಿಬ್ಬರು ಧರ್ಮಗುರುಗಳಾದರೆ ಯಾರೂ ಅವರಿಗೆ ಗೌರವ ನೀಡುವುದಿಲ್ಲ. ನನ್ನ ಉತ್ತರಾಧಿಕಾರಿ ಚೀನಾದ ಹೊರಗಿನವರಾಗಿರುತ್ತಾರೆ’ ಎಂದು ಹೇಳಿದ್ದಾರೆ.

ADVERTISEMENT

ದಲೈ ಲಾಮಾ, ಪಂಚೆನ್‌ ಲಾಮಾ ಸೇರಿದಂತೆ ಎಲ್ಲ ಧರ್ಮಗುರುಗಳ ಆಯ್ಕೆಯು ಧಾರ್ಮಿಕ ಹಾಗೂ ಚಾರಿತ್ರಿಕ ರೀತಿ–ರಿವಾಜುಗಳಿಗೆ ಅನುಗುಣವಾಗಿ ನಡೆಯಲಿದೆ ಮತ್ತು ಸರ್ಕಾರದ ಒಪ್ಪಿಗೆಯನ್ನು ಅದು ಅವಲಂಬಿಸಿದೆ ಎಂದು ಚೀನಾ ಹೇಳಿದೆ. ಆದರೆ, ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆಯ ವಿಷಯದಲ್ಲಿ ಭಾರತದ ನಿಲುವು ತುಂಬಾ ಸ್ಪಷ್ಟವಾಗಿದೆ ಮತ್ತು ಸೂಕ್ತವಾಗಿದೆ. ‘ದಲೈ ಲಾಮಾ ಅವರೇ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಬೇಕು. ಅದರಲ್ಲಿ ಯಾವುದೇ ಸರ್ಕಾರಕ್ಕೂ ಪಾತ್ರವಿಲ್ಲ’ ಎಂದು ಸ್ಪಷ್ಟಪಡಿಸಿದೆ. ಚೀನಾ–ಭಾರತ ನಡುವೆ ಗಾಲ್ವನ್‌ ಕಣಿವೆಯಲ್ಲಿ ನಡೆದ ಸಂಘರ್ಷದ ಬಳಿಕ ಎರಡೂ ದೇಶಗಳ ಮಧ್ಯೆ ಸೌಹಾರ್ದದ ಮಾತುಕತೆಗಳು ನಡೆದ ಹೊತ್ತಿನಲ್ಲೇ ಈ ವಿಷಯ ಮುನ್ನೆಲೆಗೆ ಬಂದಿದೆ. ‘ಸಂಬಂಧಗಳು ಸಹಜ ಸ್ಥಿತಿಗೆ ಮರಳುತ್ತಿರುವ ಹೊತ್ತಿನಲ್ಲಿ ಭಾರತ ತಳೆದಿರುವ ನಿಲುವು ಮಾತುಕತೆಯ ಹಳಿ ತಪ್ಪಿಸಲಿದೆ’ ಎಂಬ ಚೀನಾದ ಎಚ್ಚರಿಕೆಯನ್ನು ಭಾರತ ಸದ್ಯ ಗಣನೆಗೆ ತೆಗೆದುಕೊಂಡಿಲ್ಲ. ಟಿಬೆಟ್‌ ಹೋರಾಟವನ್ನು ಬೆಂಬಲಿಸುತ್ತಲೇ ಬಂದಿದ್ದ ಅಮೆರಿಕ, ಚೀನಾ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಯಾವ ನಿಲುವು ತಾಳಲಿದೆ ಎಂಬುದು ಕೂಡ ಕುತೂಹಲಕಾರಿ. ದಲೈ ಲಾಮಾ ಅವರ ಉತ್ತರಾಧಿಕಾರಿಯ ಆಯ್ಕೆ ಹೇಗೆ ನಡೆಯಲಿದೆ ಎಂಬ ಸಂಗತಿಯು ಭೌಗೋಳಿಕ ರಾಜಕೀಯ ಯಾವ ದಿಕ್ಕು ಪಡೆಯಲಿದೆ ಎಂಬುದರ ದ್ಯೋತಕವೂ ಆಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.