ADVERTISEMENT

ಸಂಪಾದಕೀಯ: ಕೇಂದ್ರೀಯ ವಿ.ವಿ. ಪ್ರವೇಶ ಪರೀಕ್ಷೆ ನಿರ್ವಹಣಾ ವೈಫಲ್ಯದಿಂದ ಗೊಂದಲ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 19:45 IST
Last Updated 25 ಆಗಸ್ಟ್ 2022, 19:45 IST
ಸಂಪಾದಕೀಯ
ಸಂಪಾದಕೀಯ   

ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ರಾಷ್ಟ್ರದಾದ್ಯಂತ ಏಕೀಕೃತ ಪರೀಕ್ಷೆ ನಡೆಸುವ ಪ್ರಸ್ತಾವ
ವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಈ ವರ್ಷದ ಆರಂಭದಲ್ಲಿ ಮುಂದಿಟ್ಟಾಗ ಎಲ್ಲ ಕಡೆಗಳಿಂದಲೂ ಸ್ವಾಗತ ವ್ಯಕ್ತವಾಗಿತ್ತು. ಈ ಕ್ರಮದಿಂದ ಪ್ರವೇಶ ಪ್ರಕ್ರಿಯೆ ಸರಳಗೊಳ್ಳುವುದರ ಜತೆಗೆ ವಿದ್ಯಾರ್ಥಿಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂಬ ಆಶಾಭಾವ ಇತ್ತು. ಆದರೆ, ಆ ಪ್ರಸ್ತಾವದ ಅನುಸಾರ ರೂಪುಗೊಂಡ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಯನ್ನು (ಸಿಯುಇಟಿ) ಸದ್ಯ ಬಹು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲದೆ, ವಿದ್ಯಾರ್ಥಿಗಳ ಮೇಲೆ ಇನ್ನಷ್ಟು ಒತ್ತಡ ಬೀಳುವಂತೆಯೂ ಮಾಡಿದೆ. ಮೊದಲಿಗೆ ಇದೇ ಜುಲೈ 15ರಂದು ಈ ಪರೀಕ್ಷೆ ನಡೆಯಿತು. ಸರ್ವರ್‌ ವೈಫಲ್ಯ, ಪ್ರವೇಶಪತ್ರ ನೀಡುವಲ್ಲಿ ವಿಳಂಬ, ಪ್ರಶ್ನೆಗಳಿಗೆ ಸಂಬಂಧಿಸಿದ ಗೊಂದಲ ಮತ್ತು ಪರೀಕ್ಷಾ ಕೇಂದ್ರಗಳ ಕುರಿತು ಸಮರ್ಪಕ ಮಾಹಿತಿಯ ಕೊರತೆ ಸೇರಿದಂತೆ ನಿರ್ವಹಣೆಯಲ್ಲಿ ಉಂಟಾದ ಹಲವು ದೋಷಗಳಿಂದ ವಿದ್ಯಾರ್ಥಿಗಳು ತೀವ್ರ ತೊಂದರೆಯನ್ನು ಅನುಭವಿಸಿದರು. ಕೆಲವು ಪ್ರಕರಣಗಳಲ್ಲಿ, ಪ್ರಶ್ನೆಪತ್ರಿಕೆಗಳನ್ನು ಸರಿಯಾದ ಸಮಯಕ್ಕೆ ಅಪ್‌ಲೋಡ್‌ ಮಾಡಲಾಗಿರಲಿಲ್ಲ. ಇಂತಹ ವಿವಿಧ ಕಾರಣಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನೇ ಬರೆಯಲು ಆಗಲಿಲ್ಲ. ನಿರ್ವಹಣೆಯಲ್ಲಿ ಉಂಟಾದ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯವಾಗದೆ ಹಲವು ವಿದ್ಯಾರ್ಥಿಗಳ ಪರೀಕ್ಷೆಯನ್ನೇ ಮುಂದೂಡಲಾಯಿತು. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ವಿಫಲವಾದ ಕಾರಣಕ್ಕಾಗಿ ಈಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ತೀವ್ರ ಟೀಕೆಯನ್ನು ಎದುರಿಸಬೇಕಾಗಿದೆ.

