ADVERTISEMENT

ಸಂಪಾದಕೀಯ | ಬಿಜೆಪಿ ಒಳಜಗಳ: ಕೊನೆಗೂ ಕ್ರಮಕ್ಕೆ ಮುಂದಾದ ವರಿಷ್ಠರು

ಸಂಪಾದಕೀಯ
Published 28 ಮಾರ್ಚ್ 2025, 0:30 IST
Last Updated 28 ಮಾರ್ಚ್ 2025, 0:30 IST
   
ವರಿಷ್ಠರು ಇನ್ನಷ್ಟು ಬಿಗಿ ನಿಲುವು ತಳೆದರಷ್ಟೇ ಭಿನ್ನಮತದ ವ್ಯಾಧಿಗೆ ಮದ್ದು ಸಿಗಬಹುದು

ಬಿಜೆಪಿಯಲ್ಲಿ ಅಂಕೆ ಮೀರಿರುವ ಒಳಜಗಳವನ್ನು ನಿವಾರಿಸಲು ಆ ಪಕ್ಷದ ವರಿಷ್ಠರು ಮುಂದಾಗಿದ್ದಾರೆ. ವಿಜಯಪುರ ಕ್ಷೇತ್ರದ ಶಾಸಕ, ಭಿನ್ನಮತೀಯ ಗುಂಪಿನ ನಾಯಕತ್ವ ವಹಿಸಿದ್ದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷ ಉಚ್ಚಾಟನೆ ಮಾಡಲಾಗಿದೆ. ಯತ್ನಾಳ ಬಣದ ಮತ್ತೊಬ್ಬ ಶಾಸಕ ಬಿ.ಪಿ. ಹರೀಶ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಧ್ವನಿ ಎತ್ತಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಎಂ.ಪಿ. ರೇಣುಕಾಚಾರ್ಯ, ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಜೊತೆಗೆ ಆಪ್ತವಾಗಿರುವ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರಿಗೆ ನೋಟಿಸ್‌ ನೀಡಲಾಗಿದೆ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ತರುವಾಯ ಬಿಜೆಪಿ ರಾಜ್ಯ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಎರಡೂ ಬಣಗಳ ನಾಯಕರು ದಿನವೂ ಬಹಿರಂಗವಾಗಿ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದರು. ಪಕ್ಷದ ವೇದಿಕೆಯಲ್ಲಿ, ವಿಧಾನಮಂಡಲ ಅಧಿವೇಶನದಲ್ಲಿ ನಾಯಕರ ಕಾದಾಟ ಎದ್ದು ಕಾಣಿಸುತ್ತಿತ್ತು. ಸಾಮಾನ್ಯ ಕಾರ್ಯಕರ್ತರಲ್ಲಿ ರೇಜಿಗೆ ಹುಟ್ಟಿಸುವ ಮಟ್ಟಕ್ಕೆ ನಾಯಕರ ಜಗಳ ತಾರಕಕ್ಕೆ ಏರಿತ್ತು. ಯತ್ನಾಳ ಅವರಿಗೆ ಎರಡು ಬಾರಿ ನೋಟಿಸ್ ನೀಡಿದ್ದು ಬಿಟ್ಟರೆ, ಉಳಿದ ವಿಷಯಗಳಲ್ಲಿ ಏನೂ ನಡೆದೇ ಇಲ್ಲವೆಂಬಂತೆ ಪಕ್ಷದ ವರಿಷ್ಠರು ಮೌನಕ್ಕೆ ಶರಣಾಗಿದ್ದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೇ ಸವಾಲು ಎಸೆಯುವಷ್ಟರ ಮಟ್ಟಿಗೆ ಭಿನ್ನಮತ ಬೆಳೆದುನಿಂತದ್ದರ ಹಿಂದೆ ದೆಹಲಿಯಲ್ಲಿ ಪ್ರಭಾವ ಹೊಂದಿರುವ ಪಕ್ಷದ ಯಾರಾದರೂ ನಾಯಕರ ಚಿತಾವಣೆ ಇರಬಹುದು ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಲ್ಲೇ ಹರಿದಾಡಿದ್ದವು. ಯತ್ನಾಳರ ಬಣ ವಿಸ್ತಾರಗೊಳ್ಳುತ್ತಾ, ಚಟುವಟಿಕೆ ಬಿರುಸು ಪಡೆಯುತ್ತಿದ್ದಂತೆಯೇ ವಿಜಯೇಂದ್ರ ಪರವಾದ ಗುಂಪು ಕೂಡ ಭಿನ್ನರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಲಾರಂಭಿಸಿತು. ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾದ ಮೇಲೆ, ವರಿಷ್ಠರು ನೋಟಿಸ್, ಉಚ್ಚಾಟನೆಯಂತಹ ಹತಾರಗಳನ್ನು ತೆಗೆದುಕೊಂಡು ಶಸ್ತ್ರಚಿಕಿತ್ಸೆಗೆ ಇಳಿದಿದ್ದಾರೆ.

ADVERTISEMENT

ಯತ್ನಾಳ ಅವರು ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಧ್ವನಿ ಎತ್ತಿರುವುದು ಈಚಿನ ವಿದ್ಯಮಾನವೇನೂ ಅಲ್ಲ. 2019ರಲ್ಲಿ ಯಡಿಯೂರಪ್ಪ ಅವರು ಪುನಃ ಮುಖ್ಯಮಂತ್ರಿಯಾದ ದಿನದಿಂದಲೂ ಕುಟುಂಬ ರಾಜಕಾರಣ, ಭ್ರಷ್ಟಾಚಾರದಂತಹ ವಿಷಯ ಹಾಗೂ ಆಡಳಿತದಲ್ಲಿ ವಿಜಯೇಂದ್ರ ಅವರು ಹಸ್ತಕ್ಷೇಪ ನಡೆಸಿದ್ದಾರೆ ಎಂದು ಆರೋಪ ಮಾಡುತ್ತಲೇ ಇದ್ದರು. ಮುಖ್ಯಮಂತ್ರಿ ಕುರ್ಚಿ ₹2,500 ಕೋಟಿಗೆ ಮಾರಾಟಕ್ಕಿದೆ ಎಂದೂ ಅವರು ಹೇಳಿದ್ದರು. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ ಮೇಲೆ ಯತ್ನಾಳ ಅವರು ಟೀಕಾಪ್ರಹಾರವನ್ನು ಮತ್ತಷ್ಟು ಮೊನಚುಗೊಳಿಸಿದರು.

ಯಡಿಯೂರಪ್ಪ ಮತ್ತು ಅವರ ಕುಟುಂಬವು ತಮಗಿರುವ ಪ್ರಭಾವವನ್ನು ಬಳಸಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಳ್ಳಬಾರದು ಎಂಬ ಉದ್ದೇಶವೂ ಯತ್ನಾಳ ಬಣದ ಚಟುವಟಿಕೆ ಕುರಿತು ವರಿಷ್ಠರು ಇಷ್ಟು ದಿವಸ ಮೌನ ವಹಿಸಲು ಕಾರಣ ಆಗಿರಬಹುದು ಎಂಬ ಮಾತು ಪಕ್ಷದ ವಲಯದಲ್ಲಿ ಇದೆ. ಬಲಿಷ್ಠ ನಾಯಕತ್ವ ಇರುವ ಶಿಸ್ತಿನ ಪಕ್ಷ ತಮ್ಮದು ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾರೆ. ಕರ್ನಾಟಕದಲ್ಲಿನ ಪಕ್ಷದ ಸ್ಥಿತಿಯನ್ನು ಅವಲೋಕಿಸಿದರೆ ಅರಾಜಕತೆ, ಅನಾಯಕತ್ವ, ಒಳಬೇಗುದಿಯಿಂದ ಪಕ್ಷ ನಲುಗಿ ಹೋಗಿರುವುದು ಕಾಣಿಸುತ್ತದೆ.

ಇದರಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ವರಿಷ್ಠರು ಪಕ್ಷದ ರಾಜ್ಯ ಘಟಕವನ್ನು ಈ ರೀತಿಯ ದೈನೇಸಿ ಸ್ಥಿತಿಗೆ ತಳ್ಳಿದ್ದು ಏಕೆ ಎಂಬ ಸಂಶಯವೂ ಈ ಎಲ್ಲ ಬೆಳವಣಿಗೆಗಳಿಂದ ಮೂಡುತ್ತದೆ. ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದಿರುವ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರು ಪಕ್ಷದ ನಾಯಕತ್ವವನ್ನು ನಿರಂತರವಾಗಿ ಟೀಕಿಸುವುದರ ಜತೆಗೆ, ಕಾಂಗ್ರೆಸ್‌ ನಾಯಕರ ಸಭೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ಪಕ್ಷಕ್ಕೆ ಸಡ್ಡು ಹೊಡೆದಿರುವ ಇವರ ವಿರುದ್ಧ ಕ್ರಮಕ್ಕೆ ಮುಂದಾಗಲು ಇಷ್ಟು ದಿನ ಬೇಕಾಯಿತೇ ಎಂಬ ಪ್ರಶ್ನೆಯನ್ನು ಕಾರ್ಯಕರ್ತರೇ ಕೇಳುವಂತಾಗಿದೆ.

ಪಕ್ಷದ ವರ್ಚಸ್ಸಿಗೆ ತೀವ್ರ ಹಾನಿಯಾದ ಬಳಿಕ ಶಿಸ್ತುಕ್ರಮ ಜರುಗಿಸಲು ವರಿಷ್ಠರು ಮುಂದಾಗಿದ್ದಾರೆ. ಯತ್ನಾಳ ಅವರ ಉಚ್ಚಾಟನೆ ಮತ್ತು ಎರಡೂ ಬಣಗಳ ಕೆಲವರಿಗೆ ನೋಟಿಸ್‌ ಜಾರಿ ಮಾಡಿದ ಮಾತ್ರಕ್ಕೆ ಭಿನ್ನಮತದ ಸದ್ದು ಪೂರ್ತಿ ಅಡಗುತ್ತದೆ ಎಂದೇನೂ ಅನ್ನಿಸುತ್ತಿಲ್ಲ. ವಿರೋಧಪಕ್ಷವಾಗಿ ಕೆಲಸ ಮಾಡಲು ನೀಡಿರುವ ಜನಾದೇಶವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಹೊಣೆಯನ್ನು ಪಕ್ಷ ಅರಿಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.