ADVERTISEMENT

Editorial: ‘ನಮ್ಮ ಮೆಟ್ರೊ’ ದೇಶದಲ್ಲೇ ದುಬಾರಿ; ಸುಲಿಗೆಯನ್ನು ತಕ್ಷಣ ನಿಲ್ಲಿಸಿ

ಸಂಪಾದಕೀಯ
Published 11 ಫೆಬ್ರುವರಿ 2025, 20:43 IST
Last Updated 11 ಫೆಬ್ರುವರಿ 2025, 20:43 IST
   

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಏಕಾಏಕಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಅಕ್ಷರಶಃ ಪ್ರಯಾಣಿಕರ ಸುಲಿಗೆಗೆ ಇಳಿದಿದೆ. ಪ್ರಯಾಣ ದರವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ನಿಗಮದ ಬಳಿ ಏನೇ ಸಬೂಬುಗಳಿದ್ದರೂ ಈ ನಿರ್ಧಾರವು ಯಾರೂ ಒಪ್ಪುವಂಥದ್ದಲ್ಲ. ದರ ಹೆಚ್ಚಳದ ಬಳಿಕ ದೇಶದಲ್ಲೇ ಬೆಂಗಳೂರು ಮೆಟ್ರೊ ಪ್ರಯಾಣವು ಅತ್ಯಂತ ದುಬಾರಿ ಎನಿಸಿದೆ. ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆಗೊಳಿಸಿ, ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಮೂಲಕ ರಸ್ತೆಗಳ ಮೇಲಿನ ಒತ್ತಡವನ್ನು ಹಗುರಗೊಳಿಸಿ, ಸಂಚಾರದಟ್ಟಣೆಗೂ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮೆಟ್ರೊ ಸಾರಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಆದರೆ, ಬಿಎಂಆರ್‌ಸಿಎಲ್‌ ಈಗ ಪ್ರಯಾಣದರ ಏರಿಕೆ ಮಾಡಿದ ಪರಿ ಹೇಗಿದೆಯೆಂದರೆ, ಜನ ಮೆಟ್ರೊ ಪ್ರಯಾಣವನ್ನೇ ತ್ಯಜಿಸಿ, ಖಾಸಗಿ ವಾಹನ ಬಳಸುವುದನ್ನು ಉತ್ತೇಜಿಸಲು ಹೊರಟಂತಿದೆ. ಗರಿಷ್ಠ ಶೇ 45ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹೇಳುತ್ತಿದೆಯಾದರೂ ಹತ್ತಿರದ ನಿಲ್ದಾಣಗಳ ಪ್ರಯಾಣ ದರಗಳಲ್ಲಿ ಶೇ 100ರಷ್ಟು ಹೆಚ್ಚಳವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಮೆಟ್ರೊ ಸಾರಿಗೆ ಇರುವುದು ಬರೀ ಉಳ್ಳವರ ಬಳಕೆಗಾಗಿ ಎಂಬ ಭ್ರಮೆಯಲ್ಲಿ ನಿಗಮದ ಆಡಳಿತ ಮಂಡಳಿ ಇದ್ದಂತಿದೆ. ವಾಸಸ್ಥಳದಿಂದ ಕೆಲಸದ ಸ್ಥಳಕ್ಕೆ ಸಕಾಲದಲ್ಲಿ ತಲುಪಲು ಬಡವರು, ದಿನಗೂಲಿ ಕಾರ್ಮಿಕರು ಕೂಡ ಮೆಟ್ರೊ ಸಾರಿಗೆಯನ್ನು ಅವಲಂಬಿಸಿದ್ದರು. ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೊ ಬಳಸುತ್ತಿದ್ದರು. ಪ್ರಯಾಣ ದರದಲ್ಲಿ ಏಕಾಏಕಿ ಭಾರಿ ಏರಿಕೆ ಆಗಿದ್ದರಿಂದ ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಾಗದೆ ಅವರೆಲ್ಲ ಮೆಟ್ರೊ ಪ್ರಯಾಣವನ್ನೇ ತೊರೆಯುವಂತಾಗಿದೆ. ‘ಪ್ರಯಾಣದರ ಹೆಚ್ಚಳದ ಬಳಿಕವೂ ಮೆಟ್ರೊ ಸಾರಿಗೆಯು ಆಟೊ ಪ್ರಯಾಣಕ್ಕೆ ಹೋಲಿಸಿದರೆ ಅಗ್ಗ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್‌ ಅವರು ಹೇಳಿರುವುದು ಕೂಡ ವರದಿಯಾಗಿದೆ. ಈ ಹೋಲಿಕೆಯೇ ಹಾಸ್ಯಾಸ್ಪದ ಮತ್ತು ಸಮೂಹಸಾರಿಗೆ ವ್ಯವಸ್ಥೆಯ ಕುರಿತು ಆಡಳಿತವರ್ಗ ಅಸೂಕ್ಷ್ಮವಾಗಿ ಯೋಚಿಸುತ್ತಿರುವುದರ ಪ್ರತೀಕ. ಒಂದುವೇಳೆ ಬಿಎಂಆರ್‌ಸಿಎಲ್‌ ಪೈಪೋಟಿ ನೀಡುವುದೇ ಇದ್ದರೆ ಜಗತ್ತಿನಲ್ಲೇ ಅತ್ಯಂತ ಅಗ್ಗದ ಸಮೂಹ ಸಾರಿಗೆಯನ್ನಾಗಿ ಬೆಂಗಳೂರು ಮೆಟ್ರೊ ಸೇವೆಯನ್ನು ರೂಪಿಸುವುದರತ್ತ ಆ ಪೈಪೋಟಿ ಇರಬೇಕು.

ಸಾಲದ ತೀರುವಳಿ, ಸವಕಳಿಯ ಹೊರೆ ಮತ್ತು ಹೆಚ್ಚಿದ ದೈನಂದಿನ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಈ ಹೆಚ್ಚಳವು ಅನಿವಾರ್ಯವಾಗಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ. ಮುಂದಿನ ಐದು ವರ್ಷಗಳಲ್ಲಿ ಸಾಲ ತೀರಿಸಲು ₹ 10,422 ಕೋಟಿ ಬೇಕು ಮತ್ತು ₹ 7,316 ಕೋಟಿಯಷ್ಟು ಹಣ ಸವಕಳಿಗೆ ಬಂದ ಸಾಧನ–ಸಲಕರಣೆಗಳ ಬದಲಾವಣೆಗೆ ಬೇಕು ಎನ್ನುವುದು ನಿಗಮವು ನೀಡುವ ಲೆಕ್ಕಾಚಾರ. ಮೆಟ್ರೊ ರೈಲು ಮಾರ್ಗಗಳ ನಿರ್ಮಾಣ ಯೋಜನೆಯು ಕಾಲಮಿತಿಯಲ್ಲಿ ಮುಗಿದಿದ್ದರೆ ಇಷ್ಟೊಂದು ಸಾಲದ ಹೊರೆ ಉಳಿಯುತ್ತಿರಲಿಲ್ಲ. ಹಳದಿ ಮಾರ್ಗ ಸಿದ್ಧವಾದರೂ ಬೋಗಿಗಳಿಲ್ಲದೆ ಅಲ್ಲಿ ಮೆಟ್ರೊ ಸಂಚಾರ ಶುರುಮಾಡಲು ಸಾಧ್ಯವಾಗಿಲ್ಲ. ನಿಗಮದ ಕಾರ್ಯವೈಖರಿಗೆ ಇದು ಕನ್ನಡಿ ಹಿಡಿಯುತ್ತದೆ. ಯೋಜನೆಯ ಅನುಷ್ಠಾನದಲ್ಲಿ ಕಾರ್ಯಕ್ಷಮತೆ ತೋರದೆ ಸಾಲದ ಹೊರೆಯನ್ನು ಹೆಚ್ಚಾಗಿಸಿಕೊಂಡು, ಅದನ್ನು ಪ್ರಯಾಣಿಕರ ಮೇಲೆ ವರ್ಗಾಯಿಸಲು ಹೊರಟಿರುವುದು ಯಾವ ಸೀಮೆಯ ನ್ಯಾಯ? ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಬಿಜೆಪಿ ನಾಯಕರು ದೂರಿದರೆ, ಕೇಂದ್ರ ಸರ್ಕಾರ ಕಾರಣ ಎಂದು ಕಾಂಗ್ರೆಸ್‌ ನಾಯಕರು ದೂರುತ್ತಿದ್ದಾರೆ. ಜನಸಾಮಾನ್ಯರನ್ನು ಮೂರ್ಖರನ್ನಾಗಿ ಮಾಡುವ ಸಲುವಾಗಿಯೇ ಈ ನಾಟಕ? ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಂಟಿಒಡೆತನ ಹೊಂದಿರುವ ಸಂಸ್ಥೆ ಬಿಎಂಆರ್‌ಸಿಎಲ್‌. ಕೇಂದ್ರ ಸರ್ಕಾರ ರಚಿಸಿದ ದರ ನಿಗದಿ ಸಮಿತಿಯ ಶಿಫಾರಸಿನ ಮೇರೆಗೆ ಈ ಏರಿಕೆ ಆಗಿದೆ. ಜನರ ಬಗ್ಗೆ ಕಳಕಳಿ ಇದ್ದರೆ ಎರಡೂ ಸರ್ಕಾರಗಳು ಒಟ್ಟಾಗಿ ಬೆಲೆ ಏರಿಕೆಯನ್ನು ತಡೆಹಿಡಿಯಬಹುದಿತ್ತು. ನಿಗಮದ ಪ್ರಸ್ತಾವಕ್ಕೆ ಸದ್ದಿಲ್ಲದೆ ಒಳಗೊಳಗೆ ಒಪ್ಪಿಗೆ ನೀಡಿ, ಈಗ ಬೀದಿಯಲ್ಲಿ ನಿಂತು ಮೊಸಳೆ ಕಣ್ಣೀರು ಸುರಿಸುತ್ತಿರುವವರಿಗೆ ಬಡವರ ಕಷ್ಟ ಅರ್ಥವಾಗುವುದಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ನಾಟಕಗಳು ನಡೆಯುತ್ತವೆ ಅಷ್ಟೆ. ದರ ಏರಿಕೆಯ ಜಾರಿಯಲ್ಲಿ ವೈಪರೀತ್ಯಗಳು ಏನಾದರೂ ಆಗಿದ್ದರೆ ಅವಲೋಕಿಸುವುದಾಗಿ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಪ್ರಯಾಣಿಕರ ಮೇಲೆ ಹೊರಿಸಿದ ಭಾರಿ ಹೊರೆಯನ್ನು ಹಿಂಪಡೆಯುವ ಕೆಲಸವನ್ನು ನಿಗಮವು ಆದಷ್ಟು ಬೇಗ ಮಾಡಬೇಕು. ವೆಚ್ಚ ಹೊಂದಾಣಿಕೆಗೆ ಬೇರೆ ದಾರಿಗಳನ್ನು ಕಂಡುಕೊಳ್ಳಬೇಕು. ಮೆಟ್ರೊ ಸಂಬಂಧಿತ ಪ್ರತೀ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು ವೆಚ್ಚ ಕಡಿತದ ಅತ್ಯಂತ ಸುಲಭದ ದಾರಿ. ನಿಗಮದ ವ್ಯಾಪ್ತಿಯಲ್ಲಿ ಲಭ್ಯವಿರುವ ಸ್ಥಳಗಳನ್ನು ಬಾಡಿಗೆಗೆ ಕೊಡುವುದರಿಂದಲೂ ಒಂದಿಷ್ಟು ವರಮಾನ ಗಳಿಸಬಹುದು. ಹೊರೆ ತಗ್ಗಿಸಿಕೊಳ್ಳಲು ಇಂತಹ ಪರ್ಯಾಯ ಮಾರ್ಗಗಳು ಇರುವಾಗ ದರ ಏರಿಕೆಯ ಸುಲಭದ ದಾರಿಯನ್ನೇ ಬಿಎಂಆರ್‌ಸಿಎಲ್‌ ಆಯ್ದುಕೊಂಡಿರುವುದು ಪ್ರಯಾಣಿಕರ ಮೇಲಿನ ಅದರ ನಿಷ್ಕಾಳಜಿಗೆ ದ್ಯೋತಕ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT