ADVERTISEMENT

ಸಂಪಾದಕೀಯ | ಅಣುಶಕ್ತಿ: ಖಾಸಗಿ ಸಹಭಾಗಿತ್ವ; ಕೇಂದ್ರ ಸ‌ರ್ಕಾರದ ಹುಲಿಸವಾರಿ

ಸಂಪಾದಕೀಯ
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
   
ಅಣುಶಕ್ತಿ ನೀತಿಗೆ ಸಂಬಂಧಿಸಿದಂತೆ ಉದಾರೀಕರಣ ಅಗತ್ಯವಾಗಿದ್ದರೂ, ಅದು ಅಪಾಯಗಳಿಗೆ ಆಹ್ವಾನ ನೀಡುವಂತೆ ಇರಬಾರದು ಹಾಗೂ ಹೊಣೆಗಾರಿಕೆಯನ್ನು ಹಗುರಗೊಳಿಸಬಾರದು.

ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದ್ದು, ಈ ಮಸೂದೆ ದೇಶದ ಒಟ್ಟಾರೆ ಅಣುಶಕ್ತಿ ನೀತಿಗೆ ಸಂಬಂಧಿಸಿದಂತೆ ಹೊಸ ಸಾಧ್ಯತೆ ಮತ್ತು ಸವಾಲುಗಳಿಗೆ ಅವಕಾಶ ಕಲ್ಪಿಸಲಿದೆ. ‘ಭಾರತದ ಪ್ರಗತಿಗಾಗಿ ಅಣುಶಕ್ತಿ ಸುಸ್ಥಿರ ಉತ್ಪಾದನೆ’ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ)ಹೆಸರಿನ ಮಸೂದೆಯು, ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಜೊತೆಗೆ ವಿದೇಶಿ ಹೂಡಿಕೆಗೂ ಅವಕಾಶ ಕಲ್ಪಿಸಲಿದೆ. 1962ರ ‘ಅಣುಶಕ್ತಿ ಕಾಯ್ದೆ’ ಹಾಗೂ ಪರಮಾಣು ಹಾನಿಗೆ ಸಂಬಂಧಿಸಿದ 2010ರ ನಾಗರಿಕ ಹೊಣೆಗಾರಿಕೆ ಕಾಯ್ದೆಯನ್ನು ಬದಲಾವಣೆ ಮಾಡಿ ಈ ಮಸೂದೆ ಮಂಡಿಸಲಾಗಿದೆ. ಈ ಎರಡೂ ಕಾಯ್ದೆಗಳು ಪರಮಾಣು ನೀತಿಗೆ ಸಂಬಂಧಿಸಿದಂತೆ ಕಠಿಣ ನಿಬಂಧನೆಗಳನ್ನು ಹೊಂದಿದ್ದವು. ದೇಶದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಅಣು ವಿದ್ಯುತ್‌ ಉತ್ಪಾದನೆಯ ಪಾಲು ಶೇ 3ರಷ್ಟಿದೆ.

2047ರ ವೇಳೆಗೆ 100 ಗಿಗಾವಾಟ್‌ನಷ್ಟು ಅಣು ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಅಗತ್ಯವಾಗಿರುವ ಉದಾರ ಆಡಳಿತ ನೀತಿಗೆ ಹೊಸ ಮಸೂದೆಯು ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗಿದೆ. ತೀವ್ರಗೊಳ್ಳುತ್ತಿರುವ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ, ಕಲ್ಲಿದ್ದಲು ಆಧರಿತ ವಿದ್ಯುತ್‌ ಉತ್ಪಾದನೆಯನ್ನು ನಿಯಂತ್ರಣದಲ್ಲಿ ಇರಿಸುವುದು ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಮಾರ್ಗಗಳನ್ನು ಬಲಪಡಿಸುವುದು ಅನಿವಾರ್ಯ. ಆದರೆ ಜಲಶಕ್ತಿ, ಸೌರಶಕ್ತಿ ಹಾಗೂ ಪವನಶಕ್ತಿ ಬಳಸಿಕೊಂಡು ವಿದ್ಯುತ್‌ ಉತ್ಪಾದಿಸುವುದಕ್ಕೆ ಸಾಕಷ್ಟು ಮಿತಿಗಳಿವೆ. ಹಾಗಾಗಿಯೇ, ಅಣು ವಿದ್ಯುತ್‌ ಉತ್ಪಾದನೆ ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಿದೆ. 

ಅಣು ವಿದ್ಯುತ್‌ ಉತ್ಪಾದನೆಯಲ್ಲಿ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೆ, ದೇಶೀಯ ಹಾಗೂ ವಿದೇಶಿ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಸಂಸ್ಥೆಗಳಿಗೆ ಪರವಾನಗಿ ನೀಡುವ ಅವಕಾಶವನ್ನು ಹೊಸ ಮಸೂದೆ ಕೇಂದ್ರಕ್ಕೆ ಒದಗಿಸಲಿದೆ. ಇಲ್ಲಿಯವರೆಗೆ, ಅಣು ವಿದ್ಯುತ್‌ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಭಾರತೀಯ ಅಣು ವಿದ್ಯುತ್‌ ನಿಗಮ (ಎನ್‌ಪಿಸಿಐಎಲ್‌) ಮಾತ್ರ ಅಧಿಕಾರ ಹೊಂದಿತ್ತು. ಪರಮಾಣು ಸ್ಥಾವರದ ನಿರ್ವಹಣೆ ಮತ್ತು ಪೂರೈಕೆ ನಿರ್ವಹಣೆಗೆ ಸಂಬಂಧಿಸಿದ ಕೆಲವು ಕ್ಷೇತ್ರಗಳಲ್ಲಿ ಖಾಸಗಿ ಭಾಗವಹಿಸುವಿಕೆ ಇದ್ದರೂ, ಮುಖ್ಯ ಹಾಗೂ ಬಹುಸೂಕ್ಷ್ಮ ಕ್ಷೇತ್ರಗಳ ನಿರ್ವಹಣೆ ಸರ್ಕಾರದ ಅಧೀನದಲ್ಲೇ ಇತ್ತು.

ADVERTISEMENT

ಈ ನಿರ್ಬಂಧಗಳನ್ನು ಮಸೂದೆಯು ತೆರವುಗೊಳಿಸಲಿದ್ದು, ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರೇಣೀಕೃತ ಹೊಣೆಗಾರಿಕೆ ವ್ಯವಸ್ಥೆಗೆ ಅವಕಾಶ ಕಲ್ಪಿಸಲಿದೆ. ಕಾನೂನು ಚೌಕಟ್ಟಿನ ಸರಳೀಕರಣ ಹಾಗೂ ವಹಿವಾಟು ವೆಚ್ಚಗಳ ಕಡಿತ ಸಾಧ್ಯವಾಗಲಿದ್ದು, ಆಡಳಿತಾತ್ಮಕ ಅನುಮೋದನೆಗಳಿಗೆ ಸಂಬಂಧಿಸಿದ ವಿಳಂಬವನ್ನೂ ಕಡಿಮೆ ಮಾಡುವ ಗುರಿಯನ್ನು ಮಸೂದೆ ಹೊಂದಿದೆ. ಪೇಟೆಂಟ್‌ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಸಂಶೋಧನೆಗಳನ್ನು ಉತ್ತೇಜಿಸುವ ಗುರಿಯನ್ನೂ ಹೊಂದಿದೆ.

ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸುವ ಚಿಂತನೆ ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿದ್ದರೂ, ಮಸೂದೆಯಲ್ಲಿನ ಕೆಲವು ಅಂಶಗಳು ಆತಂಕಕ್ಕೆ ಕಾರಣ ಆಗುವಂತಿವೆ. ಯುಪಿಎ ಸರ್ಕಾರದ ಮೈಲಿಗಲ್ಲುಗಳಲ್ಲಿ ಒಂದಾದ ಭಾರತ–ಅಮೆರಿಕ ಪರಮಾಣು ಒಪ್ಪಂದ ಮತ್ತು 2010ರ ಕಾಯ್ದೆಯೂ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಅಮೆರಿಕದ ಪೂರೈಕೆದಾರರು ಭಾರತೀಯ ಕಾನೂನು ನಿರ್ಬಂಧಗಳ ಬಗ್ಗೆ, ವಿಶೇಷವಾಗಿ ಉತ್ತರದಾಯಿತ್ವದ ಕಾನೂನುಗಳ ಬಗ್ಗೆ ಎಚ್ಚರದಿಂದಿದ್ದರು. ಈ ಹೊಣೆಗಾರಿಕೆಗೆ ವಿಧಿಸಿದ್ದ ನಿಬಂಧನೆಗಳನ್ನು ಪ್ರಸ್ತಾವಿತ ಮಸೂದೆಯು ತೆಗೆದುಹಾಕಿದೆ. ಪರಮಾಣು ಸ್ಥಾವರಗಳಲ್ಲಿ ದುರಂತ ಸಂಭವಿಸಿದರೆ ಸ್ಥಾವರದ ನಿರ್ವಹಣೆ ಹೊತ್ತ ಸಂಸ್ಥೆಯು ಪಾವತಿಸಬೇಕಾದ ಗರಿಷ್ಠ ಹೊಣೆಗಾರಿಕೆಯ ಮೊತ್ತವು, ಆ ಸಂಸ್ಥೆ ಬಳಕೆ ಮಾಡುವ ಪರಮಾಣು ಸ್ಥಾವರದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಈ ಹೊಣೆಗಾರಿಕೆ ಮೊತ್ತವನ್ನು ₹3 ಸಾವಿರ ಕೋಟಿಗೆ ಮಿತಿಗೊಳಿಸಿದೆ. ಜೊತೆಗೆ ಪರಿಹಾರ ನೀಡಬೇಕಾದ ಜವಾಬ್ದಾರಿಯನ್ನೂ ಮಿತಗೊಳಿಸಲಿದೆ.

ಬಹು ಸಂಕೀರ್ಣವಾದ ಅಣುಶಕ್ತಿ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಖಾಸಗಿಯವರಿಗೆ ಅವಕಾಶ ಕಲ್ಪಿಸುವ ಹಾಗೂ ಅವರಿಗೆ ಶಾಸನಬದ್ಧ ಸುರಕ್ಷತೆ ಒದಗಿಸುವ ನಿರ್ಧಾರ ಪ್ರತಿ ಪಕ್ಷಗಳ ಟೀಕೆಗೆ ಸಹಜವಾಗಿಯೇ ಒಳಗಾಗಿದೆ. ಪರಿಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗದ ವ್ಯಾಪ್ತಿಯನ್ನು ಕಿರಿದುಗೊಳಿಸುವುದರ ಜೊತೆಗೆ, ಅಣುಶಕ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ಸ್ವತಂತ್ರ ನಿಯಂತ್ರಕಗಳನ್ನು ಇಲ್ಲವಾಗಿಸಿರುವುದರ ಬಗ್ಗೆಯೂ ಟೀಕೆಗಳಿವೆ. ಅಣು ವಿದ್ಯುತ್‌ ಸ್ವಾವಲಂಬನೆ ಹೆಸರಿನಲ್ಲಿ ಅಸುರಕ್ಷತೆ, ಅಪಾಯ ಕಲ್ಪಿಸುವ ಸಾಧ್ಯತೆ ಇರುವುದರಿಂದಲೇ, ‘ಎಸ್‌ಎಚ್‌ಎಎನ್‌ಟಿಐ–ಶಾಂತಿ ಮಸೂದೆ’ ಸರ್ಕಾರದ ಪಾಲಿಗೆ ಮುಂದಿನ ದಿನಗಳಲ್ಲಿ ಹುಲಿಸವಾರಿಯಾಗಿ ಪರಿಣಮಿಸಿದರೆ ಅಚ್ಚರಿಯೇನಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.