ADVERTISEMENT

ಸಂಪಾದಕೀಯ| ಬಿಬಿಸಿಯಲ್ಲಿ ಐ.ಟಿ. ಪರಿಶೀಲನೆ ವಿಮರ್ಶೆಯನ್ನು ಹತ್ತಿಕ್ಕುವ ನಡೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 20:30 IST
Last Updated 16 ಫೆಬ್ರುವರಿ 2023, 20:30 IST
Sampadakiya 17-02-2023.jpg
Sampadakiya 17-02-2023.jpg   

ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ (ಐ.ಟಿ) ‘ಪರಿಶೀಲನೆ’ ಮುಂದುವರಿದಿದೆ. ಹಣಕಾಸು ವಿಚಾರದಲ್ಲಿ ಎಸಗಿದ ತಪ್ಪು ಅಥವಾ ದುರ್ನಡತೆಯ ನ್ಯಾಯಯುತವಾದ ತಪಾಸಣೆಯಂತೂ ಇದು ಖಂಡಿತಾ ಅಲ್ಲ; ಮಾಧ್ಯಮ ಸಂಸ್ಥೆಯೊಂದಕ್ಕೆ ಸರ್ಕಾರದ ಕುಮ್ಮಕ್ಕಿನಿಂದಾಗಿ ನೀಡುತ್ತಿರುವ ಕಿರುಕುಳ ಇದು. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆ ಮತ್ತು ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ಬಿಬಿಸಿ ಪ್ರಸಾರ ಮಾಡಿದೆ; ಬಳಿಕ ಬಿಜೆಪಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಈ ಮಾಧ್ಯಮ ಸಂಸ್ಥೆಯನ್ನು ಟೀಕಿಸುವ ಮತ್ತು ಸಂಸ್ಥೆಯು ಭಾರತ ವಿರೋಧಿ ಎಂದು ಬಿಂಬಿಸುವ ಕೆಲಸದಲ್ಲಿ ನಿರತವಾಗಿವೆ. ಸಾಕ್ಷ್ಯಚಿತ್ರ ಪ್ರಸಾರದ ಸಂದರ್ಭ ಮತ್ತು ಬಿಬಿಸಿಯ ಉದ್ದೇಶವನ್ನು ಪ್ರಶ್ನಿಸಲಾಗಿದೆ; ಸಾಕ್ಷ್ಯಚಿತ್ರದಲ್ಲಿ ಇರುವ ವಿಚಾರಗಳು ಸುಳ್ಳು ಎಂದು ಪ್ರತಿಪಾದಿಸ
ಲಾಗಿದೆ; ಬಿಬಿಸಿಯ ವಿರುದ್ಧ ಅಭಿಯಾನವನ್ನೇ ನಡೆಸಲಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ನಿರ್ಬಂಧ ಹೇರಲಾಗಿದೆ. ಇದು, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನವು ಖಾತರಿ ನೀಡಿರುವ ಪ್ರಜಾಸತ್ತಾತ್ಮಕವಾದ ಸಮಾಜಕ್ಕೆ ತಕ್ಕುದಾದ ನಡೆ ಅಲ್ಲ. ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅತ್ಯಂತ ಮಹತ್ವದ ಭಾಗವೇ ವಿಚಾರಗಳನ್ನು ತಿಳಿದುಕೊಳ್ಳುವ ಹಕ್ಕು. ಸಾಕ್ಷ್ಯಚಿತ್ರ ವನ್ನು ತಡೆಹಿಡಿಯುವ ಮೂಲಕ ಪೌರರಿಗೆ ಈ ಹಕ್ಕನ್ನು ನಿರಾಕರಿಸಲಾಗಿದೆ.

ಐ.ಟಿ. ಪರಿಶೀಲನೆ ಮೂಲಕ ಸರ್ಕಾರ ಮತ್ತೂ ಒಂದು ತಪ್ಪು ಎಸಗಿದೆ. ಅಂತರ ರಾಷ್ಟ್ರೀಯ ಪ್ರಸಾರ ಸಂಸ್ಥೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದೆ. ಸಾಕ್ಷ್ಯಚಿತ್ರ ತಡೆಹಿಡಿದು ಸಂತೃಪ್ತಗೊಳ್ಳದ ಸರ್ಕಾರವು ಸಂದೇಶಕಾರನಿಗೆ ಶಿಕ್ಷೆ ವಿಧಿಸಲು ಮುಂದಾಗಿದೆ. ‘ವರ್ಗಾವಣೆ ವೆಚ್ಚ’ ನಿಯಮಗಳನ್ನು ಬಿಬಿಸಿ ಉಲ್ಲಂಘಿಸಿದೆ ಮತ್ತು ಲಾಭದ ‘ಗಣನೀಯ ಮೊತ್ತವನ್ನು ವರ್ಗಾಯಿಸಲಾಗಿದೆ’ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಐ.ಟಿ. ಇಲಾಖೆಯ ಈ ಎಲ್ಲ ಪ್ರಶ್ನೆಗಳಿಗೆ ಬಿಬಿಸಿ ಉತ್ತರಿಸಬೇಕು ಮತ್ತು ಹಣಕಾಸಿನ ವಿಚಾರದಲ್ಲಿ ಯಾವುದೇ ಅಕ್ರಮ ಆಗಿದ್ದರೆ ಅದರ ಹೊಣೆಯನ್ನೂ ಹೊತ್ತುಕೊಳ್ಳಬೇಕು ಎಂಬುದರಲ್ಲಿ ಅನುಮಾನವೇನೂ ಇಲ್ಲ. ಯಾವುದೇ ತಪ್ಪು ಮಾಡಿಲ್ಲ ಎಂದು ಬಿಬಿಸಿ ಹೇಳಿದೆ; ಐ.ಟಿ. ಇಲಾಖೆ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಹೇಳಿದೆ. ದ್ವೇಷ ಸಾಧನೆಯೇ ಈ ಪರಿಶೀಲನೆಯ ಉದ್ದೇಶ ಎಂಬುದನ್ನು ಎತ್ತಿ ತೋರಿಸುವಂತಹ ಹಲವು ಅಂಶಗಳು ಇಲ್ಲಿ ಇವೆ. ಪರಿಶೀಲನೆಗಾಗಿ ಅಧಿಕಾರಿಗಳು ನೀಡಿರುವ ಕಾರಣದಲ್ಲಿ ಅಲ್ಪ ವಿಶ್ವಾಸಾರ್ಹತೆಯೂ ಕಾಣಿಸುತ್ತಿಲ್ಲ. ‘ಪರಿಶೀಲನೆ’ ಎಂಬ ಪದವನ್ನು ಬಳಸಲಾಗಿದ್ದರೂ ಬಿಬಿಸಿ ಕಚೇರಿಯಲ್ಲಿ ಶೋಧವನ್ನೇ ನಡೆಸಲಾಗಿದೆ. ಇದು ಮಾಧ್ಯಮ ಕ್ಷೇತ್ರಕ್ಕೆ ಸರ್ಕಾರದ ಕಡೆಯಿಂದ ನೀಡಲಾಗಿರುವ ಸಂದೇಶವಾಗಿದೆ.

ಸಾಕ್ಷ್ಯಚಿತ್ರವು ಪ್ರಸಾರವಾದ ಕೆಲವೇ ವಾರಗಳಲ್ಲಿ ಪರಿಶೀಲನಾ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರದ ಈ ನಡೆಯ ಸಂದರ್ಭವೇ ಅದರ ಉದ್ದೇಶವನ್ನೂ ಸ್ಪಷ್ಟಪಡಿಸುತ್ತದೆ. ಇನ್ನೂ ಒಂದು ಪ್ರಶ್ನೆ ಇದೆ– ಸಂಸ್ಥೆಯ ವಹಿವಾಟಿನಲ್ಲಿ ಏನಾದರೂ ಅಕ್ರಮ ಆಗಿದ್ದರೆ, ಪತ್ರಕರ್ತರನ್ನು ಅದಕ್ಕೆ ಹೊಣೆಗಾರರನ್ನಾಗಿ ಮಾಡಿರುವುದು ಏಕೆ? ಸರ್ಕಾರಕ್ಕೆ ಅಪಥ್ಯವಾಗುವ ರೀತಿಯಲ್ಲಿ ನಡೆದುಕೊಂಡ ಕೆಲವು ಸಂಸ್ಥೆಗಳ ಮೇಲೆ ಈ ಹಿಂದೆಯೂ ಕ್ರಮ ಕೈಗೊಂಡ ಹಲವು ಉದಾಹರಣೆಗಳು ನಮ್ಮ ಮುಂದೆ ಇವೆ. ಬಿಬಿಸಿಯಂತಹ ವಿಸ್ತಾರ ವ್ಯಾಪ್ತಿ ಮತ್ತು ವರ್ಚಸ್ಸಿನ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯ ಮೇಲೆ ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು. ಪ್ರಜಾಪ್ರಭುತ್ವದ ಕೇಂದ್ರವೇ ಆಗಿರುವ ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯವು ಭಾರತದಲ್ಲಿ ಕುಗ್ಗುತ್ತಲೇ ಇದೆ ಎಂಬುದನ್ನು ಇದು ಮತ್ತೆ ದೃಢಪಡಿಸಿದೆ ಹಾಗೂ ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಮಾಧ್ಯಮಕ್ಕೆ ಕಿರುಕುಳ ನೀಡುವುದು ಸರ್ಕಾರದ ನಡೆಯ ಉದ್ದೇಶ. ಇದರಿಂದ ಸರ್ಕಾರಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ ಮತ್ತು ಅದು ತಿರುಗುಬಾಣವೇ ಆಗಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.