ADVERTISEMENT

ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ದೊರೆಯಲಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST
   

ರಾಜ್ಯದ ವಿವಿಧ ಭಾಗಗಳ ರೈತರು ಸಾಲುಸಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಕಬ್ಬು ಬೆಳೆಗಾರರು ಲಾಭದಾಯಕ ಮತ್ತು ನ್ಯಾಯೋಚಿತ ಬೆಲೆ ನಿಗದಿ, ಬಾಕಿ ಪಾವತಿಗೆ ಒತ್ತಾಯಿಸಿ ಬೀದಿಗೆ ಇಳಿದಿದ್ದಾರೆ. ಗಣನೀಯವಾಗಿ ಕುಸಿದ ಈರುಳ್ಳಿ ಬೆಲೆ, ಬೆಳೆಗಾರರನ್ನು ಧೃತಿಗೆಡಿಸಿದೆ. ಬೆಳ್ಳುಳ್ಳಿಗೂ ಸೂಕ್ತ ಬೆಲೆ ಸಿಗುತ್ತಿಲ್ಲ.

ಸಾಲ ಮನ್ನಾ ಯೋಜನೆಯು ಹಲವಾರು ಗೋಜಲುಗಳಲ್ಲಿ ಸಿಲುಕಿಕೊಂಡಿದೆ. ಈರುಳ್ಳಿಯ ಹೊಸ ಫಸಲು ಮಾರುಕಟ್ಟೆಗೆ ಬರುತ್ತಿದ್ದಂತೆ ನ್ಯಾಯೋಚಿತ ಬೆಲೆ ಸಿಗದೆ ಉತ್ತರ ಕರ್ನಾಟಕದ ಬೆಳೆಗಾರರು ಹತಾಶರಾಗಿದ್ದಾರೆ. ಹಾಕಿದ ಬಂಡವಾಳವೂ ಮರಳಿ ಬರದ ಸ್ಥಿತಿ ಕಂಡು ಅಸಹಾಯಕತೆಯಿಂದ ಕಣ್ಣೀರು ಹಾಕುತ್ತಿದ್ದಾರೆ. ಮಳೆ ಕೈಕೊಟ್ಟಿದ್ದರೂ, ನೀರಾವರಿ ಪ್ರದೇಶದ ರೈತರು ಸಮೃದ್ಧವಾಗಿ ಈರುಳ್ಳಿ ಬೆಳೆದಿರುವುದೇ ಮುಳುವಾಗಿ ಪರಿಣಮಿಸಿದೆ.

ಹಿಂದಿನ ವರ್ಷ ಕ್ವಿಂಟಲ್‌ಗೆ ₹ 4 ಸಾವಿರದಿಂದ ₹ 5 ಸಾವಿರದವರೆಗೆ ಮಾರಾಟವಾಗಿದ್ದ ಫಸಲು ಈಗ ಕನಿಷ್ಠ ₹ 100ರವರೆಗೆ ಇಳಿದಿರುವುದು ರೈತಾಪಿ ಜನರ ಸಂಕಷ್ಟ ದುಪ್ಪಟ್ಟುಗೊಳಿಸಿದೆ. ಫಸಲು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ಕಸುವೂ ಬೆಳೆಗಾರರಲ್ಲಿ ಇಲ್ಲ. ಹೊಲಕ್ಕೆ ಗೊಬ್ಬರವಾದರೂ ಆಗಲಿ ಅಂತ ಬಿಟ್ಟಿದ್ದಾರೆ. ಬೆಲೆ ಕುಸಿತದ ನಿರೀಕ್ಷೆಯಲ್ಲಿ ಬೆಳೆಗಾರರು ಹೊಲದಲ್ಲಿ ಬೆಳೆದು ನಿಂತಿರುವ ಫಸಲನ್ನು ಕಟಾವು ಮಾಡಲೂ ಹಿಂದೇಟು ಹಾಕುತ್ತಿರುವುದು ಈರುಳ್ಳಿ ಬಿಕ್ಕಟ್ಟು ತಲುಪಿರುವ ದುಃಸ್ಥಿತಿಗೆ ಸಾಕ್ಷಿಯಾಗಿದೆ. ಕೈಕೊಡುವ ಮಳೆ ಇಲ್ಲವೇ ಅತಿಯಾಗಿ ಸುರಿಯುವ ಮಳೆಯಿಂದಾಗಿ ಈರುಳ್ಳಿ ಗಾತ್ರವೂ ಚಿಕ್ಕದಾಗಿರು
ತ್ತದೆ. ಹರಾಜಿನಲ್ಲಿ ಕಡಿಮೆ ಬೆಲೆ ಕೂಗುವ ದಲ್ಲಾಳಿಗಳ ಕುತಂತ್ರಕ್ಕೂ ಬೆಳೆಗಾರರು ಬಲಿಪಶು ಆಗುತ್ತಾರೆ.

ADVERTISEMENT

ಮಹಾರಾಷ್ಟ್ರದಲ್ಲಿ ಈರುಳ್ಳಿ ಹಂಗಾಮು ಆರಂಭವಾಗಿ ಹೊಸ ಸರಕು ಪೇಟೆಗೆ ಬರುತ್ತಿದೆ. ಗಾಜಾ ಚಂಡಮಾರುತದ ಪರಿಣಾಮದ ಕಾರಣಕ್ಕೆ ತಮಿಳುನಾಡಿಗೆ ಕರ್ನಾಟಕದಿಂದ ಪೂರೈಕೆಗೆ ಅಡಚಣೆ ಉಂಟಾಗಿದೆ. ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿ, ಈರುಳ್ಳಿ ಸಂಗ್ರಹಿಸಿ ಇಟ್ಟಿದ್ದವರು ಏಕಾಏಕಿ ಮಾರುಕಟ್ಟೆಗೆ ಸರಕು ತರುತ್ತಿದ್ದಾರೆ. ಇವೆಲ್ಲವುಗಳ ಒಟ್ಟಾರೆ ಪರಿಣಾಮದಿಂದ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿದೆ. ಬೇಡಿಕೆಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲದಿರುವುದರಿಂದ ಬೆಲೆ ಕುಸಿಯುತ್ತಲೇ ಸಾಗಿದೆ. ಹೆಚ್ಚು ದಿನ ಬಾಳಿಕೆ ಬರದ ಈರುಳ್ಳಿ ಸಂಗ್ರಹಿಸಿ ಇಡಲು ಅಗತ್ಯ ಪ್ರಮಾಣದಲ್ಲಿ ಶೈತ್ಯಾಗಾರಗಳು ಇಲ್ಲದಿರುವುದೂ ಈ ಪರಿಸ್ಥಿತಿಗೆ ಕಾರಣ.

ಈರುಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾದಾಗ ಮಧ್ಯಮ ವರ್ಗದ ಮತದಾರರ ಆಕ್ರೋಶಕ್ಕೆ ಗುರಿಯಾಗುವ ಭಯದಿಂದ ಬಳಕೆದಾರರ ಕಣ್ಣೀರು ಒರೆಸಲು ಮುಂದಾಗುವ ಕೈಗಳು, ಈಗ ಪಾತಾಳಕ್ಕೆ ಕುಸಿದು ಬೆಳೆಗಾರರ ಕಣ್ಣಲ್ಲಿಯೂ ನೀರು ತರಿಸುವಾಗ ಕಂಡೂ ಕಾಣದಂತೆ ವರ್ತಿಸುತ್ತವೆ. ಮಾರುಕಟ್ಟೆ ಶಕ್ತಿಗಳಾದ ಬೇಡಿಕೆ ಮತ್ತು ಪೂರೈಕೆಯಲ್ಲಿನ ಏರುಪೇರಿನ ಜತೆಗೆ, ಮಧ್ಯವರ್ತಿಗಳ ದುರಾಸೆಯೂ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಬೆಲೆ ಸ್ಥಿರತೆ ನಿಧಿಯ ಮೂಲಕ ರೈತರ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ.

ಈರುಳ್ಳಿ ಬೆಳೆದು ಮಾರುಕಟ್ಟೆಗೆ ಸಾಗಿಸುವ ವೆಚ್ಚಕ್ಕೂ, ಮಾರುಕಟ್ಟೆಯಲ್ಲಿ ಸಿಗುವ ದರಕ್ಕೂ ಅರ್ಧದಷ್ಟು ವ್ಯತ್ಯಾಸ ಇದೆ. ಇದರಿಂದ ರೈತರು ಬದುಕುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಆಡಳಿತ ನಡೆಸುವವರು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಪ್ರತಿವರ್ಷ ಒಂದಲ್ಲ ಒಂದು ಅವಧಿಯಲ್ಲಿ ಬೆಲೆ ಕುಸಿತವಾಗುವುದು, ಬೆಳೆಗಾರರು ಬವಣೆ ಪಡುವುದು, ನಿರೀಕ್ಷೆಗಳೆಲ್ಲ ತಲೆಕೆಳಗಾಗಿ ಮಾರುಕಟ್ಟೆ ಶಕ್ತಿಗಳ ಕೈ ಮೇಲಾಗುವುದು, ಹತಾಶೆಯಿಂದ ಸರಕನ್ನು ರಸ್ತೆಗೆ ಚೆಲ್ಲಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ ವಿದ್ಯಮಾನವಾಗಿದೆ. ಇಂತಹ ಪರಿಸ್ಥಿತಿ ತಪ್ಪಬೇಕಾಗಿದೆ. ಬೆಳೆ ಉತ್ಪಾದನೆ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಮಧ್ಯೆ ಸಮತೋಲನ ತರಲು ವೈಜ್ಞಾನಿಕ ನೀತಿಯೊಂದನ್ನು ರೂಪಿಸುವುದು ಅಗತ್ಯ. ಬೆಲೆ ಕುಸಿತದ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಂತಹದೊಂದು ಕ್ರಮ ಅತ್ಯವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.