ತೊಂದರೆಗೆ ಒಳಗಾದ ಸಾವಿರಾರು ವಿದ್ಯಾರ್ಥಿ
ಗಳಿಗಾಗಿ ಈಗ ಪರೀಕ್ಷೆಯ ಹೊಸ ದಿನಾಂಕಗಳನ್ನೇನೋ ಪ್ರಕಟಿಸಲಾಗಿದೆ. ಮೊದಲಿನ ವೇಳಾಪಟ್ಟಿ ಪ್ರಕಾರ, ಆಗಸ್ಟ್‌ 20ರೊಳಗೆ ಪರೀಕ್ಷೆಯ ಎಲ್ಲ ಹಂತಗಳನ್ನೂ ಮುಗಿಸಬೇಕಿತ್ತು. ಪರೀಕ್ಷೆಗೆ ಈಗ ದಿನಾಂಕಗಳನ್ನು ಮರುನಿಗದಿ ಮಾಡಿದ್ದರಿಂದ ಫಲಿತಾಂಶ ಘೋಷಣೆ ಕೂಡ ವಿಳಂಬವಾಗಲಿದೆ. ಇದರಿಂದ ಮುಂದೆ ಪ್ರವೇಶ ಪ್ರಕ್ರಿಯೆ ಅಸ್ತವ್ಯಸ್ತಗೊಳ್ಳಲಿದೆ. ಇನ್ನುಮುಂದೆ ಯಾವುದೇ ವಿಳಂಬ ಆಗದಿದ್ದರೆ ಸೆಪ್ಟೆಂಬರ್‌ ಕೊನೆಯ ವೇಳೆಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂಬ ಅಂದಾಜಿದೆ. ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಶೈಕ್ಷಣಿಕ ವೇಳಾಪಟ್ಟಿಗಳು ಯರ‍್ರಾಬಿರ‍್ರಿ ಬದಲಾಗಿವೆ. ಇನ್ನಾದರೂ ಶೈಕ್ಷಣಿಕ ಚಟುವಟಿಕೆಗಳು ಹಳಿಗೆ ಮರಳಲಿವೆ ಅಂದುಕೊಳ್ಳುವಷ್ಟರಲ್ಲಿ ಈಗ ಪರೀಕ್ಷೆ ನಿರ್ವಹಣೆಯಲ್ಲಿ ಈ ಪ್ರಮಾದ ಆಗಿದೆ. ಮರುನಿಗದಿಯಾದ ಪರೀಕ್ಷೆಗಳು ವಾರದಲ್ಲಿಯೇ ನಡೆಯಲಿವೆ. ಕುಂದುಕೊರತೆ ಪರಿಹಾರ ವೇದಿಕೆಯನ್ನು ಆರಂಭಿಸುವುದಾಗಿಯೂ ಎನ್‌ಟಿಎ ಘೋಷಿಸಿದೆ. ಹಾಗೆಯೇ ಯುಜಿಸಿ ಕೂಡ ಪ್ರತಿಯೊಬ್ಬ ಅಭ್ಯರ್ಥಿಯ ಅಹವಾಲಿಗೂ ಸ್ಪಂದಿಸುವುದಾಗಿ ತಿಳಿಸಿದೆ.

ಎನ್‌ಟಿಎಯು ಪರೀಕ್ಷೆಯ ನಿರ್ವಹಣೆಯಲ್ಲಿ ಉಂಟಾದ ವೈಫಲ್ಯಕ್ಕಾಗಿ ಮೊದಲು ಪರೀಕ್ಷಾ ಕೇಂದ್ರಗಳ ಮೇಲೆ ಗೂಬೆ ಕೂರಿಸಲು ಹೊರಟಿತ್ತು. ಪರೀಕ್ಷಾ ಕೇಂದ್ರಗಳು ನಿಯಮಾವಳಿಯನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂದೂ ಅದು ದೂರಿತ್ತು. ಆದರೆ, ನಂತರ ಹೊರಬಿದ್ದ ಸತ್ಯ ಸಂಗತಿಗಳು ಪ್ರಮಾದ ಆಗಿರುವುದು ಎನ್‌ಟಿಎದಿಂದಲೇ ಎನ್ನುವುದರತ್ತ ಬೊಟ್ಟು ಮಾಡಿದವು. ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ಅವರಂತೂ ಪರೀಕ್ಷಾ ನಿರ್ವಹಣೆಯಲ್ಲಿ ಉಂಟಾದ ಸಮಸ್ಯೆಗಳಿಗೆ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದವರ ಕೈವಾಡವೇ ಕಾರಣ ಎಂದು ದೂರಿದ್ದರು. ಜಂಟಿ ಪ್ರವೇಶ ಪರೀಕ್ಷೆ (ಜೆಇಇ–ಮೇನ್‌) ಹಾಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ನಡೆಸಿದ ಅನುಭವವೂ ಎನ್‌ಟಿಎಗೆ ಇದೆ. ಸಿಯುಇಟಿಯಿಂದ ಅದರ ಹೊಣೆ ಮತ್ತಷ್ಟು ಹಿಗ್ಗಿದೆ. ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ನಡೆಸಲು ಒಂದುವೇಳೆ ಎನ್‌ಟಿಎ ವಿಫಲವಾದರೆ ಅದರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಲಿದೆ ಮತ್ತು ವಿದ್ಯಾರ್ಥಿಗಳು ಸಹ ಅನಗತ್ಯ ಒತ್ತಡ ಅನುಭವಿಸಬೇಕಾಗುತ್ತದೆ. 15 ಲಕ್ಷ ವಿದ್ಯಾರ್ಥಿಗಳು ಸಿಯುಇಟಿಗೆ ನೋಂದಾಯಿಸಿಕೊಂಡಿದ್ದರು ಮತ್ತು 550 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆದಿತ್ತು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪರೀಕ್ಷಾ ಹೊಣೆಯನ್ನು ನಿಭಾಯಿಸುವಾಗ ಎನ್‌ಟಿಎ ಇನ್ನೂ ದಕ್ಷತೆಯಿಂದ ಸನ್ನದ್ಧಗೊಳ್ಳಬೇಕಿತ್ತು. ಹಾಗಾಗಿದ್ದರೆ ಈಗ ಮುಜುಗರ ಅನುಭವಿಸುವ ಸ್ಥಿತಿ ಅದಕ್ಕೆ ಬರುತ್ತಿರಲಿಲ್ಲ. ಈಗ ಆಗಿರುವ ಗೊಂದಲಗಳಿಗೆ, ಪ್ರಮಾದಗಳಿಗೆ ಯಾರು ಕಾರಣ ಎನ್ನುವುದನ್ನು ಪತ್ತೆ ಮಾಡಬೇಕು. ಅಲ್ಲದೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವನ್ನೂ ಜರುಗಿಸಬೇಕು. ಉಳಿದವರಿಗೂ ಅದು ಪಾಠವಾಗಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.