ADVERTISEMENT

ಬ್ಯಾಂಕ್‌ಗಳ ವಿಲೀನ ನಿರ್ಧಾರ ಆರ್ಥಿಕತೆಗೆ ಚೈತನ್ಯ ತುಂಬಲಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 20:00 IST
Last Updated 1 ಸೆಪ್ಟೆಂಬರ್ 2019, 20:00 IST
   

ಸರ್ಕಾರಿ ಸ್ವಾಮ್ಯದ 10 ಬ್ಯಾಂಕ್‌ಗಳನ್ನು ವಿಲೀನಗೊಳಿಸಿ, ನಾಲ್ಕು ದೊಡ್ಡ ಬ್ಯಾಂಕ್‌ಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಇದು, ಮೂರನೇ ಸುತ್ತಿನ ವಿಲೀನ. ಇದರಿಂದಾಗಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ ಈ ಹಿಂದಿನ 27ರಿಂದ 12ಕ್ಕೆ ಇಳಿಯಲಿದೆ. ಸ್ಪರ್ಧಾತ್ಮಕತೆ ಮತ್ತು ಕಾರ್ಯದಕ್ಷತೆ ಹೆಚ್ಚಿಸುವುದು ವಿಲೀನದ ಹಿಂದಿನ ಉದ್ದೇಶ. 2025ರ ವೇಳೆಗೆ ದೇಶದ ಆರ್ಥಿಕತೆಯ ಗಾತ್ರವನ್ನು ₹ 350 ಲಕ್ಷ ಕೋಟಿ ಮೊತ್ತಕ್ಕೆ ಹೆಚ್ಚಿಸುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಈ ಗುರಿ ಸಾಧನೆಯಲ್ಲಿ ದೊಡ್ಡ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸಲಿವೆ ಎಂಬುದು ಸರ್ಕಾರದ ಪ್ರತಿಪಾದನೆ.

ವಿಲೀನದಿಂದಾಗಿ ಗ್ರಾಹಕರ ಬ್ಯಾಂಕಿಂಗ್‌ ಅನುಭವ ಉತ್ತಮಗೊಳ್ಳಲಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಆಯ್ಕೆಯ ಸ್ವಾತಂತ್ರ್ಯ ಮಿತಗೊಳ್ಳುತ್ತದೆ ಎಂಬುದು ಇದರ ಇನ್ನೊಂದು ಆಯಾಮ. ಬ್ಯಾಂಕ್‌ಗಳು ಗಾತ್ರದಲ್ಲಿ ಹಿರಿದಾಗುವುದರಿಂದ ವಹಿವಾಟಿನ ಮೊತ್ತ ಗಮನಾರ್ಹವಾಗಿ ಏರಿಕೆ ಕಾಣಲಿದೆ. ಆದರೆ, ದೇಶಿ ಆರ್ಥಿಕತೆಯಲ್ಲಿ ಈಗ ಕಂಡುಬಂದಿರುವ ಮಂದಗತಿಯ ಬೆಳವಣಿಗೆಗೆ ಇದರಿಂದ ಪರಿಹಾರ ದೊರೆಯುವುದೇ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು. ವಿಲೀನದಿಂದಾಗಿ ಕರ್ನಾಟಕದ ಜನರ ಭಾವನೆಗಳಿಗೆ ಗಾಸಿಯಾಗಿದೆ. ಐದು ಬ್ಯಾಂಕ್‌ಗಳ ಸ್ಥಾಪನೆಯ ನೆಲೆವೀಡಾದ ರಾಜ್ಯದಲ್ಲಿ ಈಗ
ಕೆನರಾ ಬ್ಯಾಂಕ್‌ವೊಂದೇ ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳಲಿದೆ. ಬ್ಯಾಂಕ್‌ಗಳ ಜತೆ ಗ್ರಾಹಕರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಆ ಸಂಬಂಧ ಈಗ ಕಡಿದುಹೋಗಲಿದೆ ಎಂಬುದು ನೋವಿನ ಸಂಗತಿ.

ದೇಶಿ ಆರ್ಥಿಕತೆಯ ಹಲವಾರು ವಲಯಗಳಲ್ಲಿನ ಪ್ರಗತಿಯು ಕುಂಟುತ್ತಾ ಸಾಗಿರುವಾಗ ಹಣಕಾಸು ಕ್ಷೇತ್ರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಮುಖ್ಯ. ವಿಲೀನ ನಿರ್ಧಾರವು ಹಣಕಾಸು ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗೆ ಅಸ್ಥಿರತೆ ಮೂಡಿಸಬಹುದು ಎಂಬ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಇದನ್ನು ಸುಳ್ಳಾಗಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕೆಲಸ ಮಾಡಬೇಕಿದೆ. ದೊಡ್ಡ ಬ್ಯಾಂಕ್‌ಗಳು ಆಘಾತಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲವು, ಸರ್ಕಾರದ ನೆರವು ನೆಚ್ಚಿಕೊಳ್ಳದೆ ಹೆಚ್ಚಿನ ಸಂಪನ್ಮೂಲ ಕ್ರೋಡೀಕರಿಸಿಕೊಳ್ಳ ಬಲ್ಲವು ಎನ್ನುವ ವಾದ ಇದೆ. ಆದರೆ, ಈ ವಾದ ಕೂಡ ಪೂರ್ಣ ಸಮರ್ಥನೀಯ ಅಲ್ಲ. 2008ರಲ್ಲಿ ಸಂಭವಿಸಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ದೊಡ್ಡ ಬ್ಯಾಂಕ್‌ಗಳ ವೈಫಲ್ಯದ ಕೊಡುಗೆಯೂ ಗಣನೀಯ ಎನ್ನುವುದನ್ನು ನಾವು ಮರೆಯಬಾರದು. ಬಂಡವಾಳ ಕೊರತೆ, ವಸೂಲಾಗದ ಸಾಲದ ಪ್ರಮಾಣ ಹೆಚ್ಚಳದಂತಹ ಸಮಸ್ಯೆಗಳು ಬ್ಯಾಂಕಿಂಗ್‌ ವಲಯವನ್ನು ಬಾಧಿಸುವುದನ್ನು ವಿಲೀನದಿಂದ ತಡೆಗಟ್ಟಬಹುದು ಎಂಬ ವಾದವೂ ಇದೆ. ವಿಲೀನವೊಂದರಿಂದಲೇ ಅದನ್ನು ಸಾಧಿಸಲಾಗದು. ಅದು, ಆಡಳಿತದಲ್ಲಿ ಹೆಚ್ಚಿನ ದಕ್ಷತೆಯನ್ನು ಬಯಸುತ್ತದೆ.

ADVERTISEMENT

ಜಾಗತಿಕ ಮಟ್ಟದ ಬ್ಯಾಂಕ್‌ಗಳು ಎನ್ನುವ ವ್ಯಾಖ್ಯಾನವು ಗಾತ್ರಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲ, ಆಡಳಿತದಲ್ಲೂ ಅದು ಬಿಂಬಿತವಾಗಬೇಕು. ನಿರ್ವಹಣೆಯಲ್ಲಿ ವೃತ್ತಿಪರತೆ ಬಹಳ ಮುಖ್ಯ. ಅರ್ಥ ವ್ಯವಸ್ಥೆಗೆ ಬೆಂಬಲ ನೀಡಲು ಬ್ಯಾಂಕ್‌ಗಳಿಗೆ ದೊಡ್ಡ ಬಂಡವಾಳದ ಅಗತ್ಯ ಇದೆ. ಬ್ಯಾಂಕಿಂಗ್‌ ವಲಯಕ್ಕೆ ₹ 55,250 ಕೋಟಿ ಮೊತ್ತದ ಪುನರ್ಧನ ನೀಡಲು ಸರ್ಕಾರ ಈಗ ಮುಂದಾಗಿದೆ. ಈ ಹಣಕಾಸು ವರ್ಷದಲ್ಲಿ ಒಟ್ಟು ₹ 70 ಸಾವಿರ ಕೋಟಿ ಮೊತ್ತದ ನೆರವು ಒದಗಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಇದರಿಂದ ಸಾಲ ನೀಡಿಕೆ ಚುರುಕುಗೊಂಡು ಆರ್ಥಿಕತೆಗೆ ಉತ್ತೇಜನ ದೊರೆಯಬಹುದು.ದೊಡ್ಡ ಮಟ್ಟದ ಈ ವಿಲೀನಕ್ಕೆ ಬ್ಯಾಂಕ್‌ ನೌಕರರ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಜತೆಗೆ ನೌಕರರಲ್ಲಿ ಉದ್ಯೋಗ ನಷ್ಟದ ಆತಂಕವೂ ಉಂಟಾಗಿದೆ. ಈ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಬೇಕು. ಇದು, ಸದ್ಯಕ್ಕೆ ಸರ್ಕಾರದ ಮುಂದಿರುವ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.