ಕಲುಷಿತ ಆಹಾರ ಸೇವಿಸಿ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ ಟಿ. ಕಾಗೇಪುರ ಗ್ರಾಮದ ಗೋಕುಲ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಮೈಮರೆವು ತೋರಿದರೆ, ಬಹಳ ಒಳ್ಳೆಯ ಆಶಯದೊಂದಿಗೆ ಮಾಡಿದ ಕೆಲಸ ಕೂಡ ದುರಂತವನ್ನು ತಂದಿರಿಸಬಹುದು ಎಂಬುದಕ್ಕೆ ಇದು ನಿದರ್ಶನ.
ಸ್ಥಳೀಯ ಉದ್ಯಮಿಯೊಬ್ಬರು ಹೋಳಿ ಹಬ್ಬದ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ದಾನದ ರೂಪದಲ್ಲಿ ನೀಡಿದ್ದ ಆಹಾರವು ಈಗ ಇಬ್ಬರ ಜೀವ ತೆಗೆದಿದೆ. ಅಲ್ಲದೆ, ಈ ಆಹಾರ ಸೇವಿಸಿದ್ದ 120ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗೆ ಅನಾರೋಗ್ಯಕ್ಕೆ ತುತ್ತಾದವರಲ್ಲಿ ಗೋಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೂ ಸೇರಿದ್ದಾರೆ. ಮಳವಳ್ಳಿಯಲ್ಲಿ ನಡೆದಿರುವ ಈ ವಿದ್ಯಮಾನವನ್ನು ದಾನಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆಯ ಗಂಟೆಯಂತೆ ಕಾಣಬೇಕು. ಇವರು ಆಹಾರ ಸುರಕ್ಷತೆಗೆ ಇತರ ಎಲ್ಲ ಸಂಗತಿಗಳಿಗಿಂತ ಹೆಚ್ಚಿನ ಆದ್ಯತೆ ನೀಡಬೇಕು.
ಈ ಆಹಾರವನ್ನು ಸ್ಥಳೀಯ ಹೋಟೆಲ್ ಒಂದರಲ್ಲಿ ಸಿದ್ಧಪಡಿಸಿ, ಪೂರೈಸಲಾಗಿತ್ತು. ಇದು ಉತ್ತರ
ದಾಯಿತ್ವದ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆಹಾರ ಸೇವನೆ ನಂತರ ಅಸ್ವಸ್ಥರಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದ ಹೆಚ್ಚಿನವರು ಚೇತರಿಸಿಕೊಂಡು ಮರಳಿದ್ದಾರೆ. ಆದರೆ, ಇಬ್ಬರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿರುವುದು ತೀರಾ ದುರದೃಷ್ಟಕರ. ಆಹಾರ ಸಿದ್ಧಪಡಿಸಿಕೊಟ್ಟಿದ್ದ ಹೋಟೆಲ್ ಮಾಲೀಕರು, ತಮಗೆ ಕೇಟರಿಂಗ್ ವೃತ್ತಿಯಲ್ಲಿ 16 ವರ್ಷಗಳ ಅನುಭವ ಇದೆ ಎಂದು ಹೇಳಿಕೊಂಡಿದ್ದಾರೆ. ಸರ್ಕಾರಿ ಕಾರ್ಯ ಕ್ರಮಗಳಿಗೂ ತಮ್ಮಿಂದ ಆಹಾರ ಸಿದ್ಧಪಡಿಸಿಕೊಟ್ಟ ನಿದರ್ಶನಗಳು ಇವೆ, ಯಾವ ಸಂದರ್ಭದಲ್ಲಿಯೂ ಯಾರಿಂದಲೂ ದೂರುಗಳು ಬಂದಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಈಗಿನ ಪ್ರಕರಣದ ಬಗ್ಗೆ ವಿಸ್ತೃತವಾದ ತನಿಖೆ ಆಗಬೇಕು ಎಂದು ಆಗ್ರಹಿಸಿರುವ ಅವರು, ಕಿಡಿಗೇಡಿಗಳು ದುಷ್ಟ ಉದ್ದೇಶದಿಂದ ಕುಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಆಳವಾದ ತನಿಖೆ ಆಗಬೇಕು. ದುರಂತಕ್ಕೆ ಕಾರಣ ನಿರ್ಲಕ್ಷ್ಯವೋ ಕುಕೃತ್ಯವೋ ಎಂಬುದು ಪತ್ತೆಯಾಗಬೇಕು. ಅದಕ್ಕೂ ಹೆಚ್ಚಿನದಾಗಿ, ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಸತಿ ಸೌಲಭ್ಯ ಇರುವ ಸಂಸ್ಥೆಗಳಲ್ಲಿ ಆಹಾರ ಸಿದ್ಧಪಡಿಸುವ ಪ್ರಕ್ರಿಯೆಯ ಮೇಲೆ ಕಟ್ಟೆಚ್ಚರ ಇರಿಸಬೇಕಾದ ಅಗತ್ಯವನ್ನು ಪ್ರಕರಣವು ಹೇಳುತ್ತಿದೆ. ಈ ಕಟ್ಟೆಚ್ಚರವನ್ನು
ಸ್ವಯಂ ಪ್ರೇರಣೆಯಿಂದಲೂ ಕಾನೂನಿನ ಮೂಲಕವೂ ಜಾರಿಗೆ ತರಬಹುದು.
ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಓದುತ್ತಿದ್ದ ಶಾಲೆಯು ಅಕ್ರಮವಾಗಿ ವಿದ್ಯಾರ್ಥಿನಿಲಯವನ್ನು ನಡೆಸುತ್ತಿತ್ತು ಎಂದು ವರದಿಯಾಗಿದೆ. ಇದು ಆಡಳಿತಾತ್ಮಕ ಉಪೇಕ್ಷೆಯನ್ನು ತೋರಿಸುತ್ತಿದೆ. ರಾಜ್ಯದಲ್ಲಿ ಹಲವು ಶಾಲೆಗಳು ಮಾನ್ಯತೆ ಇಲ್ಲದೆ ವಸತಿ ನಿಲಯಗಳನ್ನು ನಡೆಸುತ್ತಿವೆ ಎಂದು ಮಕ್ಕಳ ಹಕ್ಕುಗಳ ಕಣ್ಗಾವಲು ಸಂಘಟನೆಯು ಹೇಳಿದೆ. ಇದು ಮಕ್ಕಳನ್ನು ಆಹಾರ ಸುರಕ್ಷತೆಗೆ ಸಂಬಂಧಿಸಿದ್ದೂ ಸೇರಿದಂತೆ ಹಲವು ಬಗೆಯ ಅಪಾಯಗಳಿಗೆ ಈಡುಮಾಡುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ಅಕ್ರಮ ವಿದ್ಯಾರ್ಥಿ ನಿಲಯಗಳು ತಲೆ ಎತ್ತಲು ಕಾರಣ. ಇವುಗಳು ಅಸಂಖ್ಯ ವಿದ್ಯಾರ್ಥಿಗಳನ್ನು ಅಪಾಯಕ್ಕೆ ಸಿಲುಕಿಸುತ್ತವೆ.
ಸರ್ಕಾರವು ಕಠಿಣ ಕ್ರಮ ಕೈಗೊಂಡು, ಅಕ್ರಮ ವಿದ್ಯಾರ್ಥಿ ನಿಲಯಗಳ ಬಾಗಿಲು ಮುಚ್ಚಿಸಬೇಕು. ಕಾನೂನಿಗೆ ಅನುಗುಣವಾಗಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ನೈರ್ಮಲ್ಯವನ್ನು ಕಾಪಾಡಲಾಗುತ್ತಿದೆಯೇ ಎಂಬ ಬಗ್ಗೆ ಕಾಲಕಾಲಕ್ಕೆ ತಪಾಸಣೆ ನಡೆಸಬೇಕು. ವಿದ್ಯಾರ್ಥಿ ನಿಲಯಗಳು ಪ್ರಮಾಣೀಕೃತವಾದ ಅಡುಗೆ ಮನೆಗಳನ್ನು ತಮ್ಮಲ್ಲಿಯೇ ಹೊಂದಿರಬೇಕು. ಉಳಿಕೆ ಆಹಾರವನ್ನು ಅಥವಾ ಯಾರ ಮೇಲ್ವಿಚಾರಣೆಯೂ ಇಲ್ಲದೆ ಸಿದ್ಧವಾದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಬಾರದು. ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅನ್ನವನ್ನು ದಾನವಾಗಿ ನೀಡುವುದು ಬಹಳ ಶ್ರೇಷ್ಠವಾದ ಕೆಲಸ ಎಂಬುದು ನಿಜ. ಆದರೆ ಅಂತಹ ದಾನವು ಸರಿಯಾದ ಬಗೆಯಲ್ಲಿ ಆಗಬೇಕು. ಅನ್ನವನ್ನು ದಾನವಾಗಿ ನೀಡುವಾಗ ಆಹಾರ ಸುರಕ್ಷತೆಯ ಮಾನದಂಡಗಳ ಪಾಲನೆ ಸರಿಯಾಗಿ ಆಗಬೇಕು.
ಮಳವಳ್ಳಿಯ ಘಟನೆಯು ಕಲುಷಿತ ಆಹಾರ ಸೇವನೆಗಷ್ಟೇ ಸೀಮಿತ ವಾಗಿರುವಂತೆ ಕಾಣುತ್ತಿಲ್ಲ. ಅದು ತೀರಾ ಸುಲಭವಾಗಿ ತೊಂದರೆಗೆ ಸಿಲುಕಬಹುದಾದ ಮಕ್ಕಳ ಹಿತವನ್ನು ಕಾಪಾಡಲು ಆಗದಿದ್ದುದಕ್ಕೆ ಒಂದು ನಿದರ್ಶನವೂ ಹೌದು. ಮುಂದೆ ಇಂತಹ ಪ್ರಕರಣಗಳು ನಡೆಯಬಾರದು ಎಂದಾದರೆ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಮಕ್ಕಳಿಗೆ ನೀಡುವ ಆಹಾರ ಎಷ್ಟರಮಟ್ಟಿಗೆ ಶುಚಿಯಾಗಿದೆ ಎಂಬ ಬಗ್ಗೆ ಸಮುದಾಯವೂ ನಿಗಾ ಇರಿಸಬೇಕು. ಆಗಮಾತ್ರ ಇಂತಹ ಕೆಟ್ಟ ಘಟನೆಗಳು ಮರುಕಳಿಸುವುದನ್ನು ತಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.