ADVERTISEMENT

ಸಂಪಾದಕೀಯ| ಬಿಬಿಎಂಪಿ ಚುನಾವಣೆಗೆ ಇನ್ನು ಯಾವ ವಿಳಂಬವೂ ಬೇಡ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 21:03 IST
Last Updated 27 ನವೆಂಬರ್ 2022, 21:03 IST
ಸಂಪಾದಕೀಯ
ಸಂಪಾದಕೀಯ   

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆಯು ಈಗಾಗಲೇ ವರ್ಷಗಳಷ್ಟು ವಿಳಂಬವಾಗಿದೆ. ಈ ಹೊತ್ತಿಗೆ ಚುನಾವಣೆ ನಡೆದಿರಬೇಕಿತ್ತು. ಆದರೆ, ಚುನಾವಣೆಯನ್ನು ಇನ್ನಷ್ಟು ವಿಳಂಬಗೊಳಿಸಲು ರಾಜ್ಯ ಸರ್ಕಾರವು ಹತಾಶ ಯತ್ನವೊಂದನ್ನು ನಡೆಸಿದೆ. ಹೈಕೋರ್ಟ್‌ ಈ ಹಿಂದೆ ನೀಡಿದ್ದ ನಿರ್ದೇಶನಗಳನ್ನು ಕಾರ್ಯರೂಪಕ್ಕೆ ತರಲು ಮೂರು ತಿಂಗಳ ಕಾಲಾವಕಾಶ ಬೇಕು ಎಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿರುವ ಸರ್ಕಾರದ ನಡೆಯು ಚುನಾವಣೆಯನ್ನು ಇನ್ನಷ್ಟು ವಿಳಂಬ ಮಾಡುವ ಒಂದು ತಂತ್ರ. ರಾಜ್ಯ ಸರ್ಕಾರ ಹೊರಡಿಸಿದ್ದ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರು ಇದ್ದ ಏಕಸದಸ್ಯ ಪೀಠವು ಸೆಪ್ಟೆಂಬರ್‌ನಲ್ಲಿ ರದ್ದುಪಡಿಸಿತ್ತು. ಈ ಮೀಸಲಾತಿಯು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳಿಗೆ ಅನುಗುಣವಾಗಿ ಇಲ್ಲ ಎಂದು ಹೈಕೋರ್ಟ್ ಆಗ ಹೇಳಿತ್ತು. ಚುನಾವಣೆಯನ್ನು ಡಿಸೆಂಬರ್‌ 31ರೊಳಗೆ ನಡೆಸಬೇಕು ಎಂದು ಹೇಳಿತ್ತು. ಅಲ್ಲದೆ, ಮೀಸಲಾತಿ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸಿ ನವೆಂಬರ್ 30ಕ್ಕೆ ಮೊದಲು ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಕೂಡ ಅದು ಸೂಚಿಸಿತ್ತು. ವಾರ್ಡ್‌ವಾರು ಮೀಸಲಾತಿ ಪಟ್ಟಿಯಲ್ಲಿ ಮಹಿಳೆಯರಿಗೆ ನಿರ್ದಿಷ್ಟ ವಾರ್ಡ್‌ಗಳನ್ನು ಮೀಸಲಾಗಿ ಇರಿಸಿರುವಲ್ಲಿ ಬಹಳ ಲೋ‍ಪಗಳು ಕಂಡುಬಂದಿವೆ ಎಂದು ಅದು ಹೇಳಿತ್ತು. ಬಿಜೆಪಿ ಹೊರತುಪಡಿಸಿದ ರಾಜಕೀಯ ಪಕ್ಷಗಳ ಪ್ರಾತಿನಿಧ್ಯ ಇರುವ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸಲಾಗಿದೆ ಎಂದು ಅದು ಹೇಳಿತ್ತು. ‘ನಿರ್ದಿಷ್ಟ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಬಹುತೇಕ ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲು
ಇರಿಸಿರುವುದರಿಂದ ಮಹಿಳೆಯರ ಸಂಖ್ಯೆ ಹೆಚ್ಚಿರುವ ಇತರ ಕ್ಷೇತ್ರಗಳ ವ್ಯಾಪ್ತಿಯ ವಾರ್ಡ್‌ಗಳಿಗೆ ಸೇರಿದ ಮಹಿಳೆಯರಿಗೆ ರಾಜಕೀಯ ಅವಕಾಶ ನಿರಾಕರಿಸಿದಂತೆ ಆಗುತ್ತದೆ. ಇದು ತಾರತಮ್ಯದಿಂದ ಕೂಡಿದೆ, ಇದು ಮನಸೋಇಚ್ಛೆ ಕೈಗೊಂಡ ತೀರ್ಮಾನದಂತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಪ್ರಮಾಣಾನುಗತ ಪ್ರಾತಿನಿಧ್ಯ ನೀಡಲು ಅವರಿಗೆ ವಾರ್ಡ್‌ವಾರು ಮೀಸಲಾತಿಯನ್ನು ಕೂಡ ಪ್ರಮಾಣಾನುಗತವಾಗಿ ನೀಡುವುದು ಸೂಕ್ತ’ ಎಂದು ಕೋರ್ಟ್‌ ಹೇಳಿತ್ತು.

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಇದೇ ಬಗೆಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌, ಚುನಾವಣೆ ಹೊಸಿಲಲ್ಲಿ ಇರುವಾಗ ರಾಜ್ಯಗಳು ಆ ಚುನಾವಣೆಯನ್ನು ಇನ್ನಷ್ಟು ವಿಳಂಬ ಮಾಡಲು ಮರುವಿಂಗಡಣೆ ಅಥವಾ ಹೊಸ ವಾರ್ಡ್‌ಗಳ ರಚನೆಯಂತಹ ಕಾರಣಗಳನ್ನು ನೀಡುವಂತಿಲ್ಲ ಎಂದು ಹೇಳಿದೆ. ಸಾಂವಿಧಾನಿಕ ಆಶಯಗಳನ್ನು ಉಲ್ಲಂಘಿಸಲು ಅವಕಾಶ ಇಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌, ರಾಜ್ಯಗಳು ಚುನಾವಣೆಗಳನ್ನು ನಿಗದಿತ ವೇಳಾಪಟ್ಟಿಗೆ ಅನುಗುಣವಾಗಿ ನಡೆಸಲೇಬೇಕು ಎಂದು ಸ್ಪಷ್ಟಪಡಿಸಿತ್ತು. ಅಗತ್ಯ ಕಂಡುಬಂದರೆ, ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ಅಸ್ತಿತ್ವದಲ್ಲಿ ಇದ್ದ ಮೀಸಲಾತಿ ಪಟ್ಟಿಯನ್ನೇ ಬಳಸಿಕೊಂಡು ಚುನಾವಣೆಯನ್ನು ನಡೆಸಬೇಕು ಎಂದು ಹೇಳಿತ್ತು. 2020ರ ಸೆಪ್ಟೆಂಬರ್‌ ತಿಂಗಳಿನಿಂದ ಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲ. ರಾಜ್ಯ ಸರ್ಕಾರವು ಒಂದಲ್ಲ ಒಂದು ಕಾರಣ ಹೇಳುತ್ತ ಚುನಾವಣೆಯನ್ನು ಮುಂದಕ್ಕೆ ತಳ್ಳುತ್ತ ಬಂದಿದೆ. ಇನ್ನು ಆರು ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಬಿಬಿಎಂಪಿ ಚುನಾವಣಾ ಫಲಿತಾಂಶವು ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕದಿಂದಾಗಿ ಆಡಳಿತಾರೂಢ ಬಿಜೆಪಿಗೂ ವಿರೋಧ ಪಕ್ಷಗಳಿಗೂ ಬಿಬಿಎಂಪಿ ಚುನಾವಣೆ ಈಗ ನಡೆಯುವುದು ಬೇಕಿಲ್ಲ ಎಂಬಂತೆ ಭಾಸವಾಗುತ್ತಿದೆ. ಬೆಂಗಳೂರು ನಗರದಲ್ಲಿ ಈಗ ಶಾಸಕರಿಗೆ, ಅದರಲ್ಲೂ ಮುಖ್ಯವಾಗಿ ಸಚಿವರಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಂತಿದೆ. ಆದರೆ, ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ ಅಸ್ತಿತ್ವಕ್ಕೆ ಬಂದರೆ ತಮಗೆ ಒಂದಿಷ್ಟು ತೊಡಕು ಉಂಟಾಗಬಹುದು ಎಂದು ಅವರು ಭಾವಿಸಿರಬಹುದು. ರಾಜಕೀಯ ಪಕ್ಷಗಳ ಲೆಕ್ಕಾಚಾರಗಳು ನ್ಯಾಯಾಲಯಗಳಿಗೆ ತಿಳಿಯದಿರುವುದೇನೂ ಅಲ್ಲ. ಬಿಬಿಎಂಪಿಗೆ ನಡೆಯಬೇಕಿರುವ ಚುನಾವಣೆಯನ್ನು ಇನ್ನೂ ಮುಂದಕ್ಕೆ ತಳ್ಳುವುದು ಪ್ರಜಾತಂತ್ರಕ್ಕೆ ಮಾಡುವ ಅಪಚಾರವಾಗುತ್ತದೆ. ಆ ರೀತಿ ಆಗಲು ಯಾರೂ ಅವಕಾಶ ಮಾಡಿಕೊಡಬಾರದು. ಕೌನ್ಸಿಲ್‌ಗೆ ಚುನಾವಣೆ ನಡೆಸಬೇಕು. ನಗರದ ಜನರಿಗೆ ತಮ್ಮ ಅಳಲು ಹೇಳಿಕೊಳ್ಳಲು, ಪರಿಹಾರ ಪಡೆದುಕೊಳ್ಳಲು ಹೊಣೆಯರಿತ ವ್ಯಕ್ತಿಯೊಬ್ಬರು ತಮ್ಮ ವಾರ್ಡ್‌ನಲ್ಲೇ ಸಿಗುವಂತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT