ADVERTISEMENT

ಸಂಪಾದಕೀಯ: ಹೆಪಟೈಟಿಸ್ ಕಾಯಿಲೆಯ ನಿಯಂತ್ರಣ– ಸಾಧ್ಯತೆಯ ಜೊತೆ ಸವಾಲುಗಳೂ ಇವೆ

ಸಂಪಾದಕೀಯ

ಸಂಪಾದಕೀಯ
Published 14 ಏಪ್ರಿಲ್ 2024, 19:11 IST
Last Updated 14 ಏಪ್ರಿಲ್ 2024, 19:11 IST
ಸಂಪಾದಕೀಯ
ಸಂಪಾದಕೀಯ   

ಜಾಗತಿಕವಾಗಿ ಯಕೃತ್ತಿನ ವೈರಾಣು ಸೋಂಕು (ವೈರಲ್‌ ಹೆಪಟೈಟಿಸ್) ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ‘ಹೆಪಟೈಟಿಸ್ 2024’ ವರದಿಯು ಕಳವಳ ವ್ಯಕ್ತಪಡಿಸಿದೆ.
ಭಾರತದಂತಹ ದೇಶಗಳಲ್ಲಿ ಈ ಕಾಯಿಲೆಯು ತಂದಿಡಬಹುದಾದ ಸಮಸ್ಯೆಗಳ ಬಗ್ಗೆಯೂ ವರದಿಯು ಕಳವಳ ವ್ಯಕ್ತಪಡಿಸಿದೆ. ಈ ಕಾಯಿಲೆಯಿಂದ ಜಾಗತಿಕವಾಗಿ ಸಾವನ್ನಪ್ಪುವವರ ಸಂಖ್ಯೆ ಪ್ರತಿವರ್ಷ 13 ಲಕ್ಷ. ಸೋಂಕಿನ ಮೂಲಕ ಹರಡಿ, ಮನುಷ್ಯನ ಸಾವಿಗೆ ಕಾರಣವಾಗುವ ಕಾಯಿಲೆಗಳ ಪಟ್ಟಿಯಲ್ಲಿ ಇದು ಎರಡನೆಯ ಸ್ಥಾನದಲ್ಲಿದೆ. ಭಾರತದಲ್ಲಿ ಹೆಪಟೈಟಿಸ್ ಬಿ ರೋಗಿಗಳ ಸಂಖ್ಯೆ ಸರಿಸುಮಾರು ಮೂರು ಕೋಟಿಯಷ್ಟಿದೆ. ಹೆಪಟೈಟಿಸ್ ಸಿ ಕಾಯಿಲೆಗೆ ತುತ್ತಾದವರ ಸಂಖ್ಯೆ 50 ಲಕ್ಷಕ್ಕೂ ಹೆಚ್ಚಿದೆ. ಅಂದರೆ, ಹೆ‍ಪಟೈಟಿಸ್‌ನ ಹೊರೆಯನ್ನು ಹೊತ್ತಿರುವ ದೇಶಗಳ ಸಾಲಿನಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹೆಪಟೈಟಿಸ್‌ನಿಂದಾಗಿ ಮೃತಪಟ್ಟಿದ್ದಾರೆ. ಹೆಪಟೈಟಿಸ್ ಪತ್ತೆ ಹಾಗೂ ಅದಕ್ಕೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಭಾರತದಲ್ಲಿ ಹಲವು ಸವಾಲುಗಳಿವೆ. ಈ ರೋಗದ ಪತ್ತೆ ಪ್ರಮಾಣವು ಬಹಳ ಕಡಿಮೆ ಇರುವುದೇ ಬಹುದೊಡ್ಡ ಸಮಸ್ಯೆ. ಹೆಪಟೈಟಿಸ್ ಸಿ ಪ್ರಕರಣಗಳ ಪೈಕಿ ಶೇಕಡ 30ಕ್ಕಿಂತ ಕಡಿಮೆ ಪ್ರಕರಣಗಳು ಸರಿಯಾದ ಸಮಯದಲ್ಲಿ ಪತ್ತೆಯಾಗುತ್ತಿವೆ.
ಹೆಪಟೈಟಿಸ್ ಬಿ ವಿಚಾರದಲ್ಲಿ ಈ ಪ್ರಮಾಣವು ಶೇ 3ಕ್ಕಿಂತ ಕಡಿಮೆ. ರೋಗ ಪತ್ತೆ ಹಾಗೂ ಚಿಕಿತ್ಸೆ ಇಲ್ಲದಿದ್ದರೆ ಈ ಕಾಯಿಲೆಯು ಬಹುತೇಕರ ಪಾಲಿಗೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ.

ಹೆಪಟೈಟಿಸ್ ಎಂಬುದು ವೈರಾಣು ಸೋಂಕು. ಇದಕ್ಕೆ ತುತ್ತಾದ ಹಲವರು ಚೇತರಿಸಿಕೊಳ್ಳುತ್ತಾರೆ ಎಂಬುದು ನಿಜ. ಆದರೆ ಕೆಲವರಲ್ಲಿ ಇದು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು ಅಥವಾ ಕ್ಯಾನ್ಸರ್‌ಗೆ ಕೂಡ ಇದು ಕಾರಣವಾಗಬಹುದು. ಹೆಪಟೈಟಿಸ್‌ನಿಂದ ಹೆಚ್ಚಿನ ತೊಂದರೆ ಆಗುವ ಸಾಧ್ಯತೆ ಇರುವುದು ಮಕ್ಕಳಲ್ಲಿ. ಈ ಕಾಯಿಲೆಗೆ ಕಾರಣವಾಗುವ ಸೋಂಕು ಅರಿವಿಗೆ ಬಾರದಂತೆ ದೇಹದಲ್ಲಿ ಬಹುಕಾಲ ಉಳಿದು
ಕೊಳ್ಳಬಹುದು. ಅಲ್ಲದೆ, ಸೋಂಕು ಇರುವ ವ್ಯಕ್ತಿಯ ಸಂಪರ್ಕಕ್ಕೆ ಬರುವ ಇತರರಿಗೆ ಹರಡುವ ಸಾಧ್ಯತೆಯೂ ಇರುತ್ತದೆ. ರಾಷ್ಟ್ರೀಯ ವೈರಾಣು ಹೆಪಟೈಟಿಸ್ ನಿಯಂತ್ರಣ ಯೋಜನೆಯ ಅಡಿಯಲ್ಲಿ ದೇಶದಲ್ಲಿ ರೋಗದ ಪತ್ತೆ ಸೇವೆ ಹಾಗೂ ರೋಗಕ್ಕೆ ಚಿಕಿತ್ಸೆ ಉಚಿತವಾಗಿ ಲಭ್ಯವಿವೆ. ರಕ್ತದಾನದ ಸಂದರ್ಭದಲ್ಲಿ ಈ ಕಾಯಿಲೆ ಹರಡುವ ಸಾಧ್ಯತೆಯನ್ನು ಕನಿಷ್ಠ ಮಟ್ಟಕ್ಕೆ ತರಲಾಗಿದೆ. ಆದರೆ ಜನನದ ಸಮಯದಲ್ಲಿ ಇದು ತಾಯಿಯಿಂದ ಮಗುವಿಗೆ ಬರುವ ಸಾಧ್ಯತೆ ಹೆಚ್ಚು. ಈ ಕಾಯಿಲೆಯನ್ನು ತಡೆಯುವಲ್ಲಿ ಲಸಿಕೆಯು ಪರಿಣಾಮಕಾರಿ ಆಗಿದ್ದರೂ ಬಹುತೇಕ ಶಿಶುಗಳಿಗೆ ಇದನ್ನು ನೀಡುತ್ತಿಲ್ಲ. ಏಕೆಂದರೆ ದೇಶದ ಹಲವು ಕಡೆಗಳಲ್ಲಿ ಆಸ್ಪತ್ರೆಗಳಲ್ಲಿ ಆಗುವ ಜನನ ಪ್ರಮಾಣವು ಶೇಕಡ 50ಕ್ಕಿಂತ ಕಡಿಮೆ. ನವಜಾತ ಶಿಶುಗಳಿಗೆ ಈ ಲಸಿಕೆ ಲಭ್ಯವಾಗುವಂತೆ ಮಾಡಬೇಕು. ಹಾಗೆಯೇ, ಲಸಿಕೆ ಪಡೆಯದ ವಯಸ್ಕರು ಕೂಡ ಅದನ್ನು ಪಡೆದುಕೊಳ್ಳಬೇಕು. ಹೆಪಟೈಟಿಸ್ ಸಿ ಕಾಯಿಲೆಗೆ ಚಿಕಿತ್ಸೆ ಕಷ್ಟವಲ್ಲ ಎಂದು ವೈದ್ಯಲೋಕ ಹೇಳುತ್ತದೆ. ಅಲ್ಲದೆ, ಇದು ದೀರ್ಘಕಾಲೀನ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ.

ಈ ಎರಡೂ ವಿಧಗಳ ಕಾಯಿಲೆಗೆ ಚಿಕಿತ್ಸಾ ವೆಚ್ಚವು ದುಬಾರಿ ಅಲ್ಲದಿದ್ದರೂ, ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡುವ ವ್ಯವಸ್ಥೆಯು ಸುಧಾರಿಸಬೇಕಿದೆ. ಆಗ ರೋಗದ ನಿಯಂತ್ರಣ ಸಾಧ್ಯವಾಗು
ತ್ತದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಇನ್ನಷ್ಟು ಚುರುಕಿನಿಂದ ಕೆಲಸ ಮಾಡುವ ಅಗತ್ಯವೂ ಇದೆ.

ADVERTISEMENT

2030ಕ್ಕೆ ಮೊದಲು ಹೆಪಟೈಟಿಸ್ ಕಾಯಿಲೆಯನ್ನು ನಿರ್ಮೂಲಗೊಳಿಸುವ ಗುರಿಯನ್ನು ಭಾರತ ಹೊಂದಿದೆ. ಇದೇ ಅವಧಿಯಲ್ಲಿ ವಿಶ್ವದ ಇತರೆಡೆಗಳಿಂದಲೂ ಈ ಕಾಯಿಲೆಯ ನಿರ್ಮೂಲನೆ ಆಗಬೇಕು ಎಂಬ ಗುರಿಯನ್ನು ಡಬ್ಲ್ಯುಎಚ್‌ಒ ನಿಗದಿ ಮಾಡಿದೆ. ಈ ಗುರಿಯನ್ನು ತಲುಪಲು ಸಾಧ್ಯವಿದೆ ಎಂದು ಡಬ್ಲ್ಯುಎಚ್‌ಒ ಭಾವಿಸಿದೆ. ಆದರೆ ಇಲ್ಲಿ ಸವಾಲುಗಳೂ ಇವೆ. ಏಷ್ಯಾದಲ್ಲಿ ಭಾರತ ಮತ್ತು ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ, ಆಫ್ರಿಕಾದ ಹಲವು ದೇಶಗಳಲ್ಲಿ ಈ ಕಾಯಿಲೆಯ ಪತ್ತೆ, ಚಿಕಿತ್ಸೆಗೆ 2025ರೊಳಗೆ ಎಲ್ಲರಿಗೂ ಸೌಲಭ್ಯಗಳು ಸಿಗುವಂತೆ ಮಾಡಿದರೆ, 2030ರ ಗುರಿಯನ್ನು ತಲುಪುವತ್ತ ಬಹುದೊಡ್ಡ ಹೆಜ್ಜೆ ಇರಿಸಿದಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.