ADVERTISEMENT

ಸಂಪಾದಕೀಯ | ಬಡ್ಡಿ ಮೇಲೆ ಬಡ್ಡಿ ಹೇರಿಕೆ: ಸಮಸ್ಯೆಗೆ ಪರಿಹಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 1:24 IST
Last Updated 22 ಜೂನ್ 2020, 1:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬ್ಯಾಂಕ್‌ ಸಾಲ ಮರುಪಾವತಿ ಮುಂದೂಡಿಕೆಯ ಪರಿಹಾರ ಕ್ರಮವು ಸಾಲಗಾರರು ಮತ್ತು ಬ್ಯಾಂಕ್‌ಗಳಿಗೆ ಕಗ್ಗಂಟಾಗಿ ಪರಿಣಮಿಸಿದೆ. ಸಮಾನ ಮಾಸಿಕ ಕಂತು (ಇಎಂಐ) ಪಾವತಿ ಮುಂದೂಡಿಕೆ ಅವಧಿಯ ಮೇಲಿನ ಬಡ್ಡಿ ಮೊತ್ತಕ್ಕೆ ಬಡ್ಡಿ ವಿಧಿಸುವ ನಿರ್ಧಾರವು ವಿವಾದಕ್ಕೆ ಕಾರಣವಾಗಿದೆ. ಈ ಉಪಕ್ರಮವನ್ನು ಪರಾಮರ್ಶಿಸಿ, ಹೊಸ ಮಾರ್ಗಸೂಚಿ ಪ್ರಕಟಿಸಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಸುಪ್ರೀಂ ಕೋರ್ಟ್‌ ಸೂಚಿಸಿರುವುದು ಸಮಯೋಚಿತ ನಿರ್ಧಾರ. ಕೋವಿಡ್‌ ನಿಯಂತ್ರಿಸುವ ಉದ್ದೇಶದ ದಿಗ್ಬಂಧನದಿಂದ ಸಾಲಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗೃಹ, ವಾಹನ ಖರೀದಿ, ವೈಯಕ್ತಿಕ ಮತ್ತಿತರ ಉದ್ದೇಶದ ಅವಧಿ ಸಾಲ ಪಡೆದವರಿಗೆ ಪರಿಹಾರ ಕಲ್ಪಿಸುವ ರಿಸರ್ವ್ ಬ್ಯಾಂಕಿನ ಕೊಡುಗೆಯು ಎಷ್ಟು ಪ್ರಯೋಜನಕಾರಿ ಎನ್ನುವ ಪ್ರಶ್ನೆಗಳು ಎದುರಾಗಿವೆ. ಬಡ್ಡಿ ಮೇಲೆ ಬಡ್ಡಿ ವಸೂಲಿ ಮಾಡುವ ಬ್ಯಾಂಕ್‌ಗಳ ನಿರ್ಧಾರವು ಸಾಲಗಾರರ ಮೇಲೆ ಹೆಚ್ಚುವರಿ ಹೊರೆ ಹೊರಿಸಿದೆ. ಆರ್ಥಿಕ ಚಟುವಟಿಕೆ ಸ್ಥಗಿತ, ಉದ್ಯೋಗ ನಷ್ಟ, ವೇತನ ಕಡಿತದಿಂದ ಬಾಧಿತರಾದವರಿಗೆ ತಾತ್ಕಾಲಿಕ ನೆಮ್ಮದಿ ಒದಗಿಸಲು ಸಾಲ ಮರುಪಾವತಿ ಮುಂದೂಡಿಕೆ ಅವಧಿಯನ್ನು 6 ತಿಂಗಳಿಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಸಾಲಗಾರರನ್ನು ಸುಸ್ತಿದಾರರೆಂದು ಅಪಖ್ಯಾತಿಗೆ ಗುರಿಪಡಿಸುವುದಿಲ್ಲ ಮತ್ತು ಅವರ ಸಾಲ ಮರುಪಾವತಿ ಸಾಮರ್ಥ್ಯ (ಕ್ರೆಡಿಟ್ ರೇಟಿಂಗ್‌) ತಗ್ಗಿಸುವುದಿಲ್ಲ ಎಂದು ಭರವಸೆ ನೀಡಲಾಗಿದೆ. ಸಾಲ ಮುಂದೂಡಿಕೆ ಸೌಲಭ್ಯವು ತಕ್ಷಣಕ್ಕೆ ಪ್ರಯೋಜನಕಾರಿ ಎನಿಸಿದರೂ ಪಾವತಿಸದೇ ಇರುವ ಇಎಂಐಗಳಿಗೆ ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗಿರುವುದು ಸಾಲ ಪಡೆದಿರುವವರಿಗೆ ಮುಂದೆ ಹೆಚ್ಚುವರಿ ಹೊರೆಯಾಗಲಿದೆ.

