ಹದಿನಾರು ಜಿಲ್ಲಾ ಆಸ್ಪತ್ರೆಗಳಲ್ಲಿ ‘ಡೇ ಕೇರ್ ಕಿಮೋಥೆರಪಿ’ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸುವ ಮೂಲಕ, ಕ್ಯಾನ್ಸರ್ ಚಿಕಿತ್ಸೆಯನ್ನು ವಿಕೇಂದ್ರೀಕರಣಗೊಳಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅದು ತನ್ನ ಐದು ‘ಗ್ಯಾರಂಟಿ’ಗಳ ಗೊಂಚಲಿಗೆ ‘ಆರೋಗ್ಯಭಾಗ್ಯ’ವನ್ನೂ ಸೇರಿಸಬೇಕು ಎನ್ನುವ ಜನಸಾಮಾನ್ಯರ ಅಪೇಕ್ಷೆಗೆ ಕಿರು ಸ್ಪಂದನೆಯ ರೂಪದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ವಿಕೇಂದ್ರೀಕರಣವನ್ನು ನೋಡಬಹುದಾಗಿದೆ. ಆರ್ಥಿಕವಾಗಿ ದುರ್ಬಲರಾದ ಬಹುತೇಕರು ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿನ ‘ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ’ಯನ್ನು ಅವಲಂಬಿಸಿದ್ದಾರೆ. ಕಿಮೋಥೆರಪಿ ಚಿಕಿತ್ಸೆಯನ್ನು ಜಿಲ್ಲಾ ಕೇಂದ್ರಗಳಲ್ಲಿ ದೊರಕಿಸುವ ಸರ್ಕಾರದ ಕ್ರಮದಿಂದಾಗಿ, ಕಿದ್ವಾಯಿ ಸಂಸ್ಥೆಯ ಮೇಲಿನ ಅಪಾರವಾದ ಒತ್ತಡ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಲಿದೆ ಹಾಗೂ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ಬಹುದೂರ ಪ್ರಯಾಣಿಸುವುದು ತಪ್ಪಲಿದೆ.
ಮೈಸೂರಿನಲ್ಲಿ 20 ಹಾಸಿಗೆಗಳ ಕೇಂದ್ರ ಹಾಗೂ ಉಳಿದ 15 ಜಿಲ್ಲೆಗಳಲ್ಲಿ 10 ಹಾಸಿಗೆಗಳ ಕಿಮೋಥೆರಪಿ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆ ಘೋಷಣೆ ಈಗ ಕಾರ್ಯರೂಪಕ್ಕೆ ಬಂದಿದೆ. ಮೈಸೂರು, ವಿಜಯಪುರ, ಉಡುಪಿ, ಬಳ್ಳಾರಿ, ಧಾರವಾಡ, ಚಿತ್ರದುರ್ಗ, ವಿಜಯನಗರ, ಹಾವೇರಿ, ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ದಕ್ಷಿಣ ಕನ್ನಡ, ದಾವಣಗೆರೆ, ಕೋಲಾರ ಮತ್ತು ಬಾಗಲಕೋಟೆಯಲ್ಲಿ ಕಿಮೋಥೆರಪಿ ಕೇಂದ್ರಗಳು ಆರಂಭಗೊಂಡಿವೆ. ‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ನಲ್ಲಿ (ಎಸ್‌ಎಎಸ್‌ಟಿ) ನೋಂದಣಿ ಆಗಿರುವ ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ನಂತರದಲ್ಲಿ, ಜಿಲ್ಲಾ ಆಸ್ಪತ್ರೆಗಳಲ್ಲಿನ ‘ಡೇ ಕೇರ್ ಕಿಮೋಥೆರಪಿ ಕೇಂದ್ರ’ಗಳಲ್ಲಿ ಕಿಮೋಥೆರಪಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಆಸ್ಪತ್ರೆಯೇ ಒದಗಿಸಲಿದ್ದು, ರೋಗಿಗಳಿಗೆ ಸಮಾಲೋಚನೆಯ ಸೌಲಭ್ಯವೂ ದೊರೆಯಲಿದೆ.
ಕ್ಯಾನ್ಸರ್ ದೃಢಪಟ್ಟೊಡನೆ ಕೆಲವರು ಬದುಕುವ ಭರವಸೆಯನ್ನೇ ಕಳೆದುಕೊಳ್ಳುವುದಿದೆ. ರೋಗದಿಂದ ಹೊರಬರುವುದರ ಜೊತೆಗೆ ಚಿಕಿತ್ಸೆ ಪಡೆಯಲು ಕೂಡ ಹೋರಾಟ ನಡೆಸಬೇಕಾದ ಸ್ಥಿತಿ ಜನ
ಸಾಮಾನ್ಯರದು. ಪ್ರತಿವರ್ಷ ರಾಜ್ಯದಲ್ಲಿ ಕ್ಯಾನ್ಸರ್‌ನ ಸುಮಾರು 70 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮೈಸೂರು ನಗರಗಳಲ್ಲಿ ಕಿಮೋಥೆರಪಿ ಸೇವೆ ಪಡೆಯಲು ಶೇ 60ರಷ್ಟು ರೋಗಿಗಳು 100 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸುತ್ತಾರೆ. ಮತ್ತೆ ಮತ್ತೆ ಮಾಡಬೇಕಾದ ಈ ದೀರ್ಘ ಪ್ರಯಾಣ ದೈಹಿಕವಾಗಿ, ಮಾನಸಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ರೋಗಿಗಳನ್ನು ಬಾಧಿಸುವಂತಹದ್ದು. ಈ ಸಂಕಷ್ಟ ಕ್ಯಾನ್ಸರ್ ಚಿಕಿತ್ಸೆಯ ವಿಕೇಂದ್ರೀಕರಣದಿಂದ ಕಡಿಮೆಯಾಗಲಿದೆ.
ಸದ್ಯ ಹದಿನಾರು ಜಿಲ್ಲೆಗಳಿಗೆ ಸೀಮಿತವಾಗಿರುವ ಯೋಜನೆ ಮುಂದಿನ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆ ಆಗಬೇಕಾಗಿದೆ. ಮತ್ತೆ ಮತ್ತೆ ಪ್ರಯಾಣ ಮಾಡಬೇಕಾದ ವೆಚ್ಚವನ್ನು ಭರಿಸಲಾಗದ ರೋಗಿಗಳು ಚಿಕಿತ್ಸೆಯನ್ನೇ ಕೈಬಿಡುವ ಸಾಧ್ಯತೆ ಇಲ್ಲದಿಲ್ಲ. ಇಂಥ ಅಸಹಾಯಕ ರೋಗಿಗಳಿಗೆ ಸಮೀಪದಲ್ಲೇ ಚಿಕಿತ್ಸೆ ದೊರೆಯುವಂತೆ ಮಾಡುವ ಸರ್ಕಾರದ ಕ್ರಮದಿಂದ ಅನುಕೂಲವಾಗಲಿದೆ. ಕ್ಯಾನ್ಸರ್ ಆರೈಕೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಣ ಅಸಮಾನತೆಯೂ ಸ್ವಲ್ಪ ಪ‍್ರಮಾಣದಲ್ಲಿ ಕಡಿಮೆಯಾಗಲಿದೆ. ಈ ಅಸಮಾನತೆಯನ್ನು ಮತ್ತಷ್ಟು ತಗ್ಗಿಸುವ ದಿಸೆಯಲ್ಲಿ ಕಿದ್ವಾಯಿ ಆಸ್ಪತ್ರೆಯ ಶಾಖೆಗಳನ್ನು ರಾಜ್ಯದ ನಾಲ್ಕೈದು ಕಡೆಗಳಲ್ಲಾದರೂ ಆರಂಭಿಸಬೇಕಾಗಿದೆ.
ಕ್ಯಾನ್ಸರ್ ಚಿಕಿತ್ಸೆಯ ಆಸ್ಪತ್ರೆಗಳು ಮಾತ್ರವಲ್ಲದೆ, ‘ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ’ ಹಾಗೂ ‘ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ’ಯ (ನಿಮ್ಹಾನ್ಸ್) ಶಾಖೆಗಳನ್ನೂ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರಾರಂಭಿಸಬೇಕಾಗಿದೆ. ಇದರಿಂದಾಗಿ, ಪ್ರಮುಖ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯ ವಿಕೇಂದ್ರೀಕರಣ ಸಾಧ್ಯವಾಗಲಿದೆ. ಅನುಭವಿ ಹಾಗೂ ಪರಿಣತ ವೈದ್ಯರ ಲಭ್ಯತೆ ಸೇರಿದಂತೆ ಗುಣಮಟ್ಟದ ಸೇವೆಯನ್ನು ನೀಡುವಲ್ಲಿ ಸರ್ಕಾರಿ ಆಸ್ಪತ್ರೆಗಳು ಬದ್ಧವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬದ್ಧತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ, ಗ್ರಾಮೀಣರಿಗೆ ಹಾಗೂ ಜನಸಾಮಾನ್ಯರಿಗೆ ಆರೋಗ್ಯದ ಖಾತರಿ
ಒದಗಿಸುವ ದಿಸೆಯಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ವೈದ್ಯರ ಕೊರತೆ, ಔಷಧಗಳ
ಅಲಭ್ಯತೆಯೊಂದಿಗೆ ಭ್ರಷ್ಟಾಚಾರದ ಕಾರಣದಿಂದಲೂ ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಪಾಲಿಗೆ
ದುಃಸ್ವಪ್ನವಾಗಿವೆ. ಜನಸಾಮಾನ್ಯರಿಗೆ ಸೇವೆ ಸಲ್ಲಿಸಲು ದೊರಕಿರುವ ಅಪೂರ್ವ ಅವಕಾಶದ ರೂಪದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮಾನವೀಯವಾಗಿ ರೂಪಿಸುವ ಹೊಣೆಗಾರಿಕೆಯಲ್ಲಿ ಸರ್ಕಾರ ಯಾವುದೇ
ರಾಜಿ ಮಾಡಿಕೊಳ್ಳಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.