ಈ ಬಿಕ್ಕಟ್ಟು ಎದುರಾಗಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಕಾರಣ. ಭವಿಷ್ಯದ ಸಂಭವನೀಯ ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚಿಸದೆ, ಬ್ಯಾಂಕ್‌ಗಳ ಪ್ರತಿನಿಧಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸದೆ ಆರ್‌ಬಿಐ ಅವಸರದಲ್ಲಿ ತೀರ್ಮಾನ ತೆಗೆದುಕೊಂಡಿದೆ. ಹೆಚ್ಚುವರಿ ಬಡ್ಡಿ ಪಾವತಿಸಬೇಕಾದ ಕಾರಣಕ್ಕೆ ಅನೇಕರು ಈ ಸೌಲಭ್ಯ ಪಡೆಯಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಈ ಕೊಡುಗೆಯ ಆಶಯ ಈಡೇರುತ್ತಿಲ್ಲ. ಇದು ಬ್ಯಾಂಕ್‌ಗಳಿಗೆ ಸಂಬಂಧಿಸಿದ ವಿಷಯ ಎಂದು ಹೇಳಿ ಕೇಂದ್ರ ಸರ್ಕಾರವು ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಹೊರಟಿದೆ. ಸಾಲಗಾರರಿಗೆ ಹೊರೆಯಾಗದಂತೆ ಪರಿಹಾರ ಸೂತ್ರವೊಂದನ್ನು ರೂಪಿಸಲೂ ಹಿಂದೇಟು ಹಾಕುತ್ತಿದೆ.

ADVERTISEMENT

‘ಸಾಲ ಮರುಪಾವತಿ ಮುಂದೂಡಲು ಕೋರುವ ಸಾಲಗಾರರೇ ಅದಕ್ಕೆ ಸೂಕ್ತ ಬೆಲೆ (ಬಡ್ಡಿ) ತೆರಬೇಕಾಗುತ್ತದೆ’ ಎಂಬರ್ಥದಲ್ಲಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೋರ್ಟ್‌ನಲ್ಲಿ ವಾದ ಮಂಡಿಸಿರುವುದು ಸರ್ಕಾರದ ಮೊಂಡುವಾದಕ್ಕೆ ಕನ್ನಡಿ ಹಿಡಿಯುತ್ತದೆ. ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡುವ ಉದ್ದೇಶ ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಮರುಪಾವತಿಅವಧಿ ಮುಂದೂಡಿರುವುದರಿಂದ ಬ್ಯಾಂಕ್‌ಗಳಿಗೆ ನಷ್ಟ ಉಂಟಾಗಲಿದೆ.

ಠೇವಣಿದಾರರ ಹಿತಾಸಕ್ತಿಗೂ ಧಕ್ಕೆ ಆಗಲಿದೆ ಎನ್ನುವ ವಾದದಲ್ಲಿಯೂ ಹುರುಳಿದೆ. ಆದ್ದರಿಂದ ಬಡ್ಡಿ ಮೇಲಿನ ಬಡ್ಡಿಯನ್ನು ಸರ್ಕಾರವೇ ಭರಿಸಿ, ಸಾಲಗಾರರ ಮೇಲೆ ಆಗಲಿರುವ ಹೊರೆಯನ್ನು ತಪ್ಪಿಸಬೇಕು; ಬ್ಯಾಂಕುಗಳ ಹಿತಾಸಕ್ತಿಯನ್ನೂ ಕಾಪಾಡಬೇಕು. ಕೊಡುಗೆಯ ಅಪೇಕ್ಷಿತ ಉದ್ದೇಶ ಈಡೇರಿಸಬೇಕು. ಪರಿಹಾರ ಪ್ರಕಟಿಸಿದ ನಂತರ ತಾನು ಅಸಹಾಯಕ ಎಂದು ಸರ್ಕಾರ ಹೇಳಿಕೊಳ್ಳುವಂತಿಲ್ಲ ಎಂದು ಕೋರ್ಟ್‌ ಹೇಳಿರುವುದರಲ್ಲಿ ಅರ್ಥ ಇದೆ. ಕೋರ್ಟ್‌ ಸಲಹೆಯಂತೆ ಸರ್ಕಾರ ಮತ್ತು ಆರ್‌ಬಿಐ, ಪರಿಹಾರ ಕೊಡುಗೆಯಈ ಉಪಕ್ರಮವನ್ನು ಪರಾಮರ್ಶಿಸಿ ಸಾಲಗಾರರ ಹಿತ ಕಾಪಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.